ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾ: ಮೂರು ಮಕ್ಕಳನ್ನು ಹೊಂದಲು ಅವಕಾಶ ನೀಡಿದ ಸರ್ಕಾರ

Last Updated 31 ಮೇ 2021, 12:06 IST
ಅಕ್ಷರ ಗಾತ್ರ

ಬೀಜಿಂಗ್: ಚೀನಾದ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷವು ಜನನದ ಮಿತಿಯನ್ನು ಸಡಿಲಗೊಳಿಸಲು ಮುಂದಾಗಿದ್ದು, ದಂಪತಿಗಳಿಗೆ ಇಬ್ಬರು ಮಕ್ಕಳ ಬದಲು ಮೂರು ಮಕ್ಕಳನ್ನು ಹೊಂದಲು ಅವಕಾಶ ಕಲ್ಪಿಸಿದೆ ಎಂದು ಅಲ್ಲಿನ ಸುದ್ದಿಸಂಸ್ಥೆಯೊಂದು ಸೋಮವಾರ ತಿಳಿಸಿದೆ.

ಕಮ್ಯುನಿಸ್ಟ್ ಪಕ್ಷದ ಪಾಲಿಟ್‌ ಬ್ಯೂರೊ ಸೋಮವಾರ ನಡೆಸಿದ ಸಭೆಯಲ್ಲಿ, ದೇಶದಲ್ಲಿ ಹೆಚ್ಚುತ್ತಿರುವ ವೃದ್ಧರ ಸಂಖ್ಯೆಯನ್ನು ನಿಭಾಯಿಸಲು ಕೆಲವು ಪ್ರಮುಖ ನೀತಿ ಮತ್ತು ಕ್ರಮಗಳನ್ನು ಪರಿಚಯಿಸುವ ಕುರಿತು ನಿರ್ಧರಿಸಿದೆ ಎಂದು ಸ್ಥಳೀಯ ಕ್ಸಿನ್ ಹುವಾ ಸುದ್ದಿಸಂಸ್ಥೆಯು ಮಾಹಿತಿ ನೀಡಿದೆ.

ಸಭೆಯಲ್ಲಿ ಪಕ್ಷದ ನಾಯಕರು ಸಭೆಯಲ್ಲಿ, ‘ಕುಟುಂಬ ಯೋಜನಾ ನೀತಿಯನ್ನು ಪುನರ್ ರಚಿಸಿ ದಂಪತಿಗಳಿಗೆ ಎರಡು ಮಕ್ಕಳ ನೀತಿಗೆ ಬದಲಾಗಿ, ಮೂವರು ಮಕ್ಕಳನ್ನು ಹೊಂದುವ ಅವಕಾಶ ಕಲ್ಪಿಸಬೇಕು. ಇದರಿಂದಾಗಿ ಜನಸಂಖ್ಯಾ ರಚನೆಯನ್ನು ಸುಧಾರಿಸಲು ಅನುಕೂಲವಾಗಲಿದೆ’ ಎಂದು ಗಮನ ಸೆಳೆದರು.

ಆದರೆ, ಈ ಬದಲಾವಣೆಯನ್ನು ಯಾವಾಗ ಮತ್ತು ಹೇಗೆ ಕೈಗೊಳ್ಳಲಾಗುತ್ತದೆ ಎನ್ನುವ ಕುರಿತು ಯಾವುದೇ ವಿವರಗಳನ್ನು ಪಕ್ಷವು ನೀಡಿಲ್ಲ ಎಂದೂ ಸುದ್ದಿಸಂಸ್ಥೆಯು ತಿಳಿಸಿದೆ.

ಚೀನಾದಲ್ಲಿ ಜನಸಂಖ್ಯೆಯ ಬೆಳವಣಿಗೆಯನ್ನು ತಡೆಯಲು ಅಲ್ಲಿನ ಸರ್ಕಾರವು 1980ರಿಂದ ಜನನದ ಮಿತಿಗಳನ್ನು ಜಾರಿಗೊಳಿಸಿತ್ತು. ಇದರಿಂದಾಗಿ ಅಲ್ಲೀಗ 65 ವರ್ಷ ವಯಸ್ಸಿಗಿಂತ ಮೇಲ್ಪಟ್ಟವರ ಸಂಖ್ಯೆಯು ಹೆಚ್ಚಾಗಿದ್ದು, ಸರಾಸರಿ ವಯಸ್ಸಿನ ತ್ವರಿತ ಏರಿಕೆ ನಿಭಾಯಿಸುವುದು ಕಷ್ಟಕರವಾಗಿದೆ. ಇದರಿಂದಾಗಿ ದುಡಿಯುವ ವಯಸ್ಸಿನ ಜನಸಂಖ್ಯೆಯೂ ವೇಗಗತಿಯಲ್ಲಿ ಕುಸಿತ ಕಾಣುತ್ತಿದೆ ಎನ್ನುವ ಆತಂಕವು ಅಲ್ಲಿನ ಆರ್ಥಿಕ ಸ್ಥಿತಿ ಮತ್ತು ಸಮಾಜದ ಮೇಲೆ ಒತ್ತಡವನ್ನುಂಟು ಮಾಡುತ್ತಿದೆ.

ಚೀನಾದ ಜನಸಂಖ್ಯೆಯು 140 ಕೋಟಿ ತಲುಪಿದ್ದು, ಇದು ನಿರೀಕ್ಷೆಯ ಪ್ರಮಾಣಕ್ಕಿಂತಲೂ ಹೆಚ್ಚಾಗಿದೆ. ಮೇ 11ರಂದು ನಡೆದ ಜನಗಣತಿಯಲ್ಲಿ ಈ ಪ್ರಮಾಣ ನಿರೀಕ್ಷೆಯ ಪ್ರಮಾಣಕ್ಕಿಂತಲೂ ವೇಗವಾಗಿ ಹೆಚ್ಚುತ್ತಿದೆ ಎನ್ನುವ ಅಂಶ ಬಹಿರಂಗವಾಗಿತ್ತು. ಇದರಿಂದ ಚೀನಾದಲ್ಲಿ ವೃದ್ಧರ ಆರೈಕೆ ಮತ್ತು ಆರೋಗ್ಯದ ನಿರ್ವಹಣೆಯು ಸವಾಲಾಗಿ ಪರಿಣಮಿಸಿದೆ.

ಈ ಹಿಂದೆ ಒಂದು ಮಗುವನ್ನು ಮಾತ್ರ ಹೊಂದಲು ಅವಕಾಶ ಕಲ್ಪಿಸಿದ್ದ ನೀತಿಯನ್ನು 2015ರಲ್ಲಿ ಚೀನಾವು ತೆಗೆದುಹಾಕಿತ್ತು. ನಂತರ ದಂಪತಿಗಳಿಗೆ ಎರಡು ಮಕ್ಕಳನ್ನು ಹೊಂದುವ ನೀತಿ ಜಾರಿಗೆ ತರಲಾಗಿತ್ತು. ಆದರೆ, ಮುಂದಿನ ವರ್ಷ ಜನಸಂಖ್ಯೆ ಹೆಚ್ಚಳವಾದರೂ, ನಂತರ ವರ್ಷಗಳಲ್ಲಿ ಜನನ ಪ್ರಮಾಣ ಮಾತ್ರ ಕಡಿಮೆಯಾಗಿಯೇ ಇದೆ. ಮಕ್ಕಳನ್ನು ಸಾಕುವುದು, ಮಕ್ಕಳಿಗಾಗಿ ಉದ್ಯೋಗದಲ್ಲಿ ಹೊಂದಾಣಿಕೆ ಮಾಡಿಕೊಳ್ಳುವುದು ಮತ್ತು ಹೆತ್ತವರನ್ನು ನೋಡಿಕೊಳ್ಳುವ ಕಾರಣಕ್ಕಾಗಿ ಅನೇಕ ದಂಪತಿಗಳು ಮಕ್ಕಳು ಮಾಡಿಕೊಳ್ಳುವುದನ್ನು ಮುಂದೂಡತೊಡಗಿದ್ದಾರೆ ಎನ್ನುತ್ತವೆ ಅಂಕಿ ಅಂಶಗಳು.

ಜನಗಣತಿಯ ಅಂಕಿಅಂಶಗಳ ಪ್ರಕಾರ, ಜನಸಂಖ್ಯೆಯಲ್ಲಿ 15 ವರ್ಷದಿಂದ 59 ವರ್ಷದವರೆಗೆ ದುಡಿಯುವ ವಯಸ್ಸಿನ ಜನರ ಪಾಲು ಕಳೆದ ವರ್ಷ ಶೇ 63.3ಕ್ಕೆ ಇಳಿದಿದೆ. 65 ಮತ್ತು ಅದಕ್ಕಿಂತ ಹೆಚ್ಚಿನ ವರ್ಷ ವಯಸ್ಸಿನ ಗುಂಪು ಶೇ 8.9ರಿಂದ 13.5ಕ್ಕೆ ಏರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT