ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಂಗ್‌ಕಾಂಗ್‌: ಚುನಾವಣಾ ಸುಧಾರಣಾ ಮಸೂದೆ ಮಂಡನೆ

ಚೀನಾಗೆ ಹೆಚ್ಚಿನ ಅಧಿಕಾರ: ನೇರವಾಗಿ ಜನರಿಂದ ಆಯ್ಕೆಯಾಗುವ ಜನಪ್ರತಿನಿಧಿಗಳ ಸಂಖ್ಯೆಯಲ್ಲಿ ಕಡಿತ
Last Updated 14 ಏಪ್ರಿಲ್ 2021, 12:07 IST
ಅಕ್ಷರ ಗಾತ್ರ

ಹಾಂಗ್‌ಕಾಂಗ್‌: ಚೀನಾಗೆ ಹೆಚ್ಚಿನ ನಿಯಂತ್ರಣದ ಅಧಿಕಾರ ನೀಡುವ ಹಾಂಗ್‌ಕಾಂಗ್‌ನ ಚುನಾವಣಾ ಸುಧಾರಣಾ ಮಸೂದೆಯನ್ನು ಬುಧವಾರ ಶಾಸನಸಭೆಯಲ್ಲಿ ಮಂಡಿಸಲಾಯಿತು.

ಹಾಂಗ್‌ಕಾಂಗ್‌ನಲ್ಲಿ ರಾಜಕೀಯ ಪ್ರತಿಭಟನೆಯನ್ನು ಹತ್ತಿಕ್ಕುವ ಉದ್ದೇಶವೂ ಈ ಮಸೂದೆ ಹೊಂದಿದೆ. ನೇರವಾಗಿ ಜನರಿಂದ ಆಯ್ಕೆಯಾಗುವ ಜನಪ್ರತಿನಿಧಿಗಳ ಸಂಖ್ಯೆಯನ್ನು ಸಹ ಕಡಿಮೆ ಮಾಡಲಾಗಿದೆ.

ಕಳೆದ ವರ್ಷ ಹಾಂಗ್‌ಕಾಂಗ್‌ನಲ್ಲಿ ಚೀನಾ ರಾಷ್ಟ್ರೀಯ ಭದ್ರತೆ ಕಾನೂನು ಜಾರಿಗೊಳಿಸಿತ್ತು. 2019ರಲ್ಲಿಯೂ ಪ್ರಜಾಪ್ರಭುತ್ವದ ಪರ ವ್ಯಾಪಕ ಪ್ರತಿಭಟನೆಗಳು ನಡೆದಿದ್ದವು. ಸಾವಿರಾರು ಮಂದಿ ಬೀದಿಗಳಲ್ಲಿ ಪ್ರತಿಭಟನೆ ನಡೆಸಿದ್ದರು. ಇಂತಹ ಬೆಳವಣಿಗೆಗಳನ್ನು ವಿಶ್ಲೇಷಿಸಿರುವ ಚೀನಾ ಈಗ ಚುನಾವಣೆ ಪ್ರಕ್ರಿಯೆಯನ್ನು ಪರಿಷ್ಕರಿಸುವ ಕಾರ್ಯದಲ್ಲಿ ತೊಡಗಿದೆ.

‘ಹಾಂಗ್‌ಕಾಂಗ್‌ನ ಆಡಳಿತವನ್ನು ಸುಧಾರಿಸುವ ನಿಟ್ಟಿನಲ್ಲಿ ಈ ಮಸೂದೆ ರೂಪಿಸಲಾಗಿದೆ’ ಎಂದು ಸಂವಿಧಾನಕ್ಕೆ ಸಂಬಂಧಿಸಿದ ಕಾರ್ಯದರ್ಶಿ ಎರಿಕ್‌ ಟ್ಸಾಂಗ್‌ ಪ್ರತಿಪಾದಿಸಿದ್ದಾರೆ.

ಮೇ ತಿಂಗಳ ಅಂತ್ಯಕ್ಕೆ ಈ ಮಸೂದೆಗೆ ಅನುಮೋದನೆ ದೊರೆಯುವ ನಿರೀಕ್ಷೆ ಇದೆ.

70 ಸದಸ್ಯರನ್ನು ಒಳಗೊಂಡಿರುವ ಪ್ರಸ್ತುತ ಶಾಸನಸಭೆಯಲ್ಲಿ ಮತದಾರರು ಅರ್ಧದಷ್ಟು ಪ್ರತಿನಿಧಿಗಳನ್ನು ಆಯ್ಕೆ ಮಾಡುತ್ತಾರೆ. ಉಳಿದ ಅರ್ಧ ಮಂದಿಯನ್ನು ವಿವಿಧ ವೃತ್ತಿಗಳಲ್ಲಿರುವವರು ಮತ್ತು ಆಸಕ್ತ ವಿವಿಧ ಗುಂಪುಗಳ ಕ್ಷೇತ್ರಗಳಿಂದ ಆಯ್ಕೆ ಮಾಡಲಾಗುತ್ತದೆ. ಇವರಲ್ಲಿ ಬಹುತೇಕ ಮಂದಿ ಚೀನಾ ಪರ ಒಲವು ಹೊಂದಿರುತ್ತಾರೆ.

ನೂತನ ಮಸೂದೆಯ ಅನ್ವಯ 20 ಮಂದಿಯನ್ನು ಮಾತ್ರ ಚುನಾವಣೆ ಮೂಲಕ ಆಯ್ಕೆ ಮಾಡುವುದನ್ನು ಪ್ರಸ್ತಾಪಿಸಲಾಗಿದೆ. 30 ಪ್ರತಿನಿಧಿಗಳನ್ನು ವಿವಿಧ ವೃತ್ತಿಗಳಲ್ಲಿರುವವರು ಮತ್ತು ಆಸಕ್ತ ವಿವಿಧ ಗುಂಪುಗಳ ಕ್ಷೇತ್ರಗಳಿಂದ ಆಯ್ಕೆ ಹಾಗೂ 40 ಮಂದಿಯನ್ನು ಚುನಾವಣೆ ಸಮಿತಿ ಆಯ್ಕೆ ಮಾಡಲಿದೆ ಎಂದು ಪ್ರಸ್ತಾಪಿಸಲಾಗಿದೆ. ಚುನಾವಣಾ ಸಮಿತಿಯೇ ನಗರದ ನಾಯಕನನ್ನು ಆಯ್ಕೆ ಮಾಡಲಿದೆ ಎಂದು ಪ್ರಸ್ತಾಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT