ಭಾನುವಾರ, ಜೂನ್ 26, 2022
27 °C

ಐಪಿಇಎಫ್‌ ವಿರುದ್ಧ ಚೀನಾ ಆಕ್ರೋಶ: ‘ಆರ್ಥಿಕ ನ್ಯಾಟೋ’ ಎಂದು ಮೂದಲಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

ಬೀಜಿಂಗ್‌: ವ್ಯಾಪಾರ, ಆರ್ಥಿಕ ಮತ್ತು ಹೂಡಿಕೆಯ ಅವಕಾಶಗಳನ್ನು ಹೆಚ್ಚಿಸಲು ಭಾರತ ಸೇರಿದಂತೆ 12 ಇಂಡೋ-ಪೆಸಿಫಿಕ್ ರಾಷ್ಟ್ರಗಳೊಂದಿಗೆ ಅಮೆರಿಕದ ಅಧ್ಯಕ್ಷ ಜೋ ಬೈಡನ್‌ ಆರಂಭಿಸಿರುವ ಹೊಸ ವ್ಯಾಪಾರ ಒಪ್ಪಂದವನ್ನು ಚೀನಾ ವಿರೋಧಿಸಿದೆ.

ಈ ಒಪ್ಪಂದವು, ಇಂಡೋ–ಪೆಸಿಫಿಕ್‌ ಪ್ರದೇಶದಲ್ಲಿ ತನ್ನ ಪ್ರಾಬಲ್ಯಕ್ಕೆ ಎದುರಾದ ಅಪಾಯ ಎಂದು ಪರಿಗಣಿಸಿರುವ ಚೀನಾ, ಅದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ‘ಇದು ಆರ್ಥಿಕ ನ್ಯಾಟೊ’ ಎಂದು ಚೀನಾದ ಮಾಧ್ಯಮಗಳು ಕರೆದಿವೆ.

ಟೋಕಿಯೊದ ಕ್ವಾಡ್ ಶೃಂಗಸಭೆಯ ಮುನ್ನಾದಿನ , ಬೈಡನ್‌ ಮಹತ್ವದ ‘ಇಂಡೋ-ಪೆಸಿಫಿಕ್ ‘ಸಮೃದ್ಧಿಗಾಗಿ ಇಂಡೊ–ಪೆಸಿಫಿಕ್‌ ಆರ್ಥಿಕ ವೇದಿಕೆ’ಯನ್ನು (ಐಪಿಇಎಫ್‌) ಘೋಷಿಸಿದ್ದರು. ಶುದ್ಧ ಇಂಧನ, ಡಿಜಿಟಲ್ ವ್ಯಾಪಾರ, ಪೂರೈಕೆ-ಸರಪಳಿಯಂತಹ ಕ್ಷೇತ್ರಗಳಲ್ಲಿ ಸಮಾನ ಮನಸ್ಕ ರಾಷ್ಟ್ರಗಳ ನಡುವಿನ ಪ್ರಬಲ ಸಹಕಾರವನ್ನು ಇದು ಗುರಿಯಾಗಿರಿಸಿಕೊಂಡಿದೆ.

ಅಮೆರಿಕ ನೇತೃತ್ವದ ವ್ಯಾಪಾರ ಒಪ್ಪಂದವು ಚೀನಾದ ಕೆಂಗಣ್ಣಿಗೆ ಗುರಿಯಾಗಿದೆ. ಎಷ್ಟರ ಮಟ್ಟಿಗೆ ಎಂದರೆ, ಬೈಡನ್‌ ಹೊಸ ಒಪ್ಪಂದನ್ನು ಘೋಷಿಸಿದ ದಿನವೇ ಚೀನಾ ಇಂಡೋ-ಪೆಸಿಫಿಕ್ ಪ್ರದೇಶಕ್ಕೆ ಹೊಸ ಯೋಜನೆ ಮತ್ತು ಹೂಡಿಕೆ, ಹೆಚ್ಚಿನ ಸಹಕಾರ ಘೋಷಿಸಿದೆ.

ಬೈಡನ್‌ ಐಪಿಇಎಫ್ ಅನ್ನು ಪ್ರಾರಂಭಿಸಿದ ಅದೇ ಸಮಯದಲ್ಲೇ ‘ಏಷ್ಯಾ–ಪೆಸಿಫಿಕ್‌ ಆರ್ಥಿಕ ಮತ್ತು ಸಾಮಾಜಿಕ ಆಯೋಗವನ್ನು (ಇಎಸ್‌ಸಿಎಪಿ)’ ಉದ್ದೇಶಿಸಿ ಮಾತನಾಡಿರುವ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ, ‘ಏಷ್ಯಾ-ಪೆಸಿಫಿಕ್ ಎಂಬುದು ಚೀನಾ ನೆಲೆಗೊಂಡಿರುವ, ಅಭಿವೃದ್ಧಿ ಹೊಂದುತ್ತಿರುವ ಪ್ರದೇಶವಾಗಿದೆ’ ಎಂದು ಹೇಳಿದ್ದಾರೆ.

ಜಾಗತಿಕ ಭದ್ರತಾ ಉಪಕ್ರಮಗಳನ್ನು ಕಾರ್ಯಗತಗೊಳಿಸಲು ಚೀನಾ ಏಷ್ಯಾ–ಪೆಸಿಫಿಕ್‌ ರಾಷ್ಟ್ರಗಳೊಂದಿಗೆ ಸಹಕಾರ ಮಾತುಕತೆಗಳನ್ನು ಹೆಚ್ಚಿಸಲಿದೆ ಎಂದೂ ಅವರು ಹೇಳಿದರು.

ಕ್ವಾಡ್‌ ವಿರುದ್ಧ ಟೀಕೆ ಮಾಡಿರುವ ಅವರು, ‘ಏಷ್ಯಾ ಪೆಸಿಫಿಕ್‌ ವಲಯದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ರಕ್ಷಿಸಬೇಕು. ಈ ಪ್ರದೇಶದಲ್ಲಿ ಸೇನಾ ಪಡೆಗಳನ್ನು ನಿಯೋಜಿಸುವ ಯಾವುದೇ ಪ್ರಯತ್ನವನ್ನು ತಿರಸ್ಕರಿಸಬೇಕು’ ಎಂದು ಅವರು ಆಗ್ರಹಿಸಿದರು.

‘ಸಂವಾದ ಮತ್ತು ಸಮಾಲೋಚನೆಯ ಮೂಲಕ ವಿವಾದಗಳ ಶಾಂತಿಯುತ ಇತ್ಯರ್ಥಕ್ಕೆ ನಾವು ಬದ್ಧವಾಗಿರಬೇಕು. ಈ ಪ್ರದೇಶದಲ್ಲಿ ಉದ್ವಿಗ್ನತೆ, ಘರ್ಷಣೆಯನ್ನು ಪ್ರಚೋದಿಸುವ ಎಲ್ಲಾ ಮಾತು ಮತ್ತು ಕೃತಿಗಳನ್ನು ವಿರೋಧಿಸಬೇಕು. ಏಷ್ಯಾ-ಪೆಸಿಫಿಕ್ ಪರಿಕಲ್ಪನೆಯನ್ನು ದುರ್ಬಲಗೊಳಿಸಬಾರದು ಮತ್ತು ಈ ಪ್ರದೇಶದಲ್ಲಿ ಸಹಕಾರಕ್ಕೆ ತೊಂದರೆಯಾಗಬಾರದು’ ಎಂದು ಅವರು ಆಗ್ರಹಿಸಿದರು.

ಅಮೆರಿಕ ನೇತೃತ್ವದ ಐಪಿಇಎಫ್‌ ಅನ್ನು ಚೀನಾದ ತಜ್ಞರು ‘ಆರ್ಥಿಕ ನ್ಯಾಟೊ’ ಎಂದು ಕರೆದಿರುವುದಾಗಿ ಸರ್ಕಾರಿ ಸುದ್ದಿ ಮಾಧ್ಯಮ ಗ್ಲೋಬಲ್‌ ಟೈಮ್ಸ್‌ ವರದಿ ಮಾಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು