ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾದಿಂದ ‘ಕ್ಲೀನ್ ಯುವರ್ ಪ್ಲೇಟ್’ ಅಭಿಯಾನ

ಆಹಾರ ಬಿಕ್ಕಟ್ಟು ತಡೆಯಲು ಅಭಿಯಾನ ರೂಪಿಸಿದ ಚೀನಾ
Last Updated 13 ಆಗಸ್ಟ್ 2020, 14:34 IST
ಅಕ್ಷರ ಗಾತ್ರ

ಬೀಜಿಂಗ್: ಆಹಾರದ ಬಿಕ್ಕಟ್ಟನ್ನು ತಡೆಯಲು ಚೀನಾದ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರ ನೇತೃತ್ವದಲ್ಲಿ ‘ಕ್ಲೀನ್ ಯುವರ್ ಪ್ಲೇಟ್’ ಎನ್ನುವ ಅಭಿಯಾನವನ್ನು ಚೀನಾ ಆರಂಭಿಸಿದೆ.

ಈ ಅಭಿಯಾನ ಆರಂಭಿಸಿರುವ ಬೆನ್ನಲ್ಲೇ ವಿಶ್ವದ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿರುವ ಚೀನಾ, ಕೋವಿಡ್‌–19 ಸಾಂಕ್ರಾಮಿಕ ರೋಗದಿಂದಾಗಿ ಆಹಾರ ಬಿಕ್ಕಟ್ಟನ್ನು ಎದುರಿಸುತ್ತಿದೆ ಎನ್ನುವ ಊಹಾಪೋಹಗಳಿಗೆ ನಾಂದಿ ಹಾಡಿದೆ.

ಅಭಿಯಾನವನ್ನು ಅಧಿಕೃತವಾಗಿ ಆರಂಭಿಸುವ ಮುನ್ನ ಜಿನ್‌ಪಿಂಗ್ ಅವರು ‘ಆಹಾರವನ್ನು ವ್ಯರ್ಥ ಮಾಡುವುದು ಆಘಾತಕಾರಿ ಮತ್ತು ದುಃಖದ ಸಂಗತಿ. ಈ ನಿಟ್ಟಿನಲ್ಲಿ ಸಾರ್ವಜನಿಕ ಜಾಗೃತಿ ಮೂಡಿಸುವುದು ಅಗತ್ಯ. ಆಹಾರವನ್ನು ವ್ಯರ್ಥಮಾಡದೇ ಮಿತವಾಗಿ ಬಳಸುವ ಸಾಮಾಜಿಕ ವಾತಾವರಣ ರೂಪಿಸುವುದು ಒಳ್ಳೆಯದು’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.

‘ಅಧಿಕಾರಿಗಳಿಗೆ ಅದ್ದೂರಿ ಸ್ವಾಗತ ನೀಡುವುದನ್ನು ಕೊನೆಗೊಳಿಸುವಿಕೆ’ ಎನ್ನುವ ಈ ಹಿಂದಿನ ಅಭಿಯಾನಕ್ಕಿಂತ, ಆಹಾರವನ್ನು ವ್ಯರ್ಥ ಮಾಡಬೇಡಿ ಎನ್ನುವ ಸಾರ್ವಜನಿಕ ಅಭಿಯಾನವು ಭಿನ್ನವಾಗಿದೆ’ ಎಂದು ಚೀನಾದ ‘ಗ್ಲೋಬಲ್ ಟೈಮ್ಸ್’ ಪತ್ರಿಕೆಯು ಗುರುವಾರ ವರದಿ ಮಾಡಿದೆ.

‘ಚೀನಾದ ಈ ಅಭಿಯಾನವು ಚೀನಾ ದೇಶವು ಆಹಾರ ಬಿಕ್ಕಟ್ಟನ್ನು ಎದುರಿಸುತ್ತಿದೆ ಎಂದು ಕೆಲ ಮಾಧ್ಯಮಗಳ ಊಹಾಪೋಹಕ್ಕೆ ನಾಂದಿ ಹಾಡಿದೆ. ತಜ್ಞರ ಪ್ರಕಾರ ಜಗತ್ತು ನಿಜಕ್ಕೂ ಆಹಾರದ ಕೊರತೆಯನ್ನು ಎದುರಿಸುತ್ತಿದೆ. ಆದರೆ, ಚೀನಾಕ್ಕೆ ಸಾಂಕ್ರಾಮಿಕ ರೋಗ ಇಲ್ಲವೇ ಪ್ರವಾಹ ಸಂದರ್ಭದಲ್ಲಿ ಉಂಟಾಗುವ ಆಹಾರ ವ್ಯರ್ಥ ಮಾಡುವುದರಿಂದಲೇ ಆಹಾರ ಭದ್ರತೆಗೆ ಧಕ್ಕೆಯಾಗುವ ಆತಂಕವಿದೆ’ ಎಂದೂ ಪತ್ರಿಕೆ ಹೇಳಿದೆ.

‘ಅಧ್ಯಕ್ಷ ಷಿ ಜಿನ್‌ಪಿಂಗ್ ಅವರು 2012ರಲ್ಲಿ ಅಧಿಕಾರ ವಹಿಸಿಕೊಂಡ ಬಳಿಕ, ಐಷಾರಾಮಿ ಪಾನಗೋಷ್ಠಿಗಳನ್ನು ನಿಷೇಧಿಸಿದರು. ವಿಶೇಷವಾಗಿ ಮಿಲಿಟರಿಯು ಆಹಾರವನ್ನು ವ್ಯರ್ಥ ಮಾಡಬಾರದು. ಅಧಿಕೃತ ಔತಣಕೂಟಗಳಿಂದ ದೂರವಿರಬೇಕು ಎಂದೂ ಹೇಳಿದ್ದರು. ಆದರೆ, ಸಮಯ ಕಳೆದಂತೆ ಹಳೆಯ ಅಭ್ಯಾಸಗಳು ಮತ್ತೆ ಮರುಕಳಿಸಿದ್ದವು’ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

‘ಕೋವಿಡ್‌–19 ನಡುವೆಯೂ ಆಹಾರ ಸುರಕ್ಷತೆಯು ಚೀನಾದ ಮೇಲೆ ಗಂಭೀರ ಪರಿಣಾಮ ಬೀರಿಲ್ಲ. ಚೀನಾದ ಬಳಿ ಸಾಕಷ್ಟು ಧಾನ್ಯಸಂಗ್ರಹದ ನಿಕ್ಷೇಪಗಳಿವೆ’ ಎಂದು ಚೀನಾದ ರೆನ್ಮಿನ್‌ ಕೃಷಿ, ಆರ್ಥಿಕತೆ ಮತ್ತು ಗ್ರಾಮೀಣ ವಿಶ್ವವಿದ್ಯಾಲಯದ ಪ್ರೊ.ಜೆಂಗ್ ಫೆಂಗ್‌ಟಿಯನ್ ಅಭಿಪ್ರಾಯ ಪಟ್ಟಿದ್ದಾರೆ.

ಚೀನಾವು ತನ್ನ ಸಮೃದ್ಧ ಬೆಳೆಗಳ ಹೊರತಾಗಿಯೂ ಆಗ್ನೇಯ ಏಷ್ಯಾ ದೇಶಗಳಿಂದ ಭತ್ತದಂತಹ ಅಗತ್ಯ ಧಾನ್ಯಗಳನ್ನು ಆಮದು ಮಾಡಿಕೊಳ್ಳುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT