ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಲ್ವಾನ್‌ ಕಣಿವೆಯಲ್ಲಿನ ಸಂಘರ್ಷ ಚೀನಾದ ಯೋಜಿತ ಕೃತ್ಯ: ವರದಿ

Last Updated 3 ಡಿಸೆಂಬರ್ 2020, 1:50 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಗಾಲ್ವಾನ್‌ ಕಣಿವೆಯ ವಾಸ್ತವ ಗಡಿ ನಿಯಂತ್ರಣಾ ರೇಖೆ (ಎಲ್‌ಎಸಿ) ಬಳಿ ಜೂನ್‌ 15ರಂದು ಚೀನಾದ 'ಪೀಪಲ್‌ ಲಿಬರೇಷನ್‌ ಆರ್ಮಿ (ಪಿಎಲ್‌ಎ)' ಮತ್ತು ಭಾರತೀಯ ಸೇನೆಯ ನಡುವೆ ನಡೆದ ಕಲಹಕ್ಕಾಗಿ ಚೀನಾ ಮೊದಲೇ ಯೋಜನೆ ಮಾಡಿತ್ತು ಎಂದು ಅಮೆರಿಕ ಕಾಂಗ್ರೆಸ್‌ಗೆ ಸಲ್ಲಿಕೆಯಾಗಿರುವ ಇತ್ತೀಚಿನ ವರದಿಯಲ್ಲಿ ಹೇಳಲಾಗಿದೆ.

ಪೂರ್ವ ಲಡಾಖ್‌ನ ಗಡಿಯಲ್ಲಿ ಯಥಾಸ್ಥಿತಿಯನ್ನು ಬದಲಾಯಿಸುವ ಚೀನಾದ ಪಿಎಲ್‌ಎ ಆಕ್ರಮಣಕಾರಿ ಕ್ರಮಗಳ ಹಿನ್ನೆಲೆಯಲ್ಲಿ ಭಾರತ ಮತ್ತು ಚೀನಾದ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆ ಕುರಿತು 'ಅಮೆರಿಕ-ಚೀನಾ ಆರ್ಥಿಕ ಮತ್ತು ಭದ್ರತಾ ಪರಿಶೀಲನಾ ಆಯೋಗ', 'ಅಮೆರಿಕ-ಚೀನಾ ಆಯೋಗ (ಯುಎಸ್ಸಿಸಿ)' ಅಮೆರಿಕ ಕಾಂಗ್ರೆಸ್‌ಗೆ ವಿವರವಾದ ವರದಿ ನೀಡಿದೆ. ಚೀನಾ-ಭಾರತದ ಸಂಬಂಧಗಳ ವಿಷಯದಲ್ಲಿ 2020 ಅತ್ಯಂತ 'ಕೆಟ್ಟ ವರ್ಷ' ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಗಾಲ್ವಾನ್ ಕಣಿವೆಯಲ್ಲಿ ಜೂನ್ 15 ರಂದು ಭಾರತೀಯ ಸೇನೆ ಮತ್ತು ಎಲ್‌ಎಸಿಗೆ ಹತ್ತಿರವಿರುವ ಚೀನಾದ ಪಿಎಲ್‌ಎ ನಡುವಿನ ಘರ್ಷಣೆಯನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ. 'ಸಂಭವಿಸಬಹುದಾದ ಸಾವುನೋವುಗಳನ್ನು ಪರಿಗಣನೆಯಲ್ಲಿಟ್ಟುಕೊಂಡು ಗಾಲ್ವಾನ್‌ ಕಣಿವೆಯ ಘರ್ಷಣೆಯನ್ನು ಚೀನಾ ಮೊದಲೇ ಯೋಜಿಸಿತ್ತು ಎಂದು ಕೆಲವು ಪುರಾವೆಗಳು ಸೂಚಿಸುತ್ತಿವೆ,' ಎಂದು ಅಮೆರಿಕ-ಚೀನಾ ಆಯೋಗದ ವರದಿಯು ಹೇಳಿದೆ.

ಅಮೆರಿಕ ಮತ್ತು ಚೀನಾ ನಡುವಿನ ಭದ್ರತೆ ಮತ್ತು ವ್ಯಾಪಾರ ಸಮಸ್ಯೆಗಳನ್ನು ಮೇಲ್ವಿಚಾರಣೆ ಮಾಡಲು 2000ನೇ ಇಸವಿಯ ಅಕ್ಟೋಬರ್‌ನಲ್ಲಿ 'ಅಮೆರಿಕ-ಚೀನಾ ಆಯೋಗ'ವನ್ನು ರಚಿಸಲಾಗಿದೆ.

ಗಾಲ್ವಾನ್ ಕಣಿವೆಯಲ್ಲಿ ನಡೆದ ಪಿಎಲ್‌ಎ ಜೊತೆಗಿನ ಘರ್ಷಣೆಯಲ್ಲಿ ಭಾರತೀಯ ಸೇನೆಯು 20 ಸೈನಿಕರನ್ನು ಕಳೆದುಕೊಂಡಿತು. ಪಿಎಲ್‌ಎ ಕೂಡ ಸಾವುನೋವುಗಳನ್ನು ಅನುಭವಿಸಿತಾದರೂ, ಗಾಯಗೊಂಡ ಅಥವಾ ಹತ್ಯೆಗೀಡಾದ ಸೈನಿಕರ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.

ಘಟನೆ ನಡೆದ ಎರಡು ದಿನಗಳ ನಂತರ ಚೀನಾವನ್ನು ಉದ್ದೇಶಿಸಿ ಮಾತನಾಡಿದ್ದ ವಿದೇಶಾಂಗ ಇಲಾಖೆ ಸಚಿವ ಜೈಶಂಕರ್‌, 'ಚೀನಾದ ಪಿಎಲ್‌ಎ ಭಾರತೀಯ ಸೈನಿಕರ ಮೇಲೆ 'ಪೂರ್ವನಿಯೋಜಿತ' ದಾಳಿ ನಡೆಸಿದೆ,' ಎಂದು ಆರೋಪಿಸಿದ್ದರು. ಅಲ್ಲದೆ, 'ಇದು ಭಾರತ ಮತ್ತು ಚೀನಾದ ನಡುವಿನ ಸಂಬಂಧಗಳ ಮೇಲೆ ಗಂಭೀರ ಪರಿಣಾಮ ಬೀರಲಿದೆ,' ಎಂದು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT