ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರು ಮಕ್ಕಳನ್ನು ಹೊಂದಲು ಅವಕಾಶ ಕೊಟ್ಟರೂ ಜನರಿಗೆ ಚೀನಾ ಸರ್ಕಾರದ ಮೇಲಿಲ್ಲ ನಂಬಿಕೆ

Last Updated 1 ಜೂನ್ 2021, 11:42 IST
ಅಕ್ಷರ ಗಾತ್ರ

ಬೀಜಿಂಗ್‌: ಚೀನಾದಲ್ಲಿ ಇನ್ನು ಮುಂದೆ ದಂಪತಿ ಮೂರು ಮಕ್ಕಳನ್ನು ಹೊಂದಬಹುದಾದ ಎಂಬ ಸರ್ಕಾರದ ಹೊಸ ನಿರ್ಧಾರದ ಮೇಲೆ ಅಲ್ಲಿನ ಜನ ತೀವ್ರ ಸಂದೇಹ ವ್ಯಕ್ತಪಡಿಸಿದ್ದಾರೆ. ಈಗಿರುವ ನೀತಿಗಿಂತಲೂ ಹೊಸ ನಿರ್ಧಾರ ಹೆಚ್ಚಿನ ವ್ಯತ್ಯಾಸವನ್ನೇನಾದರೂ ಮಾಡಲಿದೆಯೇ? ಎಂದು ನಾಗರಿಕರು ಸಾಮಾಜಿಕ ತಾಣಗಳಲ್ಲಿ ಪ್ರಶ್ನೆ ಮಾಡಿದ್ದಾರೆ.

ಅಲ್ಲದೆ, ಹೊಸ ನಿರ್ಧಾರಕ್ಕೆ ಸಂಬಂಧಿಸಿದಂತೆ ಭರವಸೆ ನೀಡಿರುವ ಬೆಂಬಲ ಕ್ರಮಗಳ ಕುರಿತು ಸರ್ಕಾರ ವಿವರಿಸಬೇಕು ಎಂದು ಸಾಮಾಜಿಕ ತಾಣಗಳಲ್ಲಿ ಪ್ರಶ್ನೆ ಮಾಡಲಾಗಿದೆ.

ಜನ ಹೆಚ್ಚು ಮಕ್ಕಳನ್ನು ಹೊಂದುವುದನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ, ಎರಡು ಮಕ್ಕಳ ನೀತಿಯನ್ನು ತೆಗೆದುಹಾಕುತ್ತಿರುವುದಾಗಿ ಚೀನಾ ಸೋಮವಾರ ಘೋಷಣೆ ಮಾಡಿತ್ತು.

ಚೀನಾ ಜನಸಂಖ್ಯೆಯಲ್ಲಿ ವಯಸ್ಸಾದವರ ಪ್ರಮಾಣ ಹೆಚ್ಚುತ್ತಿದೆ. ಫಲವತ್ತತೆಯು ಕುಸಿಯುತ್ತಿದೆ. ಜನಸಂಖ್ಯೆಯ ದೃಷ್ಟಿಯಿಂದ ಚೀನಾ ಕುಸಿಯಲಾರಂಭಿಸಿದೆ ಎಂಬ ಮಾಹಿತಿ ಇತ್ತೀಚೆಗೆ ನಡೆದ ಜನಗಣತಿ ವೇಳೆ ಬಹಿರಂಗವಾಗಿತ್ತು.

ಬೆಂಬಲ ಕ್ರಮಗಳನ್ನು ಒಳಗೊಂಡಿರುವ ಈ ಪ್ರಮುಖ ನೀತಿ ಬದಲಾವಣೆಯು ‘ದೇಶದ ಜನಸಂಖ್ಯಾ ರಚನೆಯನ್ನು ಸುಧಾರಿಸಲು ಅನುಕೂಲವಾಗಲಿದೆ ಎಂದು ಸುದ್ದಿ ಸಂಸ್ಥೆ ಕ್ಸಿನುವಾ ವರದಿ ಮಾಡಿದೆ.

‘ನನಗೆ ಅರ್ಥವಾಗುತ್ತಿಲ್ಲ. ಬೆಂಬಲ ಕ್ರಮಗಳು ಅಂದರೇನು?‘ ಎಂದು ಸಾಮಾಜಿಕ ತಾಣದ ಬಳಕೆದಾರರೊಬ್ಬರು ಪ್ರಶ್ನೆ ಮಾಡಿದ್ದಾರೆ. ಹೊಸ ನೀತಿಗೆ ಸಂಬಂಧಿಸಿದಂತೆ ಚೀನಾ ಮೈಕ್ರೋಬ್ಲಾಗಿಂಗ್‌ ಆ್ಯಪ್‌ನಲ್ಲಿ ಸುದ್ದಿ ವಾಹಿನಿ ಕ್ಸಿನುವಾ ಹಂಚಿಕೊಂಡಿದ್ದ ಪೋಸ್ಟ್‌ಗೆ ಕೇಳಲಾದ ಅತ್ಯಂತ ಜನಪ್ರಿಯ ಪ್ರಶ್ನೆ ಇದು. ಈ ವರೆಗೆ 128,000 ಮಂದಿ ಈ ಪ್ರಶ್ನೆಗೆ ಲೈಕ್‌ ಮಾಡಿದ್ದಾರೆ.

ಚೀನಾದ ನಗರ ಪ್ರದೇಶಗಳಲ್ಲಿ ಮಕ್ಕಳನ್ನು ಬೆಳೆಸುವುದು ಎಷ್ಟು ಕಷ್ಟ ಎಂಬ ವಿಚಾರವನ್ನು ಕೆಲ ಮಂದಿ ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಿದ್ದಾರೆ. ನಗರ ಪ್ರದೇಶಗಳಲ್ಲಿ ವಸತಿ ವ್ಯವಸ್ಥೆ ದುಬಾರಿ. ಜೊತೆಗೆ, ಪೈಪೋಟಿಯಿಂದ ಕೂಡಿದ ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳು ಶಾಲೆಗಳ ಹೊರತಾಗಿಯೂ ಟುಟೋರಿಯಲ್‌ಗಳಿಗೆ ಹೋಗಬೇಕಾಗಿ ಬಂದಿದೆ. ಇದೆಲ್ಲವೂ ಮಕ್ಕಳನ್ನು ಪಡೆಯುವುದಕ್ಕೆ ತಡೆಯೊಡ್ಡುತ್ತವೆ ಎಂದು ಅಕ್ರೋಶ ವ್ಯಕ್ತಪಡಿಸಿದ್ದಾರೆ. ‌

ಕಳೆದ ವರ್ಷ ಬಿಡುಗಡೆಯಾದ ‘ದಿ ಪೀಟರ್‌ಸನ್‌ ಇನ್‌ಸ್ಟಿಟ್ಯೂಟ್‌ ಫಾರ್‌ ಇಂಟರ್‌ನ್ಯಾಷನಲ್‌ ಎಕನಾಮಿಕ್ಸ್‌‘ ವರದಿಯ ಪ್ರಕಾರ ‘ದುಡಿಮೆ ಮತ್ತು ಗಳಿಕೆಯಲ್ಲಿ ಚೀನಾದ ಮಹಿಳೆಯರು ಲಿಂಗತಾರತಮ್ಯ ಎದುರುಸುತ್ತಿದ್ದಾರೆ. ಶಿಶುಪಾಲನೆಗೆ ಸರ್ಕಾರದಿಂದ ಬೆಂಬಲ ದೊರೆಯುತ್ತಿಲ್ಲ. ಹೀಗಾಗಿ ಮಕ್ಕಳ ಪಾಲನೆ, ಆರೈಕೆ ಕರ್ತವ್ಯ ಮಹಿಳೆಗೆ ಹೊರೆಯಾಗಿ ಪರಿಣಮಿಸಿದೆ,‘ ಎಂದು ಹೇಳಲಾಗಿದೆ.

ದೊಡ್ಡ ನಗರಗಳಲ್ಲಿ ಕೆಲಸ ಮಾಡುವ ಮಹಿಳೆಯರು ಮತ್ತಷ್ಟು ತಾರತಮ್ಯ ಎದುರಿಸಬೇಕಾಗಿ ಬಂದಿದೆ. 30 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಿಗೆ ಉದ್ಯೋಗ ಸಿಗುವುದೇ ಕಷ್ಟವಾಗಿದೆ,‘ ಎಂದು ಸಾಮಾಜಿಕ ತಾಣ ವೀಬೊನಲ್ಲಿ ಮತ್ತೊಬ್ಬ ಬಳಕೆದಾರರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ದೇಶದ ಅಧ್ಯಕ್ಷ ಷಿ ಜಿನ್‌ಪಿಂಗ್‌ ಅವರ ನೇತೃತ್ವದಲ್ಲಿ ಭಾನುವಾರ ನಡೆದಿದ್ದ ಪಾಲಿಟ್‌ ಬ್ಯೂರೊ ಸಭೆಯಲ್ಲಿ ಕುಟುಂಬ ನಿಯಂತ್ರಣಾ ನೀತಿಯ ನಿಯಮಾವಳಿಗೆ ಬದಲಾವಣೆ ತರವು ನಿರ್ಧಾರ ಕೈಗೊಳ್ಳಲಾಗಿತ್ತು. ಶೈಕ್ಷಣಿಕ ವೆಚ್ಚ, ತೆರಿಗೆ ಮತ್ತು ವಸತಿ ಬೆಂಬಲ, ಮಹಿಳೆಯರಿಗೆ ದುಡಿಯುವ ಸ್ಥಳದಲ್ಲಿ ಕಾನೂನು ರಕ್ಷಣೆ ಸೇರಿದಂತೆ ಹಲವು ಕ್ರಮಗಳನ್ನು ಘೋಷಣೆ ಮಾಡಲಾಗಿತ್ತು. ಅದರೆ, ನಿರ್ಧಿಷ್ಟ ಕಾರ್ಯಕ್ರಮಗಳನ್ನು ಸೂಚಿಸಿರಲಿಲ್ಲ. ‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT