ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

132 ಜನರಿದ್ದ ದೊಡ್ಡ ವಿಮಾನ ಚೀನಾದಲ್ಲಿ ಪತನ: ಚೂರುಚೂರಾಗಿ ಒಡೆದ ಬೋಯಿಂಗ್‌ 737

Last Updated 22 ಮಾರ್ಚ್ 2022, 1:52 IST
ಅಕ್ಷರ ಗಾತ್ರ

ಬೀಜಿಂಗ್‌: 132 ಮಂದಿ ಪ್ರಯಾಣಿಸುತ್ತಿದ್ದ ಚೀನಾ ಈಸ್ಟರ್ನ್‌ ಏರ್‌ಲೈನ್ಸ್‌ನ ಬೋಯಿಂಗ್‌ 737–800 ವಿಮಾನವು ದಕ್ಷಿಣ ಚೀನಾದ ಪರ್ವತ ಪ್ರದೇಶದಲ್ಲಿ ಸೋಮವಾರ ಪತನವಾಗಿದೆ. ವಿಮಾನದಲ್ಲಿ ಇದ್ದವರಲ್ಲಿ ಯಾರೂ ಬದುಕುಳಿದಿರುವ ಸಾಧ್ಯತೆ ಇಲ್ಲ ಎಂದು ಚೀನಾದ ಮಾಧ್ಯಮಗಳು ವರದಿ ಮಾಡಿವೆ. ವಿಮಾನದಲ್ಲಿ ಒಂಬತ್ತು ಮಂದಿ ಸಿಬ್ಬಂದಿ ಇದ್ದರು.

ನೈರುತ್ಯ ಚೀನಾದ ಯುನಾನ್‌ಪ್ರಾಂತ್ಯದ ರಾಜಧಾನಿ ಕುನ್‌ಮಿಂಗ್‌ನಿಂದ ಗುವಾಂಗ್‌ಡಾಂಗ್‌ ಪ್ರಾಂತ್ಯದ ರಾಜಧಾನಿ ಗುವಾಂಗ್‌ಝೌಗೆ ಈ ವಿಮಾನವು ಸಂಚರಿಸುತ್ತಿತ್ತು. ಪತನಕ್ಕೆ ಕಾರಣವೇನು ಎಂಬುದು ತಕ್ಷಣಕ್ಕೆ ಗೊತ್ತಾಗಿಲ್ಲ. ವಿಮಾನವು ಚೂರುಚೂರಾಗಿ ಒಡೆದು ಪರ್ವತದಲ್ಲಿ ಚೆದುರಿ ಹೋಗಿದೆ. ಪತನದ ಸಂದರ್ಭದಲ್ಲಿ ಬೆಂಕಿ ಹೊತ್ತಿಕೊಂಡಿದೆ. ಪರ್ವತದಲ್ಲಿ ಇದ್ದ ಬಿದಿರು ಮೆಳೆ ಬೆಂಕಿಯಲ್ಲಿ ಉರಿದು ಹೋಗಿದೆ.

ಮಧ್ಯಾಹ್ನ 1.11ಕ್ಕೆ ಕುನ್‌ಮಿಂಗ್‌ನಿಂದ ಹೊರಟ ವಿಮಾನ 3.05ಕ್ಕೆ ಗುವಾಂಗ್‌ಝೌ ತಲುಪಬೇಕಿತ್ತು. ಆದರೆ, ವುಝೌ ನಗರದ ಸಮೀಪ ಬಂದಾಗ ಸಂಪರ್ಕ ಕಡಿತಗೊಂಡಿತು ಎಂದು ಚೀನಾ ನಾಗರಿಕ ವಿಮಾನಯಾನ ಪ್ರಾಧಿಕಾರವು ಹೇಳಿದೆ.

ವಿಮಾನವು ಆರು ವರ್ಷ ಹಳೆಯದಾಗಿತ್ತು. ಪತನಕ್ಕೆ ಮೊದಲು ಇದು 29,100 ಅಡಿ ಎತ್ತರದಲ್ಲಿ ಹಾರಾಡುತ್ತಿತ್ತು. ಎರಡು ನಿಮಿಷದಲ್ಲಿ ಅದು 9,075 ಅಡಿಗೆ ಕುಸಿಯಿತು. ಮತ್ತೆ 20 ಸೆಕೆಂಡ್‌ಗಳಲ್ಲಿ 3,225 ಅಡಿಗೆ ಇಳಿಯಿತು. ವಿಮಾನವು ಲಂಬವಾಗಿ ನೆಲಕ್ಕೆ ಅಪ್ಪಳಿಸಿತು ಎಂದು ಹೇಳಲಾಗಿದೆ.

ವಿಮಾನ ಪತನದ ಸಂದರ್ಭದಲ್ಲಿ ವುಝೌನಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇತ್ತು. ಆದರೆ, ಕಾಣಿಸುವಿಕೆ ಸಮಸ್ಯೆ ಏನೂ ಇರಲಿಲ್ಲ.

ವಿಮಾನ ಬಿದ್ದ ಸ್ಥಳದಲ್ಲಿ ಭಾರಿ ಬೆಂಕಿ ಮತ್ತು ಹೊಗೆ ಕಾಣಿಸಿಕೊಂಡಿದೆ ಎಂದು ಸ್ಥಳೀಯ ನಿವಾಸಿಗಳು ಹೇಳಿದ್ದಾರೆ.

ರಕ್ಷಣಾ ಕಾರ್ಯಕ್ಕಾಗಿ 1,000 ಮಂದಿ ಅಗ್ನಿಶಾಮಕ ಸಿಬ್ಬಂದಿ ಮತ್ತು ನೂರು ಮಂದಿ ಸ್ಥಳೀಯರನ್ನು ನಿಯೋಜಿಸಲಾಗಿದೆ. 117 ಮಂದಿ ತುರ್ತು ಸೇವಾ ಸಿಬ್ಬಂದಿ ಮತ್ತು ಎರಡು ಡಜನ್‌ಗೂ ಹೆಚ್ಚು ಅಗ್ನಿಶಾಮಕ ಟ್ರಕ್‌ಗಳನ್ನು ಸ್ಥಳಕ್ಕೆ ಕಳುಹಿಸಲಾಗಿದೆ.

ವಿಮಾನ ಅಪಘಾತಕ್ಕೆ ಕಾರಣವೇನು ಎಂಬುದರ ಬಗ್ಗೆ ತನಿಖೆ ನಡೆಸುವಂತೆ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಅವರು ಆದೇಶಿಸಿದ್ದಾರೆ.

ವಿಮಾನ ಪತನದ ಬಳಿಕ, ಬೋಯಿಂಗ್‌ ಕಂಪನಿಯ ಷೇರುಗಳ ಮೌಲ್ಯವು ಶೇ 6.4ರಷ್ಟು ಕುಸಿತ ಕಂಡಿದೆ.ಚೀನಾ ಈಸ್ಟರ್ನ್‌ ಏರ್‌ಲೈನ್ಸ್‌, ಸರ್ಕಾರಿ ಸ್ವಾಮ್ಯದ ಸಂಸ್ಥೆ. ಇದು ಜಗತ್ತಿನ ಆರನೇ ಅತ್ಯಂತ ದೊಡ್ಡ ಮತ್ತು ಚೀನಾದ ಅತ್ಯಂತ ದೊಡ್ಡ ವಿಮಾನ ಯಾನ ಸಂಸ್ಥೆ.

ಈ ಹಿಂದೆ, ಚೀನಾದಲ್ಲಿ ವಿಮಾನ ಅಪಘಾತವಾಗಿದ್ದು 2010ರಲ್ಲಿ. ಹಿನಾನ್‌ ಏರ್‌ಲೈನ್ಸ್‌ನ ಎಂಬ್ರೇರರ್‌ ಇ–190 ವಿಮಾನವು ಪತನವಾಗಿತ್ತು. ವಿಮಾನದಲ್ಲಿದ್ದ 96 ಜನರ ಪೈಕಿ 44 ಮಂದಿ ಮೃತಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT