ಬುಧವಾರ, ಜನವರಿ 27, 2021
22 °C

Covid-19 World Update: 6.49 ಕೋಟಿಗೂ ಅಧಿಕ ಸೋಂಕಿತರು ಗುಣಮುಖ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್‌: ಪ್ರಪಂಚದಾದ್ಯಂತ ಇದುವರೆಗೆ ಒಟ್ಟು 9.08 ಕೋಟಿ ಜನರಿಗೆ ಕೋವಿಡ್‌–19 ಸೋಂಕು ತಗುಲಿದೆ. ಇದರಲ್ಲಿ 6.49 ಕೋಟಿ ಸೋಂಕಿತರು ಗುಣಮುಖರಾಗಿದ್ದು, 19.45 ಲಕ್ಷ ಮಂದಿ ಮೃತಪಟ್ಟಿದ್ದಾರೆ ಎಂದು ವರ್ಲ್ಡೊ ಮೀಟರ್ ವೆಬ್‌ಸೈಟ್‌ ವರದಿ ಮಾಡಿದೆ.

ವಿಶ್ವದಾದ್ಯಂತ ಇಂದು ಹೊಸದಾಗಿ 1.30 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ಬೆಳಕಿಗೆ ಬಂದಿದ್ದು, 2,634 ಜನರು ಮೃತಪಟ್ಟಿದ್ದಾರೆ. ಇದೇ ವೇಳೆ 1.19 ಲಕ್ಷ ಸೋಂಕಿತರು ಗುಣಮುಖರಾಗಿದ್ದಾರೆ. ಒಟ್ಟಾರೆ 2.39 ಕೋಟಿಗೂ ಅಧಿಕ ಸಕ್ರಿಯ ಪ್ರಕರಣಗಳಿದ್ದು, ಇದರಲ್ಲಿ 1.08 ಜನರ ಸ್ಥಿತಿ ಗಂಭೀರವಾಗಿದೆ.

ಅತಿಹೆಚ್ಚು (2.29 ಕೋಟಿ) ಸೋಂಕು ಪ್ರಕರಣಗಳು ವರದಿಯಾಗಿರುವ ಅಮೆರಿಕದಲ್ಲಿ ಇಂದು 13,079 ಹೊಸ ಪ್ರಕರಣಗಳು ಪತ್ತೆಯಾಗಿವೆ. ಇದೇ ವೇಳೆ 101 ಮಂದಿ ಮೃತಪಟ್ಟಿದ್ದಾರೆ. ಇದರೊಂದಿಗೆ ಈ ದೇಶದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 3,83,378ಕ್ಕೆ ಏರಿಕೆಯಾಗಿದೆ. ಅಮೆರಿಕದ ನಂತರದ ಸ್ಥಾನದಲ್ಲಿರುವ ಭಾರತದಲ್ಲಿ 1.04 ಕೋಟಿ ಪ್ರಕರಣಗಳು ವರದಿಯಾಗಿವೆ. ಇದರಲ್ಲಿ 1.51 ಲಕ್ಷ ಮಂದಿ ಮೃತಪಟ್ಟಿದ್ದಾರೆ. ಇನ್ನೂ 2.23 ಲಕ್ಷ ಪ್ರಕರಣಗಳು ಸಕ್ರಿಯವಾಗಿವೆ.

ಇಂಗ್ಲೆಂಡ್‌ನಲ್ಲಿ ಪ್ರಕರಣಗಳ ಏರಿಕೆ
ಕೋವಿಡ್‌–19 ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ಇಂಗ್ಲೆಂಡ್‌ ಸಾಂಕ್ರಾಮಿಕದ ಭೀಕರ ವಾರಗಳನ್ನು ಎದುರಿಸುತ್ತಿದೆ ಎಂದು ಅಲ್ಲಿನ ಮುಖ್ಯ ಆರೋಗ್ಯಾಧಿಕಾರಿ ತಿಳಿಸಿದ್ದಾರೆ. ಆರೋಗ್ಯ ಸೇವೆಯು ಅಂತ್ಯ ಅಪಾಯಕಾರಿ ವಾರದತ್ತ ಸಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಇಂಗ್ಲೆಂಡ್‌ನಲ್ಲಿ‌ ಸಾವಿನ ಸಂಖ್ಯೆ 81 ಸಾವಿರಕ್ಕಿಂತ ಹೆಚ್ಚಾಗಿದೆ. ಸೋಂಕಿತರ ಸಂಖ್ಯೆ 30.72 ಲಕ್ಷಕ್ಕೆ ಏರಿಕೆಯಾಗಿದ್ದು, ವಿಶ್ವದಲ್ಲಿ ಹೆಚ್ಚು ಸೋಂಕು ಪ್ರಕರಣಗಳು ವರದಿಯಾದ ರಾಷ್ಟ್ರಗಳ ಸಾಲಿನಲ್ಲಿ ಈ ದೇಶ 5ನೇ ಸ್ಥಾನದಲ್ಲಿದೆ.

ಉಳಿದಂತೆ ಸೋಂಕು ಪ್ರಕರಣಗಳ ಸಂಖ್ಯೆ ಬ್ರೆಜಿಲ್‌ನಲ್ಲಿ 81.05 ಲಕ್ಷ, ರಷ್ಯಾದಲ್ಲಿ 34.25, ಫ್ರಾನ್ಸ್‌ನಲ್ಲಿ 27.83 ಲಕ್ಷ ಪ್ರಕರಣಗಳು ದಾಖಲಾಗಿವೆ.

ವೈರಸ್ ಮೂಲ ಪತ್ತೆಗಾಗಿ ಡಬ್ಲ್ಯುಎಚ್‌ಒ ತಂಡ ಚೀನಾಕ್ಕೆ
ಕೊರೊನಾವೈರಸ್ ಸಾಂಕ್ರಾಮಿಕದ ಮೂಲದ ಬಗ್ಗೆ ತನಿಖೆ ನಡೆಸಲು ವಿಶ್ವ ಆರೋಗ್ಯ ಸಂಸ್ಥೆಯ ತಜ್ಞರ ತಂಡ ಜನವರಿ 14(ಗುರುವಾರ) ದೇಶಕ್ಕೆ ಬರಲಿದೆ ಎಂದು ಚೀನಾ ಸರ್ಕಾರ ತಿಳಿಸಿದೆ.

ಈ ಮೂಲಕ ಕೊರೊನಾವೈರಸ್‌ ಸೋಂಕಿನ ಮೂಲದ ಪರಿಶೀಲನೆಗೆ ಅನುಮತಿ ನೀಡುವಲ್ಲಿ ಚೀನಾ ವಿಳಂಬ ನೀತಿ ಅನುಸರಿಸುತ್ತಿದೆ ಎಂಬ ಟೀಕೆಗೆ ಸರ್ಕಾರ ಅಂತ್ಯ ಹಾಡಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು