ಶುಕ್ರವಾರ, ಮಾರ್ಚ್ 31, 2023
22 °C

ಹಿಂದೂ ಮಹಾಸಾಗರದಲ್ಲಿ ಬಿದ್ದ ಚೀನಾದ ಅನಿಯಂತ್ರಿತ ರಾಕೆಟ್‌ ಅವಶೇಷ

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ಬಿಜೀಂಗ್‌: ‘ಚೀನಾದ ಲಾಂಗ್ ಮಾರ್ಚ್ 5 ಬಿ ರಾಕೆಟ್‌ನ ಭಗ್ನಾವಶೇಷವು ಭಾನುವಾರ ಭೂಮಿಯ ವಾತಾವರಣವನ್ನು ಪ್ರವೇಶಿಸಿದ್ದು, ಇದು ಮಾಲ್ಡೀವ್ಸ್‌ಗೆ ಸಮೀಪ ಹಿಂದೂ ಮಹಾಸಾಗರದಲ್ಲಿ ಬಿದ್ದಿದೆ’ ಎಂದು ಚೀನಾದ ಬಾಹ್ಯಾಕಾಶ ಕೇಂದ್ರವು ತಿಳಿಸಿದೆ.

‘ಚೀನಾದ ಲಾಂಗ್‌ ಮಾರ್ಚ್‌ 5ಬಿ ರಾಕೆಟ್‌ನ ಭಗ್ನಾವಶೇಷವು ಬೆಳಿಗ್ಗೆ 10.24ಕ್ಕೆ ಭೂಮಿಯ ವಾತಾವರಣವನ್ನು ಪ್ರವೇಶಿಸಿದೆ. ಇದು ಸಾಗರ  ಪ್ರದೇಶದಲ್ಲಿ 72.47 ಡಿಗ್ರಿ ಪೂರ್ವ ರೇಖಾಂಶ ಮತ್ತು 2.65 ಡಿಗ್ರಿ ಉತ್ತರ ಅಕ್ಷಾಂಶದಲ್ಲಿ ಬಿದ್ದಿದೆ’ ಎಂದು ಚೀನಾದ ಮಾನವಸಹಿತ ಬಾಹ್ಯಾಕಾಶ ಎಂಜಿನಿಯರಿಂಗ್ ಕಚೇರಿ ತಿಳಿಸಿದೆ.

‘ಪ್ರತಿ ಸೆಕೆಂಡ್‌ಗೆ 8ಕಿ.ಮೀ ವೇಗದಲ್ಲಿ ರಾಕೆಟ್‌ ಭೂಮಿಯ ದಟ್ಟ ವಾತಾವರಣವನ್ನು ಪ್ರವೇಶಿಸಿದೆ. ರಾಕೆಟ್‌ನ ಅನಿಯಂತ್ರಿತ ಮರು ಪ್ರವೇಶದ ವೇಳೆ ಅದರ ಹೆಚ್ಚಿನ ಭಾಗಗಳು ಸುಟ್ಟು ಹೋಗಿವೆ’ ಎಂದು ಹಾಂಗ್‌ಕಾಂಗ್‌ ಮೂಲದ ‘ಸೌತ್‌ ಚೀನಾ ಮಾರ್ನಿಂಗ್ ಪೋಸ್ಟ್‌’ ವರದಿ ಮಾಡಿದೆ.

ಏಪ್ರಿಲ್‌ 29ರಂದು ಚೀನಾವು ತನ್ನ ಬಾಹ್ಯಾಕಾಶ ಕೇಂದ್ರದ ಪ್ರಮುಖ ಮಾಡ್ಯೂಲ್ ಅನ್ನು ಉಡಾವಣೆ ಮಾಡಲು ಈ ರಾಕೆಟ್‌ ಅನ್ನು ಬಳಸಿತ್ತು.

ನಿಟ್ಟಿಸಿರು: ‘ಚೀನಾದ ಲಾಂಗ್ ಮಾರ್ಚ್ 5 ಬಿ ರಾಕೆಟ್‌ನ ಭಗ್ನಾವಶೇಷವು ಭೂಮಿಯ ವಾತಾವರಣವನ್ನು ಪ್ರವೇಶಿಸಿದೆ’ ಎಂದು ಚೀನಾ ಭಾನುವಾರ ಬೆಳಿಗ್ಗೆ ಹೇಳಿತ್ತು. ‘ಚೀನಾದ ಲಾಂಗ್‌ ಮಾರ್ಚ್‌ 5ಬಿ ರಾಕೆಟ್‌ನ ಭಗ್ನಾವಶೇಷವು ಬೆಳಿಗ್ಗೆ 10.24ಕ್ಕೆ ಭೂಮಿಯ ವಾತಾವರಣವನ್ನು ಪ್ರವೇಶಿಸಿದೆ. ಈ ಅನಿಯಂತ್ರಿತ ಮರು ಪ್ರವೇಶದ ವೇಳೆ ಅದರ ಹೆಚ್ಚಿನ ಭಾಗಗಳು ಸುಟ್ಟು ಹೋಗಿವೆ’ ಎಂದು ಅದು ತಿಳಿಸಿತ್ತು.  ಈ ಬಗ್ಗೆ ಟ್ವೀಟ್‌ ಮಾಡಿದ್ದ ಅಮೆರಿಕದ ಸ್ಪೇಸ್‌ ಕಮಾಂಡ್‌ನ ಸ್ಪೇಸ್‌ ಟ್ರ್ಯಾಕ್‌ ಪ್ರಾಜೆಕ್ಟ್‌,‘ ಲಾಂಗ್‌ಮಾರ್ಚ್‌ 5ಬಿಯ ಮರುಪ್ರವೇಶದ ಮೇಲೆ ನಿಗಾವಹಿಸಿರುವ ಎಲ್ಲರೂ ಸ್ವಲ್ಪ ವಿಶ್ರಾಂತಿ ಪಡೆಯಿರಿ. ರಾಕೆಟ್‌ ಕೆಳಗೆ ಬರುತ್ತಿದೆ’ ಎಂದು ಹೇಳಿತ್ತು.

22 ಟನ್‌ ತೂಕದ ರಾಕೆಟ್‌ನ ಕೆಲವು ಭಾಗಗಳು ವಾತಾವರಣ ಪ್ರವೇಶಿಸುವಾಗ ಉರಿದು ಹೋಗಬಹುದು. ಆದರೆ ಉರಿಯದೆ ಬಾಕಿ ಉಳಿಯುವ ಅವಶೇಷ ಜನವಸತಿ ಪ್ರದೇಶದ ಮೇಲೆ ಬಿದ್ದರೆ ಭಾರಿ ಅಪಾಯ ಎದುರಾಗಬಹುದು ಎಂಬ ಆತಂಕ ಮನೆಮಾಡಿತ್ತು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು