ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೊನಾಲ್ಡ್ ಟ್ರಂಪ್‌ ಪ್ರಚಾರದ ವಿಡಿಯೊದಲ್ಲಿ ನರೇಂದ್ರ ಮೋದಿ !

ಭಾರತ ಸಂಜಾತ ಅಮೆರಿಕ ಮತದಾರರನ್ನು ಸೆಳೆಯಲು ಪ್ರಯತ್ನ
Last Updated 23 ಆಗಸ್ಟ್ 2020, 6:38 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಭಾರತ ಸಂಜಾತ ಅಮೆರಿಕ ಮತದಾರರನ್ನು ಸೆಳೆಯಲು ರಿಪಬ್ಲಿಕನ್‌ ಪಕ್ಷ ವಿವಿಧ ರೀತಿಯ ಪ್ರಯತ್ನಗಳನ್ನು ನಡೆಸುತ್ತಿದೆ.

ಈ ಪ್ರಯತ್ನದ ಭಾಗವಾಗಿ ಕಳೆದ ಫೆಬ್ರುವರಿ ತಿಂಗಳಲ್ಲಿ ಅಹಮದಾಬಾದ್‌ನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಮಾಡಿದ ಭಾಷಣದ ತುಣುಕಗಳನ್ನು ಒಳಗೊಂಡಿರುವ ವಿಡಿಯೊ ಬಿಡುಗಡೆ ಮಾಡಿದೆ.

ಪತ್ನಿ ಮೆಲಾನಿಯಾ, ಮಗಳು ಇವಾಂಕಾ ಹಾಗೂ ಅಳಿಯ ಜಾರೇಡ್‌ ಕುಶನರ್‌ ಹಾಗೂ ಹಿರಿಯ ಅಧಿಕಾರಿಗಳ ಜತೆ ಅಹಮದಾಬಾದ್‌ಗೆ ಐತಿಹಾಸಿಕ ಭೇಟಿ ನೀಡಿದ್ದ ಟ್ರಂಪ್‌, ಅಪಾರ ಸಂಖ್ಯೆಯಲ್ಲಿ ಸೇರಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದ್ದರು.

ಸಾಮಾಜಿಕ ಮಾಧ್ಯಮಗಳಲ್ಲಿ ಈ ವಿಡಿಯೊ ಹರಿದಾಡುತ್ತಿದ್ದು, ಟ್ವಿಟರ್‌ನಲ್ಲಿ ಸುಮಾರು 66 ಸಾವಿರ ಮಂದಿ ವೀಕ್ಷಿಸಿದ್ದಾರೆ.‌

‘ಮತ್ತೆ ನಾಲ್ಕು ವರ್ಷಗಳು’ ಶೀರ್ಷಿಕೆ ಅಡಿಯಲ್ಲಿ 107 ಸೆಕೆಂಡ್‌ಗಳ ವಿಡಿಯೊ ಇದಾಗಿದೆ. ಆರಂಭದಲ್ಲಿ ಕಳೆದ ವರ್ಷ ಹ್ಯೂಸ್ಟನ್‌ಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಟ್ರಂಪ್‌ ಜತೆ ಹೆಜ್ಜೆ ಹಾಕಿದ ದೃಶ್ಯಾವಳಿಗಳಿವೆ. ಸುಮಾರು 50 ಸಾವಿರ ಭಾರತ–ಅಮೆರಿಕನ್ನರನ್ನು ಉದ್ದೇಶಿಸಿ ಉಭಯ ನಾಯಕರು ಭಾಷಣ ಮಾಡಿದ್ದು ಗಮನಸೆಳೆದಿತ್ತು. ಎರಡನೇ ಭಾಗದಲ್ಲಿ ಅಹದಾಬಾದ್‌ನ ದೃಶ್ಯಾವಳಿಗಳಿವೆ.

‘ಭಾರತವನ್ನು ಅಮೆರಿಕ ಗೌರವಿಸುತ್ತದೆ. ಭಾರತವನ್ನು ಅಮೆರಿಕ ಪ್ರೀತಿಸುತ್ತದೆ. ಭಾರತದ ಜನತೆಯ ಜತೆ ಸದಾ ವಿಶ್ವಾಸಪೂರ್ವಕವಾಗಿ ಮತ್ತು ನಿಷ್ಠೆಯಿಂದ ಅಮೆರಿಕ ನಡೆದುಕೊಳ್ಳುತ್ತದೆ’ ಎನ್ನುವ ಹೇಳಿಕೆಯೂ ಇದರಲ್ಲಿದೆ.

ಜತೆಗೆ, ಭಾರತ ಸಂಜಾತ ಅಮೆರಿಕನ್ನರ ಕೊಡುಗೆ ಅಪಾರ ಎಂದು ಟ್ರಂಪ್‌ ಮೆಚ್ಚುಗೆ ವ್ಯಕ್ತಪಡಿಸಿರುವ ಹೇಳಿಕೆಗಳಿವೆ.

ಭಾರತ ಸಂಜಾತ ಅಮೆರಿಕ ಸಮುದಾಯದಲ್ಲಿ ನರೇಂದ್ರ ಮೋದಿ ಅಪಾರ ಜನಪ್ರಿಯತೆ ಹೊಂದಿದ್ದಾರೆ. ಅವರ ‘ತಾರಾ’ ಆಕರ್ಷಣೆಯೂ ಸಮಾರಂಭಗಳಿಗೆ ಅಪಾರ ಸಂಖ್ಯೆಯಲ್ಲಿ ಜನರನ್ನು ಸೆಳೆದಿದೆ. ಅಮೆರಿಕದಲ್ಲಿ ಬೃಹತ್‌ ರ‍್ಯಾಲಿಗಳನ್ನು ಉದ್ದೇಶಿಸಿ ಭಾಷಣ ಮಾಡಿದ ವಿದೇಶಿ ನಾಯಕರಲ್ಲಿ ಮೋದಿ ಒಬ್ಬರೇ ಇರಬಹುದು ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

‘ಭಾರತದ ಜತೆ ಅಮೆರಿಕ ಶ್ರೇಷ್ಠವಾದ ಸಂಬಂಧ ಹೊಂದಿದೆ. ನಮ್ಮ ಪ್ರಚಾರಕ್ಕೆ ಭಾರತ ಸಂಜಾತ ಅಮೆರಿಕನ್ನರಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದೆ’ ಎಂದು ಟ್ರಂಪ್‌ ಅವರ ಪ್ರಚಾರಕ್ಕೆ ಸಂಬಂಧಿಸಿದಂತೆ ಹಣಕಾಸು ಸಮಿತಿ ಉಸ್ತುವಾರಿ ವಹಿಸಿಕೊಂಡಿರುವ ಕಿಂಬರ್ಲಿ ಗುಲ್‌ಫೊಯ್ಲ್‌ ಟ್ವೀಟ್‌ ಮಾಡಿದ್ದಾರೆ.

ಅಮೆರಿಕದಲ್ಲಿ ಸುಮಾರು 20 ಲಕ್ಷಕ್ಕೂ ಹೆಚ್ಚು ಭಾರತ ಸಂಜಾತ ಅಮೆರಿಕನ್ನರಿದ್ದಾರೆ. ಡೆಮಾಕ್ರಟಿಕ್‌ ಪಕ್ಷದ ಪರ ಮತ ಚಲಾಯಿಸುತ್ತಿದ್ದ ಬಹುತೇಕ ಮಂದಿ ಇತ್ತೀಚಿನ ವರ್ಷಗಳಲ್ಲಿ ರಿಪಬ್ಲಿಕನ್‌ ಪಕ್ಷ ಪರ ವಾಲುತ್ತಿದ್ದಾರೆ. ಟ್ರಂಪ್‌ ಮತ್ತು ಮೋದಿ ಸ್ನೇಹವೂ ಇದಕ್ಕೆ ಕಾರಣ ಎಂದು ವಿಶ್ಲೇಷಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT