ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಸಾಮಾಜಿಕ ಮಾಧ್ಯಮ 'ಟ್ರೂಥ್‌ ಸೋಶಿಯಲ್‌' ಪ್ರಕಟಿಸಿದ ಡೊನಾಲ್ಡ್‌ ಟ್ರಂಪ್‌

Last Updated 21 ಅಕ್ಟೋಬರ್ 2021, 2:18 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಹೊಸ ಸಾಮಾಜಿಕ ಮಾಧ್ಯಮ ವೇದಿಕೆಯನ್ನು ಆರಂಭಿಸುವುದಾಗಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಬುಧವಾರ ಘೋಷಿಸಿದ್ದಾರೆ. 'ಟ್ರೂಥ್‌ ಸೋಶಿಯಲ್‌' (TRUTH Social) ಹೆಸರಿನ ಪ್ಲಾಟ್‌ಫಾರ್ಮ್‌ ಮುಂದಿನ ತಿಂಗಳಿನಿಂದಲೇ 'ಆಯ್ದ ಅತಿಥಿ ಬಳಕೆದಾರರಿಗೆ' ಲಭ್ಯವಾಗಲಿದೆ.

ಟ್ರಂಪ್‌ ತಮ್ಮ ಮುಂದಿನ ಯೋಜನೆಗಳನ್ನು ಪ್ರಕಟಿಸಿದ್ದು, ಟ್ರಂಪ್‌ ಮೀಡಿಯಾ ಆ್ಯಂಡ್‌ ಟೆಕ್ನಾಲಜಿ ಗ್ರೂಪ್‌ (ಟಿಎಂಟಿಜಿ) ಸಂಸ್ಥೆಯಿಂದ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ ಆರಂಭವಾಗಲಿದೆ. ಇದರೊಂದಿಗೆ ಮನರಂಜನೆ ಕಾರ್ಯಕ್ರಮಗಳನ್ನು ಒಳಗೊಂಡ ವಿಡಿಯೊ ವಿತರಣೆ ಸೇವೆ (ವಿಡಿಯೊ ಆನ್‌ ಡಿಮಾಂಡ್‌), ಸುದ್ದಿ ಹಾಗೂ ಪಾಡ್‌ಕಾಸ್ಟ್‌ ಆರಂಭಿಸಲು ಉದ್ದೇಶಿಸಲಾಗಿದೆ ಎಂದು ಟ್ರಂಪ್‌ ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.

'ಬೃಹತ್‌ ಟೆಕ್‌ ಕಂಪನಿಗಳ ದಬ್ಬಾಳಿಕೆಗೆ ಎದುರಾಗಿ ನಾನು ಟ್ರೂಥ್‌ ಸೋಶಿಯಲ್‌ ಮತ್ತು ಟಿಎಂಟಿಜಿ ರೂಪಿಸಿದ್ದೇನೆ. ಟ್ವಿಟರ್‌ನಲ್ಲಿ ದೊಡ್ಡ ಪ್ರಮಾಣದಲ್ಲಿ ತಾಲಿಬಾನ್‌ ಇರುವಿಕೆ ಇದ್ದರೂ, ನಿಮ್ಮ ನೆಚ್ಚಿನ ಅಮೆರಿಕದ ಅಧ್ಯಕ್ಷರನ್ನು ಮೌನಗೊಳಿಸಲಾಗಿದೆ. ಇದನ್ನು ಸಹಿಸಲು ಸಾಧ್ಯವಿಲ್ಲ' ಎಂದು ಟ್ರಂಪ್‌ ಹೇಳಿದ್ದಾರೆ.

ಕ್ಯಾಪಿಟಲ್‌ ಹಿಲ್‌ನಲ್ಲಿ ಜನವರಿ 6ರಂದು ನಡೆದ ಹಿಂಸಾಚಾರದ ಬಳಿಕ ಫೇಸ್‌ಬುಕ್‌ ಮತ್ತು ಟ್ವಿಟರ್‌ನಿಂದ ಟ್ರಂಪ್‌ ಅವರ ಖಾತೆಯನ್ನು ನಿರ್ಬಂಧಿಸಲಾಗಿದೆ. ಆಗಿನ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಬೆಂಬಲಿಗರು ಸಂಸತ್‌ ಭವನಕ್ಕೆ (ಕ್ಯಾಪಿಟಲ್‌) ನುಗ್ಗಿ ದಾಂದಲೆ ನಡೆಸಿದ್ದರು. ಸ್ಪೀಕರ್‌ ಕಚೇರಿಗೆ ನುಗ್ಗಿ ಅಲ್ಲಿದ್ದ ವಸ್ತುಗಳನ್ನು ಚೆಲ್ಲಾಡಿದ್ದರು. ಕಿಟಕಿ ಗಾಜುಗಳನ್ನು ಒಡೆದು ಹಾಕಿದ್ದರು. ಕಲಾಕೃತಿಗಳನ್ನು ಹೊತ್ತೊಯ್ದಿದ್ದರು.

ಪ್ರಮುಖ ಸಾಮಾಜಿಕ ಮಾಧ್ಯಮಗಳು ಟ್ರಂಪ್‌ ಅವರನ್ನು ನಿರ್ಬಂಧಿಸುತ್ತಿದ್ದಂತೆ, ತಮ್ಮದೇ ಸ್ವಂತ ಸಾಮಾಜಿಕ ಮಾಧ್ಯಮ ರೂಪಿಸುವುದಾಗಿ ಘೋಷಿಸಿದ್ದರು. ಈಗ ಟ್ರೂಥ್‌ ಸೋಶಿಯಲ್‌ ಆ್ಯಪ್‌ ಮೂಲಕ ತಮ್ಮದೇ ವೇದಿಕೆಯನ್ನು ಸೃಷ್ಟಿಸಿಕೊಳ್ಳುತ್ತಿದ್ದಾರೆ. ಮುಂದಿನ ತಿಂಗಳ ಬೀಟಾ (ಪರೀಕ್ಷಾರ್ಥ ಸೇವೆ) ಆವೃತ್ತಿ ಆರಂಭವಾಗಲಿದ್ದು, ಮುಂದಿನ ವರ್ಷ ಪೂರ್ಣ ಪ್ರಮಾಣದ ಅಪ್ಲಿಕೇಷನ್‌ ಅಮೆರಿಕನ್ನರಿಗೆ ಲಭ್ಯವಾಗುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT