ಬುಧವಾರ, 31 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನೈತಿಕ ಸಂಬಂಧ ಗೋಪ್ಯತೆಗೆ ನೀಲಿ ಚಿತ್ರ ತಾರೆಗೆ ಹಣ: ಟ್ರಂಪ್‌ ವಿರುದ್ಧ ದೋಷಾರೋಪ

Last Updated 31 ಮಾರ್ಚ್ 2023, 13:51 IST
ಅಕ್ಷರ ಗಾತ್ರ

ನ್ಯೂಯಾರ್ಕ್‌ : ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು 2016ರಲ್ಲಿ ಅಧ್ಯಕ್ಷೀಯ ಚುನಾವಣಾ ಪ್ರಚಾರದ ವೇಳೆ ನೀಲಿಚಿತ್ರ ತಾರೆ ಸ್ಟಾರ್ಮಿ ಡೇನಿಯಲ್ಸ್‌ ಅವರಿಗೆ ತಮ್ಮಿಬ್ಬರ ನಡುವಿನ ಅನೈತಿಕ ಸಂಬಂಧದ ಗುಟ್ಟು ರಟ್ಟುಪಡಿಸದಂತೆ ಹಣ ಪಾವತಿಸಿರುವ ಆರೋಪ ಸಂಬಂಧ ಮ್ಯಾನ್ಹಟನ್‌ನ ಗ್ರ್ಯಾಂಡ್ ಜ್ಯೂರಿಯು ಟ್ರಂಪ್‌ ವಿರುದ್ಧ ದೋಷಾರೋಪ ಹೊರಿಸಿದೆ.

‘ಸುಪ್ರೀಂಕೋರ್ಟ್‌ ನಿರ್ದೇಶನದ ಅನುಸಾರ ಟ್ರಂಪ್ ಶರಣಾಗತಿಗೆ ವ್ಯವಸ್ಥೆ ಮಾಡಲು ಟ್ರಂಪ್‌ ಅವರ ವಕೀಲರನ್ನು ಸಂಪರ್ಕಿಸಲಾಗಿದೆ. ಶರಣಾಗತಿಗೆ ದಿನಾಂಕ ಆಯ್ಕೆ ಮಾಡಿಕೊಂಡರೆ ಆ ಪ್ರಕ್ರಿಯೆಗೆ ಸೂಕ್ತ ಮಾರ್ಗದರ್ಶನ ನೀಡಲಾಗುವುದು’ ಎಂದು ಜಿಲ್ಲಾ ಅಟಾರ್ನಿ ಬ್ರಾಗ್‌ ಅವರ ವಕ್ತಾರರು ತಿಳಿಸಿದ್ದಾರೆ.

ರಿಪಬ್ಲಿಕನ್ ಪಕ್ಷದ ನಾಯಕ, 76 ವರ್ಷದ ಟ್ರಂಪ್ ಅವರ ಮೇಲೆ ದೋಷಾರೋಪ ಹೊರಿಸಲು ಗ್ರ್ಯಾಂಡ್‌ ಜ್ಯೂರಿ ಮತ ಚಲಾಯಿಸಿದೆ ಎಂದು ನಂಬಲರ್ಹ ಮೂಲಗಳನ್ನು ಉಲ್ಲೇಖಿಸಿ ‘ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆ ಗುರುವಾರ ವರದಿ ಮಾಡಿತ್ತು.

ಟ್ರಂಪ್ ಅವರು ಫ್ಲಾರಿಡಾದ ತಮ್ಮ ನಿವಾಸದಿಂದ ನ್ಯೂಯಾರ್ಕ್‌ಗೆ ಸೋಮವಾರ ಪ್ರಯಾಣಿಸುವ ನಿರೀಕ್ಷೆಯಿದೆ. ಮಂಗಳವಾರ ಅವರು ನ್ಯಾಯಾಲಯಕ್ಕೆ ಹಾಜರಾಗಬಹುದು ಎಂದು ಮೂಲಗಳು ತಿಳಿಸಿರುವುದಾಗಿ ‘ಸಿಬಿಎಸ್ ನ್ಯೂಸ್’ ವರದಿ ಮಾಡಿದೆ.

ಗ್ರ್ಯಾಂಡ್‌ ಜ್ಯೂರಿ ಅವರು ಟ್ರಂಪ್‌ ಮೇಲೆ ದೋಷಾರೋಪ ಹೊರಿಸಿದ ನಂತರ, 44ರ ಹರೆಯದ ನಟಿ ಸ್ಟಾರ್ಮ್‌ ಡೇನಿಯಲ್ಸ್ ಅವರು ಟ್ರಂಪ್‌ ವಿರುದ್ಧದ ತಮ್ಮ ಹೋರಾಟ ಬೆಂಬಲಿಸಿದವರಿಗೆ ‘ನಿಮ್ಮ ಬೆಂಬಲ ಮತ್ತು ಪ್ರೀತಿಗೆ ಧನ್ಯವಾದಗಳು’ ಎಂದು ಕೃತಜ್ಞತೆ ಸಲ್ಲಿಸಿದ್ದಾರೆ.

ಈ ಬೆಳವಣಿಗೆಯ ನಂತರ ಪ್ರತಿಕ್ರಿಯಿಸಿರುವ ಡೊನಾಲ್ಡ್‌ ಟ್ರಂಪ್‌, ‘ಇದು ಇತಿಹಾಸದಲ್ಲೇ ಭಾರಿ ದೊಡ್ಡ ರಾಜಕೀಯ ಕಿರುಕುಳ ಮತ್ತು ಚುನಾವಣಾ ಹಸ್ತಕ್ಷೇಪವೆನಿಸಿದೆ. ರಾಜಕೀಯ ಎದುರಾಳಿ ಹಣಿಯಲು ಡೆಮಾಕ್ರಟಿಕ್‌ ಪಕ್ಷದ ನಾಯಕರು ನಮ್ಮ ಕಾನೂನು ವ್ಯವಸ್ಥೆಯನ್ನು ಅಸ್ತ್ರ ಮಾಡಿಕೊಂಡಿದ್ದಾರೆ’ ಎಂದು ಆರೋಪಿಸಿದ್ದಾರೆ.

ಕ್ರಿಮಿನಲ್ ಅಪರಾಧದ ಆರೋಪ ಹೊತ್ತಿರುವ ಅಮೆರಿಕದ ಮೊದಲ ಮಾಜಿ ಅಧ್ಯಕ್ಷ ಎನಿಸಿಕೊಂಡ ಟ್ರಂಪ್ ಅವರು 2024ರಲ್ಲಿ ಶ್ವೇತಭವನಕ್ಕೆ ಮರು ಪ್ರವೇಶಿಸುವ ಪ್ರಯತ್ನದಲ್ಲಿದ್ದು, ಮುಂಬರುವ ಅಧ್ಯಕ್ಷೀಯ ಚುನಾವಣೆಯ ಪ್ರಬಲ ಅಭ್ಯರ್ಥಿ ಆಕಾಂಕ್ಷಿಯಾಗಿದ್ದಾರೆ.

ಟ್ರಂಪ್ ಅವರ ಮೇಲೆ ಈ ಮೊದಲು ಜನಪ್ರತಿನಿಧಿಗಳ ಸಭೆ ಎರಡು ಬಾರಿ ದೋಷಾರೋಪ ಹೊರಿಸಿತ್ತು. ಆದರೆ, ಎರಡೂ ಬಾರಿಯು ಅವರನ್ನು ಸೆನೆಟ್ ಖುಲಾಸೆಗೊಳಿಸಿದೆ.

ಇವನ್ನೂ ಒದಿ...

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT