ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾರ್ಜ್ ಫ್ಲಾಯ್ಡ್ ಸಾವು ಪ್ರಕರಣ: ₹196.2 ಕೋಟಿ ಪರಿಹಾರಕ್ಕೆ ಒಪ್ಪಿದ ಕುಟುಂಬ

ಅಮೆರಿಕ ಪೊಲೀಸರ ವಶದಲ್ಲಿದ್ದಾಗ ಮೃತಪಟ್ಟಿದ್ದ ಕಪ್ಪು ವರ್ಣೀಯ
Last Updated 13 ಮಾರ್ಚ್ 2021, 8:17 IST
ಅಕ್ಷರ ಗಾತ್ರ

ಮಿನಿಯಾಪೊಲಿಸ್: ಅಮೆರಿಕದಲ್ಲಿ ಪೊಲೀಸರ ವಶದಲ್ಲಿದ್ದಾಗಲೇ ಸಾವಿಗೀಡಾಗಿದ್ದ ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಅವರ ಕುಟುಂಬಕ್ಕೆ ಸುಮಾರು ₹196 ಕೋಟಿ(27 ದಶಲಕ್ಷ ಡಾಲರ್‌) ಪಾವತಿಸಲು ಮಿನಿಯಾಪೊಲಿಸ್ ನಗರ ಕೌನ್ಸಿಲ್‌ ಒಪ್ಪಿಕೊಂಡಿದೆ.

ಶುಕ್ರವಾರ, ಕೌನ್ಸಿಲ್‌ ಸದಸ್ಯರು ಮೊದಲು ಖಾಸಗಿಯಾಗಿ ಚರ್ಚೆ ನಡೆಸಿದರು. ನಂತರ ಬಹಿರಂಗ ಅಧಿವೇಶನದಲ್ಲಿ ಈ ದೊಡ್ಡ ಮೊತ್ತದ ಪರಿಹಾರ ನೀಡುವುದಕ್ಕೆ ಸರ್ವಾನುಮತದ ಬೆಂಬಲ ಸೂಚಿಸಿದರು.

ಇದು ವಿಚಾರಣೆಯ ಪೂರ್ವದಲ್ಲೇ ಇತ್ಯರ್ಥಗೊಂಡ ಅತಿ ಹೆಚ್ಚಿನ ಪರಿಹಾರ ಮೊತ್ತವಾಗಿದೆ ಎಂದು ಫ್ಲಾಯ್ಡ್‌ ಕುಟುಂಬದ ಅಟಾರ್ನಿ ಬೆನ್‌ ಕ್ರಂಪ್‌ ಹೇಳಿದರು. ಪ್ರಕರಣ ಇತ್ಯರ್ಥಕ್ಕೆ ನೆರವಾದ ನಾಗರಿಕ ಮುಂದಾಳುಗಳಿಗೆ ಕೃತಜ್ಞತೆ ಸಲ್ಲಿಸಿದ ಅವರು ‘ಇದು ಫ್ಲಾಯ್ಡ್‌ ಬಗ್ಗೆ ನಿಮಗಿರುವ ಕಾಳಜಿ ಸೂಚಿಸುತ್ತದೆ’ ಎಂದರು.

ಫ್ಲಾಯ್ಡ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್‌ ಅಧಿಕಾರಿಗಳ ವಿಚಾರಣೆಯೂ ಮುಂದುವರಿಯಲಿದೆ.

‘ಈ ಒಪ್ಪಂದವು ಜಾರ್ಜ್‌ ಫ್ಲಾಯ್ಡ್‌ ಹತ್ಯೆ ಪ್ರಕರಣದ ಮೇಲೆ ಪರಿಣಾಮ ಬೀರುತ್ತದೆಯೇ ಎಂಬುದರ ಬಗ್ಗೆ ತಿಳಿದಿಲ್ಲ. ಆದರೆ ಈ ಮೂಲಕ ನಾವು ನ್ಯಾಯವನ್ನು ಕೊಡಿಸಲು ಪ್ರಯತ್ನಿಸುತ್ತಿದ್ದೇವೆ. ಹಲವು ಕಪ್ಪು ವರ್ಣಿಯರಿಗೆ ನ್ಯಾಯದ ಮೇಲೆ ಭರವಸೆಯಿಲ್ಲ. ಜಾರ್ಜ್‌ ಫ್ಲಾಯ್ಡ್‌ ಅವರನ್ನು ಹತ್ಯೆಗೈದ ಪೊಲೀಸ್‌ ಅಧಿಕಾರಿಗಳಿಗೆ ಶಿಕ್ಷೆ ಸಿಗುತ್ತದೆ ಎಂಬ ಬಗ್ಗೆ ಭರವಸೆಯೂ ಇಲ್ಲ. ಇದನ್ನು ಇತಿಹಾಸವೇ ನಮಗೆ ಕಲಿಸಿಕೊಟ್ಟಿದೆ’ ಎಂದು ಕ್ರಂಪ್‌ ತಿಳಿಸಿದರು.

ಎರಡು ವರ್ಷಗಳ ಹಿಂದೆ ಪೊಲೀಸ್‌ ಅಧಿಕಾರಿಗಳಿಂದ ಕೊಲ್ಲಲ್ಪಟ್ಟ ಮಹಿಳೆಯ ಕುಟುಂಬಕ್ಕೆ ₹145.3 ಕೋಟಿ ನೀಡಲಾಗಿತ್ತು. ಈ ಬಳಿಕ ಇದೇ ಮೊದಲ ಬಾರಿ ನಾಗರಿಕ ಮೊಕದ್ದಮೆಯಲ್ಲಿ ದೊಡ್ಡ ಮೊತ್ತವ‌ನ್ನು ಜಾರ್ಜ್‌ ಫ್ಲಾಯ್ಡ್‌ ಕುಟುಂಬಕ್ಕೆ ನೀಡಲಾಗಿದೆ.

2019ರಲ್ಲಿ ಮಿನಿಯಾಪೊಲಿಸ್‌ ಆಡಳಿತ, ಬಿಳಿಯ ಪೊಲೀಸ್‌ ಅಧಿಕಾರಿಯಾಗಿದ್ದ ಜಸ್ಟಿನ್‌ ರಸ್ಜಿಕ್‌ ಡ್ಯಾಮಂಡ್‌ ಅವರ ಕುಟುಂಬಕ್ಕೆ 20 ದಶಲಕ್ಷ ಡಾಲರ್‌ (ಸುಮಾರು ₹145.3 ಕೋಟಿ) ಮೊತ್ತ ನೀಡಲು ಒಪ್ಪಿಕೊಂಡಿತ್ತು. ಮನೆಯ ಹಿಂದೆ ನಡೆದ ಅಪರಾಧ ಕೃತ್ಯವೊಂದರ ಸಂಬಂಧ ದೂರು ನೀಡಲು 911 ಸಂಖ್ಯೆಗೆ ಜಸ್ಟಿನ್‌ ಡ್ಯಾಮಂಡ್‌ ಅವರು ಕರೆ ಮಾಡಿದ್ದ ವೇಳೆ ಅಧಿಕಾರಿಯೊಬ್ಬ ಅವರನ್ನು ಗುಂಡಿಕ್ಕಿ ಕೊಲೆ ಮಾಡಿದ್ದ. ಡ್ಯಾಮಂಡ್‌ ಅವಿವಾಹಿತೆಯಾಗಿದ್ದರು.

‘ನನ್ನ ಸೋದರ ಈಗ ಇಲ್ಲ. ಆದರೆ ಆತ ನನ್ನ ಹೃದಯಲ್ಲಿದ್ದಾನೆ. ಅವನನ್ನು ಪಡೆಯಲು ಸಾಧ್ಯವಾದರೆ ಪರಿಹಾರ ಮೊತ್ತವನ್ನೆಲ್ಲಾ ವಾಪಸು ಕೊಡುತ್ತೇನೆ’ ಎಂದು ಜಾರ್ಜ್‌ ಫ್ಲಾಯ್ಡ್ ಸೋದರ ಫಿಲೊನೈಸ್‌ ಹೇಳಿದರು.

ಕಳೆದ ವರ್ಷದ ಮೇ 25ರಂದು, ಫ್ಲಾಯ್ಡ್‌ ಸಾವಿಗೀಡಾಗುವ ಮೊದಲು ಅವರ ಕತ್ತನ್ನು ಬಿಳಿಯ ಪೊಲೀಸ್‌ ಅಧಿಕಾರಿ ಡೆರೆಕ್‌ ಚೌವಿನ್‌ 9 ನಿಮಿಷ ಮೊಣಕಾಲಿನಿಂದ ಅದುಮಿದ್ದರು. ಫ್ಲಾಯ್ಡ್‌ ಸಾವು ವ್ಯಾಪಕ ಪ್ರತಿಭಟನೆ, ಹಿಂಸಾಚಾರಕ್ಕೆ ಕಾರಣವಾಗಿತ್ತು. ಜನಾಂಗೀಯ ಭೇದದ ವಿರುದ್ಧ ಆಕ್ರೋಶಕ್ಕೂ ಇದು ದಾರಿ ಮಾಡಿಕೊಟ್ಟಿತ್ತು.

‍ಪರಿಹಾರ ಮೊತ್ತ ಇತ್ಯರ್ಥಗೊಳಿಸಿದ್ದರ ಸಂಬಂಧ ಸುದ್ದಿಗೋಷ್ಠಿ ನಡೆಸಿದ ವೇಳೆ ಸಿಟಿ ಕೌನ್ಸಿಲ್‌ ಅಧ್ಯಕ್ಷೆ ಲೀಸಾ ಬೆಂಡರ್‌ ಭಾವೊದ್ವೇಗಕ್ಕೆ ಒಳಗಾಗಿದ್ದರು. ‘ಎಷ್ಟೇ ಮೊತ್ತದ ಪರಿಹಾರ ನೀಡಿದರೂ ನಾವು ಜಾರ್ಜ್‌ ಅವರನ್ನು ಮರಳಿ ಪಡೆಯಲು ಸಾಧ್ಯವಿಲ್ಲ. ನಾವು ನಿಮ್ಮೊಂದಿಗೆ ನಿಕಟವಾಗಿದ್ದೇವೆ ಎಂದಷ್ಟೇ ಹೇಳಲು ಇಚ್ಛಿಸುತ್ತೇವೆ’ ಎಂದು ಅವರ ಕುಟುಂಬದ ಸದಸ್ಯರನ್ನು ಉದ್ದೇಶಿಸಿ ಹೇಳಿದರು.

ನಗರಾಡಳಿತ, ಫ್ಲಾಯ್ಡ್‌ ಸಾವಿಗೆ ಕಾರಣರಾದ ಚೌವಿನ್ ಮತ್ತು ಇತರ ಮೂವರು ಪೊಲೀಸ್‌ ಅಧಿಕಾರಿಗಳ ವಿರುದ್ಧ ಫ್ಲಾಯ್ಡ್‌ ಕುಟುಂಬ ಕಳೆದ ಜುಲೈನಲ್ಲಿ ನಾಗರಿಕ ದಾವೆಯನ್ನು ಹೂಡಿತ್ತು. ವಶದಲ್ಲಿರುವಾಗ ಪೊಲೀಸರು ಫ್ಲಾಯ್ಡ್‌ ಅವರ ಹಕ್ಕುಗಳನ್ನು ನಿರ್ಬಂಧಿಸಿದ್ದರು. ನಗರವು ಪೊಲೀಸ್‌ ಅತಿರೇಕ, ಜನಾಂಗೀಯ ತಾರತಮ್ಯಕ್ಕೆ ಅವಕಾಶ ನೀಡುವ ಸಂಸ್ಕೃತಿ ರೂಢಿಸಿಕೊಂಡಿದೆ ಎಂದು ದಾವೆಯಲ್ಲಿ ದೂರಿದ್ದರು.

ಚೌವಿನ್‌ ವಿಚಾರಣೆಯ ವೇಳೆ ಪ್ರತಿಭಟನೆ ನಡೆಸುವುದಾದರೂ ಅದು ಶಾಂತಿಯುತವಾಗಿರಬೇಕು ಎಂದು ಕ್ರಂಪ್‌ ಮತ್ತು ಪತ್ರಿಕಾಗೋಷ್ಠಿಯಲ್ಲಿದ್ದ ಇತರ ಮುಖಂಡರು ಮನವಿ ಮಾಡಿದರು. ಚೌವಿನ್‌ ಅವರಿಗೆ ಶಿಕ್ಷೆಯಾದರೆ ಗಲಭೆಯಾಗುವ ಸಂಭವವಿದೆ. ಈಗಾಗಲೇ ವಿಚಾರಣೆ ನಡೆಯುವ ನ್ಯಾಯಾಲಯ ಸ್ಥಳದ ಸುತ್ತ ಕಾಂಕ್ರಿಟ್‌ ಗೋಡೆ, ತಡೆ ಬೇಲಿಯನ್ನು ಹಾಕಲಾಗಿದೆ. ನ್ಯಾಷನಲ್‌ ಗಾರ್ಡ್‌ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT