ಸೋಮವಾರ, ಡಿಸೆಂಬರ್ 5, 2022
22 °C

ಪಾಕ್‌ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಮೇಲೆ ಗುಂಡಿನ ದಾಳಿ: ಆಸ್ಪತ್ರೆಗೆ ದಾಖಲು

ಎಎಫ್‌ಪಿ/ಐಎಎನ್‌ಎಸ್‌ Updated:

ಅಕ್ಷರ ಗಾತ್ರ : | |

ಇಸ್ಲಾಮಾಬಾದ್‌: ರಾಜಕೀಯ ರ‍್ಯಾಲಿಯಲ್ಲಿ ಭಾಗವಹಿಸಿದ್ದ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಮೇಲೆ ಗುರುವಾರ ಗುಂಡು ಹಾರಿಸಲಾಗಿದೆ. ಇಮ್ರಾನ್‌ ಅವರ ಕಾಲಿಗೆ ಗುಂಡೇಟು ಬಿದ್ದಿದ್ದರೂ, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಅವರ ಸಹಾಯಕರು ಹೇಳಿದ್ದಾರೆ.

ಗುಜ್ರಾನ್‌ವಾಲಾ ನಗರದ, ಅಲ್ಲಾಹ್‌ವಾಲ ಚೌಕ್‌ ಬಳಿ ರ‍್ಯಾಲಿ ಸಾಗುತ್ತಿದ್ದ ವೇಳೆ ಜನಸಂದಣಿಯಿಂದ ಗುಂಡು ಹಾರಿ ಬಂದಿದೆ. ಗಾಯಗೊಂಡಿರುವ ಇಮ್ರಾನ್‌ ಖಾನ್‌ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರ ಸಹಾಯಕ ರವೂಫ್ ಹಸನ್ ತಿಳಿಸಿದ್ದಾರೆ.

‘ಇದು ಇಮ್ರಾನ್‌ ಅವರನ್ನು ಹತ್ಯೆ ಮಾಡುವ ಪ್ರಯತ್ನವಾಗಿದೆ’ ಎಂದು ಹಸನ್ ಹೇಳಿದ್ದಾರೆ. ಒಬ್ಬ ದಾಳಿಕೋರನನ್ನು ಗುಂಡಿಕ್ಕಿ ಕೊಲ್ಲಲಾಗಿದ್ದು, ಮತ್ತೊಬ್ಬನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಖಾನ್ ಅವರು ಕಳೆದ ಶುಕ್ರವಾರದಿಂದ ಲಾಹೋರ್ ನಗರದಿಂದ ರಾಜಧಾನಿ ಇಸ್ಲಾಮಾಬಾದ್ ವರೆಗೆ ಮೆರವಣಿಗೆಯನ್ನು ಕೈಗೊಂಡಿದ್ದಾರೆ. ಕಳೆದ ಏಪ್ರಿಲ್‌ನಲ್ಲಿ ಇಮ್ರಾನ್‌ ಅವರನ್ನು ಪಾಕಿಸ್ತಾನ ಪ್ರಧಾನ ಮಂತ್ರಿ ಸ್ಥಾನದಿಂದ ಪದಚ್ಯುತಿಗೊಳಿಸಲಾಗಿತ್ತು. ಇದಾದ ನಂತರ ನಿರಂತರ ರ‍್ಯಾಲಿಗಳಲ್ಲಿ ತೊಡಗಿರುವ ಇಮ್ರಾನ್‌, ಚುನಾವಣಾ ಪ್ರಚಾರವನ್ನೂ ನಡೆಸುತ್ತಿದ್ದಾರೆ.

‘ಲಾಂಗ್‌ ಮಾರ್ಚ್‌‘ ಹೆಸರಿನ ಮೆರವಣಿಗೆ ನೇತೃತ್ವ ವಹಿಸಿರುವ 70 ವರ್ಷ ವಯಸ್ಸಿನ ಖಾನ್, ದಾರಿಯುದ್ಧಕ್ಕೂ ಹಲವು ನಗರ, ಹಳ್ಳಿಗಳಲ್ಲಿ ಭಾಷಣಗಳನ್ನು ಮಾಡುತ್ತಿದ್ದಾರೆ.

ಗುಜ್ರಾನ್‌ವಾಲಾದಲ್ಲಿ ನಡೆದ ಗುಂಡಿನ ದಾಳಿಯನ್ನು ಪ್ರಧಾನಿ ಶೆಹಬಾಜ್ ಷರೀಫ್ ಖಂಡಿಸಿದ್ದಾರೆ ಮತ್ತು ಪಂಜಾಬ್‌ ಪ್ರಾಂತ್ಯದ ಐಜಿಪಿ ಮತ್ತು ಮುಖ್ಯ ಕಾರ್ಯದರ್ಶಿಯಿಂದ ವರದಿ ಕೇಳುವಂತೆ ಆಂತರಿಕ ವ್ಯವಹಾರಗಳ ಸಚಿವ ರಾಣಾ ಸನಾವುಲ್ಲಾ ಅವರಿಗೆ ಸೂಚಿಸಿದ್ದಾರೆ.

ಇವುಗಳನ್ನೂ ಓದಿ 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು