ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಕ್ರೇನ್‌ಗೆ ಹಾಲಿವುಡ್‌ ನಟಿ ಏಂಜಲಿನಾ ಜೋಲಿ ಭೇಟಿ; ಮೊಳಗಿದ ಸೈರನ್, ಸಂಚಾರ ಮೊಟಕು

Last Updated 1 ಮೇ 2022, 3:04 IST
ಅಕ್ಷರ ಗಾತ್ರ

ಲೀವ್‌: ರಷ್ಯಾ ಸೇನಾ ಪಡೆಗಳಿಂದ ಆಕ್ರಮಣಕ್ಕೆ ಒಳಗಾಗಿರುವ ಉಕ್ರೇನ್‌ನ ಲೀವ್‌ ನಗರಕ್ಕೆ ಹಾಲಿವುಡ್‌ ನಟಿ ಏಂಜಲಿನಾ ಜೋಲಿ ಭೇಟಿ ನೀಡಿದ್ದರು. ಆದರೆ, ಆಗಸ ಮಾರ್ಗದಲ್ಲಿ ಕ್ಷಿಪಣಿ ದಾಳಿ ಸಾಧ್ಯತೆಯಿಂದಾಗಿ ಮೊಳಗಿದ ಸೈರನ್‌ಗಳು (ಎಚ್ಚರಿಕೆಯ ಸೂಚನೆ) ಅವರ ಮುಕ್ತ ಸಂಚಾರವನ್ನು ನಿಲ್ಲಿಸಲು ಸೂಚನೆ ನೀಡಿದವು.

ವಿಶ್ವಸಂಸ್ಥೆಯ ನಿರಾಶ್ರಿತ ಸಂಸ್ಥೆಯ ವಿಶೇಷ ರಾಯಭಾರಿಯಾಗಿರುವ ಏಂಜಲಿನಾ ಜೋಲಿ (46), ಉಕ್ರೇನ್‌ನಲ್ಲಿ ಯುದ್ಧದಿಂದಾಗಿ ಚದರು ಹೋಗಿರುವ ಜನರನ್ನು ಭೇಟಿಯಾದರು. ಕಳೆದ ಎರಡು ತಿಂಗಳಲ್ಲಿ 1.27 ಕೋಟಿಗೂ ಹೆಚ್ಚು ಜನರು ಅವರ ಮನೆಗಳನ್ನು ತೊರೆದು ವಲಸೆ ಹೋಗಿದ್ದಾರೆ. ಅಂದಾಜಿನ ಪ್ರಕಾರ, ಉಕ್ರೇನ್‌ನ ಶೇಕಡ 30ರಷ್ಟು ಜನರು ನೆಲೆ ಕಳೆದುಕೊಂಡಿದ್ದಾರೆ.

ನಿರಾಶ್ರಿತ ಕೇಂದ್ರಗಳಲ್ಲಿ ಸ್ವಯಂ ಸೇವಕರೊಂದಿಗೆ ಜೋಲಿ ಮಾತುಕತೆ ನಡೆಸಿದ್ದಾರೆ. ಕೇಂದ್ರದಲ್ಲಿ ಕರ್ತವ್ಯದಲ್ಲಿರುವ ಮನೋವೈದ್ಯರು ನಿತ್ಯ 15 ಜನರೊಂದಿಗೆ ಮಾತನಾಡುತ್ತಾರೆ. ಅವರಲ್ಲಿ ಬಹುತೇಕರು ಎರಡು ವರ್ಷದಿಂದ 10 ವರ್ಷದೊಳಗಿನ ಮಕ್ಕಳು ಎಂದು ಸ್ವಯಂ ಸೇವಕರು ಜೋಲಿ ಅವರಿಗೆ ತಿಳಿಸಿದ್ದಾರೆ.‌

'ಅವರೆಲ್ಲರೂ ಆಘಾತಕ್ಕೆ ಒಳಗಾಗಿರಬೇಕು...ಪ್ರಕ್ಷುಬ್ಧ ಪರಿಸ್ಥಿತಿಯು ಮಕ್ಕಳ ಮನಸಿನ ಮೇಲೆ ಎಂಥ ಪರಿಣಾಮ ಬೀರಬಹುದೆಂಬುದು ನನಗೆ ತಿಳಿದಿದೆ. ಅವರ ಬಳಿ ಯಾರೋ ಒಬ್ಬರು ಇರುವುದು, ಮಾತನಾಡುವುದು ಮುಖ್ಯವಾಗುತ್ತದೆ. ಅವರಿಗೆ ಅದುವೇ ಚೇತೋಹಾರಿಯಾಗುತ್ತದೆ... ' ಎಂದು ಜೋಲಿ ಹೇಳಿದ್ದಾರೆ.

ಜೋಲಿ ಮಕ್ಕಳಿಗೆ ಕಚಗುಳಿ ಇಟ್ಟು, ಅವರ ನಗು ಮುಖವನ್ನು ಕಂಡರು, ಕೆಲವು ಮಕ್ಕಳು ಮತ್ತು ಸ್ವಯಂ ಸೇವಕರೊಂದಿಗೆ ಫೋಟೊಗೆ ಪೋಸ್‌ ನೀಡಿದರು.

ಆ ಹೊತ್ತಿಗಾಗಲೇ ಆಗಸದಲ್ಲಿ ದಾಳಿಯ ಸಾಧ್ಯತೆಯ ಸೈರನ್‌ ಮೊಳಗಿದ್ದರಿಂದ ಜೋಲಿ ಮತ್ತು ಅವರ ಸಹವರ್ತಿಗಳು ಕೂಡಲೇ ಅಲ್ಲಿಂದ ತಮ್ಮ ಕಾರುಗಳತ್ತ ನಡೆದರು.

ವಿಶೇಷ ರಾಯಭಾರಿಯಾಗಿರುವ ಅವರು ಕಳೆದ ತಿಂಗಳು ಯೆಮೆನ್‌ಗೆ ಭೇಟಿ ನೀಡಿದ್ದರು. ಅಲ್ಲಿ ಯುದ್ಧದಿಂದಾಗಿ ಲಕ್ಷಾಂತರ ಜನರು ಮನೆ ತೊರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT