ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಂಗ್‌ಕಾಂಗ್‌: ಪ್ರಜಾಪ್ರಭುತ್ವ ಪರ ಪತ್ರಿಕೆಯ ಕೊನೆಯ ಆವೃತ್ತಿ ಪ್ರಕಟ

Last Updated 24 ಜೂನ್ 2021, 6:54 IST
ಅಕ್ಷರ ಗಾತ್ರ

ಹಾಂಗ್‌ಕಾಂಗ್‌: ಇಲ್ಲಿನ ಪ್ರಜಾಪ್ರಭುತ್ವ ಪರ ಪತ್ರಿಕೆಯಾದ ‘ಆ್ಯಪಲ್ ಡೇಲಿ’ ತನ್ನ ಕೊನೆಯ ಆವೃತಿಯನ್ನು ಗುರುವಾರ ಪ್ರಕಟಿಸಿತು.

10 ಲಕ್ಷ ಪ್ರತಿಗಳನ್ನು ಮುದ್ರಿಸಲಾಗಿತ್ತು. ಜನರು ಸರದಿಯಲ್ಲಿ ನಿಂತು ಕೊನೆಯ ಪತ್ರಿಕೆಯನ್ನು ಖರೀದಿಸಿ ಓದಿದರು. ಈ ಮೂಲಕ ಪ್ರಜಾಪ್ರಭುತ್ವ ಪರ ಹೋರಾಟಕ್ಕೆ ತಮ್ಮ ಬೆಂಬಲ ಸೂಚಿಸಿದರು.

ವಿದೇಶಿ ಶಕ್ತಿಗಳ ಜೊತೆ ಕೈಜೋಡಿಸಿದ ಆರೋಪದ ಮೇಲೆ ಪತ್ರಿಕೆಯ ಐವರು ಸಂಪಾದಕರು ಮತ್ತು ಕಾರ್ಯ ನಿರ್ವಾಹಕರನ್ನು ಇತ್ತೀಚೆಗೆ ಬಂಧಿಸಲಾಗಿತ್ತು. ಅಲ್ಲದೆ ಪತ್ರಿಕೆಯ ಲಕ್ಷಾಂತರ ಡಾಲರ್‌ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು.

ಅರೆ ಸ್ವಾಯತ್ತ ನಗರವಾದ ಹಾಂಗ್‌ಕಾಂಗ್‌ನಲ್ಲಿ ಚೀನಾದ ವಿರುದ್ಧದ ಹಾಗೂ ಪ್ರಜಾಪ್ರಭುತ್ವ ಪರ ಧ್ವನಿಯನ್ನು ಅಡಗಿಸಲಾಗುತ್ತಿದೆ ಎಂಬುದರ ನಿದರ್ಶನ ಇದಾಗಿದೆ ಎಂಬ ಆರೋಪ ವ್ಯಕ್ತವಾಗಿದೆ.

‘ಹಾಂಗ್‌ಕಾಂಗ್‌ನಲ್ಲಿ ಈಗಿನ ಪರಿಸ್ಥಿತಿಗಳಿಂದಾಗಿ ಮುದ್ರಣ ಮತ್ತು ಆನ್‌ಲೈನ್ ಆವೃತಿ ಸ್ಥಗಿತಗೊಳ್ಳಿಸಲಾಗುವುದು’ ಎಂದು ‘ಆ್ಯಪಲ್‌ ಡೇಲಿ’ಯ ಮೂಲ ಕಂಪನಿಯಾದ ‘ನೆಕ್ಸ್ಟ್ ಮೀಡಿಯಾ’ದ ನಿರ್ದೇಶಕರ ಮಂಡಳಿ ಬುಧವಾರವೇ ಹೇಳಿಕೆ ನೀಡಿತ್ತು.

2019ರಿಂದ ಹಾಂಗ್‌ಕಾಂಗ್‌ನಲ್ಲಿ ಹೆಚ್ಚುತ್ತಿದ್ದ ಸರ್ಕಾರಿ ವಿರೋಧಿ ಪ್ರತಿಭಟನೆಗಳನ್ನು ದಮನಿಸಲು ವಿವಿಧ ಪ್ರಯತ್ನಗಳನ್ನು ಮಾಡಿದ್ದ ಚೀನಾ, ಇದೀಗ ಇಲ್ಲಿನ ಪ್ರಜಾಪ್ರಭುತ್ವ ಪರವಾದ ಧ್ವನಿಯೊಂದನ್ನು ಮೌನಗೊಳಿಸಿದೆ. ಇಲ್ಲಿ ಕಟ್ಟುನಿಟ್ಟಾದ ರಾಷ್ಟ್ರೀಯ ಭದ್ರತಾ ಕಾನೂನನ್ನು ಚೀನಾ ಜಾರಿಗೊಳಿಸಿದ್ದು, ಅದನ್ನು ಪತ್ರಿಕಾ ನೌಕರರ ಬಂಧನಕ್ಕೆ ಬಳಸುತ್ತಿದೆ. ಅಲ್ಲದೆ ಇಲ್ಲಿನ ವಿರೋಧ ಪಕ್ಷಗಳ ಧ್ವನಿಯನ್ನು ಅಡಗಿಸಲು ಚುನಾವಣಾ ಕಾನೂನುಗಳನ್ನು ಪರಿಷ್ಕರಿಸಿದೆ ಎಂದು ಇಲ್ಲಿನ ಪ್ರಜಾಪ್ರಭುತ್ವ ಪರ ಹೋರಾಟಗಾರು ಆರೋಪಿಸಿದ್ದಾರೆ.

ಬ್ರಿಟನ್‌, ಹಾಂಗ್‌ಕಾಂಗ್‌ ಅನ್ನು ಚೀನಾಕ್ಕೆ ಹಸ್ತಾಂತರಿಸುವುದಕ್ಕೂ ಎರಡು ವರ್ಷ ಮುನ್ನ, ಅಂದರೆ 1995ರಲ್ಲಿ ‘ಆ್ಯಪಲ್ ಡೇಲಿ’ ಪತ್ರಿಕೆಯನ್ನು ಉದ್ಯಮಿ ಜಿಮ್ಮಿ ಲೈ ಆರಂಭಿಸಿದ್ದರು. ಇದು ಆರಂಭದಲ್ಲಿ ಪ್ರಸಿದ್ಧ ವ್ಯಕ್ತಿಗಳ ಗಾಸಿಪ್‌ಗಳಿಗೆ ಹೆಸರುವಾಸಿಯಾದ ‘ಟ್ಯಾಬ್ಲಾಯ್ಡ್‌’ ಆಗಿತ್ತು. ಕ್ರಮೇಣ ಲೈ ಅವರು ಈ ಪತ್ರಿಕೆಯನ್ನು ಪ್ರಜಾಪ್ರಭುತ್ವ ಮೌಲ್ಯಗಳ ಪರ ಪತ್ರಿಕೆಯನ್ನಾಗಿ ಬೆಳೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT