ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ವರ್ಷದ ಭಾಷಣ: ಚೀನಾಗೆ ಎಚ್ಚರಿಕೆ ರವಾನಿಸಿದ ತೈವಾನ್‌ ಅಧ್ಯಕ್ಷೆ

Last Updated 1 ಜನವರಿ 2022, 11:04 IST
ಅಕ್ಷರ ಗಾತ್ರ

ತೈಪೈ: ಹೊಸ ವರ್ಷದ ಭಾಷಣದಲ್ಲಿ ತೈವಾನ್‌ ಅಧ್ಯಕ್ಷೆ ಸಾಯಿ ಇಂಗ್‌ ವೆನ್‌ ಅವರು ಚೀನಾಗೆ ಖಡಕ್‌ ಎಚ್ಚರಿಕೆಯನ್ನು ರವಾನಿಸಿದ್ದಾರೆ.

'ತೈವಾನ್‌ ಪರಿಸ್ಥಿತಿ ಬಗ್ಗೆ ಮತ್ತು ಸೇನಾ ಬಲದಿಂದ ವಿಸ್ತರಣೆ ಮಾಡುವ ಬಗ್ಗೆ ಚೀನಾ ಅಧಿಕಾರಿಗಳು ತಪ್ಪಾಗಿ ಅರ್ಥೈಸಿಕೊಳ್ಳಬಾರದು' ಎಂದು ಸಾಯಿ ಇಂಗ್‌ ವೆನ್‌ ಅವರು ತಮ್ಮ ಹೊಸ ವರ್ಷದ ಭಾಷಣದಲ್ಲಿ ಚೀನಾಗೆ ಖಡಕ್‌ ಸಂದೇಶ ರವಾನಿಸಿದ್ದಾರೆ. ಸಾಯಿ ಇಂಗ್‌ ವೆನ್‌ ಭಾಷಣ ಫೇಸ್‌ಬುಕ್‌ ಲೈವ್‌ನಲ್ಲಿ ಪ್ರಸಾರಗೊಂಡಿದೆ.

'ಬೀಜಿಂಗ್‌ ಮತ್ತು ತೈವಾನ್‌ ನಡುವಣ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ಸೇನೆ ಖಂಡಿತವಾಗಿಯೂ ಆಯ್ಕೆಯಲ್ಲ. ಸೇನಾ ಸಂಘರ್ಷವು ಆರ್ಥಿಕತೆಯ ಸ್ಥಿರತೆ ಮೇಲೆ ಪರಿಣಾಮ ಬೀರುತ್ತದೆ. ತೈಪೈ ಮತ್ತು ಬೀಜಿಂಗ್‌ ಎರಡೂ ಉಭಯ ಪ್ರದೇಶದ ಜನರ ಹಿತಾಸಕ್ತಿಯನ್ನು ಕಾಪಾಡಲು ಶ್ರಮವಹಿಸಬೇಕು. ಶಾಂತಿಯುತ ಪರಿಹಾರ ಕಂಡುಕೊಳ್ಳಬೇಕು.

ನಮ್ಮ ಸಾರ್ವಭೌಮತ್ವವನ್ನು ಎತ್ತಿಹಿಡಿಯುತ್ತೇವೆ. ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬೆಂಬಲಿಸುತ್ತೇವೆ. ರಾಷ್ಟ್ರದ ಭದ್ರತೆಗೆ ಬದ್ಧರಾಗಿದ್ದೇವೆ. ಇಂಡೋ-ಫೆಸಿಫಿಕ್‌ ಪ್ರದೇಶದಲ್ಲಿ ಶಾಂತಿ ಕಾಪಾಡಲು ಮತ್ತು ಪರಿಸ್ಥಿತಿಯನ್ನು ಸ್ಥಿರವಾಗಿಡಲು ಬದ್ಧರಾಗಿದ್ದೇವೆ' ಎಂದು ಸಾಯಿ ಇಂಗ್‌ ವೆನ್‌ ಹೇಳಿದ್ದಾರೆ.

ಇದರ ಬೆನ್ನಲ್ಲೆ, 'ಸೇನಾ ಸಂಘರ್ಷ ಉತ್ತರವಲ್ಲ, ಆದರೆ ತೈವಾನ್‌ ಕೆಂಪು ಗೆರೆಯನ್ನು ದಾಟಿದರೆ 'ತೀವ್ರ ಅನಾಹುತ'ಕ್ಕೆ ಕಾರಣವಾಗುತ್ತದೆ' ಎಂದು ಬೀಜಿಂಗ್‌ ಎಚ್ಚರಿಸಿದೆ.

ಚೀನಾ ಅಧ್ಯಕ್ಷ ಜಿನ್‌ಪಿಂಗ್‌ ಅವರು ಹೊಸ ವರ್ಷದ ಪ್ರಯುಕ್ತಡಿಸೆಂಬರ್‌ 31ರಂದು ಮಾಡಿದ ಭಾಷಣದಲ್ಲಿ, 'ತಾಯಿ ನೆಲವನ್ನು ಸಂಪೂರ್ಣವಾಗಿ ಒಂದುಗೂಡಿಸುವುದು ತೈವಾನ್‌ ಜನತೆಯ ಹಂಬಲವಾಗಿದೆ' ಎಂದಿದ್ದರು.

ಸಾಯಿ ಇಂಗ್‌ ವೆನ್‌ ಭಾಷಣದ ಬಳಿಕ ಬೀಜಿಂಗ್‌ನಲ್ಲಿರುವ ತೈವಾನ್‌ ವ್ಯವಹಾರಗಳ ಕಚೇರಿಯ ವಕ್ತಾರ ಜು ಪೆಂಗ್‌ಲಿನ್‌, 'ನಾವು ಶಾಂತಿಯುತ ಪುನರೇಕೀಕರಣಕ್ಕೆ ಪ್ರಯತ್ನಿಸಲು ಬಯಸುತ್ತೇವೆ. ಆದರೆ 'ತೈವಾನ್‌ ಸ್ವಾತಂತ್ರ್ಯ'ದ ಪ್ರತ್ಯೇಕವಾದಿಗಳು ಪ್ರಚೋದಿಸುವುದನ್ನು ಮುಂದುವರಿಸಿದರೆ ಅಥವಾ ಕೆಂಪು ಗೆರೆಯನ್ನು ದಾಟಿದರೆ ನಾವು ನಿರ್ಣಾಯಕ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ' ಎಂದು ಪ್ರತಿಕ್ರಿಯಿಸಿದ್ದಾರೆ.

ಇತ್ತೀಚಿನ ತಿಂಗಳುಗಳಲ್ಲಿ ತೈವಾನ್‌ಗೆ ನಿರಂತರವಾಗಿ ವಾಯು ಸೇನೆಯನ್ನು ಬೀಜಿಂಗ್‌ ಕಳುಹಿಸಿತ್ತು. ಪ್ರಜಾಪ್ರಭುತ್ವದ ಅಧಿಕಾರ ಹೊಂದಿರುವ ತೈವಾನ್‌ ತನ್ನ ಆಂತರಿಕ ಭೂಭಾಗ ಎಂದು ಚೀನಾ ಹೇಳುತ್ತಲೇ ಬಂದಿದೆ. ಆದರೆ ತಾನು ಸ್ವತಂತ್ರ ರಾಷ್ಟ್ರ ಎನ್ನುವುದು ತೈವಾನ್‌ ವಾದವಾಗಿದೆ. ಅದರ ಸ್ವಾತಂತ್ರ ಮತ್ತು ಪ್ರಜಾಪ್ರಭುತ್ವದ ಬಗ್ಗೆ ನಿರಂತರವಾಗಿ ಪ್ರತಿಪಾದಿಸುತ್ತಲೇ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT