ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆರವು ಕಾರ್ಯ ಯಶಸ್ವಿ; ಅಫ್ಗನ್‌ನಿಂದ ಭಾರತಕ್ಕೆ ಬಂದಿಳಿದ 150 ಮಂದಿ

ಉಳಿದವರ ಕರೆಸಲು ಸಿದ್ಧತೆ
Last Updated 17 ಆಗಸ್ಟ್ 2021, 20:22 IST
ಅಕ್ಷರ ಗಾತ್ರ

ನವದೆಹಲಿ: ಅಫ್ಗಾನಿಸ್ತಾನದಲ್ಲಿ ಸಂಘರ್ಷಭರಿತ ಪರಿಸ್ಥಿತಿಯು ಮುಂದುವರಿದಿದೆ. ಅದರ ನಡುವೆಯೇ ಭಾರತದ ರಾಯಭಾರಿ ಮತ್ತು ರಾಯಭಾರ ಕಚೇರಿಯ ಸಿಬ್ಬಂದಿಯನ್ನು ಸುರಕ್ಷಿತವಾಗಿ ಮಂಗಳವಾರ ತೆರವು ಮಾಡಲಾಗಿದೆ. ದೇಶವು ತಾಲಿಬಾನ್‌ ಸಂಘಟನೆಯ ವಶವಾದ ಬಳಿಕ ಅಫ್ಗಾನಿಸ್ತಾನ ರಾಜಧಾನಿಯಲ್ಲಿ ಭೀತಿ ಮತ್ತು ಅನಿಶ್ಚಿತ ಸ್ಥಿತಿ ಇದೆ. ಅದರ ನಡುವೆಯೇ ಕಾರ್ಯಾಚರಣೆ ನಡೆಸಲಾಗಿದೆ.

ಭಾರತೀಯ ವಾಯುಪಡೆಯ ಗ್ಲೋಬ್‌ಮಾಸ್ಟರ್‌ ಸಿ–17 ವಿಮಾನವು ಸುಮಾರು 150 ಜನರೊಂದಿಗೆ ಗುಜರಾತ್‌ನ ಜಾಮ್‌ನಗರಕ್ಕೆ ಮಂಗಳವಾರ ಬೆಳಿಗ್ಗೆ ಬಂದಿಳಿಯಿತು. ಇಂಧನ ಮರಪೂರಣದ ಬಳಿಕ, ಸಂಜೆ ಐದು ಗಂಟೆ ಸುಮಾರಿಗೆ ವಿಮಾನವು ದೆಹಲಿ ಸಮೀಪದ ಹಿಂಡನ್‌ ವಾಯುನೆಲೆಗೆ ತಲುಪಿತು.

ಕಾಬೂಲ್‌ನಲ್ಲಿ ಪರಿಸ್ಥಿತಿ ಸಂಕೀರ್ಣವಾಗಿದ್ದು, ನಾಗರಿಕ ವಿಮಾನ ಸೇವೆಗಳು ಪುನರಾರಂಭವಾದಾಗ ಅಲ್ಲಿ ಸಿಲುಕಿರುವ ಭಾರತೀಯರನ್ನು ತವರಿಗೆ ಕರೆತರಲಾಗುವುದು ಎಂದು ಅಫ್ಗಾನಿಸ್ತಾನದ ಭಾರತೀಯ ರಾಯಭಾರಿ ರುದ್ರೇಂದ್ರ ಟಂಡನ್ ಅವರು ಜಾಮ್‌ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆಹೇಳಿದರು.

‘ಸುರಕ್ಷಿತವಾಗಿ ಮನೆಗೆ ಮರಳಿದ್ದರಿಂದ ಸಂತೋಷವಾಗಿದೆ. 192 ಸಿಬ್ಬಂದಿಯನ್ನು ಕರೆತರುವ ಬೃಹತ್ ಕಾರ್ಯಾಚರಣೆ ಇದಾಗಿತ್ತು. ಅಫ್ಗಾನಿಸ್ತಾನದಿಂದ ಕೇವಲ ಮೂರು ದಿನಗಳ ಅವಧಿಯಲ್ಲಿ ಎರಡು ಹಂತಗಳಲ್ಲಿ ಜನರನ್ನು ಸ್ಥಳಾಂತರ ಮಾಡಲಾಗಿದೆ’ ಎಂದರು.

ಕಳೆದ ವರ್ಷ ಆಗಸ್ಟ್‌ನಲ್ಲಿ ಅಫ್ಗನ್ ಭಾರತೀಯ ರಾಯಭಾರಿಯಾಗಿ ಅಧಿಕಾರ ಸ್ವೀಕರಿಸಿದ್ದ ಟಂಡನ್, ಕಾಬೂಲ್‌ನಲ್ಲಿ ಕ್ಷಿಪ್ರವಾಗಿದ ಬದಲಾದ ಪರಿಸ್ಥಿತಿಯನ್ನು ಗಮನಿಸಿ ತೊಂದರೆಗೀಡಾದ ಅನೇಕ ಭಾರತೀಯರಿಗೆ ರಾಯಭಾರ ಕಚೇರಿ ನೆರವು ಮತ್ತು ಆಶ್ರಯ ನೀಡಿದೆ ಎಂದರು.

ಕಳೆದ ವರ್ಷ ಆಗಸ್ಟ್‌ನಲ್ಲಿ ಅಫ್ಗನ್ ಭಾರತೀಯ ರಾಯಭಾರಿಯಾಗಿ ಅಧಿಕಾರ ಸ್ವೀಕರಿಸಿದ್ದ ಟಂಡನ್, ಕಾಬೂಲ್‌ನಲ್ಲಿ ಕ್ಷಿಪ್ರವಾಗಿ ಬದಲಾದ ಪರಿಸ್ಥಿತಿಯನ್ನು ಗಮನಿಸಿ ತೊಂದರೆಗೀಡಾದ ಅನೇಕ ಭಾರತೀಯರಿಗೆ ರಾಯಭಾರ ಕಚೇರಿ ನೆರವು ಮತ್ತು ಆಶ್ರಯ ನೀಡಿದೆ ಎಂದರು.

‘ನಾವು ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದೇವೆ. ಏಕೆಂದರೆ ಇನ್ನೂ ಕೆಲವು ಭಾರತೀಯ ನಾಗರಿಕರು ಇದ್ದಾರೆ. ಅದಕ್ಕಾಗಿಯೇ ಏರ್ ಇಂಡಿಯಾ ತನ್ನ ನಾಗರಿಕ ವಿಮಾನ ಯಾನ ಸೇವೆಗಳನ್ನು ಕಾಬೂಲ್‌ಗೆ ಮುಂದುವರಿಸಲಿದೆ’ ಎಂದು ಹೇಳಿದರು.

ದಿನದ ಬೆಳವಣಿಗೆ:

* ತಾಲಿಬಾನ್ ನಿಯಂತ್ರಿತ ಅಫ್ಗಾನಿಸ್ತಾನದ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ, ದೇಶಕ್ಕೆ ಬರಲು ಬಯಸುವ ಅಫ್ಗನ್ ಪ್ರಜೆಗಳಿಗೆ ತುರ್ತು ಇ-ವೀಸಾ ನೀಡುವುದಾಗಿ ಮಂಗಳವಾರ ಘೋಷಿಸಿದೆ. ಧರ್ಮಾತೀತ ವಾಗಿ ಯಾರು ಬೇಕಾದರೂ ಆನ್‌ಲೈನ್‌ನಲ್ಲಿ ‘ಇ-ಎಮರ್ಜೆನ್ಸಿ ಎಕ್ಸ್-ಮಿಸ್ಕ್ ವೀಸಾ’ಗೆ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದೆ.

*ಕಾಬೂಲ್‌ನಲ್ಲಿರುವ ಅಮೆರಿಕದ ರಾಯಭಾರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಒಂಬತ್ತು ಭಾರತೀಯ ಪ್ರಜೆಗಳು ಮತ್ತು 118 ನೇಪಾಳದ ಜನರು ವಿಶೇಷ ವಿಮಾನದಲ್ಲಿ ಮಂಗಳವಾರ ನೇಪಾಳದ ಕಠ್ಮಂಡು ತಲುಪಿದ್ದಾರೆ.

*ಕಾಬೂಲ್‌ನಲ್ಲಿ ಸಿಲುಕಿಕೊಂಡಿರುವ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 41 ಮಲಯಾಳಿಗರನ್ನು ಸುರಕ್ಷಿತವಾಗಿ ಕರೆತರಲು ಕೇಂದ್ರ ಸರ್ಕಾರ ಅಗತ್ಯ ವ್ಯವಸ್ಥೆ ಮಾಡಬೇಕು ಎಂದು ಕೇರಳ ಸರ್ಕಾರ ಮಂಗಳವಾರ ವಿನಂತಿಸಿದೆ

* ತಾಲಿಬಾನ್‌ ನಿಯಂತ್ರಣಕ್ಕೆ ಒಳಪಟ್ಟಿರುವ ಪ್ರದೇಶಗಳಲ್ಲಿ ತಮ್ಮ ಕುಟುಂಬಗಳು ಪರಿಸ್ಥಿತಿ ಹೇಗಿದೆಯೋ ಎಂಬ ಬಗ್ಗೆ ಪಂಜಾಬ್‌ನ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಓದುತ್ತಿರುವ ಅಫ್ಗಾನ್ ವಿದ್ಯಾರ್ಥಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಪುಣೆಯಲ್ಲಿ ಓದುತ್ತಿರುವ ಯುದ್ಧಪೀಡಿತ ಅಫ್ಗನ್‌ ವಿದ್ಯಾರ್ಥಿಗಳು ತಮ್ಮ ವೀಸಾ ಅವಧಿ ವಿಸ್ತರಿಸುವಂತೆ ಮನವಿ ಮಾಡಿದ್ದಾರೆ.

ಕಾಬೂಲ್‌ನಿಂದ ಮರಳಿದ ಎರಡನೇ ವಿಮಾನ:

ವಾಯುಪಡೆಯ ವಿಮಾನವು ಕಾಬೂಲ್ ವಿಮಾನ ನಿಲ್ದಾಣದಿಂದ ಬುಧವಾರ ಬೆಳಿಗ್ಗೆ 8 ಗಂಟೆಗೆ ಭಾರತದತ್ತ ಹೊರಟಿತು. ರಾಯಭಾರ ಕಚೇರಿಯ ಅಧಿಕಾರಿಗಳು ಮತ್ತು ಭದ್ರತಾ ಸಿಬ್ಬಂದಿ ಸೇರಿದಂತೆ 120ಕ್ಕೂ ಹೆಚ್ಚು ಜನರು ವಿಮಾನದಲ್ಲಿದ್ದರು. ಕೆಲವು ಭಾರತೀಯ ಪ್ರಜೆಗಳು ಸಹ ಹಿಂದಿರುಗಿದ್ದಾರೆ. ಇದು ಎರಡನೇ ಮಹತ್ವದ ತೆರವು ಕಾರ್ಯಾಚರಣೆಯಾಗಿದೆ. ಸಿ–17 ವಿಮಾನವು ಸೋಮವಾರ 40 ಜನರನ್ನು ಕಾಬೂಲ್‌ನಿಂದ ಹೊತ್ತು ತಂದಿತ್ತು.

ಎರಡು ಸೇನಾ ವಿಮಾನಗಳು ಪಾಕಿಸ್ತಾನದ ವಾಯುಪ್ರದೇಶದ ಮಾರ್ಗದ ಬದಲಾಗಿ, ಇರಾನ್ ವಾಯುಪ್ರದೇಶ ಬಳಸಿಕೊಂಡು ಕಾಬೂಲ್‌ಗೆ ಹಾರಿದ್ದವು ಎಂದು ತಿಳಿದುಬಂದಿದೆ.

ಬ್ಲಿಂಕೆನ್ ಜತೆ ಜೈಶಂಕರ್ ಚರ್ಚೆ:

ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ನಾಲ್ಕು ದಿನಗಳ ಭೇಟಿಗಾಗಿ ನ್ಯೂಯಾರ್ಕ್‌ಗೆ ತೆರಳಿದ್ದು, ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕನ್ ಅವರೊಂದಿಗೆ ಅಫ್ಗಾನಿಸ್ತಾನದ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಚರ್ಚಿಸಿದರು.ಕಾಬೂಲ್‌ ವಿಮಾನ ನಿಲ್ದಾಣದ ಕಾರ್ಯಾಚರಣೆಯನ್ನು ಮರುಸ್ಥಾಪಿಸುವ ತುರ್ತು ಇದೆ ಎಂದು ಅವರು ಒತ್ತಿ ಹೇಳಿದ್ದಾರೆ. ಈ ನಿಟ್ಟಿನಲ್ಲಿ ಅಮೆರಿಕ ಭಾರಿ ಪ್ರಯತ್ನ ನಡೆಸುತ್ತಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಕಾಬೂಲ್‌ನಲ್ಲಿರುವ ಭಾರತೀಯರ ಸುರಕ್ಷಿತ ತೆರವಿಗಾಗಿ ಅಮೆರಿಕದ ಅಧಿಕಾರಿಗಳ ಜೊತೆ ಜೈಶಂಕರ್ ಸತತ ಮಾತುಕತೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಅಫ್ಗಾನಿಸ್ತಾನದ ಪರಿಸ್ಥಿತಿಯನ್ನು ಭಾರತ ನಿರಂತರವಾಗಿ ಅವಲೋಕಿಸುತ್ತಿದೆ ಎಂದು ಜೈಶಂಕರ್ ತಿಳಿಸಿದ್ದಾರೆ.ಕಾಬೂಲ್‌ನಲ್ಲಿರುವ ಸಿಖ್ ಮತ್ತು ಹಿಂದೂ ಸಮುದಾಯದ ನಾಯಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಸುರಕ್ಷತೆಗೆ ಆದ್ಯತೆ ನೀಡಲಾಗುವುದು ಎಂದುಮತ್ತೊಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಕಾಶ್ಮೀರದಲ್ಲಿ ಕಳವಳ:

ಶ್ರೀನಗರ: ಅಫ್ಗಾನಿಸ್ತಾನದಲ್ಲಿ ತಾಲಿಬಾನ್‌ ಪ್ರಾಬಲ್ಯವು ಜಮ್ಮು–ಕಾಶ್ಮೀರದಲ್ಲಿ ಭಯೋತ್ಪಾದನೆ ತೀವ್ರಗೊಳ್ಳುವ ಆತಂಕಕ್ಕೆ ಕಾರಣವಾಗಿದೆ.

ಉಗ್ರರಿಗೆ ತರಬೇತಿ ನೀಡುವುದನ್ನು ಪಾಕಿಸ್ತಾನದ ಸೇನೆ ಮತ್ತು ಗುಪ್ತಚರ ಸಂಸ್ಥೆ ಐಎಸ್‌ಐ, ಪಾಕ್‌ ಆಕ್ರಮಿತ ಕಾಶ್ಮೀರದ ಬದಲು ಅಫ್ಗಾನಿಸ್ತಾನಕ್ಕೆ ಸ್ಥಳಾಂತರಿಸಬಹುದು. ಅಂತರರಾಷ್ಟ್ರೀಯ ಸಮುದಾಯದ ಕಣ್ಣಿಗೆ ಮಣ್ಣೆರಚಲು ಇದರಿಂದ ಸಾಧ್ಯವಾಗುತ್ತದೆ ಎಂದು ಭದ್ರತಾ ಪರಿಣತರು ಹೇಳುತ್ತಾರೆ.

‘ಭಾರತ ವಿರೋಧಿ ಭಯೋತ್ಪಾದನಾ ಗುಂಪುಗಳು ಅಫ್ಗಾನಿಸ್ತಾನದಲ್ಲಿ ಸುರಕ್ಷಿತ ತಾಣಗಳನ್ನು ಕಂಡುಕೊಳ್ಳಬಹುದು. ತಾಲಿಬಾನ್‌ನ ಕೆಲವು ಉಗ್ರರನ್ನು ಜಮ್ಮು–ಕಾಶ್ಮೀರಕ್ಕೆ ಕಳುಹಿಸಿ ಅಲ್ಲಿನ ಭಯೋತ್ಪಾದನಾ ಚಟುವಟಿಕೆಗಳಿಗೆ ಮರು ಜೀವ ನೀಡುವಂತೆಯೂ ತಾಲಿಬಾನ್‌ ಅನ್ನು ಐಎಸ್‌ಐ ಕೋರಬಹುದು’ ಎಂದು ಜಮ್ಮು–ಕಾಶ್ಮೀರ ಪೊಲೀಸ್‌ ಮುಖ್ಯಸ್ಥ ಶೇಷ್‌ ಪಾಲ್‌ ವೈದ್‌ ಹೇಳಿದ್ದಾರೆ.

1996ರಿಂದ 2001ರ ಅವಧಿಯಲ್ಲಿ ತಾಲಿಬಾನ್‌ ಅಧಿಕಾರದಲ್ಲಿತ್ತು. ಈ ಸಂದರ್ಭದಲ್ಲಿ ವಿದೇಶಿ ಉಗ್ರರು ಕಾಶ್ಮೀರದಲ್ಲಿ ಚಟುವಟಿಕೆ ನಡೆಸಿದ್ದರು. 1999ರ ಕಾರ್ಗಿಲ್‌ ಯುದ್ಧದಿಂದ ಹಿಡಿದು ಸಂಸತ್‌ ದಾಳಿಯವರೆಗಿನ ಭಯೋತ್ಪಾದನಾ ಚಟುವಟಿಕೆಗಳಲ್ಲಿ ವಿದೇಶಿ ಉಗ್ರರ ಕೈವಾಡ ಇತ್ತು.

ಪರಿವರ್ತನೆಯ ಸೋಗು:

ಎಲ್ಲರಿಗೂ ‘ಕ್ಷಮಾದಾನ’ ನೀಡುವುದಾಗಿ ತಾಲಿಬಾನ್‌ ಘೋಷಿಸಿದೆ. ಜತೆಗೆ, ಮಹಿಳೆಯರು ಕೂಡ ತಮ್ಮ ಸರ್ಕಾರ ಸೇರಬೇಕು ಎಂದು ಮಂಗಳವಾರ ಹೇಳಿದೆ. ತಾಲಿಬಾನ್‌ ಕೈಗೆ ಅಫ್ಗಾನಿಸ್ತಾನ ಸಿಕ್ಕಿತು ಎಂದಾಕ್ಷಣವೇ ಜನರು ದೇಶ ತೊರೆಯಲು ಹಾತೊರೆದಿದ್ದರು. ವಿಮಾನ ನಿಲ್ದಾಣಕ್ಕೆ ನುಗ್ಗಿದ್ದರು. ಅದರ ಮರು ದಿನವೇ ತಾಲಿಬಾನ್‌ ಈ ಘೋಷಣೆಗಳನ್ನು ಮಾಡಿದೆ.

1990ರ ದಶಕದಲ್ಲಿ ಅಧಿಕಾರಕ್ಕೆ ಬಂದಿದ್ದ ತಾಲಿಬಾನ್‌ ಇಸ್ಲಾಂ ಕಾನೂನು ಅನ್ವಯ ಕಠಿಣ ನಿಯಮಗಳನ್ನು ಜಾರಿಗೆ ತಂದಿತ್ತು. ಆದರೆ, ಈ ಬಾರಿ ಆಳ್ವಿಕೆ ಹೆಚ್ಚು ಮಾನವೀಯವಾಗಿರಲಿದೆ ಎಂಬ ಸಂದೇಶ ರವಾನೆಯು ತಾಲಿಬಾನ್‌ನ ಈಗಿನ ಘೋಷಣೆಗಳ ಹಿಂದಿನ ಉದ್ದೇಶ ಎಂದು ಹೇಳಲಾಗುತ್ತಿದೆ.

ಆದರೆ, ತಾಲಿಬಾನ್‌ ಬಗ್ಗೆ ಜನರಲ್ಲಿ ಅನುಮಾನ ಇದ್ದೇ ಇದೆ. ತಾಲಿಬಾನ್‌ನ ತೀವ್ರವಾದಿ ನಿಲುವುಗಳ ನೆನಪು ಹಳೆಯ ತಲೆಮಾರಿನವರಲ್ಲಿ ಹಸಿರಾಗಿದೆ. ಮಹಿಳೆಯರ ಮೇಲೆ ನಿರ್ಬಂಧಗಳು, ‘ತಪ್ಪು’ ಮಾಡಿದವರಿಗೆ ಕಲ್ಲೆಸೆತ ಶಿಕ್ಷೆ, ಸಾರ್ವಜನಿಕವಾಗಿ ಹತ್ಯೆ, ಛಡಿಯೇಟು ಎಲ್ಲವು ಆಗ ಚಾಲ್ತಿಯಲ್ಲಿ ಇದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT