ಮಂಗಳವಾರ, ನವೆಂಬರ್ 24, 2020
27 °C
ಕೋವಿಡ್–19 ಸಲಹಾಪಡೆಯ ಅಧ್ಯಕ್ಷ ಹುದ್ದೆಗೆ ಮಂಡ್ಯ ಮೂಲದ ವೈದ್ಯ

ಬೈಡನ್ ತಂಡಕ್ಕೆ ಕನ್ನಡಿಗ ವಿವೇಕ್

ಪಿಟಿಐ Updated:

ಅಕ್ಷರ ಗಾತ್ರ : | |

ಡಾ. ವಿವೇಕ್ ಮೂರ್ತಿ

ವಾಷಿಂಗ್ಟನ್: ಅಮೆರಿಕದ ಕೋವಿಡ್–19 ಸಲಹಾಪಡೆಯ ಮೂರು ಸಹ ಅಧ್ಯಕ್ಷ ಹುದ್ದೆಗಳ ಪೈಕಿ ಒಂದು ಸ್ಥಾನಕ್ಕೆ ಮಂಡ್ಯ ಮೂಲದ ವೈದ್ಯ ಡಾ. ವಿವೇಕ್ ಮೂರ್ತಿ ಅವರನ್ನು ಸೋಮವಾರ ಹೆಸರಿಸಲಾಗಿದೆ. ಈ ತಂಡವು ಅಮೆರಿಕದ ಮುಂದಿನ ಅಧ್ಯಕ್ಷ ಜೋ ಬೈಡನ್ ಹಾಗೂ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರಿಗೆ ಕೋವಿಡ್ ಸಾಂಕ್ರಾಮಿಕ ನಿರ್ವಹಣೆಯ ಸಮಗ್ರ ಮಾಹಿತಿ ಹಾಗೂ ಸಲಹೆ ನೀಡಲಿದೆ. 

ಬರಾಕ್‌ ಒಬಾಮ ಅವರು ಅಧ್ಯಕ್ಷರಾಗಿದ್ದ ಅವಧಿಯಲ್ಲಿ 2014–17ರವರೆಗೆ ಅಮೆರಿಕದ 19ನೇ ಸರ್ಜನ್ ಜನರಲ್ ಆಗಿದ್ದ ಮೂರ್ತಿ ಅವರು ತಮ್ಮ ಸಹವರ್ತಿಗಳಾದ ಡಾ. ಡೇವಿಡ್ ಕೆಲ್ಸರ್ ಮತ್ತು ಡಾ. ಮರ್ಸೆಲ್ಲ ನ್ಯೂಜೆನ್ ಸ್ಮಿತ್ ಅವರ ಜೊತೆ ಕೆಲಸ ಮಾಡಲಿದ್ದಾರೆ. 

ಸಾರ್ವಜನಿಕ ಆರೋಗ್ಯ ತಜ್ಞರು ಹಾಗೂ ವಿಜ್ಞಾನಿಗಳ ತಂಡವನ್ನು ಕಾರ್ಯಪಡೆ ಮುನ್ನಡೆಸಲಿದೆ. ವಿವಿಧ ರಾಜ್ಯ ಹಾಗೂ ಸ್ಥಳೀಯ ಅಧಿಕಾರಿಗಳ ಜೊತೆ ಸಾಂಕ್ರಾಮಿಕ ಹರಡುವಿಕೆ ನಿಯಂತ್ರಣ ಕ್ರಮಗಳ ಬಗ್ಗೆ ಚರ್ಚಿಸಿ, ಸಲಹೆಗಳನ್ನು ತಂಡ ನೀಡಲಿದೆ. ಬಿಲ್‌ ಕ್ಲಿಂಟನ್ ಆಡಳಿತದಲ್ಲಿ ಆರೋಗ್ಯ ಸೇವೆ ಇಲಾಖೆಯ ಹಿರಿಯ ಸಲಹೆಗಾರರಾಗಿ ಕೆಲಸ ಮಾಡಿದ್ದ ಭಾರತ ಮೂಲದ ಅತುಲ್ ಗವಾಂಡೆ ಅವರೂ ಕಾರ್ಯಪಡೆಯ ಸದಸ್ಯರಲ್ಲಿ ಒಬ್ಬರಾಗಿದ್ದಾರೆ. 

ಸದ್ಯ ಅಮೆರಿಕದಲ್ಲಿ ಅತಿಹೆಚ್ಚು ಕೋವಿಡ್ ರೋಗಿಗಳಿದ್ದು, ‘ಕೊರೊನಾ ವೈರಸ್ ನಿರ್ವಹಣೆಯೇ ತಮ್ಮ ಆಡಳಿತಕ್ಕೆ ಇರುವ ಅತಿದೊಡ್ಡ ಸವಾಲು’ ಎಂದು ಬೈಡನ್ ಹೇಳಿದ್ದಾರೆ. ‘ಸೋಂಕು ನಿರ್ವಹಿಸುವ ವಿಧಾನವನ್ನು ಸಲಹಾ ಮಂಡಳಿ ತಿಳಿಸಿಕೊಡಲಿದೆ. ಸುರಕ್ಷಿತ, ಪರಿಣಾಮಕಾರಿ ಮತ್ತು ಉಚಿತ ಲಸಿಕೆ ವಿತರಣೆ ವಿಧಾನದ ರೂಪುರೇಷಗಳನ್ನು ವಿವೇಕ್ ಮೂರ್ತಿ ಅವರ ತಂಡ ಸಿದ್ಧಪಡಿಸಲಿದೆ’ ಎಂದು  ಹೇಳಿದ್ದಾರೆ.  

ಬೈಡನ್–ಕಮಲಾ ಅವರ ತಂಡವು ಅಧಿಕೃತ ವೆಬ್‌ಸೈಟನ್ನು ಬಿಡುಗಡೆ ಮಾಡಿದ್ದು, ಕೋವಿಡ್–19 ನಿಗ್ರಹವೇ ಅದ್ಯತೆ ಎಂದು ಸ್ಪಷ್ಟಪಡಿಸಿದೆ. ಆರ್ಥಿಕ ಚೇತರಿಕೆ, ಜನಾಂಗೀಯ ಸಮಾನತೆ ಹಾಗೂ ಹವಾಮಾನ ವೈಪರೀತ್ಯ ತಡೆ ಇತರೆ ಆದ್ಯತೆಗಳಾಗಿವೆ. 

ಬೈಡನ್ ಆಪ್ತ ಮೂರ್ತಿ: ಚುನಾವಣಾ ಪ್ರಚಾರದ ಸಮಯದಲ್ಲೇ ಬೈಡನ್ ಅವರಿಗೆ ಮೂರ್ತಿ ಅವರು ಸಾರ್ವಜನಿಕ ಆರೋಗ್ಯ ವಿಚಾರದಲ್ಲಿ ಪ್ರಮುಖ ಸಲಹೆಗಾರರಾಗಿದ್ದರು. ಬೈಡನ್ ಸರ್ಕಾರದ ಆರೋಗ್ಯ ಕಾರ್ಯದರ್ಶಿಯಾಗಿ ಮೂರ್ತಿ ನೇಮಕವಾಗಬಹುದು ಎಂದು ಅಂದಾಜು ಇತ್ತು. ಆರೋಗ್ಯ ಕಾರ್ಯಪಡೆಯ ಸಹಅಧ್ಯಕ್ಷರನ್ನಾಗಿ ಪ್ರಮೀಳಾ ಜಯಪಾಲ್ ಹಾಗೂ ವಿವೇಕ್ ಮೂರ್ತಿ ಅವರನ್ನು ಬೈಡನ್ ಚುನಾವಣಾ ತಂಡ ಮೇ ತಿಂಗಳಲ್ಲಿ ನೇಮಿಸಿತ್ತು. ಬೈಡನ್ ಅವರನ್ನು ಮನೆಗೆ ಕರೆಸಿ ಮಸಾಲೆ ದೋಸೆ ಬಡಿಸಬೇಕು ಎಂಬ ಬಯಕೆ ಇದೆ ಎಂದು ನಿಧಿ ಸಂಗ್ರಹ ಕಾರ್ಯಕ್ರಮದಲ್ಲಿ ಮೂರ್ತಿ ಅವರು ಹೇಳಿದ್ದರು. ಮೂರ್ತಿ ಅವರ ಮೌಲ್ಯಗಳು ವಾಸ್ತವವಾಗಿದ್ದು, ಸಮುದಾಯ ಕೇಂದ್ರಿತವಾಗಿವೆ ಎಂದು ಬೈಡನ್ ಶ್ಲಾಘಿಸಿದ್ದರು.

ಶುಭಾಶಯ ಹೇಳದಿರಲು ನಿರ್ಧಾರ: ಅಮೆರಿಕ ಚುನಾವಣೆಯ ಮತ ಎಣಿಕೆಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪಗಳು ಕೇಳಿಬಂದಿರುವ ಕಾರಣ ಜೋ ಬೈಡನ್ ಅವರಿಗೆ ಶುಭಾಶಯ ಹೇಳದಿರಲು ಚೀನಾ, ರಷ್ಯಾ, ಮೆಕ್ಸಿಕೊ, ಬ್ರೆಜಿಲ್ ಹಾಗೂ ಟರ್ಕಿ ದೇಶಗಳು ನಿರ್ಧರಿಸಿವೆ. ಯಾವುದೇ ಅಕ್ರಮಗಳು ನಡೆದಿಲ್ಲ ಎಂದು ಸಾಬೀತಾಗಿ, ಫಲಿತಾಂಶ ಅಧಿಕೃತವಾಗಿ ಪ್ರಕಟವಾದ ಬಳಿಕ
ಶುಭಾಶಯ ಹೇಳುವುದಾಗಿ ಸ್ಪಷ್ಟಪಡಿಸಿವೆ.

ಚುನಾವಣಾ ಅಕ್ರಮದ ಬಗ್ಗೆ ಡೊನಾಲ್ಡ್ ಟ್ರಂಪ್ ಅವರು ಕಾನೂನು ಹೋರಾಟ ನಡೆಸುವುದಾಗಿ ಘೋಷಿಸಿರುವುದು ಈ ನಿರ್ಧಾರಕ್ಕೆ ಬರಲು ಕಾರಣ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಆಪ್ತರು ತಿಳಿಸಿದ್ದಾರೆ. ಬೈಡನ್ ಅವರು ಬಹುಮತಕ್ಕೆ ಅಗತ್ಯವಿರುವ ಎಲೆಕ್ಟೋರಲ್‌ಗಳ ಬೆಂಬಲ ಗಳಿಸಿದ್ದಾರೆ ಎಂದು ಟಿ.ವಿ ಮಾಧ್ಯಮಗಳು ವರದಿ ಮಾಡಿದ ತಕ್ಷಣ ಜಗತ್ತಿನ ಬಹುತೇಕ ದೇಶಗಳು ಬೈಡನ್ ಅವರಿಗೆ ಶುಭ ಕೋರಿದ್ದವು. ಆದರೆ ಚೀನಾ, ರಷ್ಯಾ, ಮೆಕ್ಸಿಕೊ ಮಾತ್ರ ಅಧಿಕೃತ ಘೋಷಣೆಗೆ ಕಾಯುತ್ತಿವೆ.

ಸುಗಮವಾಗಿ ಆಡಳಿತ ಹಸ್ತಾಂತರಕ್ಕೆ ಟ್ರಂಪ್‌ಗೆ ಹೆಚ್ಚಿದ ಒತ್ತಡ:

ವಿಲ್ಮಿಂಗ್ಟನ್‌(ಎಪಿ): ಮುಂದಿನ ಜನವರಿಯಲ್ಲಿ ನೂತನ ಆಡಳಿತವು ಅಧಿಕಾರಕ್ಕೆ ಬರುವ ಸಂದರ್ಭದಲ್ಲಿ ನೂತನ ಅಧ್ಯಕ್ಷ ಜೋ ಬೈಡನ್‌ ಅವರಿಗೆ ಸುಗಮವಾಗಿ ಆಡಳಿತದ ಹಸ್ತಾಂತರಕ್ಕೆ ಸಹಕರಿಸುವಂತೆ, ಡೊನಾಲ್ಡ್‌ ಟ್ರಂಪ್‌ ಮೇಲೆ ಒತ್ತಡ ಹೆಚ್ಚಿದೆ.

ಬೈಡನ್‌ ಅವರನ್ನು ಅಧಿಕೃತವಾಗಿ ಅಧ್ಯಕ್ಷ ಎಂದು ಗುರುತಿಸುವ ಹೊಣೆ ‘ದಿ ಜನರಲ್‌ ಸರ್ವೀಸಸ್‌ ಅಡ್ಮಿನಿಷ್ಟ್ರೇಷನ್‌’ ಮೇಲಿದೆ. ಆದರೆ, ಈ ಸಂಸ್ಥೆಯ ಆಡಳಿತಗಾರ್ತಿಯಾಗಿರುವ ಎಮಿಲಿ ಮರ್ಫಿ ಅವರು ಈ ಪ್ರಕ್ರಿಯೆಯನ್ನು ಇನ್ನೂ ಆರಂಭಿಸಿಲ್ಲ. ಪ್ರಕ್ರಿಯೆಯನ್ನು ಆರಂಭಿಸುವ ಕುರಿತು ಯಾವ ಮಾರ್ಗಸೂಚಿಯನ್ನೂ ಇಲ್ಲಿಯವರೆಗೂ ಹೊರಡಿಸಿಲ್ಲ.

ಎಮಿಲಿ ಮರ್ಫಿ ಅವರನ್ನು ಟ್ರಂಪ್ ನೇಮಕ ಮಾಡಿದ್ದರು. ಹೀಗಾಗಿ ಈ ವಿಳಂಬವು ಸಾಕಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಬೈಡನ್‌ ಅವರ ಗೆಲುವನ್ನು ಟ್ರಂಪ್‌ ಅವರು ಇಲ್ಲಿಯವರೆಗೂ ಸಾರ್ವಜನಿಕವಾಗಿ ಗುರುತಿಸಿಲ್ಲ. ಜೊತೆಗೆ ಮತದಾನದಲ್ಲೂ ಅಕ್ರಮವಾಗಿದೆ ಎಂದು ಆರೋಪಿಸಿದ್ದಾರೆ. ಇವೆಲ್ಲವೂ ಆಡಳಿತದ ಚುಕ್ಕಾಣಿ ಹಿಡಿಯಲು ಹೊರಟಿರುವ ಡೆಮಾಕ್ರಟಿಕ್‌ ಪಕ್ಷಕ್ಕೆ ಅಡ್ಡಿಯಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು