ಭಾನುವಾರ, ನವೆಂಬರ್ 29, 2020
21 °C
ಅಮೆರಿಕದಲ್ಲಿ ವಿದೇಶಿ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಹೆಚ್ಚಳ

ಭಾರತದ ವಿದ್ಯಾರ್ಥಿಗಳಿಂದ ಅಮೆರಿಕದ ಖಜಾನೆಗೆ ₹ 56,570 ಕೋಟಿ

ಪಿಟಿಐ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್‌: 2019-20ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಭಾರತದ ವಿದ್ಯಾರ್ಥಿಗಳಿಂದ ಅಮೆರಿಕದ ಖಜಾನೆಗೆ 7.6 ಬಿಲಿಯನ್‌ ಡಾಲರ್‌ (ಅಂದಾಜು ₹ 56,570 ಕೋಟಿ) ಆದಾಯ ಸೇರಿದೆ, ಆದರೆ, ಹಿಂದಿನ ವರ್ಷಗಳಿಗೆ ಹೋಲಿಸಿದರೆ 2019-20ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಶೇ 4.4ರಷ್ಟು ಕಡಿಮೆಯಾಗಿದೆ  ಎಂಬುದು ‘ಓಪನ್ಸ್‌ ಡೋರ್ಸ್‌ 2020’ ವರದಿಯಿಂದ ತಿಳಿದುಬಂದಿದೆ.

ಅಮೆರಿಕದಲ್ಲಿ ವ್ಯಾಸಂಗ ಮಾಡುತ್ತಿರುವ ವಿದೇಶಿ ವಿದ್ಯಾರ್ಥಿಗಳ ಪೈಕಿ ಚೀನಾದವರೇ ಅತಿ ಹೆಚ್ಚು ಮಂದಿ ಇದ್ದಾರೆ. ಸತತ 16ನೇ ವರ್ಷವೂ ಈ ರಾಷ್ಟ್ರದ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಏರಿಕೆ ಕಂಡಿದೆ. 2019-20ನೇ ಸಾಲಿನಲ್ಲಿ ಚೀನಾದ 3.72 ಲಕ್ಷ ವಿದ್ಯಾರ್ಥಿಗಳು ವ್ಯಾಸಂಗ ಮಾಡಿದ್ದಾರೆ. ಈ ಪಟ್ಟಿಯಲ್ಲಿ ಭಾರತವು ಎರಡನೇ ಸ್ಥಾನದಲ್ಲಿದೆ. ಭಾರತದ 1.93 ಲಕ್ಷ ವಿದ್ಯಾರ್ಥಿಗಳು ಅಮೆರಿಕದಲ್ಲಿ ಓದುತ್ತಿದ್ದಾರೆ ಎಂದೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಸತತ ಐದನೇ ಬಾರಿ ಅಮೆರಿಕದ ಶೈಕ್ಷಣಿಕ ವರ್ಷವೊಂದರಲ್ಲಿ 10.75 ಲಕ್ಷ ಮಂದಿ ವಿದೇಶಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ ಎಂದು ಯುಎಸ್‌ ಡಿಪಾರ್ಟ್‌ಮೆಂಟ್‌ ಆಫ್‌ ಸ್ಟೇಟ್ಸ್‌ ಬ್ಯೂರೊ ಆಫ್‌ ಎಜುಕೇಷನ್‌ ಆ್ಯಂಡ್‌ ಕಲ್ಚರಲ್‌ ಅಫೈರ್ಸ್‌ ಮತ್ತು ಇನ್‌ಸ್ಟಿಟ್ಯೂಟ್‌ ಆಫ್‌ ಇಂಟರ್‌ನ್ಯಾಷನಲ್‌ ಎಜುಕೇಷನ್‌ (ಐಐಇ) ಸಂಸ್ಥೆಗಳು ಜಂಟಿಯಾಗಿ ಬಿಡುಗಡೆ ಮಾಡಿರುವ ವರದಿಯಲ್ಲಿ ಹೇಳಲಾಗಿದೆ. 

‘ವಿದೇಶಿ ವಿದ್ಯಾರ್ಥಿಗಳು ಅಮೆರಿಕದ ಆರ್ಥಿಕತೆಗೆ ಬಲ ತುಂಬುತ್ತಿದ್ದಾರೆ. 2019ರಲ್ಲಿ ವಿದೇಶಿ ವಿದ್ಯಾರ್ಥಿಗಳಿಂದ 44 ಬಿಲಿಯನ್‌ ಡಾಲರ್‌ (ಸುಮಾರು ₹3,27,758 ಕೋಟಿ) ಆದಾಯ ಹರಿದುಬಂದಿದೆ’ ಎಂದು ಯುಎಸ್‌ ಡಿಪಾರ್ಟ್‌ಮೆಂಟ್‌ ಆಫ್‌ ಕಾಮರ್ಸ್‌ ತಿಳಿಸಿದೆ. 

‘ಸತತ ಐದನೇ ವರ್ಷವೂ 10 ಲಕ್ಷಕ್ಕೂ ಅಧಿಕ ವಿದೇಶಿ ವಿದ್ಯಾರ್ಥಿಗಳು ನಮ್ಮ ದೇಶದಲ್ಲಿ ವ್ಯಾಸಂಗ ಮಾಡುತ್ತಿರುವುದು ಖುಷಿಯ ವಿಷಯ. ಅಮೆರಿಕವು ವಿದೇಶಿ ವಿದ್ಯಾರ್ಥಿಗಳ ಆಕರ್ಷಣೀಯ ತಾಣವಾಗಿದ್ದು ಇಲ್ಲಿ ಪದವಿ ಪಡೆಯಲು ಎಲ್ಲರೂ ಹಾತೊರೆಯುತ್ತಿದ್ದಾರೆ. ಇದು ಉತ್ತಮ ಬೆಳವಣಿಗೆ’ ಎಂದು ಸ್ಟೇಟ್‌ ಫಾರ್‌ ಎಜುಕೇಷನ್‌ ಆ್ಯಂಡ್‌ ಕಲ್ಚರಲ್‌ ಅಫೈರ್ಸ್‌ನ ಅಧೀನ ಕಾರ್ಯದರ್ಶಿ ಮೇರಿ ರಾಯ್ಸ್‌ ಹೇಳಿದ್ದಾರೆ.  

ಅಮೆರಿಕದಲ್ಲಿ ವ್ಯಾಸಂಗ ಮಾಡುತ್ತಿರುವವರ ಪೈಕಿ ಬಾಂಗ್ಲಾದೇಶ, ಬ್ರೆಜಿಲ್‌ ಹಾಗೂ ನೈಜೀರಿಯಾ ವಿದ್ಯಾರ್ಥಿಗಳ ಸಂಖ್ಯೆ ಏರಿಕೆಯಾಗಿದೆ.   

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು