ಇಸ್ರೇಲ್ ಮೇಲೆ ಪ್ಯಾಲೇಸ್ತೀನ್ ರಾಕೆಟ್ ದಾಳಿ; ಕೇರಳ ಮೂಲದ ಮಹಿಳೆಯ ಸಾವು

ಇಡುಕ್ಕಿ, ಕೇರಳ: ಗಾಜಾದಲ್ಲಿ ಪ್ಯಾಲೆಸ್ಟೈನ್ ಮೂಲದ ಭಯೋತ್ಪಾದಕ ಸಂಘಟನೆಯು ನಡೆಸಿದ ರಾಕೆಟ್ ದಾಳಿಯಲ್ಲಿ ಇಸ್ರೇಲ್‌ನಲ್ಲಿ ಕೆಲಸ ಮಾಡುತ್ತಿದ್ದ ಕೇರಳದ ಸೌಮ್ಯ ಸಂತೋಷ್ ಸಾವಿಗೀಡಾಗಿದ್ದಾರೆ.
ಕೇರಳದ ಇಡುಕ್ಕಿ ಜಿಲ್ಲೆಯ ಸೌಮ್ಯ ಸಂತೋಷ್, ದಕ್ಷಿಣ ಇಸ್ರೇಲ್‌ನ ಕರಾವಳಿ ನಗರವಾದ ಅಶ್ಕೆಲೋನ್‌ನ ಮನೆಯೊಂದರಲ್ಲಿ ವೃದ್ಧೆರೊಬ್ಬರಿಗೆ ಆರೈಕೆ ಮಾಡುವ ಕೆಲಸ ಮಾಡುತ್ತಿದ್ದರು.
ಉಗ್ರರು ಉಡಾಯಿಸಿದ ರಾಕೆಟ್ ವೃದ್ಧೆಯ ಮನೆಗೆ ಅಪ್ಪಳಿಸಿತ್ತು. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸೌಮ್ಯ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ.
ಮಂಗಳವಾರ ಮಧ್ಯಾಹ್ನ ಘಟನೆ ಸಂಭವಿಸಿದಾಗ ಸೌಮ್ಯ ಅವರು ಪತಿ ಸಂತೋಷ್ ಅವರೊಂದಿಗೆ ವಿಡಿಯೊ ಕರೆ ಮೂಲಕ ಮಾತನಾಡುತ್ತಿದ್ದರು.
‘ಇಲ್ಲಿ ಯುದ್ಧದ ವಾತಾವರಣವಿದೆ’ ಎಂದು ಅತ್ತಕಡೆಯಿಂದ ಸೌಮ್ಯ ಅವರು ಹೇಳುತ್ತಿದ್ದಂತೆ ಜೋರಾದ ಶಬ್ದ ಕೇಳಿಸಿತು. ಆದರೆ, ಫೋನ್ ಸಂಪರ್ಕ ಕಡಿತಗೊಂಡಿರಲಿಲ್ಲ. ಈ ಕಡೆಯಿಂದ ಸಂತೋಷ್ ಅವರು ‘ಹಲೋ ಹಲೋ’ ಎಂದು ಅನೇಕ ಬಾರಿ ಹೇಳಿದರೂ ಅತ್ತಲಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಗಾಬರಿಗೊಂಡ ಸಂತೋಷ್ ಇಸ್ರೇಲ್‌ನಲ್ಲಿರುವ ತಮ್ಮ ಸ್ನೇಹಿತರಿಗೆ ಕರೆ ಮಾಡಿ ವಿಚಾರಿಸಿದಾಗ, ರಾಕೆಟ್ ದಾಳಿಯಲ್ಲಿ ಸೌಮ್ಯ ಸಾವಿಗೀಡಾದ ಸುದ್ದಿ ತಿಳಿಯಿತು ಎಂದು ಮೂಲಗಳು ಹೇಳಿವೆ.
ಅಮ್ಮನ ಕರೆಗಾಗಿ ಕಾಯುತ್ತಿರುವ ಮಗ: ತಾಯಿ ಮೃತಪಟ್ಟ ವಿಷಯ ತಿಳಿಯದ ಅವರ ಒಂಬತ್ತು ವರ್ಷ ಮಗ ಅಮ್ಮನ ಫೋನ್ ಕರೆಗಾಗಿ ಕಾಯುತ್ತಿದ್ದಾನೆ.
‘ನನ್ನ ಮಗ ತಾಯಿಯ ಕರೆಗಾಗಿ ಕಾಯುತ್ತಿದ್ದಾನೆ’ ಎಂದು ಇಡುಕ್ಕಿ ಜಿಲ್ಲೆಯ ಕೀರಿಥೋಡು ನಿವಾಸಿ ಸಂತೋಷ್ ನೋವಿನಿಂದ ಸುದ್ದಿಗಾರರಿಗೆ ತಿಳಿಸಿದರು.
‘ಇಸ್ರೇಲ್ ಸರ್ಕಾರದ ಸಂರ್ಪಕದಲ್ಲಿ ರಾಜತಾಂತ್ರಿಕ ಸಿಬ್ಬಂದಿ’
ನವದೆಹಲಿ (ಪ್ರಜಾವಾಣಿ ವಾರ್ತೆ): ‘ಇಸ್ರೇಲ್ ಮೇಲೆ ನಡೆದ ರಾಕೆಟ್ ದಾಳಿಯಲ್ಲಿ ಸಾವನ್ನಪ್ಪಿರುವ ಕೇರಳ ಮೂಲದ ಸೌಮ್ಯ ಸಂತೋಷ್ ಅವರ ಪಾರ್ಥಿವ ಶರೀರವನ್ನು ಭಾರತಕ್ಕೆ ತರುವ ಪ್ರಯತ್ನ ನಡೆಯುತ್ತಿದೆ. ಟೆಲ್ ಅವಿವ್‌ನಲ್ಲಿರುವ ರಾಯಭಾರಿ ಕಚೇರಿ ಸಿಬ್ಬಂದಿ ಇಸ್ರೇಲ್ ಸರ್ಕಾರದೊಂದಿಗೆ ಸತತ ಸಂಪರ್ಕದಲ್ಲಿದ್ದಾರೆ’ ಎಂದು ಮೂಲಗಳು ಹೇಳಿವೆ.
‘ಇಸ್ರೇಲ್‌ನಲ್ಲಿರುವ ಭಾರತೀಯರು ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆಯಬೇಕು’ ಎಂದೂ ರಾಯಭಾರ ಕಚೇರಿ ಸಲಹೆ ನೀಡಿದೆ.
ಸಂಘರ್ಷ: ಯುದ್ಧದ ಭೀತಿ
ಟೆಲ್ ಅವೀವ್ (ಎಎಫ್‌ಪಿ): ಮೂರು ದಿನಗಳ ಹಿಂದೆ ಗಾಜಾ ಪಟ್ಟಿಯಲ್ಲಿ ಇಸ್ರೇಲ್ ಹಾಗೂ ಪಾಲೆಸ್ಟೈನ್‌ನ ಹಮಾಸ್ ಬಂಡುಕೋರರ ನಡುವೆ ಆರಂಭವಾದ ಸಂಘರ್ಷ ತೀವ್ರಗೊಂಡಿದ್ದು, ಎರಡೂ ಕಡೆ ಸೇರಿ 50 ಜನರು ಮೃತಪಟ್ಟಿದ್ದಾರೆ. ಉಭಯ ದೇಶಗಳ ನಡುವಿನ ಸಂಘರ್ಷ ಪೂರ್ಣಪ್ರಮಾಣದ ಯುದ್ಧದ ಹಂತ ತಲುಪಿದರೆ ಆಶ್ಚರ್ಯ ಇಲ್ಲ ಎಂದು ತಜ್ಞರು ಬುಧವಾರ ಆತಂಕ ವ್ಯಕ್ತಪಡಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.