ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಡೊನೇಷ್ಯಾ ವಿಮಾನ ದುರಂತ: ಬ್ಲಾಕ್‌ ಬಾಕ್ಸ್‌ ಪತ್ತೆ

Last Updated 10 ಜನವರಿ 2021, 12:52 IST
ಅಕ್ಷರ ಗಾತ್ರ

ಜಕಾರ್ತ: ಇಲ್ಲಿನ ಜಾವಾ ಸಮುದ್ರದಲ್ಲಿ ಶನಿವಾರ ಪತನಗೊಂಡಿದ್ದ ಶ್ರೀವಿಜಯ ಏರ್‌ಲೈನ್‌ನ ಬೋಯಿಂಗ್‌ 737–500 ವಿಮಾನದ ಪತ್ತೆಕಾರ್ಯದಲ್ಲಿ ತೊಡಗಿದ್ದ ಸಿಬ್ಬಂದಿಗೆ ಭಾನುವಾರ ಮೃತದೇಹದ ಭಾಗಗಳು, ಬಟ್ಟೆಯ ತುಂಡುಗಳು ಹಾಗೂ ವಿಮಾನದ ಅವಶೇಷಗಳು ದೊರೆತಿವೆ. ವಿಮಾನದ ಬ್ಲಾಕ್‌ ಬಾಕ್ಸ್‌ ಪತ್ತೆಯಾಗಿವೆ.

‘ಸಮುದ್ರದ 75 ಅಡಿ ಆಳದಲ್ಲಿ ವಿಮಾನದ ಅವಶೇಷಗಳು ಕಂಡುಬಂದಿರುವುದಾಗಿ ಮುಳುಗು ತಜ್ಞರ ತಂಡವು ಹೇಳಿದೆ. ನೀರಿನೊಳಗೆ ಎಲ್ಲವೂ ಸ್ಪಷ್ಟವಾಗಿ ಗೋಚರಿಸುತ್ತಿರುವುದಾಗಿ ಅವರು ಮಾಹಿತಿ ನೀಡಿದ್ದಾರೆ. ಅಲ್ಲೇ ವಿಮಾನ ಪತನವಾಗಿರಬಹುದೆಂದು ಅಂದಾಜಿಸಲಾಗಿದೆ. ಆ ಭಾಗದಲ್ಲಿ ಹುಡುಕಾಟ ಮುಂದುವರಿಸಲಾಗಿದೆ’ ಎಂದು ವಾಯುಪಡೆಯ ಮುಖ್ಯಸ್ಥ ಹಾದಿ ತಹಜಾಂತೊ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ವಿಮಾನ ದುರಂತಕ್ಕೆ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಬದುಕುಳಿದವರ ಕುರುಹುಗಳೂ ಇದುವರೆಗೂ ಸಿಕ್ಕಿಲ್ಲ’ ಎಂದು ಅವರು ನುಡಿದಿದ್ದಾರೆ.

‘ಈ ದುರಂತದ ತನಿಖೆ ನಡೆಸುವಂತೆ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಸಮಿತಿಗೆ ಸೂಚಿಸಲಾಗಿದೆ’ ಎಂದು ಇಂಡೊನೇಷ್ಯಾದ ಅಧ್ಯಕ್ಷ ಜೊಕೊ ವಿಡೊಡೊ ಹೇಳಿದ್ದಾರೆ.

‘ಶನಿವಾರ ಮಧ್ಯಾಹ್ನ 2.30ರ ಸುಮಾರಿಗೆ ಸಮುದ್ರದೊಳಗೆ ಭಾರಿ ಸ್ಫೋಟ ಸಂಭವಿಸಿದ ಶಬ್ದ ಕೇಳಿತು. ಬಾಂಬ್‌ ಸ್ಫೋಟ ಅಥವಾ ಸುನಾಮಿಯಿಂದ ಆ ಬಗೆಯ ಶಬ್ದ ಹೊರಹೊಮ್ಮಿರಬಹುದೆಂದು ಊಹಿಸಿದ್ದೆವು. ಅದಾಗಿ ಸ್ಪಲ್ಪ ಹೊತ್ತಿನಲ್ಲೇ ಸಮುದ್ರದಿಂದ ಮೇಲಕ್ಕೆ ನೀರು ಚಿಮ್ಮಿತು. ದೊಡ್ಡ ಅಲೆಯೊಂದು ಎದ್ದಿತು. ಅದರಿಂದ ನಾವು ಭಯಭೀತರಾದೆವು. ಬಳಿಕ ವಿಮಾನದ ಅವಶೇಷಗಳೂ ಕಂಡುಬಂದವು’ ಎಂದು ಮೀನುಗಾರರೊಬ್ಬರು ತಿಳಿಸಿದ್ದಾರೆ.

ಏಳು ಮಕ್ಕಳು ಹಾಗೂ ಮೂರು ಹಸುಗೂಸುಗಳು ಸೇರಿದಂತೆ ಒಟ್ಟು 62 ಮಂದಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT