ಶುಕ್ರವಾರ, ಸೆಪ್ಟೆಂಬರ್ 24, 2021
23 °C

ಸೇನಾ ನೇಮಕಾತಿಯಲ್ಲಿ 'ಕನ್ಯತ್ವ ಪರೀಕ್ಷೆ’; ಮಹತ್ವದ ತೀರ್ಮಾನ ಮಾಡಿದ ಇಂಡೋನೇಷ್ಯಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಜಕಾರ್ತ, ಇಂಡೋನೇಷ್ಯಾ (ಎಪಿ): ಮಹಿಳಾ ಸೇನಾ ನೇಮಕಾತಿ ವೇಳೆ ಶೋಷಣೆಗೆ ದಾರಿ ಮಾಡಿಕೊಟ್ಟಿದ್ದ ‘ಕನ್ಯತ್ವ ಪರೀಕ್ಷೆ’ ನಡೆಸುವುದನ್ನು ಕೈಬಿಟ್ಟಿರುವ ಇಂಡೋನೇಷ್ಯಾದ ನಿರ್ಧಾರವನ್ನು ಮಾನವ ಹಕ್ಕುಗಳ ಸಂಘಟನೆಗಳು ಸ್ವಾಗತಿಸಿವೆ.

ಕನ್ಯತ್ವ ಪರೀಕ್ಷೆಗೆ ಯಾವುದೇ ವೈಜ್ಞಾನಿಕ ಮಾನ್ಯತೆ ಇಲ್ಲವೆಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಣೆ ಮಾಡಿದ ಏಳು ವರ್ಷಗಳ ನಂತರ ಇಂಡೋನೇಷ್ಯಾ ಈ ನಿರ್ಧಾರಕ್ಕೆ ಬಂದಿದೆ.

ಸೇನಾ ಸಿಬ್ಬಂದಿಯ ಪ್ರಧಾನ ಮುಖ್ಯಸ್ಥ ಆಂಡಿಕಾ ಪೆರ್ಕಾಸಾ ಅವರು, ಉತ್ತರ ಸುಲವೇಸಿಯಾದ ಮಿನ್ಹಾಸ ಜಿಲ್ಲೆಯಲ್ಲಿ ನಡೆದ ಅಮೆರಿಕ-ಇಂಡೋನೇಷ್ಯಾದ ವಾರ್ಷಿಕ ಜಂಟಿ ಸೇನಾ ಸಮರಾಭ್ಯಾಸದ ವೇಳೆ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ್ದಾರೆ.

ದೈಹಿಕ ತರಬೇತಿಯಲ್ಲಿ ಪಾಲ್ಗೊಳ್ಳಲು ಅಭ್ಯರ್ಥಿಯ ಸಾಮರ್ಥ್ಯವನ್ನು ವರ್ಣ ಅಂಧತ್ವ ಹೊಂದಿದ್ದಾರೆಯೇ, ಬೆನ್ನುಮೂಳೆ ಹಾಗೂ ಹೃದಯದ ಸ್ಥಿತಿ ಆರೋಗ್ಯವಾಗಿದೆಯೇ ಹಾಗೂ ಜೀವಕ್ಕೆ ಅಪಾಯಕಾರಿಯಾದ ವೈದ್ಯಕೀಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆಯೇ ಎನ್ನುವುದನ್ನು ಖಾತ್ರಿಪಡಿಸಿಕೊಳ್ಳುವ ಮೂಲಕ ಮಾತ್ರ ಮೌಲ್ಯಮಾಪನ ಮಾಡಬೇಕು ಎಂದು ಅವರು ಹೇಳಿದ್ದಾರೆ.

ಸೇನೆಯ ಆಸ್ಪತ್ರೆಯ ನಿರ್ದೇಶಕರು ಮತ್ತು ವೈದ್ಯಕೀಯ ಅಧಿಕಾರಿಗಳಿಗೆ ಮೇ ತಿಂಗಳಿನಿಂದ ಈ ಹೊಸ ಕಾರ್ಯವಿಧಾನಗಳ ಬಗ್ಗೆ ತಿಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಹ್ಯೂಮನ್ ರೈಟ್ಸ್ ವಾಚ್ ಸಂಶೋಧಕ ಆಂಡ್ರಿಯಾಸ್ ಹರ್ಸೊನೊ ಅವರು, ‘ಕನ್ಯತ್ವ ಪರೀಕ್ಷೆ’ಯನ್ನು ಈಗಿಂದೀಗಲೇ ನಿಲ್ಲಿಸುವಂತೆ ಇಂಡೋನೇಷ್ಯಾದ ನೌಕಾಪಡೆ ಮತ್ತು ವಾಯುಪಡೆಯ ಕಮಾಂಡರ್‌ಗಳನ್ನು ಒತ್ತಾಯಿಸಿದ್ದಾರೆ.

ಭಾರತ, ಈಜಿಪ್ಟ್ ಮತ್ತು ಅಫ್ಗಾನಿಸ್ತಾನದಲ್ಲಿ ಭದ್ರತಾ ಪಡೆಗಳು ಇಂತಹ ಪರೀಕ್ಷೆಗಳನ್ನು ನಡೆಸುತ್ತಿರುವುದನ್ನು ಹ್ಯೂಮನ್ ರೈಟ್ಸ್ ವಾಚ್ ದಾಖಲಿಸಿದ್ದು, ಇಂಡೋನೇಷ್ಯಾದ ಶಾಲಾ ಬಾಲಕಿಯರಿಗೆ ಕನ್ಯತ್ವ ಪರೀಕ್ಷೆ ನಡೆಸುತ್ತಿರುವುದನ್ನೂ ಅದು ಟೀಕಿಸಿದೆ.

ಇಂಡೋನೇಷ್ಯಾದ ಸೇನೆ ಮತ್ತು ಪೊಲೀಸ್‌ ಇಲಾಖೆಯಲ್ಲಿ ದಶಕಗಳಿಂದಲೂ ಕನ್ಯತ್ವ ಪರೀಕ್ಷೆ ಇದ್ದು, 2018ರಲ್ಲಿ ಪೊಲೀಸ್‌ ಇಲಾಖೆ ಈ ಅವೈಜ್ಞಾನಿಕ ಪದ್ಧತಿಯನ್ನು ಕೈಬಿಟ್ಟಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು