ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಸ್ರೇಲ್‌ ದಾಳಿ: ಉಗ್ರಗಾಮಿ ಸಂಘಟನೆ ಕಮಾಂಡರ್‌ ಹತ್ಯೆ

ಗಾಜಾ ಪಟ್ಟಿಯ ಹಲವಡೆ ವೈಮಾನಿಕ ಕಾರ್ಯಾಚರಣೆ: 15 ಕಿ.ಮೀ. ಉದ್ದದ ಸುರಂಗ ನಾಶ
Last Updated 17 ಮೇ 2021, 13:48 IST
ಅಕ್ಷರ ಗಾತ್ರ

‌ಗಾಜಾ ನಗರ: ಇಸ್ರೇಲ್ ಸೇನೆ ಸೋಮವಾರ ಬೆಳಿಗ್ಗೆ ಗಾಜಾ ಪಟ್ಟಿಯ ವಿವಿಧೆಡೆ ಭಾರಿ ವೈಮಾನಿಕ ದಾಳಿ ನಡೆಸಿದ್ದು, ಉಗ್ರರ ರಕ್ಷಣೆಗೆ ನಿರ್ಮಿಸಿದ್ದ 15 ಕಿಲೋ ಮೀಟರ್‌ ಉದ್ದದ ಸುರಂಗ ಮತ್ತು ಹಮಸ್‌ನ ಒಂಬತ್ತು ಕಮಾಂಡರ್‌ಗಳ ಮನೆಗಳನ್ನು ನಾಶಪಡಿಸಿದೆ.

ಈ ವೈಮಾನಿಕ ದಾಳಿಯಲ್ಲಿ ಇಸ್ಲಾಮಿಕ್‌ ಜಿಹಾದ್‌ ಉಗ್ರಗಾಮಿ ಸಂಘಟನೆಯ ಕಮಾಂಡರ್‌ ಹಸ್ಸಾಮ್‌ ಅಬು ಹರ್‌ಬೀದ್‌ ಹತ್ಯೆಯಾಗಿದ್ದಾನೆ ಎಂದು ಇಸ್ರೇಲ್‌ ಸೇನೆ ತಿಳಿಸಿದೆ.

ಇಸ್ರೇಲ್‌ ನಾಗರಿಕರ ಮೇಲೆ ನಡೆಸಿದ ಕ್ಷಿಪಣಿ ದಾಳಿಗಳಲ್ಲಿ ಈತನ ಕೈವಾಡವಿತ್ತು. ಈತ ಕಳೆದ 15 ವರ್ಷಗಳಿಂದ ಇಸ್ಲಾಮಿಕ್‌ ಜಿಹಾದ್‌ ಸಂಘಟನೆಯ ಕಮಾಂಡರ್‌ ಆಗಿದ್ದ ಎಂದು ತಿಳಿಸಿದೆ.

ಈ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳಲು ಉಗ್ರಗಾಮಿ ಸಂಘಟನೆಯು ಪ್ರತಿದಾಳಿ ನಡೆಸುವ ಸಾಧ್ಯತೆಗಳು ಹೆಚ್ಚಾಗಿವೆ.

ಉಗ್ರರ 35 ಸ್ಥಳಗಳನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಲಾಗಿದೆ. ‘ಮೆಟ್ರೊ’ ಎಂದು ಕರೆಯಲಾಗುವ ಸುರಂಗಗಳನ್ನು ವಾಯು ದಾಳಿಯಿಂದ ರಕ್ಷಿಸಿಕೊಳ್ಳಲು ನಿರ್ಮಿಸಿಕೊಳ್ಳಲಾಗಿತ್ತು ಎಂದು ಇಸ್ರೇಲ್ ತಿಳಿಸಿದೆ.

ಸಂಘರ್ಷ ಆರಂಭವಾದ ತಕ್ಷಣ ಹಮಸ್‌ ಸಂಘಟನೆಯ ನಾಯಕರು ಭೂಗತರಾಗುತ್ತಾರೆ. ಹೀಗಾಗಿ, ದಾಳಿ ನಡೆದ ಸಂದರ್ಭದಲ್ಲಿ ಇವರು ಮನೆಗಳಲ್ಲಿ ಇರುವ ಸಾಧ್ಯತೆಗಳು ಕಡಿಮೆ ಎಂದು ಹೇಳಲಾಗಿದೆ.

ಈ ದಾಳಿಯಲ್ಲಿ ತನ್ನ ಸಂಘಟನೆಯ ಕನಿಷ್ಠ 20 ಮಂದಿ ಸಾವಿಗೀಡಾಗಿದ್ದಾರೆ ಎಂದು ಹಮಸ್‌ ತಿಳಿಸಿದೆ.

ಗಾಜಾ ನಗರದಲ್ಲಿ ಮೂರು ಅಂತಸ್ತಿನ ಕಟ್ಟಡಕ್ಕೆ ಅಪಾರ ಹಾನಿಯಾಗಿದೆ. ಈ ಕಟ್ಟಡದ ಮೇಲೆ ದಾಳಿ ಮಾಡುವ 10 ನಿಮಿಷಕ್ಕೆ ಮೊದಲು ಸೇನೆ ಎಚ್ಚರಿಕೆ ನೀಡಿತ್ತು. ಹೀಗಾಗಿ, ಎಲ್ಲರೂ ಕಟ್ಟಡದಿಂದ ಹೊರಗೆ ಬಂದಿದ್ದರು ಎಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ.

‘ದಾಳಿಯಿಂದ ರಸ್ತೆಗಳು ಮತ್ತು ಹಲವು ಕಟ್ಟಡಗಳಿಗೆ ಅಪಾರ ಹಾನಿಯಾಗಿದೆ. ಇದೇ ರೀತಿ ಸಂಘರ್ಷ ಮುಂದುವರಿದರೆ ಪರಿಸ್ಥಿತಿ ತೀವ್ರ ಹದಗೆಡಲಿದೆ’ ಎಂದು ಗಾಜಾ ಮೇಯರ್‌ ಯಾಹ್ಯಾ ಸರ್ರಾಜ್ ಕಳವಳ ವ್ಯಕ್ತಪಡಿಸಿದ್ದಾರೆ.

ದಾಳಿಯಿಂದಾಗಿ ವಿದ್ಯುತ್‌ ಮತ್ತು ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ದಕ್ಷಿಣ ಗಾಜಾ ನಗರಕ್ಕೆ ವಿದ್ಯುತ್‌ ಪೂರೈಕೆ ಮಾಡುವ ಏಕೈಕ ವಿದ್ಯುತ್‌ ಸ್ಥಾವರಕ್ಕೆ ಹಾನಿಯಾಗಿದೆ ಎಂದು ವಿದ್ಯುತ್‌ ವಿತರಣಾ ಕಂಪನಿ ತಿಳಿಸಿದೆ.

ಹಿಂಸಾಚಾರವನ್ನು ಅಂತ್ಯಗೊಳಿಸಲು ಎಲ್ಲ ರೀತಿಯ ಪ್ರಯತ್ನ ನಡೆಸುತ್ತಿರುವುದಾಗಿ ಈಜಿಪ್ತ್‌ ಅಧ್ಯಕ್ಷ ಅಬ್ದೆಲ್‌ ಫತ್ತಾಹ್‌ ಎಲ್‌–ಸಿಸ್ಸಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT