ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Israel Election | ಇಸ್ರೇಲ್‌ ಚುನಾವಣೆಯಲ್ಲಿ ನೇತನ್ಯಾಹು ಪಕ್ಷಕ್ಕೆ ಗೆಲುವು

Last Updated 4 ನವೆಂಬರ್ 2022, 8:09 IST
ಅಕ್ಷರ ಗಾತ್ರ

ಜೆರುಸಲೇಮ್: ಕಳೆದ ನಾಲ್ಕು ವರ್ಷಗಳಿಂದ ನಾಟಕೀಯ ರಾಜಕೀಯ ವಿದ್ಯಮಾನಗಳಿಗೆ ಸಾಕ್ಷಿಯಾಗುತ್ತಿರುವ ಇಸ್ರೇಲ್‌ನಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಬೆಂಜಮಿನ್‌ ನೇತನ್ಯಾಹು ಅವರ ಪಕ್ಷಕ್ಕೆ ಗೆಲುವಾಗಿದೆ. ಆ ಮೂಲಕ ಮತ್ತೆ ನೇತನ್ಯಾಹು ಅವರು ಪ್ರಧಾನಮಂತ್ರಿಯಾಗಿ ಆಯ್ಕೆಯಾಗುವುದು ಖಚಿತವಾಗಿದೆ.

120 ಸಂಸತ್‌ ಕ್ಷೇತ್ರಗಳ ಪೈಕಿ ನೇತನ್ಯಾಹು ಹಾಗೂ ಅವರ ಬಲಪಂಥೀಯ ಮೈತ್ರಿ ಪಕ್ಷಗಳು 64 ಕ್ಷೇತ್ರಗಳಲ್ಲಿ ಜಯ ಸಾಧಿಸಿವೆ. ನೇತನ್ಯಾಹು ಅವರು ಲಿಕುಡ್‌ ಪಕ್ಷ 32 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರೆ, ತೀವ್ರ ಬಲಪಂಥೀಯ ಪಕ್ಷಗಳು 18 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಬಲಪಂಥೀಯ ರಾಜಕೀಯ ಪಕ್ಷಗಳು 14 ಕ್ಷೇತ್ರಗಳಲ್ಲಿ ಗೆಲುವು ಕಂಡಿದೆ ಎಂದು ಇಸ್ರೇಲ್‌ನ ಚುನಾವಣಾ ಅಯೋಗ ಮಾಹಿತಿ ನೀಡಿದೆ.

ಲ್ಯಾಪಿಡ್‌ ಪಕ್ಷ ಹಾಗೂ ಮೈತ್ರಿ ಪಕ್ಷಗಳು 51 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.

ಕಳೆದ ನಾಲ್ಕು ವರ್ಷದಲ್ಲಿ ಇಸ್ರೇಲ್‌ನಲ್ಲಿ ನಡೆದ ಐದನೇ ಸಾರ್ವತ್ರಿಕ ಚುನಾವಣೆ ಇದಾಗಿದ್ದು, ಯಾವ ಮೈತ್ರಿ ಕೂಟಕ್ಕೂ ಬಹುಮತ ಸಿಗದೆ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದರ ಪರಿಣಾಮ 2 ವರ್ಷಗಳಲ್ಲಿ ಮೂರು ಪ್ರಧಾನ ಮಂತ್ರಿಗಳನ್ನು ಕಂಡಿತ್ತು.

ಇದೀಗ ಮತ್ತೆ ನಡೆದ ಚುನಾವಣೆಯಲ್ಲಿ ನೇತನ್ಯಾಹು ನೇತೃತ್ವದ ಬಲಪಂಥಿಯ ಪಕ್ಷಗಳಿಗೆ ಬಹುಮತ ಲಭಿಸಿದ್ದು, ಎರಡು ವರ್ಷದ ಅವಧಿಯಲ್ಲಿ ನೇತನ್ಯಾಹು ಅವರು ಎರಡನೇ ಬಾರಿಗೆ ಪ್ರಧಾನಿಯಾಗಲಿದ್ದಾರೆ. ಅತೀ ಹೆಚ್ಚು ಅವಧಿಗೆ ದೇಶದ ಪ್ರಧಾನಿಯಾಗಿದ್ದ ಅವರು ಮತ್ತೊಮ್ಮೆ ಅಧಿಕಾರ ಸ್ವೀಕರಿಸಲಿದ್ದಾರೆ.

ಯೆಷ್‌ ಅತಿಡ್‌ ಪಕ್ಷದ ನಾಯಕ ಹಾಗೂ ಹಂಗಾಮಿ ಪ್ರಧಾನಿಯಾಗಿಯೂ ಇದ್ದ ಯೇರ್‌ ಲ್ಯಾಪಿಡ್‌ ಅವರು ಈ ಚುನಾವಣೆಯಲ್ಲಿ ನೇತನ್ಯಾಹು ಅವರಿಗೆ ಪ್ರಬಲ ಎದುರಾಳಿಯಾಗಿದ್ದರು. ಚುನಾವಣೆ ಫಲಿತಾಂಶ ಹೊರ ಬೀಳುತ್ತಿದ್ದಂತೆಯೇ ಅವರು ನೇತನ್ಯಾಹು ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಅಲ್ಲದೇ ಅಧಿಕಾರ ಹಸ್ತಾಂತರ ಕಾರ್ಯಕ್ರಮ ಸಾಂಗವಾಗಿ ನಡೆಯುವಂತೆ ನೋಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

‘ರಾಜಕೀಯ ಅಭಿಲಾಷೆಗಳಿಗಿಂತ ಇಸ್ರೇಲ್‌ ನಮಗೆ ಮುಖ್ಯ. ದೇಶ ಹಾಗೂ ದೇಶದ ಜನತೆಯ ಕಲ್ಯಾಣಕ್ಕಾಗಿ ನಾನು ನೇತನ್ಯಾಹು ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ’ ಎಂದು ಯೇರ್‌ ಲ್ಯಾಪಿಡ್‌ ಅವರು ಶುಭ ಹಾರೈಸಿದ್ದಾರೆ.

ಹಲವು ವರ್ಷಗಳ ಬಳಿಕ ಇಸ್ರೇಲ್‌ನಲ್ಲಿ ರಾಜಕೀಯ ಮೈತ್ರಿಕೂಟವೊಂದಕ್ಕೆ ಬಹುಮತ ಬಂದಿದ್ದು, ಸ್ಥಿರ ಸರ್ಕಾರ ರಚನೆಯಾಗಲಿದೆ. 73 ವರ್ಷದ ನೇತನ್ಯಾಹು ಮೇಲೆ ಭ್ರಷ್ಟಾಚಾರದ ಆರೋಪ ಇದ್ದು, ಅದನ್ನು ಹೇಗೆ ಎದುರಿಸಲಿದ್ದಾರೆ ಎಂದು ಕಾದು ನೋಡಬೇಕಿದೆ.

ಪ್ರಧಾನಿ ಮೋದಿ ಅಭಿನಂದನೆ

ಇಸ್ರೇಲ್‌ ಸಾರ್ವತ್ರಿಕ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬೆಂಜಮಿನ್‌ ನೇತನ್ಯಾಹು ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದನೆ ಸಲ್ಲಿಸಿದ್ದಾರೆ. ಹಿಬ್ರೂ ಭಾಷೆಯಲ್ಲಿ ಟ್ವೀಟ್‌ ಮಾಡಿರುವ ನರೇಂದ್ರ ಮೋದಿ ಅವರು, ‘ಭಾರತ ಹಾಗೂ ಇಸ್ರೇಲ್‌ ನಡುವಣ ತಾಂತ್ರಿಕ ಸಂಬಂಧ ಇನ್ನಷ್ಟು ಗಟ್ಟಿಯಾಗಲು ಉಭಯ ರಾಷ್ಟ್ರಗಳ ಜಂಟಿ ಪ್ರಯತ್ನ ಮುಂದುವರಿಯುವುದನ್ನು ಎದುರು ನೋಡುತ್ತಿದ್ದೇನೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT