ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೋಕಿಯೊದ ರೈಲಿನಲ್ಲಿ ಚಾಕು ಹಿಡಿದು ಬೆಂಕಿ ಹೊತ್ತಿಸಿ ದಾಳಿ; 17 ಮಂದಿಗೆ ಗಾಯ

Last Updated 1 ನವೆಂಬರ್ 2021, 2:02 IST
ಅಕ್ಷರ ಗಾತ್ರ

ಟೋಕಿಯೊ: ಜಪಾನ್‌ನ ಟೋಕಿಯೊದ ರೈಲಿನಲ್ಲಿ ವ್ಯಕ್ತಿಯೊಬ್ಬ ಚಾಕು ಹಿಡಿದು ಎದುರಿಗ ಸಿಕ್ಕ ಪ್ರಯಾಣಿಕರನ್ನು ಇರಿದಿರುವ ಘಟನೆ ಭಾನುವಾರ ನಡೆದಿದೆ. ಬೆಂಕಿಯ ಮೂಲಕವೂ ದಾಳಿ ನಡೆಸಲು ಪ್ರಯತ್ನಿಸಿದ್ದು, ಕನಿಷ್ಠ 17 ಮಂದಿ ಗಾಯಗೊಂಡಿದ್ದಾರೆ ಹಾಗೂ ಒಬ್ಬರ ಸ್ಥಿತಿ ಗಂಭೀರವಾಗಿರುವುದಾಗಿ ಜಪಾನ್‌ ಮಾಧ್ಯಮಗಳು ವರದಿ ಮಾಡಿವೆ.

ಹ್ಯಾಲೊವೀನ್‌ ಆಚರಣೆಯ ಸಂಭ್ರಮದಲ್ಲಿದ್ದ ಜನರು ಹಬ್ಬಕ್ಕೆ ತಕ್ಕ ದಿರಿಸು ಧರಿಸಿದ್ದರು, ಸಡಗರದಲ್ಲಿ ಕೂಗಾಡುತ್ತಿದ್ದರು. ಅದೇ ಸಮಯದಲ್ಲಿ ವ್ಯಕ್ತಿಯೊಬ್ಬ ಏಕಾಏಕಿ ದಾಳಿ ನಡೆಸಿದ. ಕ್ಷಣದಲ್ಲೇ ಸಂಭ್ರಮವು ಭಯದೊಳಗೆ ಮುಳುಗಿ ಹೋಯಿತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ರಾಷ್ಟ್ರೀಯ ಮಾಧ್ಯಮ ಎನ್‌ಎಚ್‌ಕೆ ಜೊತೆಗೆ ಹಂಚಿಕೊಂಡಿದ್ದಾರೆ.

ಹಸಿರು ಶರ್ಟ್‌ ಮತ್ತು ಗಾಢ ನೀಲಿ ಬಣ್ಣದ ಸೂಟ್‌ ಧರಿಸಿದ್ದ 24 ವರ್ಷ ವಯಸ್ಸಿನ ದಾಳಿಕೋರನು ಜನರ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ ಹಾಗೂ ರೈಲಿನೊಳಗೆ ಬೆಂಕಿ ಹೊತ್ತಿಸಿದ್ದಾನೆ. ಘಟನೆಯಲ್ಲಿ 17 ಜನ ಗಾಯಗೊಂಡಿದ್ದು, ಹಿರಿಯ ವ್ಯಕ್ತಿಯೊಬ್ಬರ ಸ್ಥಿತಿ ಗಂಭೀರವಾಗಿರುವುದು ವರದಿಯಾಗಿದೆ. ಕೊಲೆಯ ಪ್ರಯತ್ನ ನಡೆಸಿದ ದಾಳಿಕೋರನನ್ನು ಬಂಧಿಸಲಾಗಿದೆ.

ಬಿಡುಗಡೆಯಾಗಿರುವ ವಿಡಿಯೊಗಳ ಪ್ರಕಾರ, ರೈಲಿನ ಬೋಗಿಯೊಳಗೆ ದಟ್ಟ ಹೊಗೆ ಹಾಗೂ ಬೆಂಕಿ ಹೊತ್ತಿರುವುದು ಕಾಣಿಸಿದೆ. ಭಯದಲ್ಲಿ ಜನರು ರೈಲಿನಿಂದ ಹೊರ ಓಡುತ್ತಿರುವುದು ದಾಖಲಾಗಿದೆ. ಕೆಲವು ಜನರು ಕಿಟಕಿಗಳ ಮೂಲಕವೂ ಹೊರಬಂದಿದ್ದಾರೆ.

ರಾತ್ರಿ 8ರ ಸುಮಾರಿಗೆ ಕಿಯೊ ಲೈನ್‌ ರೈಲಿನಲ್ಲಿ ಈ ಘಟನೆ ನಡೆದಿದೆ. ಅನಂತರ ರೈಲು ಸೇವೆಯನ್ನು ಭಾಗಶಃ ಸ್ಥಗಿತಗೊಳಿಸಲಾಯಿತು. ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡರು.

ಘಟನೆಗೆ ಕುರಿತು ನೆನಪಿಸಿಕೊಂಡಿರುವ ಪ್ರತ್ಯಕ್ಷದರ್ಶಿಗಳು, 'ಮೊದಲಿಗೆ ನಮಗೆ ಹ್ಯಾಲೋವಿನ್‌ ಆಚರಣೆಯ ರೀತಿಯಲ್ಲಿ ತೋರಿತ್ತು. ಆದರೆ, ವ್ಯಕ್ತಿಯು ದೊಡ್ಡ ಚಾಕು ಹಿಡಿದು ಮುಂದೆ ಬಂದ. ಆತ ಯಾವುದೇ ಭಾವನೆಗಳನ್ನು ವ್ಯಕ್ತಪಡಿಸುತ್ತಿರಲಿಲ್ಲ. ಒಂದು ಕೈಲಿ ಚಾಕು ಹಿಡಿದು ಮತ್ತೊಂದರಲ್ಲಿ ದ್ರವವನ್ನು ಎರಚುತಿದ್ದ. ಅದು ಮತ್ತಷ್ಟು ಭಯಕ್ಕೆ ದೂಡಿತು...' ಎಂದಿದ್ದಾರೆ.

ಜನರನ್ನು ಸಾಯಿಸುವ ಇಚ್ಛೆಯಿಂದಲೇ ಈ ಕೃತ್ಯ ಎಸಗಿರುವುದಾಗಿ ತನಿಖಾಧಿಕಾರಿಗಳ ಮುಂದೆ ಆರೋಪಿಯು ಹೇಳಿರುವುದಾಗಿ ವರದಿಯಾಗಿದೆ. ಬೆಂಕಿ ಹೊತ್ತಿಸುವ ಸಲುವಾಗಿ ಆತ ಲೈಟರ್‌ ಫ್ಲ್ಯೂಯಿಡ್ (ಬ್ಯುಟೇನ್‌) ಅನ್ನು ರೈಲಿನೊಳಗೆ ಹರಡಿದ್ದ.

ಜಪಾನ್‌ನಲ್ಲಿ ಅಪರಾಧ ಕೃತ್ಯಗಳು ತೀರಾ ವಿರಳ. ಆದರೆ, ಆಗಸ್ಟ್‌ನಲ್ಲೂ ಟೋಕಿಯೊದ ರೈಲೊಂದರಲ್ಲಿ ಚಾಕುವಿನಿಂದ ದಾಳಿ ನಡೆದಿತ್ತು. ಆ ಘಟನೆಯಲ್ಲಿ ಒಂಬತ್ತು ಮಂದಿ ಗಾಯಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT