ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅದಾನಿಗಾಗಿ ರಾಜಪಕ್ಸ ಮೇಲೆ ಮೋದಿ ಪ್ರಭಾವ ಬೀರಿದ್ದರು ಎಂದಿದ್ದ ಅಧಿಕಾರಿ ರಾಜೀನಾಮೆ

Last Updated 14 ಜೂನ್ 2022, 13:26 IST
ಅಕ್ಷರ ಗಾತ್ರ

ಕೊಲಂಬೊ: ಅದಾನಿ ಸಂಸ್ಥೆಗೆ ಶ್ರೀಲಂಕಾದಲ್ಲಿ ಪವನ ವಿದ್ಯುತ್ ಯೋಜನೆ ಕೊಡಿಸಲು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಅಧ್ಯಕ್ಷ ಗೋಟಬಯ ರಾಜಪಕ್ಸ ಅವರ ಮೇಲೆ ಪ್ರಭಾವ ಬೀರಿದ್ದರು ಎಂದು ಸಂಸದೀಯ ಸಮಿತಿಯ ಮುಂದೆ ಪ್ರತಿಪಾದಿಸಿದ್ದ ಶ್ರೀಲಂಕಾದ ಉನ್ನತ ಅಧಿಕಾರಿಯೊಬ್ಬರು, ತಮ್ಮ ಹೇಳಿಕೆಯನ್ನು ಹಿಂಪಡೆದ ಮರುದಿನ (ಸೋಮವಾರ) ರಾಜೀನಾಮೆ ನೀಡಿದ್ದಾರೆ.

ಸರ್ಕಾರಿ ಸ್ವಾಮ್ಯದ ವಿದ್ಯುತ್ ಘಟಕದ ‘ಸಿಲೋನ್ ಎಲೆಕ್ಟ್ರಿಸಿಟಿ ಬೋರ್ಡ್ (ಸಿಇಬಿ)’ನ ಅಧ್ಯಕ್ಷ ಎಂಎಂಸಿ ಫರ್ಡಿನಾಂಡೋ ಅವರ ರಾಜೀನಾಮೆಯನ್ನು ಅಂಗೀಕರಿಸಲಾಗಿದೆ ಎಂದು ಇಂಧನ ಸಚಿವ ಕಾಂಚನಾ ವಿಜೆಸೇಕರ ಸೋಮವಾರ ತಿಳಿಸಿದ್ದಾರೆ.

‘ಕಳೆದ ನವಂಬರ್‌ನಲ್ಲಿ ನಡೆದಿದ್ದ ಸಭೆಯೊಂದರ ನಂತರ ನನ್ನನ್ನು ಕರೆಸಿಕೊಂಡಿದ್ದ ಅಧ್ಯಕ್ಷ ಗೋಟಬಯ ರಾಜಪಕ್ಸ ಅವರು ಪವನ ವಿದ್ಯುತ್ ಯೋಜನೆಯನ್ನು ಭಾರತದ ಉದ್ಯಮಿ ಗೌತಮ್ ಅದಾನಿ ಅವರಿಗೆ ನೀಡಬೇಕು ಎಂದು ಸೂಚಿಸಿದ್ದರು. ಈ ಯೋಜನೆ ಅದಾನಿಗೆ ನೀಡಬೇಕು ಎಂದು ಭಾರತದ ಪ್ರಧಾನಿ ಮೋದಿ ಒತ್ತಾಯಿಸುತ್ತಿದ್ದಾರೆ’ ಎಂದು ರಾಜಪಕ್ಸ ಹೇಳಿದ್ದಾಗಿ ಫರ್ಡಿನಾಂಡೋ ಅವರು ಕಳೆದ ಶುಕ್ರವಾರ ನಡೆದ ಸಾರ್ವಜನಿಕ ಉದ್ಯಮಗಳ ಸಮಿತಿಯ (ಸಿಒಪಿಇ) ಸಭೆಯಲ್ಲಿ ಹೇಳಿದ್ದರು.

ಆದಾಗ್ಯೂ, ಸಂಸದೀಯ ಸಮಿತಿಯ ಎದುರು ಫರ್ಡಿನಾಂಡೋ ನೀಡಿದ ಹೇಳಿಕೆಯನ್ನು ಅಧ್ಯಕ್ಷ ರಾಜಪಕ್ಸ ಶನಿವಾರ ಸ್ಪಷ್ಟವಾಗಿ ನಿರಾಕರಿಸಿದ್ದರು.

‘ಯಾವುದೇ ನಿರ್ದಿಷ್ಟ ವ್ಯಕ್ತಿ ಅಥವಾ ಘಟಕಕ್ಕೆ ಪವನ ಶಕ್ತಿ ಯೋಜನೆಯನ್ನು ನೀಡಿದ್ದನ್ನು ನಾನು ಸ್ಪಷ್ಟವಾಗಿ ನಿರಾಕರಿಸುತ್ತೇನೆ’ ಎಂದು ಟ್ವೀಟ್ ಮಾಡಿ ರಾಜಪಕ್ಸ ಅವರು ಸ್ಪಷ್ಟಪಡಿಸಿದ್ದರು.

ಫರ್ಡಿನಾಂಡೋ ಅವರು ಭಾನುವಾರ ಸಂಸತ್ತಿನ ಸಿಒಪಿಇ ಅಧ್ಯಕ್ಷರಿಗೆ ಪತ್ರ ಬರೆದಿದ್ದು, ‘ಒತ್ತಡದಿಂದ ಹಾಗೆ ಹೇಳಿದ್ದೇನೆ. ಹೇಳಿಕೆಯನ್ನು ಹಿಂಪಡೆಯುತ್ತೇನೆ’ ಎಂದು ತಿಳಿಸಿದ್ದರು. ಅಲ್ಲದೇ, ‘ಇದರಲ್ಲಿ ಅಧ್ಯಕ್ಷ ರಾಜಪಕ್ಸ ಆಗಲಿ ಭಾರತೀಯ ಹೈಕಮಿಷನ್ ಆಗಲಿ ಪ್ರಭಾವ ಬೀರಿಲ್ಲ’ ಎಂದೂ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಈ ಬಗ್ಗೆ ಭಾರತ ಸರ್ಕಾರದ ಕಡೆಯಿಂದ ಯಾವುದೇ ಹೇಳಿಕೆ ಬಂದಿಲ್ಲ.

1989ರ ಸಿಇಬಿ ಕಾಯಿದೆಗೆ ಶ್ರೀಲಂಕಾ ಸರ್ಕಾರ ತಿದ್ದುಪಡಿ ತರಲು ಹೊರಟಾಗ ಎಂಜಿನಿಯರ್‌ಗಳು ಮುಷ್ಕರ ನಡೆಸುವುದಾಗಿ ಬೆದರಿಕೆ ಹಾಕಿದ್ದರು. ಹೀಗಾಗಿ ಮನ್ನಾರ್‌ನಲ್ಲಿನ ಅದಾನಿ ಗ್ರೂಪ್‌ನ 500 ಮೆಗಾವ್ಯಾಟ್ ಪವನ ವಿದ್ಯುತ್ ಸ್ಥಾವರ ಯೋಜನೆ ವಿರೋಧ ಎದುರಿಸಿತು.

ಸುಳ್ಳು ಹೇಳಿದ್ದಕ್ಕಾಗಿ ಫರ್ಡಿನಾಂಡೊ ಅವರನ್ನು ಸಂಸದೀಯ ಸವಲತ್ತುಗಳ ಸಮಿತಿಯ ಎದುರು ನಿಲ್ಲಿಸುವುದಾಗಿ ಪ್ರಮುಖ ಪ್ರತಿಪಕ್ಷ ‘ಸಮಗಿ ಜನ ಬಲವೇಗಯ’ ನಾಯಕ ಸಜಿತ್ ಪ್ರೇಮದಾಸ ಎಚ್ಚರಿಸಿದ್ದಾರೆ.

ಅದಾನಿ ಗ್ರೂಪ್‌ ಸ್ಪಷ್ಟನೆ

ಈ ಮಧ್ಯೆ, ವಿವಾದದ ಕುರಿತು ಅದಾನಿ ಗ್ರೂಪ್ ಸೋಮವಾರ ಹೇಳಿಕೆ ಬಿಡುಗಡೆ ಮಾಡಿದೆ. ‘ಶ್ರೀಲಂಕಾದಲ್ಲಿ ಹೂಡಿಕೆ ಮಾಡುವ ನಮ್ಮ ಉದ್ದೇಶವು ನೆರೆಹೊರೆಯವರ ಅಗತ್ಯತೆಗಳನ್ನು ಪೂರೈಸುವುದಾಗಿದೆ. ಜವಾಬ್ದಾರಿಯುತ ಕಾರ್ಪೊರೇಟ್ ಸಂಸ್ಥೆಯಾಗಿ ನಾವು ಇದನ್ನು ಪಾಲುದಾರಿಕೆಯ ಭಾಗವಾಗಿ ನೋಡುತ್ತೇವೆ. ಘಟನೆಯಿಂದ ನಾವು ನಿರಾಶೆಗೊಂಡಿದ್ದೇವೆ. ವಾಸ್ತವವೇನೆಂದರೆ, ಈ ಸಮಸ್ಯೆಯನ್ನು ಶ್ರೀಲಂಕಾ ಸರ್ಕಾರ ಪರಿಹರಿಸಿದೆ’ ಎಂದು ಅದಾನಿ ಗ್ರೂಪ್‌ನ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT