ಮಂಗಳವಾರ, ಮಾರ್ಚ್ 9, 2021
31 °C
200 ಶಂಕಿತರ ಮೇಲೆ ನಿಗಾ: ಎಫ್‌ಬಿಐ ನಿರ್ದೇಶಕ ಕ್ರಿಸ್ಟೋಫರ್

ಅಮೆರಿಕ ಕ್ಯಾಪಿಟಲ್‌ ಮೇಲೆ ದಾಳಿ ಪ್ರಕರಣ: ನೂರಕ್ಕೂ ಹೆಚ್ಚು ಮಂದಿ ಬಂಧನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ಕಳೆದ ವಾರ ಅಮೆರಿಕದ ಕ್ಯಾಪಿಟಲ್‌ (ಸಂಸತ್ತು) ಮೇಲೆ ನಡೆದ ದಾಳಿ ಹಾಗೂ ಅಪರಾಧ ಚಟುವಟಿಕೆಗೆ ಸಂಬಂಧಿಸಿದಂತೆ 100ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿರುವುದಾಗಿ ಎಫ್‌ಬಿಐ ನಿರ್ದೇಶ ಕ್ರಿಸ್ಟೋಫರ್ ವ್ರೇ ತಿಳಿಸಿದ್ದಾರೆ.

ಇದೇ ವೇಳೆ ಜ.20ರಂದು ನಡೆಯಲಿರುವ ಚುನಾಯಿತ ಅಧ್ಯಕ್ಷ ಜೋ ಬೈಡನ್ ಅವರ ಅಧಿಕಾರ ಸ್ವೀಕಾರ ಸಮಾರಂಭದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ವಿನಿಮಯವಾಗುವ ವಿಷಯಗಳು, ಚರ್ಚೆಗಳ ಮೇಲೂ ನಿಗಾ ಇಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಉಪಾಧ್ಯಕ್ಷ ಮೈಕ್ ಪೆನ್ಸ್‌ ಅವರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ  ಕ್ರಿಸ್ಟೋಫರ್‌, ‘‌ಕಳೆದ ವಾರ ಕ್ಯಾಪಿಟಲ್‌ಗೆ ಮುತ್ತಿಗೆ ಪ್ರಕರಣದಲ್ಲಿ 100 ಕ್ಕೂ ಹೆಚ್ಚು ವ್ಯಕ್ತಿಗಳನ್ನು ಬಂಧಿಸಿದ್ದೇವೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರಿಸಿದ್ದೇವೆ. ಈ ಕ್ರಮದಿಂದಾಗಿ ಮುಂದೆ ಇಂಥ ಚಟುವಟಿಕೆಗಳು ಪುನರಾವರ್ತನೆ ಆಗುವುದು ತಪ್ಪುತ್ತದೆ. ಜತೆಗೆ ಇಂಥ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವವರಿಗೆ ಇದು ಎಚ್ಚರಿಕೆಯಾಗಿದೆ’ ಎಂದು ವಿವರಿಸಿದರು.

ಮುಂದಿನ ವಾರ ನೂತನ ಅಧ್ಯಕ್ಷರ ಅಧಿಕಾರ ಸ್ವೀಕಾರ ಸಮಾರಂಭಕ್ಕೂ ಮುನ್ನ ಆನ್‌ಲೈನ್‌ ಮೂಲಕ ನಡೆಯುವ ರಾಜಕೀಯ ಹಾಗೂ ಇದಕ್ಕೆ ಸಂಬಂಧಿಸಿದ ಅಸಂಬದ್ಧ ಚರ್ಚೆಗಳನ್ನು ನಿಯಂತ್ರಿಸಲು ಕಾನೂನು ಜಾರಿ ಮಾಡಲಾಗಿದೆ. ಅವುಗಳನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ಕ್ರಿಸ್ಟೋಫರ್ ಹೇಳಿದರು. 

ಕಳೆದ ವಾರ ಕ್ಯಾಪಿಟಲ್ ಹಿಲ್‌ನಲ್ಲಿ ಆದ ಹಿಂಸಾಚಾರವನ್ನು ಪುನರಾವರ್ತಿಸುವ ವ್ಯಕ್ತಿಗಳ ಮೇಲೆ ಎಫ್‌ಬಿಐ ನಿಗಾ ಇಟ್ಟಿದೆ. ಜ.6ರ ಘಟನೆಗೆ ಸಂಬಂಧಿಸಿದಂತೆ ನಾವು ಈಗಾಗಲೇ 200 ಕ್ಕೂ ಹೆಚ್ಚು ಶಂಕಿತರನ್ನು ಗುರುತಿಸಿದ್ದೇವೆ. ಅವರೆಲ್ಲ ಯಾರೆಂದು ನಮಗೆ ತಿಳಿದಿದೆ. ನೀವು ಹೊರಗೆ ಬಂದರೆ, ಎಫ್‌ಬಿಐ ಏಜೆಂಟರು ನಿಮ್ಮನ್ನು ಪತ್ತೆ ಮಾಡುತ್ತಾರೆ‘ ಎಂದು ಕ್ರಿಸ್ಟೋಫರ್ ವಿಧ್ವಂಸಕ ಕೃತ್ಯ ಎಸಗುವವರಿಗೆ ಪರೋಕ್ಷವಾಗಿ ಎಚ್ಚರಿಕೆ ರವಾನಿಸಿದ್ದಾರೆ.

‌ಜ.6 ರಂದು ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಪರ ಬೆಂಬಲಿಗರು ಕ್ಯಾಪಿಟಲ್‌ ಮೇಲೆ ದಾಳಿ ನಡೆಸಿ, ಅಲ್ಲಿ ನಡೆಯುತ್ತಿದ್ದ ಎಲೆಕ್ಟೋರಲ್ ಕಾಲೇಜ್ ಮತ ಎಣಿಕೆಗೆ ಅಡ್ಡಿ‌ಯುಂಟು ಮಾಡುವ ಜತೆಗೆ, ಒಬ್ಬ ಪೊಲೀಸ್ ಅಧಿಕಾರಿ ಸೇರಿದಂತೆ ಐವರ ಸಾವಿಗೂ ಕಾರಣರಾಗಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು