ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ವಿಟರ್‌ನಲ್ಲಿನ ಪಾಲು ತಿಳಿಸುವಲ್ಲಿ ಎಲಾನ್‌ ಮಸ್ಕ್‌ ವಿಳಂಬ: ತನಿಖೆ

Last Updated 12 ಮೇ 2022, 2:58 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಸಾಮಾಜಿಕ ಮಾಧ್ಯಮ ಟ್ವಿಟರ್‌ ಸಂಸ್ಥೆಯಲ್ಲಿನ ತಮ್ಮ ಗಣನೀಯ ಪಾಲಿನ ಬಗ್ಗೆ ಎಲಾನ್ ಮಸ್ಕ್ ಮಾಹಿತಿ ಹಂಚಿಕೊಳ್ಳುವಲ್ಲಿ ವಿಳಂಬ ಮಾಡಿರುವ ಬಗ್ಗೆ ಅಮೆರಿಕದ ‘ಭದ್ರತಾ ವಿನಿಮಯ ಆಯೋಗ (ಎಸ್‌ಇಸಿ)’ ತನಿಖೆ ನಡೆಸುತ್ತಿದೆ ಎಂದು ಅಮೆರಿಕದ ಸುದ್ದಿ ಮಾಧ್ಯಮ ‘ವಾಲ್ ಸ್ಟ್ರೀಟ್ ಜರ್ನಲ್’ ಬುಧವಾರ ಮೂಲಗಳ ಮಾಹಿತಿ ಉಲ್ಲೇಖಿಸಿ ವರದಿ ಮಾಡಿದೆ.

ಸಾಮಾಜಿಕ ಮಾದ್ಯಮ ಟ್ವಿಟರ್‌ ಸಂಸ್ಥೆಯಲ್ಲಿ ತಾವು ಶೇ 9.2 ಪಾಲು ಹೊಂದಿರುವುದಾಗಿ ‘ಟೆಸ್ಲಾ’ ಸಂಸ್ಥೆಯ ಸಿಇಒ ಎಲಾನ್‌ ಮಸ್ಕ್‌ ಎಸ್‌ಇಸಿಗೆ ಏಪ್ರಿಲ್ 4ರಂದು ತಿಳಿಸಿದ್ದರು. ಯಾವುದೇ ಸಂಸ್ಥೆಯಲ್ಲಿ, ಯಾವುದೇ ವ್ಯಕ್ತಿ ಶೇ 5ಕ್ಕಿಂತಲೂ ಹೆಚ್ಚು ಷೇರುಗಳನ್ನು ಹೊಂದಿದ್ದರೆ, ಅದನ್ನು 10 ದಿನಗಳ ಒಳಗಾಗಿ ತಿಳಿಸಬೇಕು ಎಂಬುದು ಅಲ್ಲಿನ ನಿಯಮ. ಆದರೆ, ಷೇರುಗಳ ಬಗ್ಗೆ ವಿವರ ನೀಡುವುದಲ್ಲಿ ಮಸ್ಕ್‌ ಈ ಅವಧಿಯನ್ನು ಮೀರಿದ್ದಾರೆ ಎನ್ನಲಾಗಿದೆ.

ಶೇ 5ರ ಪಾಲನ್ನು ದಾಟುವ ಹೂಡಿಕೆದಾರರು ಆ ಬಗ್ಗೆ 10 ದಿನಗಳಲ್ಲಿ ಎಸ್‌ಇಸಿಗೆ ನಿರ್ದಿಷ್ಟ ನಮೂನೆಯ ಮೂಲಕ ಮಾಹಿತಿ ಒದಗಿಸಬೇಕು. ಆಗ ಎಸ್‌ಇಸಿಯು ಸಂಸ್ಥೆಯ ಇತರ ಪಾಲುದಾರಿಗೆ ಎಚ್ಚರಿಕೆಯ ಸಂದೇಶವನ್ನು ರವಾನಿಸುತ್ತದೆ.

ಇನ್ನು, ತನಿಖೆ ಬಗ್ಗೆ ಎಸ್‌ಇಸಿಯಾಗಲಿ, ಎಲಾನ್‌ ಮಸ್ಕ್‌ ಆಗಲಿ ಈ ವರೆಗೆ ಪ್ರತಿಕ್ರಿಯಿಸಿಲ್ಲ.

ಎಸ್‌ಇಸಿಗೆ ಮಾಹಿತಿ ಒದಗಿಸಿದ ಒಂದು ದಿನದ ಬಳಿಕ ಮಸ್ಕ್‌ ಅವರಿಗೆ ಟ್ವಿಟರ್‌ ತನ್ನ ಆಡಳಿತ ಮಂಡಳಿ ಸೇರುವಂತೆ ಆಹ್ವಾನ ನೀಡಿತ್ತು. ಅದಾದ ಕೆಲವೇ ವಾರಗಳಲ್ಲಿ ಮಸ್ಕ್‌ ಟ್ವಿಟರ್‌ ಅನ್ನು 44 ಬಿಲಿಯನ್ ಡಾಲರ್ (ಸುಮಾರು ₹3.36 ಲಕ್ಷ ಕೋಟಿ)ಗೆ ಖರೀದಿ ಮಾಡಿದ್ದರು.

ಟ್ವಿಟರ್‌ನಲ್ಲಿ ನಿಯಮಿತವಾಗಿ ಪೋಸ್ಟ್‌ಗಳನ್ನು ಪ್ರಕಟಿಸುವ ಎಲಾನ್‌ ಮಸ್ಕ್‌ ಎಸ್‌ಇಸಿಯೊಂದಿಗೆ ಮಾತಿನ ಚಕಮಕಿ ನಡೆಸಿದ ಉದಾಹರಣೆಗಳೂ ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT