ಗುರುವಾರ , ಆಗಸ್ಟ್ 18, 2022
27 °C

ನೇಪಾಳದಲ್ಲಿ ವಿಮಾನ ದುರಂತ: 22 ಮೃತದೇಹಗಳು ಹೊರಕ್ಕೆ, ಬ್ಲಾಕ್ ಬಾಕ್ಸ್ ಪತ್ತೆ

ಪ್ರಜಾವಾಣಿ ವೆಬ್ ಡೆಸ್ಕ್  Updated:

ಅಕ್ಷರ ಗಾತ್ರ : | |

ಕಠ್ಮಂಡು, ಪೋಖರಾ: ನೇಪಾಳದ ಮಸ್ಟ್ಯಾಂಗ್‌ ಜಿಲ್ಲೆಯಲ್ಲಿ ಭಾನುವಾರ ಬೆಳಿಗ್ಗೆ ಪತನಗೊಂಡಿದ್ದ ವಿಮಾನದ ಅವಶೇಷಗಳ ಬಳಿ 22 ಮೃತದೇಹಗಳನ್ನು ರಕ್ಷಣಾ ಸಿಬ್ಬಂದಿ ಹೊರತೆಗೆದಿದ್ದಾರೆ. 

ಘಟನಾ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ (ಕಪ್ಪು ಪೆಟ್ಟಿಗೆ) ಕೂಡ ಪತ್ತೆಯಾಗಿದೆ ಎಂದು ಅಧಿಕಾರಿಗಳು ಖಚಿತಪಡಿಸಿರುವುದಾಗಿ ಸುದ್ದಿ ಸಂಸ್ಥೆ ‘ಎಎನ್‌ಐ’ ವರದಿ ಮಾಡಿದೆ.

ಸೋಮವಾರ 21 ಮೃತದೇಹಗಳನ್ನು ಹೊರತೆಗೆಯಲಾಗಿತ್ತು. ಇನ್ನೊಬ್ಬ ಪ್ರಯಾಣಿಕರ ಪತ್ತೆಗೆ ಶೋಧ ನಡೆಸಲಾಗಿತ್ತು. 

ನಾಲ್ವರು ಭಾರತೀಯರು, ಜರ್ಮನಿಯ ಇಬ್ಬರು ನಾಗರಿಕರು ಮತ್ತು 13 ಮಂದಿ ನೇಪಾಳಿಗರು ಹಾಗೂ ಮೂವರು ವಿಮಾನ ಸಿಬ್ಬಂದಿ ಸೇರಿ 22 ಜನರು ಈ ವಿಮಾನದಲ್ಲಿದ್ದರು. ಕೆನಡಾದ ಡಿ ಹ್ಯಾವಿಲ್ಯಾಂಡ್ ನಿರ್ಮಿತ ಈ ವಿಮಾನವು ಪೋಖರಾ ನಗರದಿಂದ ಮಧ್ಯ ನೇಪಾಳದ ಪ್ರಸಿದ್ಧ ಚಾರಣ ತಾಣ ಜೋಮ್ಸಮ್‌ಗೆ ಹಾರುತ್ತಿತ್ತು.

ತಾರಾ ಏರ್‌ಗೆ ಸೇರಿದ ಟರ್ಬೊಪ್ರಾಪ್ ಟ್ವಿನ್ ಓಟರ್ 9ಎನ್-ಎಇಟಿ ವಿಮಾನ ಟೇಕಾಫ್‌ ಆದ ಸ್ವಲ್ಪ ಸಮಯದಲ್ಲೇ ನೇಪಾಳದ ಪರ್ವತ ಪ್ರದೇಶದಲ್ಲಿನ ಥಾಸಾಂಗ್‌ ಪಟ್ಟಣ ಬಳಿಯ ಲಲಿಂಗ್ಚಾಗೋಲಾ ಎಂಬಲ್ಲಿ ವಾಯು ಸಂಚಾರ ನಿಯಂತ್ರಕದ (ಎಟಿಆರ್‌) ಸಂಪರ್ಕ ಕಳೆದುಕೊಂಡಿತ್ತು. 

ಹವಾಮಾನ ವೈಪರೀತ್ಯದಿಂದಾಗಿ ವಿಮಾನ ಅಪಘಾತ ಸಂಭವಿಸಿರಬಹುದು ಎಂದು ನೇಪಾಳದ ನಾಗರಿಕ ವಿಮಾನಯಾನ ಪ್ರಾಧಿಕಾರ (ಸಿಎಎಎನ್) ನಡೆಸಿದ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. 

ಪ್ರತಿಕೂಲ ಹವಾಮಾನದಿಂದಾಗಿ ತಾರಾ ಏರ್ ವಿಮಾನ ಅಪಘಾತಕ್ಕೀಡಾಗಿದೆ ಎಂದು ಸಿಎಎಎನ್ ಮಹಾನಿರ್ದೇಶಕ ಪ್ರದೀಪ್ ಅಧಿಕಾರಿ ಸಂಸತ್ತಿನ ಅಂತರರಾಷ್ಟ್ರೀಯ ಸಮಿತಿಯ ಸಭೆಯಲ್ಲಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು