ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ-ಅಗಲ | ತಾಲಿಬಾನ್‌ ನಾಯಕರು ನೇಪಥ್ಯದಿಂದ ರಂಗಕ್ಕೆ

Last Updated 20 ಆಗಸ್ಟ್ 2021, 4:35 IST
ಅಕ್ಷರ ಗಾತ್ರ

ತಾಲಿಬಾನ್‌ ಸಂಘಟನೆಯ ನಾಯಕರು ಸದಾ ನೇಪಥ್ಯದಲ್ಲಿಯೇ ಇದ್ದವರು. 2001ರ ಹಿಂದೆ ಅಫ್ಗಾನಿಸ್ತಾನದಲ್ಲಿ ಈ ಗುಂಪು ಅಧಿಕಾರದಲ್ಲಿ ಇದ್ದಾಗ, ನ್ಯಾಟೊ ಪಡೆಯ ಜತೆಗೆ ನಡೆದ ಸಂಘರ್ಷದ ಸಂದರ್ಭದಲ್ಲಿ ಮತ್ತು ಅಧಿಕಾರ ಕಳೆದುಕೊಂಡ ನಂತರದಲ್ಲಿ ತಾಲಿಬಾನ್‌ನ ನಾಯಕರು ಯಾರು ಎಂಬುದು ಹೆಚ್ಚು ಬಹಿರಂಗ ಆಗಿರಲಿಲ್ಲ. ಅವರ ಕಾರ್ಯವಿಧಾನದ ಬಗ್ಗೆಯೂ ಹೆಚ್ಚಿನ ವಿವರಗಳು ಲಭ್ಯವಾಗಿರಲಿಲ್ಲ.

ಅಫ್ಗಾನಿಸ್ತಾನವನ್ನು ತಾಲಿಬಾನ್‌ ಮತ್ತೆ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ತಾಲಿಬಾನ್‌ 1.0 ಮತ್ತು ತಾಲಿಬಾನ್‌ 2.0 ನಡುವೆ ಕಣ್ಣಿಗೆ ರಾಚುವಂತಹ ಹಲವು ವ್ಯತ್ಯಾಸಗಳನ್ನು ಗುರುತಿಸಬಹುದಾಗಿದೆ. ಈ ಹಿಂದೆ ತಾಲಿಬಾನ್‌ ಅಧಿಕಾರದಲ್ಲಿ ಇದ್ದಾಗ ಆಳ್ವಿಕೆಯು ತೀವ್ರವಾಗಿತ್ತು ಮತ್ತು ಕ್ರೂರವಾಗಿ ಇತ್ತು. ಈ ಬಾರಿ ತಮ್ಮದು ಸೌಮ್ಯ ನಿಲುವು ಎಂಬುದನ್ನು ಮನವರಿಕೆ ಮಾಡಲು ತಾಲಿಬಾನ್‌ ಯತ್ನಿಸುತ್ತಿದೆ.

ಶತ್ರುಗಳಿಗೆಲ್ಲ ಕ್ಷಮಾದಾನ, ಮಹಿಳೆ ಯರೂ ಇರುವ ಎಲ್ಲರನ್ನೂ ಒಳಗೊಂಡ ಸರ್ಕಾರ, ದೇಶ ತೊರೆಯಲು ಬಯಸುವವರಿಗೆ ಯಾವುದೇ ತೊಂದರೆ ಇಲ್ಲದೆ ಅವಕಾಶ ಮುಂತಾದ ಅಂಶಗಳು ತಾಲಿಬಾನ್‌ ಬದಲಾಗಿದೆ ಎಂಬುದನ್ನು ತೋರ್ಪಡಿಸುವ ಯತ್ನಗಳಾಗಿವೆ. ಜತೆಗೆ, ಅಮೆರಿಕ ಮತ್ತು ಮಿತ್ರ ದೇಶಗಳು ತನ್ನ ನೇತೃತ್ವದ ಅಫ್ಗಾನಿಸ್ತಾನ ಸರ್ಕಾರಕ್ಕೆ ನ್ಯಾಯಬದ್ಧ ಎಂಬ ಮಾನ್ಯತೆ ನೀಡಬೇಕು ಎಂಬ ಬೇಡಿಕೆ ತಾಲಿಬಾನ್‌ನಲ್ಲಿ ಇದೆ.

ಅಫ್ಗಾನಿಸ್ತಾನದ ನೆಲದಲ್ಲಿ ಭಯೋತ್ಪಾದಕ ರಿಗೆ ಅವಕಾಶವನ್ನೇ ಕೊಡುವುದಿಲ್ಲ ಎಂಬ ಭರವಸೆಯನ್ನೂ ತಾಲಿಬಾನ್‌ ನೀಡಿದೆ. ಅದೇನೇ ಇದ್ದರೂ ಪ್ರಜಾಸತ್ತಾತ್ಮಕ ಸರ್ಕಾರ ಸ್ಥಾಪನೆ ಮಾಡುವುದಿಲ್ಲ ಎಂಬುದನ್ನೂ ಸ್ಪಷ್ಟಪಡಿಸಿದೆ. ಇದರೊಂದಿಗೆ ಪ್ರಜಾಪ್ರಭುತ್ವ ಗಟ್ಟಿಯಾಗಿ ಬೆಳೆಯುವುದಕ್ಕಾಗಿ ಎರಡು ದಶಕಗಳಲ್ಲಿ ಮಾಡಿದ ಪ್ರಯತ್ನಗಳೆಲ್ಲವೂ ವ್ಯರ್ಥವಾದಂತೆ ಆಗಿದೆ.

ತಾಲಿಬಾನ್‌ ನಾಯಕರೆಲ್ಲರೂ ದೇಶದ ದಕ್ಷಿಣ ಭಾಗದಲ್ಲಿ ಪ್ರಬಲವಾಗಿರುವ ಸುನ್ನಿ ಪಂಗಡಕ್ಕೆ ಸೇರಿದವರು. ಪಸ್ತೂನ್‌ ಜನಾಂಗದವರು. ಪ್ರಮುಖ ನಾಯಕ ರೆಲ್ಲರೂ ಸೈನಿಕ ಶಿಕ್ಷಣ ಪಡೆದವರು. 1980ರ ದಶಕದಲ್ಲಿ ಸೋವಿಯತ್‌ ಒಕ್ಕೂಟದ ವಿರುದ್ಧ ಹೋರಾಡುವುದಕ್ಕಾಗಿ ಇವರೆಲ್ಲರಿಗೂ ಅಮೆರಿಕವೇ ತರಬೇತಿ ನೀಡಿತ್ತು. ಈಗ ಅಮೆರಿಕ ವಿರುದ್ಧವೇ ಇವರು ಹೋರಾಟ ನಡೆಸುತ್ತಿದ್ದಾರೆ.

ನೇಪಥ್ಯದಿಂದಲೇ ಕೆಲಸ ಮಾಡುತ್ತಿದ್ದ ಪ್ರಮುಖ ನಾಯಕರು ಈ ಬಾರಿ ರಂಗಕ್ಕೆ ಬಂದಿ ದ್ದಾರೆ. ಇದು ಉತ್ತರದಾಯಿತ್ವ ತೋರುವ ಮತ್ತು ತಾಲಿಬಾನ್‌ ಬದಲಾಗಿದೆ ಎಂಬುದನ್ನು ಬಿಂಬಿಸುವ ಪ್ರಯತ್ನ ಎಂದು ಹೇಳಲಾಗುತ್ತಿದೆ. ಅದೇನೇ ಇದ್ದರೂ, ಅಫ್ಗಾನಿಸ್ತಾನ ಮತ್ತು ಜಗತ್ತಿನ ಜನರ ಮನಸ್ಸಿನಲ್ಲಿ ಈ ಹಿಂದಿನ ತಾಲಿಬಾನ್‌ ತೋರಿದ ಅಟ್ಟಹಾಸದ ನೆನಪು ಹಸಿರಾಗಿಯೇ ಇದೆ.

ಹಯಬತ್‌ಉಲ್ಲಾ ಅಖುನ್‌ಜಾದಾ, ಸುಪ್ರೀಂ ಕಮಾಂಡರ್

ಹಯಬತ್‌ಉಲ್ಲಾ ಈಗ ತಾಲಿಬಾನ್‌ನ ಪರಮೋಚ್ಚ ನಾಯಕ. ಉಗ್ರ ಸಂಘಟನೆಯ ಅತ್ಯುನ್ನತ ನಾಯಕನ ಸ್ಥಾನಕ್ಕೆ ಏರಿದ ಮೂರನೇ ವ್ಯಕ್ತಿ ಎನಿಸಿದ್ದಾನೆ. 1961ರಲ್ಲಿ ಜನಿಸಿದ ಹಯಬತ್‌ಉಲ್ಲಾ ತಾಲಿಬಾನ್‌ನ ಆರಂಭದ ದಿನಗಳಿಂದಲೂ ಸಂಘಟನೆಯ ಜತೆ ಗುರುತಿಸಿಕೊಂಡಿದ್ದಾನೆ. ಮೊದಲ ಇಬ್ಬರು ನಾಯಕರು ಹತರಾದ ನಂತರ 2016ರಲ್ಲಿ ಈತ ಈ ಸ್ಥಾನಕ್ಕೆ ಏರಿದ್ದಾನೆ. ತಾಲಿಬಾನ್ ಉಗ್ರ ಸಂಘಟನೆಯ ಸೇನಾ ಕಾರ್ಯಗಳಿಂದ ಈತ ದೂರವೇ ಉಳಿದಿದ್ದು, ತಾಲಿಬಾನ್‌ನ ಧಾರ್ಮಿಕ ನಾಯಕ ಎನಿಸಿದ್ದಾನೆ. ಈತ ಈವರೆಗೆ ಬಹಿರಂಗವಾಗಿ ಕಾಣಿಸಿಕೊಂಡಿದ್ದು ಬೆರಳೆಣಿಕೆಯಷ್ಟು ಬಾರಿ ಮಾತ್ರ. ಇದೇ ಮೇನಲ್ಲಿ ಈದ್‌-ಉಲ್‌-ಫಿತರ್ ಶುಭಾಶಯವನ್ನು ಕೋರಲು ಈತ ಬಹಿರಂಗವಾಗಿ ಕಾಣಿಸಿಕೊಂಡಿದ್ದ. ತಾಲಿಬಾನ್ ಹೇರುವ ಧಾರ್ಮಿಕ ಕಟ್ಟಳೆ-ಕಟ್ಟುಪಾಡುಗಳನ್ನು ಈತನೇ ನಿರ್ದೇಶಿಸುತ್ತಾನೆ ಎಂದು ಮೂಲಗಳು ಹೇಳಿವೆ. ತಾಲಿಬಾನ್‌ನ ಸಂಸ್ಥಾಪಕ ಮತ್ತು ಮೊದಲ ಸುಪ್ರೀಂ ಕಮಾಂಡರ್ ಆಗಿದ್ದ ಮುಲ್ಲಾ ಮೊಹಮ್ಮದ್‌ನ ಆಪ್ತ ವಲಯದಲ್ಲಿ ಇದ್ದ ಕಾರಣದಿಂದ ಈತ ಈ ಸ್ಥಾನವನ್ನು ಪಡೆದಿದ್ದಾನೆ ಎಂದು ಮೂಲಗಳು ಹೇಳಿವೆ.

ಅಬ್ದುಲ್ ಘನಿ ಬರದರ್ (ಉಪ ನಾಯಕ)

ಅಬ್ದುಲ್ ಘನಿ ಬರದರ್‌, ಸುಪ್ರೀಂ ಕಮಾಂಡರ್‌ನ ನಂತರದ ಉಪ ನಾಯಕನ ಸ್ಥಾನದಲ್ಲಿದ್ದಾನೆ. ಜತೆಗೆ ಈತ ತಾಲಿಬಾನ್‌ನ ಸಾರ್ವಜನಿಕ ಮುಖವಾಗಿದ್ದು, ಇನ್ನೇನು ಅಸ್ತಿತ್ವಕ್ಕೆ ಬರಲಿರುವ ತಾಲಿಬಾನ್ ಸರ್ಕಾರದ ಮುಂದಾಳುವಾಗಲಿದ್ದಾನೆ. ತಾಲಿಬಾನ್ ಸಹ ಸಂಸ್ಥಾಪಕರಲ್ಲಿ ಈತನೂ ಒಬ್ಬ. 2010ರಲ್ಲಿ ಈತನನ್ನು ಪಾಕಿಸ್ತಾನದ ಕರಾಚಿಯಲ್ಲಿ ಅಮೆರಿಕದ ಗುಪ್ತಚರ ಸಂಸ್ಥೆ ಬಂಧಿಸಿತ್ತು. 2018ರಲ್ಲಿ ಈತನನ್ನು ಬಿಡುಗಡೆ ಮಾಡಲಾಗಿತ್ತು.

ತಾಲಿಬಾನ್‌ನ ರಾಜಕೀಯ ಕಚೇರಿ ಇರುವ ದೋಹಾ, ಕತಾರ್‌ನಲ್ಲಿ ಈತ ನೆಲೆಸಿದ್ದ. ಇದೇ ಮಂಗಳವಾರವಷ್ಟೇ ತಾಲಿಬಾನ್‌ನ ಮೂಲ ನಗರವಾದ ಕಂದಹಾರ್‌ಗೆ ಹಿಂತಿರುಗಿದ್ದಾನೆ. ತಾಲಿಬಾನ್‌ನ ರಾಜತಾಂತ್ರಿಕ ಮುಖ್ಯಸ್ಥನೂ ಆಗಿರುವ ಕಾರಣ ಈತ, ಡೊನಾಲ್ಡ್‌ ಟ್ರಂಪ್ ನೇತೃತ್ವದ ಅಮೆರಿಕ ಸರ್ಕಾರದ ಜತೆಗೆ 2020ರ ಫೆಬ್ರುವರಿಯಲ್ಲಿ ನಡೆದ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ್ದ. ಆ ಸಹಿ ಹಾಕಿದ ನಂತರವೇ ಅಮೆರಿಕ ಮತ್ತು ನ್ಯಾಟೊ ಪಡೆಗಳು ಅಫ್ಗಾನಿಸ್ತಾನದಿಂದ ವಾಪಸಾದದ್ದು. ಈಚೆಗೆ ಚೀನಾದಲ್ಲಿ, ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಜತೆ ನಡೆಸಿದ ಸಭೆಯಲ್ಲೂ ಈತ ಭಾಗಿಯಾಗಿದ್ದ.

ಸಿರಾಜುದ್ದೀನ್ ಹಖ್ಖಾನಿ, ತಾಲಿಬಾನ್‌ನ 2ನೇ ಉಪ ನಾಯಕ

ಹಖ್ಖಾನಿ ಉಗ್ರ ಸಂಘಟನೆಯ ಮುಖ್ಯಸ್ಥನಾದ ಸಿರಾಜುದ್ದೀನ್ ಹಖ್ಖಾನಿ, ತಾಲಿಬಾನ್ ಉಗ್ರ ಸಂಘಟನೆಯ ಜತೆ ವಿಲೀನವಾದ ನಂತರ ತಾಲಿಬಾನ್‌ನ ಎರಡನೇ ಉಪ ನಾಯಕನ ಸ್ಥಾನವನ್ನು ಪಡೆದುಕೊಂಡಿದ್ದಾನೆ. ತಾಲಿಬಾನ್‌ ಪ್ರಾಬಲ್ಯವಿರುವ ಅಫ್ಗಾನಿಸ್ತಾನ ಮತ್ತು ಪಾಕಿಸ್ತಾನದಲ್ಲಿ ಸಂಘಟನೆಯ ಸೇನಾ ಕಾರ್ಯಾಚರಣೆ ಮತ್ತು ಆರ್ಥಿಕ ಸ್ಥಿತಿಯ ಮೇಲ್ವಿಚಾರಣೆ ನೋಡಿಕೊಳ್ಳುವುದು ಈತನ ಜವಾಬ್ದಾರಿ. ಈಗ ತಾಲಿಬಾನ್ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರವೂ ಈತ ಇದೇ ಜವಾಬ್ದಾರಿ ಹೊರಲಿದ್ದಾನೆ. ಹಖ್ಖಾನಿ ಸಂಘಟನೆಯು ಉಗ್ರ ಸಂಘಟನೆ ಎಂದು ಅಮೆರಿಕವು ಪಟ್ಟಿ ಮಾಡಿದೆ. ತಾಲಿಬಾನ್ ಜತೆ ನಡೆಯುತ್ತಿರುವ ಮಾತುಕತೆಯಲ್ಲಿ ಅಮೆರಿಕವು ಈ ಸಂಘಟನೆ ಮತ್ತು ಸಿರಾಜುದ್ದೀನ್ ಹಖ್ಖಾನಿಗೆ ಮಾನ್ಯತೆ ನೀಡುತ್ತದೆಯೇ ಅಥವಾ ಇಲ್ಲವೇ ಎಂಬುದು ಈಗಿನ ಪ್ರಶ್ನೆಯಾಗಿದೆ.

ಶೇರ್ ಮೊಹಮ್ಮದ್ ಅಬ್ಬಾಸ್ ಸ್ಟಾನಿಕ್ಜೈ, ರಾಜತಾಂತ್ರಿತ ಮುಖಂಡ

ತಾಲಿಬಾನ್‌ನ ಉಳಿದೆಲ್ಲಾ ಮುಖಂಡರಿಗಿಂತ ಶೇರ್ ಮೊಹಮ್ಮದ್ ಅಬ್ಬಾಸ್ ಹೆಚ್ಚು ವಿದ್ಯಾವಂತ. ಅಫ್ಗಾನಿಸ್ತಾನದಲ್ಲಿ ಈ ಹಿಂದೆ ತಾಲಿಬಾನ್ ಸರ್ಕಾರ ಅಸ್ತಿತ್ವದಲ್ಲಿ ಇದ್ದಾಗ ಈತ ವಿದೇಶಾಂಗ ಸಚಿವನಾಗಿದ್ದ. ಆಗ ವಿಶ್ವದ ಹಲವು ದೇಶಗಳಿಗೆ ಬೇಟಿ ನೀಡಿ, ರಾಜತಾಂತ್ರಿಕ ಸಂಬಂಧ ಬೆಳೆಸಿದ್ದ. ಸರಾಗವಾಗಿ ಇಂಗ್ಲಿಷ್‌ ಮಾತನಾಡುವ ತಾಲಿಬಾನ್‌ನ ಏಕೈಕ ನಾಯಕ ಎಂದೂ ಈತ ಗುರುತಿಸಿಕೊಂಡಿದ್ದಾನೆ. ತಾಲಿಬಾನ್‌ ಸರ್ಕಾರಕ್ಕೆ ರಾಜತಾಂತ್ರಿಕ ಮಾನ್ಯತೆ ನೀಡಬೇಕು ಎಂಬ ಪ್ರಸ್ತಾವ ಇರಿಸಿಕೊಂಡು ಈತ 1996ರಲ್ಲಿ ಅಮೆರಿಕಕ್ಕೆ ಭೇಟಿ ನೀಡಿದ್ದ. ಬಿಲ್ ಕ್ಲಿಂಟನ್ ಸರ್ಕಾರದ ಎದುರು ಈ ಪ್ರಸ್ತಾವವನ್ನು ಇರಿಸಿದ್ದ. ಆದರೆ ಆತನ ಪ್ರಸ್ತಾವವನ್ನು ಅಮೆರಿಕವು ತಿರಸ್ಕರಿಸಿತ್ತು. ಇದೇ ತಿಂಗಳ ಆರಂಭದಲ್ಲಿ ಚೀನಾದ ವಿದೇಶಾಂಗ ಸಚಿವರ ಜತೆ ತಾಲಿಬಾನ್ ನಡೆಸಿದ ಮಾತುಕತೆಯ ಹಿಂದಿನ ತಂತ್ರಗಾರಿಕೆ ಇವನದ್ದೇ ಎಂದು ರಾಯಿಟರ್ಸ್ ವರದಿ ಮಾಡಿತ್ತು. ಅಫ್ಗಾನಿಸ್ತಾನದಲ್ಲಿ ಬಂಡವಾಳ ಹೂಡಿಕೆ ಮಾಡಲು ಚೀನಾಗೆ ಆಹ್ವಾನ ನೀಡುವ ತಂತ್ರಗಾರಿಕೆಯೂ ಇವನದ್ದೇ ಎನ್ನಲಾಗಿದೆ.

ಜಬೀಹುಲ್ಲಾ ಮುಜಾಹಿದ್

ಅಫ್ಗಾನಿಸ್ತಾನದಲ್ಲಿ ತಾಲಿಬಾನ್ ನಿಯಂತ್ರಣ ಸಾಧಿಸಿದ ಬಳಿಕ ಆಗಸ್ಟ್ 17ರಂದು ನಡೆಸಿದ ಮೊದಲ ಸುದ್ದಿಗೋಷ್ಠಿಯಲ್ಲಿ ಕಾಣಿಸಿಕೊಂಡವನು ಜಬೀಹುಲ್ಲಾ ಮುಜಾಹಿದ್. ಈತ ತಾಲಿಬಾನ್‌ನ ಮುಖ್ಯ ವಕ್ತಾರ. ವಿಶೇಷವೆಂದರೆ, ಈತ ಬಹಿರಂಗವಾಗಿ ಸುದ್ದಿಗಾರರಿಗೆ ಕಾಣಿಸಿಕೊಂಡಿದ್ದು ಇದೇ ಮೊದಲು. ಈತ ಹೇಗಿದ್ಧಾನೆ ಎಂದು ನೋಡುವ ಕುತೂಹಲ ಇತ್ತು ಎಂದು ಹಲವು ಪತ್ರಕರ್ತರು ಹೇಳಿಕೊಂಡಿದ್ದಾರೆ.

ಅಫ್ಗಾನಿಸ್ತಾನದ ತಾಲಿಬಾನ್ ಆಡಳಿತದಲ್ಲಿ ಇವರು ಮಹತ್ವದ ಪಾತ್ರ ನಿರ್ವಹಿಸಲಿದ್ದಾರೆ ಎನ್ನಲಾಗಿದೆ. ಅಂತರರಾಷ್ಟ್ರೀಯ ಸಮುದಾಯಕ್ಕೆ ತಾಲಿಬಾನ್ ಗುಂಪಿನ ಸಂದೇಶವನ್ನು ತಲುಪಿಸುವ ಜವಾಬ್ದಾರಿ ಹೊರಲಿದ್ದಾರೆ. 20 ವರ್ಷಗಳ ಯುದ್ಧದ ಸಮಯದಲ್ಲಿ ಪತ್ರಕರ್ತರೊಂದಿಗೆ ದೂರವಾಣಿ ಮೂಲಕ ಅಥವಾ ಬರಹದ ಸಂದೇಶ ಕಳುಹಿಸುವ ಮೂಲಕ ಮಾತ್ರ ಸಂವಹನ ನಡೆಸಿದ್ದ.

ಇಸ್ಲಾಂ ಚೌಕಟ್ಟಿನಲ್ಲಿಸರ್ಕಾರದಲ್ಲಿ ಪಾಲ್ಗೊಳ್ಳಲು ಮಹಿಳೆಯರಿಗೆ ಅವಕಾಶ ನೀಡಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದ್ದ. ಮಹಿಳಾ ಪತ್ರಕರ್ತರಿಂದ ಬಂದ ಪ್ರಶ್ನೆಗಳಿಗೆ ಉತ್ತರಿಸಿದ್ದ. ತಮ್ಮ ಸರ್ಕಾರ ಮೊದಲಿನಂತದ್ದಲ್ಲ, ಸಾಕಷ್ಟು ಬದಲಾಗಿದೆ ಎಂದೂ ತಿಳಿಸಿದ್ದ.

ಅಬ್ದುಲ್ ಹಕೀಂ ಹಖ್ಖಾನಿ

ತಾಲಿಬಾನ್‌ನ ಉನ್ನತ ಕಮಾಂಡರ್ ಆಗಿರುವ ಅಖುನ್‌ಜಾದಾ ಆಪ್ತ ಎಂದು ನಂಬಲಾಗಿರುವ ಅಬ್ದುಲ್ ಹಕೀಂ ಹಖ್ಖಾನಿ, ತಾಲಿಬಾನ್‌ನ ಸಂಧಾನ ತಂಡದ ಮುಖ್ಯಸ್ಥ. ಈ ಹಿಂದಿನ ಅಮೆರಿಕ ಸರ್ಕಾರದೊಂದಿಗೆ ಶಾಂತಿ ಮಾತುಕತೆ ನಡೆಸುವ ತಂಡದ ಉಸ್ತುವಾರಿ ವಹಿಸಿದ್ದ. ಧಾರ್ಮಿಕ ವಿದ್ವಾಂಸರ ಹಿರಿಯ ಮಂಡಳಿಯ ಮುಖ್ಯಸ್ಥನೂ ಹೌದು.

ಈತನನ್ನು ತಾಲಿಬಾನ್ ಸಂಧಾನ ತಂಡದ ಮುಖ್ಯಸ್ಥನಾಗಿ 2020ರ ಸೆಪ್ಟೆಂಬರ್‌ನಲ್ಲಿ ತಾಲಿಬಾನ್ ನೇಮಿಸಿತ್ತು. ಈತನಿಗೆ ಸುಮಾರು 60 ವರ್ಷ ವಯಸ್ಸಿರಬಹುದು ಎಂದು ನಂಬಲಾಗಿದೆ. ಪಾಕಿಸ್ತಾನದ ಕ್ವೆಟ್ಟಾದಲ್ಲಿ ಮದರಸಾ, ಇಸ್ಲಾಮಿಕ್ ಧಾರ್ಮಿಕ ಶಾಲೆಯನ್ನು ನಡೆಸುತ್ತಿದ್ದಾನೆ. ಅಲ್ಲಿಂದಲೇ ತಾಲಿಬಾನ್‌ನ ನ್ಯಾಯಾಂಗವನ್ನು ನೋಡಿಕೊಳ್ಳುತ್ತಿದ್ದಾನೆ. ಅನೇಕ ಹಿರಿಯ ತಾಲಿಬಾನ್ ನಾಯಕರು ಕ್ವೆಟ್ಟಾದಲ್ಲಿ ಆಶ್ರಯ ಪಡೆದಿದ್ದು, ಅಲ್ಲಿಂದಲೇ ಅವರೆಲ್ಲಾ ಸಂಘಟನೆಯನ್ನು ಮುನ್ನಡೆಸುತ್ತಿದ್ದಾರೆ ಎಂದು ನಂಬಲಾಗಿದೆ.

ಮೊಹಮ್ಮದ್ ಯಾಕೂಬ್

ತಾಲಿಬಾನ್ ಸಂಘಟನೆ ಸಂಸ್ಥಾಪಕ ಮುಲ್ಲಾ ಒಮರ್‌ನ ಮಗ ಮೊಹಮ್ಮದ್ ಯಾಕೂಬ್. ಒಮರ್ ಮಗ ಎಂಬ ಕಾರಣಕ್ಕೆ ಸಂಘಟನೆಯ ಉನ್ನತ ಹುದ್ದೆಗೆ ಸ್ಪರ್ಧಿಯಾಗಿದ್ದ. ಪಾಕಿಸ್ತಾನದಲ್ಲಿರುವ ಸೆಮಿನರಿಯಲ್ಲಿ ಶಿಕ್ಷಣ ಪಡೆದಿದ್ದು, ಈಗ ಅಫ್ಗಾನಿಸ್ತಾನದಲ್ಲಿ ವಾಸಿಸುತ್ತಿದ್ದಾನೆ ಎಂದು ಮಾಧ್ಯಮಗಳು ವರದಿ ಮಾಡಿವೆ.

30 ವರ್ಷಕ್ಕಿಂತಲೂ ಕಡಿಮೆ ವಯಸ್ಸಿನ ಯಾಕೂಬ್, ಸಂಘಟನೆಯ ಸೇನಾ ಕಾರ್ಯಾಚರಣೆಗಳ ನಾಯಕ ಎಂದು ಗುರುತಿಸಲಾಗಿದೆ.2016ರಲ್ಲಿ ತಾಲಿಬಾನ್ ಮಾಜಿ ನಾಯಕ ಅಖ್ತರ್ ಮನ್ಸೂರ್ ಸಾವಿನ ನಂತರ, ಕೆಲವು ಉಗ್ರಗಾಮಿಗಳು ಯಾಕೂಬ್‌ನನ್ನು ಗುಂಪಿನ ಹೊಸ ಅತ್ಯುನ್ನತ ಕಮಾಂಡರ್ ಆಗಿ ನೇಮಿಸಲು ಒತ್ತಾಯಿಸಿದ್ದರು. ಆದರೆ ಇತರರು, ಈತ ಚಿಕ್ಕವನು ಮತ್ತು ಅನುಭವದ ಕೊರತೆ ಇದೆ ಎಂದು ಅಭಿಪ್ರಾಯಪಟ್ಟಿದ್ದರು.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT