ಬುಧವಾರ, ಸೆಪ್ಟೆಂಬರ್ 29, 2021
21 °C

Explainer: ಉತ್ತರ ಕೋರಿಯಾ ಮತ್ತು ಕಿಮ್ ಜಾಂಗ್ ಆರೋಗ್ಯದ ಮಹಾಗುಟ್ಟು..

Reuters Updated:

ಅಕ್ಷರ ಗಾತ್ರ : | |

AP Photo

ಪ್ಯೋಂಗ್‌ಯಾಂಗ್‌: ಅಂಗೈನಲ್ಲಿ ಅಣ್ವಸ್ತ್ರ ಇಟ್ಟುಕೊಂಡು ಜಾಗತಿಕವಾಗಿ ಸದಾ ಬೆದರು ಗುಮ್ಮನಂತೆ ಕಾಡುತ್ತಿರುವ ಉತ್ತರ ಕೋರಿಯಾದ ಸರ್ವಾಧಿಕಾರಿಯ ಆರೋಗ್ಯದ ಬಗ್ಗೆ ಕೆಲವು ವರ್ಷಗಳಿಂದ ಉಹಾಪೋಹಗಳು ಕೇಳಿ ಬರುತ್ತಿವೆ.

ಉತ್ತರ ಕೋರಿಯಾ ಸ್ಥಾಪನೆಯಾದಾಗಿಂದ ಕಿಮ್‌ ಕುಟುಂಬದ ಕಪಿಮುಷ್ಠಿಯಲ್ಲಿರುವ ರಾಷ್ಟ್ರವು ಯಾವುದೇ ರಹಸ್ಯಗಳನ್ನು ಹೊರ ಜಗತ್ತಿಗೆ ಬಿಟ್ಟುಕೊಡುತ್ತಿಲ್ಲ. ಅಲ್ಲಿನ ಮಾಧ್ಯಮಗಳ ಮೇಲೆ ಕಿಮ್‌ ಸರ್ಕಾರ ಸಂಪೂರ್ಣ ಹಿಡಿತ ಹೊಂದಿರುವುದರಿಂದ ಯಾವುದೇ ವಿಚಾರಗಳು ಸುಲಭದಲ್ಲಿ ಸೋರಿಕೆಯಾಗುವುದಿಲ್ಲ.

1948ರಿಂದ ಕಿಮ್‌ ಕುಟುಂಬದ ಹಿಡಿತದಲ್ಲಿರುವ ಉತ್ತರ ಕೋರಿಯಾದ ಈಗಿನ ಅಧ್ಯಕ್ಷರ ಆರೋಗ್ಯ ಸ್ಥಿತಿ ಬಗ್ಗೆ ಪುನಃ ಅನುಮಾನಗಳು ದಟ್ಟವಾಗುತ್ತಿವೆ.

ಸದ್ಯ ಉತ್ತರ ಕೋರಿಯಾದ ಅಧ್ಯಕ್ಷ ಕಿಮ್‌ ಜಾಂಗ್‌ ಉನ್‍‌ಗೆ 37 ವರ್ಷ ಎಂದು ನಂಬಲಾಗಿದೆ. ಜೂನ್‌ಗಿಂತ ಮೊದಲು ಕಾಣಿಸಿಕೊಂಡಿದ್ದ ಕಿಮ್‌ ಜಾಂಗ್‌ ಸಾಕಷ್ಟು ತೂಕ ಕಳೆದುಕೊಂಡಿರುವುದು ಕಂಡುಬಂದಿತ್ತು.

ಕಳೆದ ವಾರ ಉ.ಕೋರಿಯಾದ ಮಾಧ್ಯಮವು ದೈಹಿಕವಾಗಿ ಕ್ಷೀಣಿಸಿರುವ ನಾಯಕನ ಬಗ್ಗೆ ಪ್ಯೋಂಗ್‌ಯಾಂಗ್‌ ರೆಸಿಡೆನ್ಸಿಯಲ್ಲಿ ಎಲ್ಲರೂ ಕಳವಳಗೊಂಡಿದ್ದಾರೆ ಎಂದು ಉಲ್ಲೇಖಿಸಿತ್ತು. ಕಳೆದ ಕೆಲವು ವರ್ಷಗಳಿಂದ ಉತ್ತರ ಕೋರಿಯಾ ಅಧ್ಯಕ್ಷರ ಆರೋಗ್ಯ ಸ್ಥಿತಿ ಮತ್ತು ಸಾವಿನ ಬಗ್ಗೆ ಅಲ್ಲಿನ ಮಾಧ್ಯಮಗಳು ನಿರ್ವಹಿಸಿದ ರೀತಿ ಅಚ್ಚರಿದಾಯಕವಾಗಿದೆ.

ಸ್ಥಾಪಕ ಕಿಮ್‌ ಇಲ್‌ ಸಂಗ್‌ ಜನ್ಮ ವಾರ್ಷಿಕೋತ್ಸವದಲ್ಲಿ ಪಾಲ್ಗೊಳ್ಳದ ಕಿಮ್‌ ಜಾಂಗ್‌

2020ಕ್ಕೂ ಮೊದಲು ಕಿಮ್‌ ಆರೋಗ್ಯದ ಬಗ್ಗೆ ಅನುಮಾನ ಹುಟ್ಟಿಕೊಂಡ ಬಳಿಕ ಅಲ್ಲಿನ ಮಾಧ್ಯಮಗಳು ವಿಚಾರವನ್ನು ಭಾರಿ ರಹಸ್ಯವಾಗಿಟ್ಟವು. ಏಪ್ರಿಲ್‌ 15ರಂದು ರಾಷ್ಟ್ರದ ಸ್ಥಾಪಕ ಕಿಮ್‌ ಇಲ್‌ ಸಂಗ್‌ ಜನ್ಮ ವಾರ್ಷಿಕೋತ್ವವ ಆಚರಣೆಯಲ್ಲಿ ಅಧ್ಯಕ್ಷ ಕಿಮ್‌ ಜಾಂಗ್‌ ಭಾಗವಹಿಸಿದ್ದರ ಬಗ್ಗೆ ವರದಿ ಆಗಿರಲಿಲ್ಲ. ಕಿಮ್‌ ಜಾಂಗ್‌ ಅನುಪಸ್ಥಿತಿಗೆ ಕಾರಣವೇನು ಎಂಬುದನ್ನು ಅಲ್ಲಿನ ಮಾಧ್ಯಮಗಳು ಉಲ್ಲೇಖಿಸಲಿಲ್ಲ. ಬದಲಾಗಿ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಕಿಮ್‌ ಜಾಂಗ್‌ ಅನುಪಸ್ಥಿತಿಗೆ ಅನಾರೋಗ್ಯವೇ ಕಾರಣ ಎಂಬ ಊಹಾಪೋಹಗಳು ಎದ್ದವು.

ದಕ್ಷಿಣ ಕೋರಿಯಾದ ಗುಪ್ತಚರ ಏಜೆನ್ಸಿ ಮೇ 2020ರಲ್ಲಿ, ಕಿಮ್‌ ಜಾಂಗ್‌ ಎಂದಿನಂತೆ ಅಧಿಕಾರ ಚಟುವಟಿಕೆ ನಡೆಸುತ್ತಿದ್ದಾರೆ. ಆದರೆ ಕೊರೊನಾ ವೈರಸ್‌ ಕಾರಣದಿಂದಾಗಿ ಸಾರ್ವಜನಿಕವಾಗಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿಲ್ಲ ಎಂದಿತ್ತು.

ಕಿಮ್‌ ಜಾಂಗ್‌ ಸಾರ್ವಜನಿಕವಾಗಿ ಕಾಣಿಸಿಕೊಳ್ಳದಿರುವ ಕಾರಣ 2014ರಲ್ಲಿ ಅಸ್ವಸ್ಥರಾಗಿರುವ ಬಗ್ಗೆ ಅನುಮಾನಗಳು ವ್ಯಕ್ತವಾಗಿದ್ದವು. ಅಲ್ಲಿನ ಟಿವಿ ವರದಿಯಲ್ಲಿ ಅಧ್ಯಕ್ಷರಿಗೆ 'ಅಸ್ವಸ್ಥತೆ' ಕಾಡುತ್ತಿದೆ ಎಂಬುದನ್ನು ಉಲ್ಲೇಖಿಸಿತ್ತು. ಇದು ಅನಾರೋಗ್ಯದ ಸುಳಿವು ಎಂದು ಗುರುತಿಸಲಾಗಿತ್ತು. ಅಲ್ಲಿನ ಮಾಧ್ಯಮಗಳು ಬಿಡುಗಡೆ ಮಾಡಿದ್ದ ಸಾಕ್ಷ್ಯಚಿತ್ರದಲ್ಲಿ ಕಿಮ್‌ ಜಾಂಗ್‌ ನಡೆದಾಡಲು ಕಷ್ಟಪಡುತ್ತಿರುವುದು ಕಂಡುಬಂದಿತ್ತು. ಆದರೆ ಉತ್ತರ ಕೋರಿಯಾದ ಹಿರಿಯ ಅಧಿಕಾರಿಯೊಬ್ಬರು ದಕ್ಷಿಣ ಕೋರಿಯಾಗೆ ಭೇಟಿ ನೀಡಿದ್ದ ಸಂದರ್ಭ, ತಮ್ಮ ರಾಷ್ಟ್ರದ ಯುವ ನಾಯಕ ಆರೋಗ್ಯವಾಗಿದ್ದಾರೆ. ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿಕೊಂಡಿದ್ದರು.

ಸಾವಿನ ರಹಸ್ಯ
ಕಿಮ್‌ ಜಾಂಗ್‌ ಉನ್‌ನ ತಂದೆ, ಉ.ಕೋರಿಯಾದ 2ನೇ ಸರ್ವಾಧಿಕಾರಿ ಕಿಮ್‌ ಜಾಂಗ್‌ ಇಲ್‌ ಹೃದಾಯಾಘತದಿಂದ ಮೃತರಾದ ದಿನಾಂಕದ ಬಗ್ಗೆಯೂ ಸಾಕಷ್ಟು ಗೊಂದಲದ ಮಾಹಿತಿಯನ್ನು ಪ್ರಕಟಿಸಿದ್ದರು. ಡಿಸೆಂಬರ್‌ 19, 2011ಕ್ಕೆ ಮೃತರಾಗಿದ್ದಾರೆ ಎನ್ನಲಾಗಿತ್ತು. ಉ.ಕೋರಿಯಾ ಸರ್ಕಾರದ ಅಧಿಕೃತ ಮಾಧ್ಯಮ ಡಿಸೆಂಬರ್‌ 17ಕ್ಕೆ ಕಿಮ್‌ ಜಾಂಗ್‌ ಇಲ್‌ ಮೃತಪಟ್ಟಿದ್ದಾರೆ ಎಂದಿತ್ತು.

ಮಾಹಿತಿಗಳ ವಿಸರ್ಜನೆ
ಅಕ್ಟೋಬರ್‌ 2008ರಲ್ಲಿ ಉ.ಕೋರಿಯಾ ಸರ್ಕಾರದ ಅಧಿಕೃತ ಮಾಧ್ಯಮವು ಕಿಮ್‌ ಜಾಂಗ್‌ ಇಲ್‌ ಅರೋಗ್ಯದ ಬಗ್ಗೆ ಹರಿದಾಡುತ್ತಿರುವ ವರದಿಗಳು ಸುಳ್ಳು ಎಂದಿತ್ತು. ಅಮೆರಿಕ ಮತ್ತು ದಕ್ಷಿಣ ಕೋರಿಯಾದ ಅಧಿಕೃತ ಮೂಲಗಳು ಕಿಮ್‌ ಜಾಂಗ್‌ ಇಲ್‌ ಕೆಲವು ತಿಂಗಳ ಹಿಂದೆಯೇ ಪಾರ್ಶ್ವವಾಯುಗೆ ಒಳಗಾಗಿ ಬಳಲುತ್ತಿದ್ದಾರೆ ಎಂದಿದ್ದವು.

ಪ್ಯೋಂಗ್‌ಯಾಂಗ್‌ನಲ್ಲಿ ಕಿಮ್‌ ಜಾಂಗ್‌ ಇಲ್‌ಗೆ ಚಿಕಿತ್ಸೆ ನೀಡಿದ್ದ ವೈದ್ಯರು ಫ್ರೆಂಚ್‌ ಪತ್ರಿಕೆಯೊಂದಕ್ಕೆ, ಉತ್ತರ ಕೋರಿಯಾದ ಅಧ್ಯಕ್ಷರಿಗೆ ಪಾರ್ಶ್ವವಾಯು ಆಗಿತ್ತು. ಶಸ್ತ್ರಚಿಕಿತ್ಸೆಗೆ ಒಳಪಡದೆ ಹಾಗೆಯೇ ಗುಣಮುಖರಾದರು ಎಂದು ತಿಳಿಸಿದ್ದರು.

ಸಾಯುವ ವರೆಗೆ ಉ.ಕೋರಿಯಾ ಆಳಿದ್ದ ಅಜ್ಜ!
ಉತ್ತರ ಕೋರಿಯಾದ ಸ್ಥಾಪಕ ಮತ್ತು ಮೊದಲ ಅಧ್ಯಕ್ಷ ಕಿಮ್‌ ಜಾಂಗ್‌ ಉನ್‌ ಅಜ್ಜ ಕಿಮ್‌ ಇಲ್‌ ಸಂಗ್‌ ಸಾಯುವ ವರೆಗೆ ಅಧಿಕಾರ ನಡೆಸಿದ್ದರು. 1994ರಲ್ಲಿ ಮೃತರಾದ ಕಿಮ್‌ ಇಲ್‌ ಸಂಗ್‌ನ ಕುತ್ತಿಗೆ ಹಿಂಭಾಗದಲ್ಲಿ ಟೆನ್ನಿಸ್‌ ಚೆಂಡಿನ ಗಾತ್ರದ ಗಂಟು ಇತ್ತು. ಶಸ್ತ್ರ ಚಿಕಿತ್ಸೆ ಮೂಲಕ ಸರಿಪಡಿಸಲಾಗದ ಗಂಟು ಅದಾಗಿತ್ತು. ಅದು ಕಾಣದಂತೆ ಮಾಧ್ಯಮಗಳು ಫೋಟೊ ಕ್ಲಿಕ್ಕಿಸಿ ಪ್ರಕಟಿಸುತ್ತಿದ್ದವು ಎನ್ನಲಾಗಿದೆ.

ಉತ್ತರ ಕೋರಿಯಾದ ಸರ್ವಾಧಿಕಾರಿಗಳ ಸಂಕ್ಷಿಪ್ತ ನೋಟ

ಅಜ್ಜ ಮೊದಲ ಅಧ್ಯಕ್ಷ: ಕಿಮ್‌ ಇಲ್‌ ಸಂಗ್‌ (1948-1994)
ಮಗ ಎರಡನೇ ಅಧ್ಯಕ್ಷ: ಕಿಮ್‌ ಜಾಂಗ್‌ ಇಲ್‌ (1994-2011)
ಮೊಮ್ಮಗ ಮೂರನೇ ಅಧ್ಯಕ್ಷ: ಕಿಮ್‌ ಜಾಂಗ್‌ ಉನ್‌ (2011ರಿಂದ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು