ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟರ್ಕಿಯಲ್ಲಿ ಬೆಂಗಳೂರಿನ ಮೂಲದ ಕಂಪನಿಯ ಸಿಬ್ಬಂದಿ ನಾಪತ್ತೆ: ಕೇಂದ್ರ

Last Updated 9 ಫೆಬ್ರುವರಿ 2023, 2:10 IST
ಅಕ್ಷರ ಗಾತ್ರ

ನವದೆಹಲಿ: ಟರ್ಕಿಯಲ್ಲಿ ಸೋಮವಾರ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಒಬ್ಬ ಭಾರತೀಯ ನಾಪತ್ತೆಯಾಗಿದ್ದು, 10 ಮಂದಿ ಹಾನಿಗೊಳಗಾದ ಪ್ರದೇಶದಲ್ಲಿ ಸಿಲುಕಿಕೊಂಡಿಕೊಂಡಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ.

ಟರ್ಕಿಗೆ ಉದ್ಯಮ ಪ್ರವಾಸ ಕೈಗೊಂಡಿರುವ ಬೆಂಗಳೂರು ಮೂಲದ ಕಂಪನಿಯ ಸಿಬ್ಬಂದಿ ಕಾಣೆಯಾಗಿದ್ದಾರೆ. 10 ಮಂದಿ ಸಿಲುಕಿಕೊಂಡಿದ್ದಾರೆ. ಅವರೆಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ (ಪಶ್ಚಿಮ) ಸಂಜಯ್ ವರ್ಮಾ ತಿಳಿಸಿದ್ದಾರೆ.

ಕಾಣೆಯಾದ ವ್ಯಕ್ತಿಯ ಕುಟುಂಬ ಮತ್ತು ಕಂಪನಿಯ ಜತೆ ನಮ್ಮ ಅಧಿಕಾರಿಗಳು ಸಂಪರ್ಕದಲ್ಲಿದ್ದಾರೆ ಎಂದು ಅವರು ಹೇಳಿದ್ದಾರೆ.

ಭೂಕಂಪ ಪೀಡಿತ ಸಂತ್ರಸ್ತರ ನೆರವಿಗೆ 'ಆಪರೇಷನ್ ದೋಸ್ತ್', ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದೆ. ಅದನಾದಲ್ಲಿ ಸಹಾಯವಾಣಿ ಕೇಂದ್ರ ತೆರೆಯಲಾಗಿದೆ. ಮೂವರು ಭಾರತೀಯರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಗಿದೆ ಎಂದು ಅವರು ಹೇಳಿದರು.

ಇದುವರೆಗೆ ರಾಯಭಾರ ಕಚೇರಿಗೆ ಮಾಹಿತಿ ಹಾಗೂ ಸಹಾಯವನ್ನು ಕೋರಿ 75 ಮಂದಿ ಕರೆ ಮಾಡಿದ್ದಾರೆ ಎಂದು ಹೇಳಿದರು.

ಅಧಿಕೃತ ಮಾಹಿತಿಯ ಪ್ರಕಾರ, ಟರ್ಕಿಯಲ್ಲಿ ಸುಮಾರು 3,000 ಭಾರತೀಯರು ನೆಲೆಸಿದ್ದಾರೆ. ಇಸ್ತಾನ್‌ಬುಲ್‌ನಲ್ಲಿ ಅಂದಾಜು 1,800, ಅಂಕಾರಾದಲ್ಲಿ 250 ಮತ್ತು ಉಳಿದವರು ದೇಶದ ವಿವಿಧ ಭಾಗಗಳಲ್ಲಿ ವಾಸಿಸುತ್ತಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದುವರೆಗೆ ವೈದ್ಯಕೀಯ ನೆರವು, ಔಷಧ, ರಕ್ಷಣಾ ಸಿಬ್ಬಂದಿ ತಂಡ ಹಾಗೂ ಪರಿಹಾರ ಸಾಮಗ್ರಿಗಳನ್ನು ಒಳಗೊಂಡ ಭಾರತೀಯ ವಾಯುಪಡೆಯ ಬೃಹತ್ ಗಾತ್ರದ ಆರು ವಿಮಾನಗಳನ್ನು ಟರ್ಕಿಗೆ ರವಾನಿಸಲಾಗಿದೆ. ಆರು ಟನ್ ಪರಿಹಾರ ಸಾಮಗ್ರಿಗಳನ್ನು ಹೊತ್ತ ಭಾರತೀಯ ವಾಯುಪಡೆಯ ಮತ್ತೊಂದು ಸಿ-130 ಜೆ ವಿಮಾನ ಸಿರಿಯಾಕ್ಕೆ ತೆರಳಿದೆ.

ಸಿರಿಯಾ ಮೇಲೆ ಅಮೆರಿಕ ನಿರ್ಬಂಧದ ಹೊರತಾಗಿಯೂ ಭಾರತದ ನೆರವಿನ ಬಗ್ಗೆ ಕೇಳಿದಾಗ, ಭಾರತವು ಜಿ20ಯ 'ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ' ಮಂತ್ರವನ್ನು ಅನುಸರಿಸುತ್ತದೆ. ಮಾನವೀಯತೆಯ ನೆರವಿಗೆ ನಿರ್ಬಂಧ ಬಾಧಕವಲ್ಲ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT