ಶುಕ್ರವಾರ, ಅಕ್ಟೋಬರ್ 30, 2020
27 °C

ಕೋವಿಡ್–19: ಜಾನ್ಸನ್ & ಜಾನ್ಸನ್‌ನಿಂದ ಲಸಿಕೆಯ ಅಂತಿಮ ಹಂತದ ಪ್ರಯೋಗ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್‌: ಕೋವಿಡ್–19ಗೆ ಲಸಿಕೆ ಕಂಡು ಹಿಡಿಯಲು ಜಗತ್ತಿನಾದ್ಯಂತ ಸಾಕಷ್ಟು ಪ್ರಯೋಗಗಳು ನಡೆಯುತ್ತಿವೆ. ಈ ನಡುವೆ ಅಮೆರಿಕ ಮೂಲದ ಜಾನ್ಸನ್ ಮತ್ತು ಜಾನ್ಸನ್ (ಜೆ & ಜೆ) ಕಂಪೆನಿಯು ವ್ಯಕ್ತಿಗೆ ಒಮ್ಮೆ ನೀಡಿದರೆ ಸೋಂಕು ಬಾರದಂತೆ ತಡೆಯುವ ಲಸಿಕೆಯ (ಸಿಂಗಲ್‌ ಶಾಟ್‌ ವ್ಯಾಕ್ಸಿನ್‌) ಮೂರನೇ ಹಾಗೂ ಅಂತಿಮ ಹಂತದ ಪರೀಕ್ಷೆಯನ್ನು 60 ಸಾವಿರ ಜನರು ಮೇಲೆ ಬುಧವಾರ ಆರಂಭಿಸಿದೆ.

ರಾಷ್ಟ್ರೀಯ ಆರೋಗ್ಯ ಸಂಸ್ಥೆ ಮತ್ತು ಟ್ರಂಪ್‌ ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಜೆ & ಜೆ ಸಂಸ್ಥೆಯ ಮುಖ್ಯ ವೈಜ್ಞಾನಿಕ ಅಧಿಕಾರಿ ಡಾ. ಪೌಲ್ ಸ್ಟೋಫೆಲ್ಸ್ ಅವರು ಪರೀಕ್ಷೆಯ ವರದಿಯನ್ನು ಈ ವರ್ಷದ ಅಂತ್ಯದ ವೇಳೆಗೆ ಅಥವಾ ಮುಂದಿನ ವರ್ಷದ ಆರಂಭದಲ್ಲಿ ನಿರೀಕ್ಷಿಸಲಾಗುವುದು ಎಂದಿದ್ದಾರೆ.

‘ವ್ಯಕ್ತಿಗೆ ಒಮ್ಮೆ ನೀಡಿದರೆ ಸೋಂಕು ಬಾರದಂತೆ ತಡೆಯುವ ಲಸಿಕೆಯ ಪ್ರಯೋಗವು ಸಾಮೂಹಿಕ ರೋಗನಿರೋಧಕ ಅಭಿಯಾನ ಮತ್ತು ಜಾಗತಿಕ ಸಾಂಕ್ರಾಮಿಕ ಪಿಡುಗಿನ ನಿಯಂತ್ರಣದ ದೃಷ್ಟಿಯಿಂದ ತುಂಬಾ ಮುಖ್ಯವಾಗುತ್ತದೆ’ ಎಂದು ಜೆ & ಜೆ ಜೊತೆಗೆ ಕೋವಿಡ್‌–19 ಲಸಿಕೆ ಸಂಶೋದನೆಯಲ್ಲಿ ಭಾಗಿಯಾಗಿದ್ದ ಹಾರ್ವರ್ಡ್ ಲಸಿಕೆ ಸಂಶೋಧಕ ಡಾ. ಡ್ಯಾನ್ ಬರೂಚ್ ಹೇಳಿದ್ದಾರೆ.

ಬುಧವಾರ ಲಸಿಕೆಯ ಪ್ರಯೋಗ ಆರಂಭವಾದ ಬಳಿಕ ಕಂಪೆನಿಯ ಷೇರು ಮೌಲ್ಯ ಸುಮಾರು ಶೇ.2ರಷ್ಟು ಏರಿಕೆಯಾಗಿದೆ. ಇದೇ ವೇಳೆ ಮಾಡೆರ್ನಾ, ಫಿಜೆರ್‌ ಮತ್ತು ಅಸ್ಟ್ರಾಜೆನೆಕಾ ಕಂಪೆನಿಗಳೂ ಪರೀಕ್ಷೆ ಆರಂಭಿಸಿವೆ. ಆದರೆ ಇವು ಒಂದುಕ್ಕಿಂತ ಹೆಚ್ಚು ಬಾರಿ ಪ್ರಯೋಗಿಸುವ ಲಸಿಕೆಯಾಗಿರುವುದರಿಂದ ಫಲಿತಾಂಶಕ್ಕಾಗಿ ಸಾಕಷ್ಟು ಸಮಯ ಬೇಕಾಗಬಹುದು.

‘ದೊಡ್ಡ ಸುದ್ದಿ. ಹಲವು ದೊಡ್ಡದೊಡ್ಡ ಕಂಪೆನಿಗಳು ಅಧ್ಬುತವಾದ ಫಲಿತಾಂಶಗಳನ್ನು ಎದುರು ನೋಡುತ್ತಿವೆ. ಎಫ್‌ಡಿಎ (ಆಹಾರ ಮತ್ತು ಔಷಧ ಆಡಳಿತ) ಶೀಘ್ರವೇ ಈ ನಿಟ್ಟಿನಲ್ಲಿ ಸಾಗಬೇಕು’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಟ್ವೀಟ್‌ ಮಾಡಿದ್ದಾರೆ.

ಯುಎಸ್‌ ಹಾಗೂ ಬೆಲ್ಜಿಯಂನಲ್ಲಿ ನಡೆಸಿದ ಮೊದಲ ಮತ್ತು ಎರಡನೇ ಹಂತದ ಪ್ರಯೊಗದ ಫಲಿತಾಂಶವು ಸಕಾರಾತ್ಮಕವಾಗಿ ಮೂಡಿ ಬಂದ ಬಳಿಕ 3ನೇ ಹಂತದ ಪ್ರಯೋಗ ಆರಂಭಿಸಲಾಗಿದೆ ಎಂದು ಸ್ಟೋಫೆಲ್ಸ್‌ ಹೇಳಿದ್ದಾರೆ. ಕಂಪೆನಿಯು 1 ಮತ್ತು 2ನೇ ಹಂತದ ಫಲಿತಾಂಶದ ವರದಿಯನ್ನು ಶೀಘ್ರವೇ ಬಿಡುಗಡೆ ಮಾಡಲಿದೆ ಎಂದೂ ತಿಳಿಸಿದ್ದಾರೆ.

ತನ್ನ 3 ನೇ ಹಂತದ ಪ್ರಯೋಗದ ಬಗೆಗಿನ ವಿವರವನ್ನು ಕಂಪನಿಯು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. 

‘ಲಸಿಕೆಯ ಒಂದೇ ಡೋಸ್‌ ಸಾಕಷ್ಟು ಕಾಲದವರೆಗೆ ರಕ್ಷಣೆ ನೀಡುತ್ತದೆ ಎಂಬುದನ್ನು ಅಧ್ಯಯನದ ವರದಿಗಳು ತೋರಿಸಿಕೊಟ್ಟಿವೆ. ಕೊನೆಯ ಹಂತದ ಪ್ರಯೋಗವನ್ನು ಯುಎಸ್‌, ದಕ್ಷಿಣ ಆಫ್ರಿಕಾ, ಅರ್ಜೆಂಟೀನಾ, ಬ್ರೆಜಿಲ್, ಚಿಲಿ, ಕೊಲಂಬಿಯಾ, ಮೆಕ್ಸಿಕೊ ಮತ್ತು ಪೆರುವಿನ ಸುಮಾರು 215 ಕಡೆಗಳನ್ನು ನಡೆಸಲು ಯೋಜಿಸಲಾಗಿದೆ. 2021ರ ವೇಳೆಗೆ ಸುಮಾರು 100 ಕೋಟಿ ಡೋಸ್‌ ಲಸಿಕೆ ತಯಾರಿಸಲು ಕಂಪೆನಿ ಯೋಜಿಸಿದೆ. ಬಳಿಕ ಅಗತ್ಯಾನುಸಾರ ಮತ್ತಷ್ಟನ್ನು ಉತ್ಪಾದಿಸಲಾಗುವುದು’ ಎಂದು ತಿಳಿಸಿದೆ.

ಈ ಲಸಿಕೆಯ ಒಂದು ಡೋಸ್‌ನಿಂದ ಕೋವಿಡ್–29 ಸೋಂಕನ್ನು ತಡೆಯಬಹುದೇ ಎಂಬುದನ್ನು ತಿಳಿಯುವುದು ಪ್ರಯೋಗದ ಗುರಿಯಾಗಿದೆ. ಜೊತೆಗೆ ಇದು ಗಂಭೀರ ಸ್ಥಿತಿಯಲ್ಲಿರುವ ಸೋಂಕಿತರನ್ನೂ ಗುಣಪಡಿಸಬಲ್ಲುದೇ ಅಥವಾ ಆರಂಭಿಕ ಹಂತದಲ್ಲಿರುವ ಸೋಂಕಿತರನ್ನು ಮಾತ್ರವೇ ಗುಣಪಡಿಸುವುದೇ ಎಂಬುದನ್ನೂ ತಿಳಿಯಲಾಗುವುದು ಎನ್ನಲಾಗಿದೆ.

ಪ್ರಯೋಗವು ಸುಮಾರು ಆರು ವಾರದಿಂದ ಎರಡು ತಿಂಗಳವರೆಗೆ ಸಮಯ ತೆಗೆದುಕೊಳ್ಳುತ್ತದೆ. ಕಂಪೆನಿಯ ಈ ಲಸಿಕೆ ವರ್ಷದ ಕೊನೆಯಲ್ಲಿ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಬಳಸುವ ಭರವಸೆಯಲ್ಲಿದೆ ಎಂದು ಸ್ಟೋಫೆಲ್ಸ್ ಹೆಳಿದ್ದಾರೆ.

ಕಂಪನಿಯು ಎಷ್ಟು ಬೇಗನ ಔಷಧ ನಿಯಂತ್ರಕದ ಅನುಮೋದನೆ ಪಡೆಯಬಹುದು ಎಂಬುದು ಸ್ಪಷ್ಟವಾಗಿಲ್ಲ. ಆದರೆ, ಅನುಮೋದನೆಗೂ ಮೊದಲೇ ಲಸಿಕೆ ತಯಾರಿಸಲು ಜೆ & ಜೆ ಯೋಜಿಸಿದೆ. ಹಾಗಾಗಿ ತ್ವರಿತವಾಗಿ ವಿತರಣೆ ಸಾಧ್ಯವಾಗಲಿದೆ ಎನ್ನಲಾಗಿದೆ.

ಲಸಿಕೆಗಳ ಸುರಕ್ಷತೆ ಮತ್ತು ಪರಿಣಾಮಕಾರಿತ್ವವನ್ನು ಪರಿಶೀಲಿಸುವ ಸ್ವತಂತ್ರ ಅಂಕಿ–ಅಂಶ ಮತ್ತು ಸುರಕ್ಷತಾ ಮೇಲ್ವಿಚಾರಣೆ ಮಂಡಳಿಯು (ಡಿಎಸ್‌ಎಂಬಿ) ಈ ಪ್ರಯೋಗವನ್ನು ನೋಡಿಕೊಳ್ಳಲಿದೆ.

ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಾಗಿದ್ದ ರಾಷ್ಟ್ರೀಯ ಆರೋಗ್ಯ ಕೇಂದ್ರದ ನಿರ್ದೇಶಕ ಡಾ. ಫ್ರಾನ್ಸಿಸ್‌ ಕಾಲಿನ್ಸ್‌, ಯುಎಸ್‌ ಸರ್ಕಾರದ ವಾರ್ಪ್‌ ಸ್ಪೀಡ್‌ ಆಪರೇಷನ್‌, ಜೆ & ಜೆ ಮತ್ತು ಮಾಡೆರ್ನಾ ಹಾಗೂ ಅಸ್ಟ್ರಾಜೆನೆಕಾ ಜಂಟಿಯಾಗಿ ಡಿಎಸ್‌ಎಂಬಿ ಮಾರ್ಗಸೂಚಿಯಂತೆ ಈ ಪ್ರಯೋಗ ನಡೆಸುತ್ತಿವೆ. ಫಿಜೆರ್ ಪ್ರತ್ಯೇಕವಾಗಿ ಪ್ರಯೋಗ ನಡೆಸಲಿದೆ ಎಂದು ಮಾಹಿತಿ ನೀಡಿದ್ದಾರೆ.

ಸ್ಟೋಫೆಲ್ಸ್ ಹೇಳುವಂತೆ, ಪ್ರಯೋಗಕ್ಕೊಳಗಾದವರ ಆರೋಗ್ಯ ಸ್ಥಿತಿಯ ಬಗ್ಗೆ ಲಸಿಕೆ ಹಾಕಿದ 15 ದಿನಗಳ ಬಳಿಕ ಅವಲೋಕನ ನಡೆಸಲಾಗುವುದು. ಮೊದಲು ಡಿಎಸ್‌ಎಂಬಿಯು ಲಸಿಕೆಯ ಪರಿಣಾಮಕಾರಿತ್ವವನ್ನು ಪರೀಕ್ಷಿಸಲಿದೆ.

ಡಿಎಸ್‌ಎಂಬಿಯಲ್ಲಿ ಯುಎಸ್ ಸರ್ಕಾರದ ಯಾವುದೇ ಅಧಿಕಾರಿಗಳು ಇಲ್ಲ. ಅದರಲ್ಲಿ ಅತ್ಯಂತ ಅನುಭವಿ ವಿಜ್ಞಾನಿಗಳು ಮತ್ತು ತಜ್ಞರಿದ್ದಾರೆ ಎಂದು ಕಾಲಿನ್ಸ್‌ ಸ್ಪಷ್ಟಪಡಿಸಿದ್ದಾರೆ. ‘ಪ್ರಯೋಗದ ಬಗ್ಗೆ ವಿಜ್ಞಾನಿಗಳಿಗೆ ಭರವಸೆ ಮೂಡುವವರೆಗೂ ಯಾವುದಕ್ಕೂ ನಿರ್ಬಂಧ ಹೇರುವುದಿಲ್ಲ. ಅಲ್ಲಿರುವ ಪ್ರತಿಯೊಬ್ಬರೂ ಸಾಕಷ್ಟು ಆತ್ಮವಿಶ್ವಾಸದಿಂದ ಇರಬೇಕು’ ಎಂದೂ ಕಾಲಿನ್ಸ್ ಹೇಳಿದ್ದಾರೆ.

ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ಚಟುವಟಿಕೆಗಳು ರಂಗೇರಿವೆ. ಹೀಗಾಗಿ ಲಸಿಕೆ ಪ್ರಯೋಗವನ್ನು ಶೀಘ್ರವೇ ಪೂರ್ಣಗೊಳಿಸಬೇಕೆಂದು ಟ್ರಂಪ್‌ ಸರ್ಕಾರವು ವಿಜ್ಞಾನಿಗಳ ಮೇಲೆ ಒತ್ತಡ ಹೇರಬಹುದು ಎಂಬುದು ಕಾಲಿನ್ಸ್‌ ಹೇಳಿಕೆ ಹಿಂದಿನ ಅರ್ಥ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು