ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೈವಿಕ ಅಸ್ತ್ರವಾಗಿ ಕೋವಿಡ್ ಅನ್ವೇಷಣೆ: ವರದಿ ಅಲ್ಲಗಳೆದ ಚೀನಾ

Last Updated 10 ಮೇ 2021, 15:19 IST
ಅಕ್ಷರ ಗಾತ್ರ

ಬೀಜಿಂಗ್‌: ‘ಜೈವಿಕ ಅಸ್ತ್ರವಾಗಿ ಬಳಸಲು 2015ರಲ್ಲಿಯೇ ಚೀನಾದ ಸೇನಾ ವಿಜ್ಞಾನಿಗಳುಕೊರೊನಾ ಸೋಂಕು ಅನ್ವೇಷಿಸಿದ್ದರು’ ಎಂಬ ಮಾಧ್ಯಮ ವರದಿಗಳನ್ನು ‘ಸಾರಾಸಗಟು ಸುಳ್ಳು‘ ಎಂದು ಚೀನಾ ತಳ್ಳಿಹಾಕಿದೆ. ಇದು, ದೇಶದ ಬಲ ಕುಗ್ಗಿಸುವ ಅಮೆರಿಕದ ಯತ್ನವಾಗಿದೆ ಎಂದೂ ಹೇಳಿದೆ.

ಚೀನಾದ ಸೇನಾ ವಿಜ್ಞಾನಿಗಳು ಮತ್ತು ಸಾರ್ವಜನಿಕ ಆರೋಗ್ಯ ಕ್ಷೇತ್ರದ ಹಿರಿಯ ಅಧಿಕಾರಿಗಳು 2015ರಲ್ಲಿ ಬರೆದಿದ್ದರು ಎನ್ನಲಾದ ‘ಸ್ಫೋಟಕ’ ದಾಖಲೆಗಳನ್ನು, ಕೋವಿಡ್‌ ತನಿಖೆಯ ಭಾಗವಾಗಿ ಅಮೆರಿಕ ವಶಪಡಿಸಿಕೊಂಡಿದೆ ಎನ್ನಲಾಗಿತ್ತು.

ಈ ದಾಖಲೆಗಳನ್ನು ಉಲ್ಲೇಖಿಸಿದ್ದ ವರದಿಗಳ ಪ್ರಕಾರ, ಚೀನಾದ ಪೀಪಲ್ಸ್‌ ಲಿಬರೇಷನ್ ಆರ್ಮಿ (ಪಿಎಲ್‌ಎ) ಜೈವಿಕ ಅಸ್ತ್ರವಾಗಿ ಬಳಸಲು ಕೊರೊನಾ ವೈರಸ್ ಅನ್ನು ಐದು ವರ್ಷಗಳ ಹಿಂದೆಯೇ ಅನ್ವೇಷಿಸಿತ್ತು. ಜೈವಿಕ ಶಸ್ತ್ರಾಸ್ತ್ರ ಬಳಸಿಯೇ ಮೂರನೇ ವಿಶ್ವಯುದ್ಧ ನಡೆಯಲಿದೆ ಎಂದು ಪಿಎಲ್ಎ ಅಂದಾಜಿಸಿತ್ತು.

‘ಇದು ಅಪ್ರಸ್ತುತ ವರದಿ. ಚೀನಾಗೆ ಕೆಟ್ಟ ಹೆಸರು ತರಲು ಅಮೆರಿಕದ ಕೆಲವರು ಆಂತರಿಕ ದಾಖಲೆ ಎನ್ನಲಾದ ಕೆಲವನ್ನು ಇಟ್ಟುಕೊಂಡು ಆಟವಾಡುತ್ತಿದ್ದಾರೆ. ವಾಸ್ತವವೆಂದರೆ ಅವರು ತಪ್ಪಾಗಿ ಅವುಗಳನ್ನು ವ್ಯಾಖ್ಯಾನ ಮಾಡಿದ್ದಾರೆ, ಸುಳ್ಳು ಹೇಳುತ್ತಿದ್ದಾರೆ’ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಹುವಾ ಚುನ್‌ಯಿಂಗ್ ಮಾಧ್ಯಮಗಳಿಗೆ ತಿಳಿಸಿದರು.

‘ದ ಆಸ್ಟ್ರೇಲಿಯನ್‌‘ ವರದಿ ಅನ್ನು ಉಲ್ಲೇಖಿಸಿ, ಇಂಗ್ಲೆಂಡ್‌ ಮೂಲದ ‘ದ ಸನ್‌’ ಪತ್ರಿಕೆಯು, ‘ಚೀನಾದ ವಿಜ್ಞಾನಿಗಳು ಸಾರ್ಸ್‌ ಕೊರೊನಾ ವೈರಸ್‌ ಎಂದು ವರ್ಣಿಸಿದ್ದರು. ಅವುಗಳಲ್ಲಿ ಕೋವಿಡ್‌ ಒಂದು ಉದಾಹರಣೆ. ಇದು, ಜೈವಿಕ ಶಸ್ತ್ರಾಸ್ತ್ರಗಳ ಹೊಸ ಯುಗ‘ ಎಂದು ವರದಿ ಮಾಡಿತ್ತು.

‘ಕೊರೊನಾ ವೈರಸ್‌ ಎಂಬುದು ಸೋಂಕುಗಳ ಒಂದು ಬೃಹತ್ ಸಮೂಹ. ಇವುಗಳಲ್ಲಿ ಅನೇಕ ಸೋಂಕುಗಳು ಮಾನವನಿಗೆ ರೋಗ, ರುಜಿನ ತರುತ್ತವೆ. ಇವುಗಳಲ್ಲಿ ಸಾಮಾನ್ಯ ನೆಗಡಿ, ಶೀತದಿಂದ ಗಂಭೀರ ಸ್ವರೂಪದ ಉಸಿರಾಟದ ಸಮಸ್ಯೆಗಳವರೆಗೂ ಇವೆ ಎಂದೂ ವರದಿ ತಿಳಿಸಿತ್ತು.

ಸರ್ಕಾರದ ಗ್ಲೋಬಲ್‌ ಟೈಮ್ಸ್‌ನಲ್ಲಿ ಪ್ರಕಟವಾಗಿದ್ದ ವರದಿಯನ್ನು ಉಲ್ಲೇಖಿಸಿದ ಹುವಾ, ’ಅಮೆರಿಕವು ಉಲ್ಲೇಖಿಸಿರುವ ದಾಖಲೆಗಳು ಪಿಎಲ್ಎ ಆಂತರಿಕ ದಾಖಲೆಗಳು ಅಲ್ಲ. ಅದು ಸಾರ್ವಜನಿಕವಾಗಿ ಪ್ರಕಟಿಸಲಾದ ಶೈಕ್ಷಣಿಕ ಪುಸ್ತಕ‘ ಎಂದು ಹೇಳಿದರು.

‘ಈ ಪುಸ್ತಕದಲ್ಲಿ ಅಮೆರಿಕದ ವಾಯುಪಡೆ ಮಾಜಿ ಕರ್ನಲ್‌ ಮೈಕೇಲ್‌ ಜೆ.ಐನ್ಸ್‌ಕಾಫ್‌ ಅವರು, ಹೊಸ ಪೀಳಿಗೆಯ ಜೈವಿಕ ಶಸ್ತ್ರಾಸ್ತ್ರಗಳು ಅಮೆರಿಕದ ಕಾರ್ಯಕ್ರಮದ ಭಾಗವಾಗಿರುತ್ತವೆ. ಇವುಗಳನ್ನು ಸಮೂಹದ ನಾಶಕ್ಕೆ ಬಳಕೆ ಮಾಡಲಾಗುತ್ತದೆ ಎಂದು ಹೇಳಿದ್ದರು’ ಎಂದು ಹುವಾ ಪ್ರತಿಪಾದಿಸಿದರು.

ಆ ಪ್ರಕಾರ, ಅಮೆರಿಕವೇ ಜೈವಿಕ ಯುದ್ಧ ಕುರಿತು ಸಂಶೋಧನೆ ಕೈಗೊಂಡಿದೆ ಎಂದರು. ಅಲ್ಲದೆ, ಅಮೆರಿಕವು ವಿದೇಶಗಳಲ್ಲಿ ಈ ಕುರಿತ ಸಂಶೋಧನೆಗೆ ನೂರಾರು ಜೈವಿಕ ಪ್ರಯೋಗಾಲಯಗಳನ್ನು ಒಳಗೊಂಡಿದೆ ಎಂದೂ ಆರೋಪಿಸಿರು.

ಜೈವಿಕ ಶಸ್ತ್ರಾಸ್ತ್ರಗಳ ಸಮಾವೇಶದ (ಬಿಡಬ್ಲ್ಯೂಸಿ) ತೀರ್ಮಾನಗಳಿಗೆ ಚೀನಾ ಎಂದಿಗೂ ಬದ್ಧವಾಗಿದೆ. ನಾವು ಜೈವಿಕ ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸುತ್ತಿಲ್ಲ. ಅಲ್ಲದೆ, ಜೈವಿಕ ಪ್ರಯೋಗಾಲಯಗಳ ಸುರಕ್ಷತೆಗೆ ನಾವು ಕಠಿಣವಾದ ಕಾನೂನುಗಳನ್ನು ರೂಪಿಸಿಕೊಂಡಿದ್ದೇವೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT