ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಸ್ಲಿಂ ರಾಷ್ಟ್ರಗಳ ಪ್ರವಾಸಿಗರನ್ನು ಪಾಕ್‌ ಆಕರ್ಷಿಸಬಲ್ಲುದು: ಇಮ್ರಾನ್ ಖಾನ್‌

Last Updated 11 ಆಗಸ್ಟ್ 2021, 6:43 IST
ಅಕ್ಷರ ಗಾತ್ರ

ಕರಾಚಿ: ಪಾಕಿಸ್ತಾನಕ್ಕೆ ಮುಸ್ಲಿಂ ರಾಷ್ಟ್ರಗಳ ಪ್ರವಾಸಿಗರನ್ನು ಸೆಳೆಯುವ ಸಾಮರ್ಥ್ಯವಿದ್ದು, ಪ್ರವಾಸಿಗರನ್ನು ಆಕರ್ಷಿಸುವುಕ್ಕಾಗಿ ಸರ್ಕಾರ ದೇಶದ ವಿವಿಧ ತಾಣಗಳಲ್ಲಿ ಅತ್ಯುತ್ತಮ ರೆಸಾರ್ಟ್‌ಗಳನ್ನು ನಿರ್ಮಿಸಲು ಯೋಜನೆ ರೂಪಿಸುತ್ತಿದೆ ಎಂದು ಪ್ರಧಾನಿ ಇಮ್ರಾನ್‌ ಖಾನ್ ಹೇಳಿದರು.

ಒಂದು ದಿನದ ಭೇಟಿಗಾಗಿ ಕರಾಚಿಗೆ ಆಗಮಿಸಿದ ಇಮ್ರಾನ್‌ ಖಾನ್‌ ಕಾರ್ಯಕ್ರಮವೊಂದರಲ್ಲಿ ಮಾತನಾಡಿ, ‘ಮುಸ್ಲಿಂ ದೇಶಗಳ ಪ್ರವಾಸಿಗರನ್ನು ಆಕರ್ಷಿಸುವುದಕ್ಕಾಗಿ ದೇಶದ ವಿವಿಧ ಪ್ರವಾಸಿ ತಾಣಗಳಲ್ಲಿ ರೆಸಾರ್ಟ್‌ಗಳಂತಹ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ‘ ಎಂದು ಹೇಳಿದರು.

‘ಈ ಹಿಂದೆ, ನಮ್ಮ ಜನರು ರಜಾ ದಿನಗಳನ್ನು ಕಳೆಯಲು ಯೂರೋಪ್‌ ಸೇರಿದಂತೆ ವಿಶ್ವದ ಹಲವು ಪ್ರಮುಖ ರಾಷ್ಟ್ರಗಳಿಗೆ ತೆರಳುತ್ತಿದ್ದರು. ಆದರೆ ಅಲ್ಲೆಲ್ಲಾ ಈಗ ಮುಸ್ಲಿಂ ಸಮುದಾಯದವರ ವಿರುದ್ಧ ತಾರತಮ್ಯ ಧೋರಣೆಯ ಮನಸ್ಥಿತಿ ಹೆಚ್ಚುತ್ತಿರುವ ಕಾರಣ, ಆ ದೇಶದ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಹಿಂಜರಿಯುತ್ತಿದ್ದಾರೆ. ಆದರೆ, ಪಾಕಿಸ್ತಾನದಂತಹ ರಾಷ್ಟ್ರ ಮುಸ್ಲಿಂ ದೇಶಗಳ ಪ್ರವಾಸಿಗರನ್ನು ಆಕರ್ಷಿಸುವ ಸಾಮರ್ಥ್ಯ ಹೊಂದಿದೆ‘ ಎಂದು ಅವರು ಹೇಳಿದರು.

‘ನಮ್ಮ ದೇಶದಲ್ಲಿ ಮುಸ್ಲಿಂ ದೇಶಗಳ ಪ್ರವಾಸಿಗರು ಇಷ್ಟಪಡುವಂತಹ ಪ್ರಸಿದ್ಧ ಪ್ರವಾಸಿ ತಾಣಗಳಿವೆ. ಇಲ್ಲಿಗೆ ಬರುವ ಪ್ರವಾಸಿಗರಿಗೆ ರೆಸಾರ್ಟ್‌ ಸೇರಿದಂತೆ ಅತ್ಯುತ್ತಮ ಸೌಲಭ್ಯಗಳನ್ನು ಒದಗಿಸಲು ನಮ್ಮ ಸರ್ಕಾರ ಸಿದ್ಧವಿದೆ‘ ಎಂದು ಅವರು ಹೇಳಿದರು.

ಇದೇ ವೇಳೆ ಹವಾಮಾನ ಬದಲಾವಣೆ ಕುರಿತು ಸೋಮವಾರ ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ ವರದಿಯ ಕುರಿತು ಮಾತನಾಡಿದ ಇಮ್ರಾನ್‌ ಖಾನ್‌, ‘ಹವಾಮಾನ ಬದಲಾವಣೆಯ ಪರಿಣಾಮದಿಂದ ರಕ್ಷಿಸಿಕೊಳ್ಳುತ್ತಿರುವ ಮುಂಚೂಣಿ ರಾಷ್ಟ್ರಗಳ ಪಟ್ಟಿಯಲ್ಲಿ ನಮ್ಮ ದೇಶವೂ ಇದೆ ಎಂಬುದು ಒಂದು ಹೆಮ್ಮೆಯ ವಿಷಯ‘ ಎಂದು ಹೇಳಿದರು.

ಹವಾಮಾನ ಬದಲಾವಣೆಯ ಪರಿಣಾಮದಿಂದಾಗಿ ಗ್ರೀಸ್, ಟರ್ಕಿ ಮತ್ತು ಅಮೆರಿಕ ಸೇರಿದಂತೆ ಹಲವಾರು ದೇಶಗಳಲ್ಲಿ ಕಾಳ್ಗಿಚ್ಚು ಸಂಭವಿಸಿದೆ. ಕೆಲವು ದೇಶಗಳಲ್ಲಿ ಪ್ರವಾಹ ಉಂಟಾಗಿದೆ ಎಂದು ಅವರು ಹೇಳಿದರು.

ಬಲೂಚಿಸ್ತಾನ ಪ್ರಾಂತ್ಯದಲ್ಲಿರುವ ಸೊನ್ಮಿಯಾನ್‌ನಲ್ಲಿರುವ ಮ್ಯಾಂಗ್ರೋವ್ ಕಾಡುಗಳು ಹೆಚ್ಚಿನ ಪ್ರಮಾಣದಲ್ಲಿ ಆಮ್ಲಜನಕ ಉತ್ಪಾದಿಸುತ್ತವೆ. ಅರಣ್ಯ ಪ್ರದೇಶಗಳೇ ಹವಾಮಾನ ಬದಲಾವಣೆ ನಿಯಂತ್ರಿಸಲು ಇರುವ ಅತ್ಯುತ್ತಮವಾದ ಪರಿಹಾರ ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT