ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್‌ ಆಕ್ರಮಿತ ಕಾಶ್ಮೀರ ಚುನಾವಣೆ: ಇಮ್ರಾನ್ ಖಾನ್‌ ನೇತೃತ್ವದ ಪಕ್ಷ ಮೇಲುಗೈ

Last Updated 26 ಜುಲೈ 2021, 6:15 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌: ‘ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಪ್ರಧಾನಿ ಇಮ್ರಾನ್‌ ಖಾನ್‌ ನೇತೃತ್ವದ ಪಾಕಿಸ್ತಾನ ತೆಹ್ರೀಕ್-ಇ-ಇನ್ಸಾಫ್ ಪಕ್ಷವು(ಪಿಟಿಐ) ಅತಿದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ್ದು ಸರ್ಕಾರ ರಚನೆಗೆ ಪಕ್ಷವು ಸಿದ್ಧತೆ ನಡೆಸುತ್ತಿದೆ’ ಎಂದು ಅಧಿಕೃತ ಫಲಿತಾಂಶ ಹೊರಬೀಳುವ ಮುನ್ನವೇ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

‘ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಪಿಟಿಐ ಪಕ್ಷವು 23 ಸ್ಥಾನಗಳನ್ನು ಗೆದ್ದರೆ, ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ) 8 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) 6 ಸ್ಥಾನಗಳಲ್ಲಿ ತನ್ನದಾಗಿಸಿಕೊಂಡಿದೆ’ ಎಂದು ಸರ್ಕಾರಿ ಮಾಲೀಕತ್ವದ ರೇಡಿಯೊ ಪಾಕಿಸ್ತಾನ ವರದಿ ಮಾಡಿದೆ.

ಮುಸ್ಲಿಂ ಕಾನ್ಫರೆನ್ಸ್‌(ಎಂಸಿ), ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್‌ ಪಾರ್ಟಿ(ಜೆಕೆಪಿಪಿ) ತಲಾ ಒಂದು ಸ್ಥಾನವನ್ನು ಗೆದ್ದಿದೆ.

ಆದರೆ ಜಿಯೊ ಟಿವಿ ವರದಿ ಪ್ರಕಾರ, ಪಿಟಿಐ ಪಕ್ಷವು 25 ಸ್ಥಾನಗಳು, ಪಾಕಿಸ್ತಾನ ಪೀಪಲ್ಸ್ ಪಾರ್ಟಿಯು 9 ಸ್ಥಾನಗಳು, ಪಿಎಂಎಲ್‌–ಎನ್‌ ಪಕ್ಷವು 6 ಸ್ಥಾನಗಳು, ಎಂಸಿ ಹಾಗೂ ಜೆಕೆಪಿಪಿಯು ತಲಾ ಒಂದು ಸ್ಥಾನವನ್ನು ಪಡೆದಿದೆ.

ಪಾಕಿಸ್ತಾನ ಆಕ್ರಮಿಕ ಕಾಶ್ಮೀರಲ್ಲಿ ಪಿಟಿಐಯು ಯಾವುದೇ ಪಕ್ಷದ ಬೆಂಬಲವಿಲ್ಲದೇ ಸರಳ ಬಹುಮತವನ್ನು ಗಳಿಸಿದೆ. ಇದೇ ಮೊದಲ ಬಾರಿ ಪಕ್ಷವು ಇಲ್ಲಿ ಸರ್ಕಾರ ರಚಿಸಲಿದೆ ಎಂದು ಹೇಳಲಾಗಿದೆ.

‘ಈ ಚುನಾವಣೆಯಲ್ಲಿ ವಂಚನೆ ನಡೆದಿದೆ. ಇದಕ್ಕೆ ಸಾಕ್ಷ್ಯಾಧಾರಗಳು ಇವೆ’ ಎಂದು ಪಿಪಿಪಿಯ ಉಪಾಧ್ಯಕ್ಷೆ ಶೆರಿ ರೆಹಮಾನ್‌ ದೂರಿದ್ದಾರೆ.

‘ಮತದಾನದ ವೇಳೆ ಪಿಟಿಐ ಕಾರ್ಯಕರ್ತರು ಪಿಪಿಪಿ ಕಾರ್ಯಕರ್ತರ ಮೇಲೆ ದಾಳಿ ನಡೆಸಿದ್ದಾರೆ.ಹಲವಾರು ಮತಗಟ್ಟೆಗಳಲ್ಲಿ ಮತದಾರರ ಪಟ್ಟಿಯಲ್ಲಿ ವ್ಯತ್ಯಾಸಗಳಿದ್ದವು’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT