ಗುರುವಾರ , ಸೆಪ್ಟೆಂಬರ್ 23, 2021
20 °C

ಅಫ್ಗಾನಿಸ್ತಾನ ದುರ್ಬಲಗೊಳ್ಳಬೇಕೆಂಬುದು ಪಾಕಿಸ್ತಾನದ ಬಯಕೆ: ಫ್ಯಾಬಿಯನ್ ಬೌಸರ್ಟ್

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಇಸ್ಲಾಮಾಬಾದ್:‌ ಅಫ್ಗಾನಿಸ್ತಾನಕ್ಕೆ ಉಗ್ರರು ಒಳನುಸುಳುವುದನ್ನು ತಪ್ಪಿಸಲು ಯಾವುದೇ ಕ್ರಮ ಕೈಗೊಳ್ಳದ ಪಾಕಿಸ್ತಾನ, ನೆರೆಯ ರಾಷ್ಟ್ರ ʼಅಶಕ್ತ, ದುರ್ಬಲ ಹಾಗೂ ವಿಭಜನೆʼಗೊಳ್ಳುವುದನ್ನು ಬಯಸುತ್ತಿದೆ ಎಂದು ರಾಜಕೀಯ ಮತ್ತು ವಿದೇಶಾಂಗ ವ್ಯವಹಾರಗಳ ಕೇಂದ್ರದ ಅಧ್ಯಕ್ಷ ಫ್ಯಾಬಿಯನ್ ಬೌಸರ್ಟ್ ಹೇಳಿದ್ದಾರೆ.

ಟೈಮ್ಸ್‌ ಆಫ್‌ ಇಸ್ರೇಲ್‌ಗೆ ಬರೆದಿರುವ ಲೇಖನದಲ್ಲಿ ಬೌಸರ್ಟ್‌ ಅವರು, ಅಫ್ಗಾನಿಸ್ತಾನದ ಸದ್ಯದ ಸ್ಥಿತಿಯನ್ನು ಭೌಗೋಳಿಕ ಮತ್ತು ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲು ಪಾಕಿಸ್ತಾನ ಪ್ರಯತ್ನಿಸುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಮುಂದುವರಿದು, ಪಾಕಿಸ್ತಾನವು ತಾಲಿಬಾನ್‌ ಸಂಘಟನೆಯನ್ನು ಬೆಂಬಲಿಸುತ್ತಿದ್ದು, ತನ್ನ ನೆಲದಲ್ಲಿ ಕಾರ್ಯಾಚರಿಸಲು ಉಗ್ರರಿಗೆ ಅವಕಾಶ ನೀಡುತ್ತಿದೆ. ಇದು ಅಫ್ಗಾನಿಸ್ತಾನದ ಚಿಂತೆಗೆ ಕಾರಣವಾಗಿದೆ ಎಂದೂ ಉಲ್ಲೇಖಿಸಿದ್ದಾರೆ.

ವಿಶ್ವಸಂಸ್ಥೆಯಲ್ಲಿನ ಅಫ್ಗಾನಿಸ್ತಾನದ ರಾಯಭಾರಿ ಗುಲಾಂ ಇಸಾಜೈ ಅವರು, ಪಾಕಿಸ್ತಾನವು ತಾಲಿಬಾನ್‌ಗೆ ನೆರವು ನೀಡುತ್ತಿದೆ ಎಂಬುದುನ್ನು ಖಾತ್ರಿಪಡಿಸಲು ಪೂರಕವಾದ ಸಾಕ್ಯ್ಷಗಳನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ನೀಡಲು ಅಫ್ಗಾನ್ ಸರ್ಕಾರ ಸಿದ್ಧವಿದೆ ಎಂದು‌ ಶುಕ್ರವಾರ ತಿಳಿಸಿದ್ದರು.

ಇದನ್ನೂ ಓದಿ: 

ಅಮೆರಿಕವು ಅಫ್ಗಾನಿಸ್ತಾನದಲ್ಲಿ ನಿಯೋಜಿಸಿದ್ದ ತನ್ನ ಸೇನೆಯನ್ನು ಹಿಂಪಡೆದ ಕೆಲವೇ ದಿನಗಳ ಬಳಿಕ, ತಾಲಿಬಾನ್‌ ಉಗ್ರರು ಅಫ್ಗಾನ್ ಸೇನೆ ಹಾಗೂ ನಾಗರಿಕರನ್ನು ಗುರಿಯಾಗಿರಿಸಿ ದಾಳಿ ಆರಂಭಿಸಿದ್ದಾರೆ. ಹಲವು ಜಿಲ್ಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ʼಪಾಕಿಸ್ತಾನ ವಾಯುಪಡೆಯು ಉಗ್ರರಿಗೆ ಬೆಂಬಲ ನೀಡುತ್ತಿದೆʼ ಎಂದು ಅಫ್ಗಾನ್‌ ಅಧಿಕಾರಿಗಳು ಆರೋಪಿಸಿದ್ದಾರೆ.

ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್‌ಐ ಉಗ್ರರಿಗೆ ಬೆಂಬಲ ಹಾಗೂ ತರಬೇತಿ ನೀಡುತ್ತಿದೆ ಎಂದು ಅಫ್ಗಾನ್‌ ವಿದೇಶಾಂಗ ಸಚಿವಾಲಯ ಕಳೆದ ತಿಂಗಳು ಗಂಭೀರ ಆರೋಪ ಮಾಡಿತ್ತು.

ಪಾಕ್‌, ಉಗ್ರರೊಂದಿಗೆ ಹೊಂದಿರುವ ಸಂಬಂಧವನ್ನು ಕಡಿದುಕೊಂಡಿಲ್ಲ ಎಂದು ಟೀಕಿಸಿದ್ದ ಅಫ್ಗಾನ್‌ ಅಧ್ಯಕ್ಷ ಅಶ್ರಫ್‌ ಘನಿ, ಗುಪ್ತಚರ ಇಲಾಖೆ ಮಾಹಿತಿ ಪ್ರಕಾರ ಸುಮಾರು 10,000ಕ್ಕೂ ಹೆಚ್ಚು ʼಜಿಹಾದಿʼ ಹೋರಾಟಗಾರರು ಕಳೆದ ತಿಂಗಳು ಅಫ್ಗಾನಿಸ್ತಾನಕ್ಕೆ ನುಸುಳಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಇವನ್ನೂ ಓದಿ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು