ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಫ್ಗಾನಿಸ್ತಾನ ವಶವಾದ ಬೆನ್ನಲ್ಲೇ ಪಾಕ್‌ನಲ್ಲಿ ದಾಳಿ ತೀವ್ರಗೊಳಿಸಿದ ತಾಲಿಬಾನ್‌ 

Last Updated 7 ಸೆಪ್ಟೆಂಬರ್ 2021, 10:41 IST
ಅಕ್ಷರ ಗಾತ್ರ

ಪೇಶಾವರ: ಅಫ್ಗಾನಿಸ್ತಾನವನ್ನುಸಂಪೂರ್ಣ ನಿಯಂತ್ರಣಕ್ಕೆ ತೆಗೆದುಕೊಂಡಿರುವುದಾಗಿ ತಾಲಿಬಾನ್ ಘೋಷಿಸಿದ್ದು, ಸರ್ಕಾರ ರಚನೆಯತ್ತ ಕಾರ್ಯಪ್ರವೃತ್ತವಾಗಿರುವುದಾಗಿ ತಿಳಿಸಿದೆ. ಹೀಗಿರುವಾಗಲೇ ನೆರೆಯ ಪಾಕಿಸ್ತಾನದಲ್ಲಿ ಏಕಾಏಕಿ ಭಯೋತ್ಪಾದಕ ದಾಳಿಗಳು ಹೆಚ್ಚಳವಾಗಿದ್ದು, ಇದನ್ನು ತಾಲಿಬಾನ್‌ನ ಪಾಕಿಸ್ತಾನದ ಬಣವಾದ ತೆಹ್ರೀಕ್ ಇ-ತಾಲಿಬಾನ್ (ಟಿಟಿಪಿ) ನಡೆಸಿರುವುದಾಗಿ ಹೇಳಿಕೊಂಡಿದೆ.

ಇತ್ತೀಚೆಗೆ ನೈರುತ್ಯ ಪಾಕಿಸ್ತಾನದ ಭದ್ರತಾ ತಪಾಸಣಾ ಶಿಬಿರದ ಬಳಿ ಆತ್ಮಾಹುತಿ ದಾಳಿಕೋರನೊಬ್ಬ ತನ್ನನ್ನು ತಾನು ಸ್ಫೋಟಿಸಿಕೊಂಡ. ಈ ದಾಳಿಯಲ್ಲಿಕನಿಷ್ಠ ಮೂವರು ಅರೆಸೇನಾ ಸಿಬ್ಬಂದಿ ಮೃತಪಟ್ಟಿದ್ದರೆ, 15 ಜನ ತೀವ್ರವಾಗಿ ಗಾಯಗೊಂಡರು.

ಬಲೂಚಿಸ್ತಾನ ಪ್ರಾಂತ್ಯದ ಕ್ವೆಟ್ಟಾ–ಮಸ್ತುಂಗ್‌ ರಸ್ತೆಯಲ್ಲಿದ್ದ ಅರೆಸೈನಿಕ ಪಡೆಯ ಚೆಕ್‌ಪೋಸ್ಟ್‌ಗೆ ನುಗ್ಗಿದ್ದ ಆತ್ಮಾಹುತಿ ದಾಳಿಕೋರ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದ ಎಂದು ವರದಿಗಳಾಗಿವೆ.

ಇತ್ತೀಚೆಗೆ ಪಾಕಿಸ್ತಾನದ ಮಾಧ್ಯಮಗಳಿಗೆ ಎಚ್ಚರಿಕೆ ಸಂದೇಶವೊಂದು ರವಾನೆಯಾಗಿದ್ದು, ಟಿಟಿಪಿಯನ್ನು ಭಯೋತ್ಪಾದಕ ಸಂಘಟನೆ ಎಂದು ಕರೆಯದಂತೆ ಸೂಚಿಸಲಾಗಿದೆ.

‘ಟಿಟಿಪಿ ಮತ್ತು ಪಾಕಿಸ್ತಾನಿ ಭದ್ರತಾ ಪಡೆಗಳ ನಡುವೆ ನಡೆಯುತ್ತಿರುವ ಯುದ್ಧದಲ್ಲಿ ಪಕ್ಷಪಾತವನ್ನು ನಿಲ್ಲಿಸುವಂತೆ ನಾವು ಪತ್ರಕರ್ತರು ಮತ್ತು ಪಾಕಿಸ್ತಾನಿ ಮಾಧ್ಯಮ ಸಂಸ್ಥೆಗಳಿಗೆ ಆಗ್ರಹಿಸುತ್ತೇವೆ,’ ಎಂದು ಸಂಘಟನೆ ಬಿಡುಗಡೆ ಮಾಡಿರುವ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

‘ನಮ್ಮ ಸಂಘಟನೆಯನ್ನು ಉದ್ದೇಶಿಸಿ 'ಭಯೋತ್ಪಾದಕ' ಮತ್ತು 'ಉಗ್ರವಾದಿ' ಎಂಬ ಶೀರ್ಷಿಕೆಗಳನ್ನು ಬಳಸುತ್ತಿರುವುದನ್ನು ನಾವು ಗಮನಿಸಿದ್ದೇವೆ. ಇದು ಮಾಧ್ಯಮಗಳ ಉದ್ದೇಶಪೂರ್ವಕ ಪಕ್ಷಪಾತವನ್ನು ತೋರಿಸುತ್ತದೆ. ತೆಹ್ರೀಕ್ ಇ-ತಾಲಿಬಾನ್‌ ಅನ್ನು ತೆಹ್ರೀಕ್ ಇ-ತಾಲಿಬಾನ್‌ ಎಂದೇ ಉಲ್ಲೇಖಿಸಲು ಎಚ್ಚರಿಕೆ ನೀಡಲಾಗಿದೆ. ಅಂಥ ಶೀರ್ಷಿಕೆಗಳನ್ನು ಕೊಟ್ಟವರು ನಮ್ಮ ಶತ್ರುಗಳು’ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ನಮ್ಮ ಭಾವನೆಗಳನ್ನು ಗೌರವಿಸದಿದ್ದರೆ ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದೂ ಟಿಟಿಪಿ ಎಚ್ಚರಿಸಿದೆ.

ಟಿಟಿಪಿಯು ತಾಲಿಬಾನ್‌ನ ಪಾಕಿಸ್ತಾನದ ಬಣವಾಗಿದ್ದು, ಉಗ್ರ ಸಂಘಟನೆಯಾದ ಅಲ್ ಖೈದಾ ಸಿದ್ಧಾಂತಕ್ಕೆ ನಿಷ್ಠವಾಗಿದೆ. ಪಾಕಿಸ್ತಾನದ ಸೇನಾ ಆಕ್ರಮಣದಿಂದಾಗಿ ಅಡಗಿದ್ದ ಸಂಘಟನೆ ಆತ್ಮವಿಶ್ವಾಸವು ಸದ್ಯ ಅಫ್ಗಾನಿಸ್ತಾನದ ಬೆಳವಣಿಗೆಯಿಂದ ಮತ್ತೆ ಚಿಗುರೊಡೆದಿದೆ.

ಇದೇ ಹಿನ್ನೆಲೆಯಲ್ಲಿ ಪಾಕಿಸ್ತಾನದಲ್ಲಿ ಭದ್ರತಾ ಪಡೆಗಳು ಮತ್ತು ಕಾನೂನು ಜಾರಿ ಸಂಸ್ಥೆಗಳನ್ನು ಗುರಿಯಾಗಿರಿಸಿಕೊಂಡು ಟಿಟಿಪಿ ದಾಳಿ ಸಂಘಟಿಸುತ್ತಿದೆ.

ಅಫ್ಗಾನಿಸ್ತಾನದ ನೆಲವನ್ನುಬಳಸಿಕೊಂಡು ಪಾಕಿಸ್ತಾನ ಸೇರಿದಂತೆ ಯಾವುದೇ ದೇಶದಲ್ಲಿ ಅಸ್ಥಿರತೆ ಅಥವಾ ಭಯೋತ್ಪಾದನಾ ಕೃತ್ಯಗಳನ್ನು ನಡೆಸಲು ಅವಕಾಶ ನೀಡುವುದಿಲ್ಲ ಎಂದು ಅಫ್ಗಾನಿಸ್ತಾನದ ತಾಲಿಬಾನ್ ಈಗಾಗಲೇ ಹೇಳಿದೆ. ಆದರೂ,ಪಾಕಿಸ್ತಾನದ ತಾಲಿಬಾನ್‌ ಬಣವು ಇಮ್ರಾನ್ ಖಾನ್‌ ಸರ್ಕಾರಕ್ಕೆ ಸಲಹೆಯೊಂದನ್ನು ನೀಡಿದೆ. ಅಮೆರಿಕವು ಅಫ್ಗಾನಿಸ್ತಾನದಲ್ಲಿ ತಾಲಿಬಾನ್‌ ಜೊತೆಗೆ ಮಾಡಿಕೊಂಡ ಶಾಂತಿ ಒಪ್ಪಂದದಂತೆಯೇ ಪಾಕಿಸ್ತಾನದ ಸರ್ಕಾರವೂ ಒಪ್ಪಂದ ಮಾಡಿಕೊಳ್ಳಬಹುದು ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT