ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ಬಂಧ ತೆರವು: ಮೆಕ್ಕಾಗೆ ಮತ್ತೆ ಯಾತ್ರಾರ್ಥಿಗಳು

Last Updated 4 ಅಕ್ಟೋಬರ್ 2020, 9:24 IST
ಅಕ್ಷರ ಗಾತ್ರ

ರಿಯಾದ್‌: ಕೊರೊನಾ ವೈರಸ್‌ ಸಾಂಕ್ರಾಮಿಕ ಕಾಯಿಲೆ ಹಿನ್ನೆಲೆಯಲ್ಲಿ ವಿಧಿಸಲಾಗಿದ್ದ ನಿರ್ಬಂಧಗಳನ್ನು ಸೌದಿ ಅರೇಬಿಯಾ ತೆರವುಗೊಳಿಸಿರುವುದರಿಂದ ಯಾತ್ರಾರ್ಥಿಗಳು ಈಗ ಮತ್ತೆ ಮೆಕ್ಕಾಗೆ ಭೇಟಿ ನೀಡುತ್ತಿದ್ದಾರೆ.

ಬಹುತೇಕ ದೇಶಗಳು ನಿರ್ಬಂಧಗಳನ್ನು ತೆರವುಗೊಳಿಸಿರುವುದರಿಂದ ಸೌದಿ ಅರೇಬಿಯಾ ಸರ್ಕಾರ ಸಹ ಈ ಕ್ರಮಕೈಗೊಂಡಿದೆ. ಭಾನುವಾರದಿಂದ ಪ್ರವೇಶ ಅವಕಾಶ ಕಲ್ಪಿಸಲಾಗಿದ್ದು, ಗರಿಷ್ಠ 6,000 ಯಾತ್ರಾರ್ಥಿಗಳು ಪವಿತ್ರ ಸ್ಥಳ ಮೆಕ್ಕಾಗೆ ಭೇಟಿ ನೀಡಬಹುದಾಗಿದೆ.

ಮೊದಲ ಹಂತದಲ್ಲಿ ಸೌದಿ ನಾಗರಿಕರಿಗೆ ಮತ್ತು ನಿವಾಸಿಗಳಿಗೆ ಮಾತ್ರ ಮಸೀದಿ ಪ್ರವೇಶಿಸಲು ಅನುಮತಿ ನೀಡಲಾಗಿದೆ. ಒಬ್ಬ ಯಾತ್ರಾರ್ಥಿಗೆ ಮೂರು ಗಂಟೆಗಳ ಸಮಯಾವಕಾಶ ಕಲ್ಪಿಸಲಾಗಿದೆ.

ಪ್ರಾರ್ಥನೆ ಸಲ್ಲಿಸಲು ಮಸೀದಿಗೆ ಭೇಟಿ ನೀಡುವವರು ಮುಂಚಿತವಾಗಿಯೇ ನಿರ್ದಿಷ್ಟ ಸಮಯ ಮತ್ತು ದಿನಾಂಕಕ್ಕಾಗಿ ಆನ್‌ಲೈನ್‌ ಮೂಲಕವೇ ಅರ್ಜಿ ಸಲ್ಲಿಸಬೇಕು. ಜನದಟ್ಟಣೆಯಾಗುವುದನ್ನು ತಪ್ಪಿಸಲು ಈ ಕ್ರಮಕೈಗೊಳ್ಳಲಾಗಿದೆ. ಆ್ಯಪ್‌ ಮೂಲಕವೂ ಯಾತ್ರಾರ್ಥಿಗಳು ಸಮಯವನ್ನು ನಿಗದಿಪಡಿಸಿಕೊಳ್ಳಬಹುದಾಗಿದೆ.

ಎರಡನೇ ಹಂತದಲ್ಲಿ ಅಕ್ಟೋಬರ್‌ 18ರಿಂದ ಮತ್ತಷ್ಟು ನಿರ್ಬಂಧಗಳನ್ನು ಸಡಿಲಿಸಲು ಉದ್ದೇಶಿಸಲಾಗಿದೆ. ಗರಿಷ್ಠ 15 ಸಾವಿರ ಯಾತ್ರಾರ್ಥಿಗಳಿಗೆ ಪ್ರವೇಶ ಕಲ್ಪಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನವೆಂಬರ್‌ 1ರಿಂದ ಇತರ ರಾಷ್ಟ್ರಗಳ ಮುಸ್ಲಿಂ ನಾಗರಿಕರಿಗೆ ‘ಉಮ್ರಾ’ ಸಲ್ಲಿಸಲು ಅವಕಾಶ ನೀಡಲಾಗುವುದು ಎಂದು ಗೃಹ ಸಚಿವಾಲಯ ತಿಳಿಸಿದೆ.

ಪ್ರತಿ ದಿನವೂ ಇಲ್ಲಿನ ಮಸೀದಿ ಹಾಗೂ ಸುತ್ತಮುತ್ತ ಪ್ರದೇಶವನ್ನು ಹಲವು ಬಾರಿ ಸ್ವಚ್ಛಗೊಳಿಸಲಾಗುತ್ತಿದೆ. ಯಾತ್ರಾರ್ಥಿಗಳ ಸುರಕ್ಷತೆಗೆ ಸಂಬಂಧಿಸಿದಂತೆ ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT