ಸೋಮವಾರ, ಅಕ್ಟೋಬರ್ 25, 2021
25 °C

ಮುಕ್ತ, ಅಂತರ್ಗತ ಇಂಡೋ-ಪೆಸಿಫಿಕ್ ಪ್ರದೇಶಕ್ಕೆ ಬದ್ಧತೆ ಪ್ರದರ್ಶಿಸಿದ ಭಾರತ–ಜಪಾನ್

ಪಿಟಿಐ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಜೋ ಬೈಡನ್ ನೇತೃತ್ವದ ಕ್ವಾಡ್ ಸಭೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಮತ್ತು ಜಪಾನ್ ಪ್ರಧಾನಿ ಯೋಶಿಹಿದಾ ಸುಗಾ ಅವರು ಮಾತುಕತೆ ನಡೆಸಿದ್ದು, ಮುಕ್ತ ಮತ್ತು ಅಂತರ್ಗತ ಇಂಡೋ-ಪೆಸಿಫಿಕ್ ಪ್ರದೇಶಕ್ಕೆ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ.

ತಮ್ಮ ಬಹುಮುಖ ದ್ವಿಪಕ್ಷೀಯ ಸಂಬಂಧಗಳ ಮರುಪರಿಶೀಲನೆ ನಡೆಸಿದ ಉಭಯ ನಾಯಕರು, ಅಫ್ಗಾನಿಸ್ತಾನದ ವಿಷಯ ಸೇರಿ ಇತ್ತೀಚಿನ ಜಾಗತಿಕ ಬೆಳವಣಿಗೆಗಳ ಬಗ್ಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು.

ಗುರುವಾರ ಇಲ್ಲಿ ನಡೆದ ಭೇಟಿಯಲ್ಲಿ, ಉಭಯ ದೇಶಗಳ ಪ್ರಧಾನಮಂತ್ರಿಗಳು ರಕ್ಷಣಾ ಉಪಕರಣಗಳು ಮತ್ತು ತಂತ್ರಜ್ಞಾನ ಕ್ಷೇತ್ರ ಸೇರಿದಂತೆ ದ್ವಿಪಕ್ಷೀಯ ಭದ್ರತೆ ಮತ್ತು ರಕ್ಷಣಾ ಸಹಕಾರವನ್ನು ಹೆಚ್ಚಿಸಲು ಒಪ್ಪಿಗೆ ಸೂಚಿಸಿದರು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಕಳೆದ ಕೆಲವು ವರ್ಷಗಳಲ್ಲಿ ಭಾರತ-ಜಪಾನ್ ದೇಶಗಳು ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಪಾಲುದಾರಿಕೆಯಲ್ಲಿ ಉತ್ತಮ ಪ್ರಗತಿ ಸಾಧಿಸಲು ತಮ್ಮ ವೈಯಕ್ತಿಕ ಬದ್ಧತೆ ಮತ್ತು ನಾಯಕತ್ವ ಪ್ರದರ್ಶಿಸಿದ್ದಕ್ಕಾಗಿ ಜಪಾನ್ ಪ್ರಧಾನ ಮಂತ್ರಿ ಯೋಶಿಹಿದಾ ಸುಗಾ ಅವರಿಗೆ ಮೋದಿ ಧನ್ಯವಾದ ಹೇಳಿದ್ದಾರೆ.

ಇದೇವೇಳೆ, ಉಭಯ ದೇಶಗಳ ನಡುವೆ ಹೆಚ್ಚುತ್ತಿರುವ ಆರ್ಥಿಕ ವ್ಯವಹಾರವನ್ನು ಅವರು ಸ್ವಾಗತಿಸಿದ್ದಾರೆ.

ಜಪಾನ್, ಭಾರತದ ಅತ್ಯಂತ ಮೌಲ್ಯಯುತ ಪಾಲುದಾರ ರಾಷ್ಟ್ರಗಳಲ್ಲಿ ಒಂದಾಗಿದೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ನಾನು ಜಪಾನ್ ಪ್ರಧಾನಿ ಯೋಶಿಹಿದಾ ಸುಗಾ ಅವರ ಜೊತೆ ಅತ್ಯುತ್ತಮವಾದ ಸಭೆ ನಡೆಸಿದ್ದು, ನಮ್ಮ ರಾಷ್ಟ್ರಗಳ ನಡುವಿನ ಸಹಕಾರವನ್ನು ಮತ್ತಷ್ಟು ಹೆಚ್ಚಿಸುವಂತಹ ವಿವಿಧ ವಿಷಯಗಳ ಕುರಿತು ನಾನು ಚರ್ಚಿಸಿದೆ. ಬಲವಾದ ಭಾರತ-ಜಪಾನ್ ಸ್ನೇಹವು ಇಡೀ ಜಗತ್ತಿಗೆ ಉತ್ತಮವಾದುದ್ದಾಗಿದೆ ಎಂದು ಮೋದಿ ಹೇಳಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು