ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕಕ್ಕೆ ಪ್ರಧಾನಿ ಮೋದಿ: ಬೈಡನ್‌ ಜೊತೆ ಶ್ವೇತ ಭವನದಲ್ಲಿ ನಡೆಯಲಿದೆ ಚರ್ಚೆ

Last Updated 21 ಸೆಪ್ಟೆಂಬರ್ 2021, 4:25 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಪ್ರಧಾನಿ ನರೇಂದ್ರ ಮೋದಿ ಅವರು ಇದೇ ಮೊದಲ ಬಾರಿಗೆ ಸೆಪ್ಟೆಂಬರ್‌ 24ರಂದು ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರೊಂದಿಗೆ ನೇರ ಮಾತುಕತೆಯಲ್ಲಿ ಭಾಗಿಯಾಗುತ್ತಿದ್ದಾರೆ. ಅದಕ್ಕೂ ಮುನ್ನ ಸೆಪ್ಟೆಂಬರ್‌ 23ರಂದು ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಜೊತೆಗೆ ಮೋದಿ ಭೇಟಿ ನಿಗದಿಯಾಗಿದೆ.

ಮೂರು ದಿನಗಳ ಅಮೆರಿಕ ಪ್ರವಾಸ ಕೈಗೊಳ್ಳಲಿರುವ ಪ್ರಧಾನಿ ಮೋದಿ ಹಲವು ಉನ್ನತ ಮಟ್ಟದ ಸಭೆಗಳಲ್ಲಿ ಭಾಗಿಯಾಗಲಿದ್ದಾರೆ. ಸೆಪ್ಟೆಂಬರ್‌ 25ರಂದು ನ್ಯೂಯಾರ್ಕ್‌ನಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ (ಯುಎನ್‌ಜಿಎ) 76ನೇ ಅಧಿವೇಶನವನ್ನು ಉದ್ದೇಶಿಸಿ ಅವರು ಮಾತನಾಡಲಿದ್ದಾರೆ.

ಶ್ವೇತ ಭವನದಲ್ಲಿ ಸೆಪ್ಟೆಂಬರ್‌ 24ರಂದು ನಡೆಯಲಿರುವ ಮೋದಿ–ಬೈಡನ್‌ ಭೇಟಿಯು ಉಭಯ ರಾಷ್ಟ್ರಗಳ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ ಎಂದು ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ.

ಭಾರತ, ಅಮೆರಿಕ, ಆಸ್ಟ್ರೇಲಿಯಾ ಹಾಗೂ ಜಪಾನ್‌ ರಾಷ್ಟ್ರಗಳನ್ನು ಒಳಗೊಂಡ ಕ್ವಾಡ್‌ ಶೃಂಗಸಭೆಯು ಸೆಪ್ಟೆಂಬರ್‌ 24ರಂದು ವಾಷಿಂಗ್ಟನ್‌ನಲ್ಲಿ (ಶ್ವೇತ ಭವನ) ನಡೆಯಲಿದೆ. ಪ್ರಧಾನಿ ಮೋದಿ ಇದೇ ಮೊದಲ ಬಾರಿಗೆ ಭೌತಿಕವಾಗಿ ಕ್ವಾಡ್‌ ಸಭೆಯಲ್ಲಿ ಭಾಗಿಯಾಗುತ್ತಿದ್ದಾರೆ. ಸಭೆಯಲ್ಲಿ ಜೋ ಬೈಡನ್‌, ಜಪಾನ್‌ ಪ್ರಧಾನಿ ಯೋಶಿಹಿದೆ ಸೂಗಾ, ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್‌ ಮೊರಿಸನ್‌ ಇರುತ್ತಾರೆ. ಇದೇ ವರ್ಷ ಮಾರ್ಚ್‌ 12ರಂದು ಕ್ವಾಡ್‌ನ ಮೊದಲ ಸಭೆ ವರ್ಚುವಲ್‌ ರೂಪದಲ್ಲಿ ನಡೆದಿತ್ತು.

ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರು ಮಂಗಳವಾರ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.

ಸೆಪ್ಟೆಂಬರ್‌ 23ರಂದು ಪ್ರಧಾನಿ ಮೋದಿ ಅಮೆರಿಕದ ಪ್ರಮುಖ ಕಂಪನಿಗಳ ಐವರು ಸಿಇಒಗಳ ಜೊತೆಗೆ ನೇರ ಮಾತುಕತೆ ನಡೆಸಲಿದ್ದಾರೆ. ಆ್ಯಪಲ್‌ನ ಟಿಮ್‌ ಕುಕ್‌ ಸೇರಿ ಇತರೆ ನಾಲ್ವರು ಸಿಇಒಗಳೊಂದಿಗೆ ಸಭೆ ನಡೆಯುವ ಸಾಧ್ಯತೆ ಇರುವುದಾಗಿ ಅಮೆರಿಕ ಮತ್ತು ಭಾರತದ ಅಧಿಕಾರಿಗಳಿಂದ ತಿಳಿದು ಬಂದಿರುವುದಾಗಿ ಹಿಂದುಸ್ತಾನ್‌ ಟೈಮ್ಸ್‌ ವರದಿ ಮಾಡಿದೆ.

'ಬೈಡನ್‌ ಮತ್ತು ಹ್ಯಾರಿಸ್‌ ಅವರ ಆಡಳಿತದಲ್ಲಿ ಭಾರತದೊಂದಿಗಿನ ಜಾಗತಿಕ ಪಾಲುದಾರಿಕೆಯು ಉನ್ನತ ಹಂತವನ್ನು ತಲುಪಿದ್ದು, ಮುಕ್ತ ಇಂಡೊ–ಪೆಸಿಫಿಕ್‌ ವಲಯಕ್ಕಾಗಿ ಒಗ್ಗಟ್ಟಿನ ಕಾರ್ಯಾಚರಣೆ ನಡೆದಿದೆ. ಕೋವಿಡ್‌–19 ಸಾಂಕ್ರಾಮಿಕವನ್ನು ಅಂತ್ಯಗೊಳಿಸಲು, ಹವಾಮಾನ ವೈಪರೀತ್ಯದ ಸಂಬಂಧ ಸೂಕ್ತ ಕ್ರಮಕೈಗೊಳ್ಳಲಾಗಿದೆ' ಎಂದು ಅಧಿಕಾರಿ ತಿಳಿಸಿದರು.

2019ರಲ್ಲಿ ಅಮೆರಿಕ ಪ್ರವಾಸ ಕೈಗೊಂಡಿದ್ದ ಪ್ರಧಾನಿ ಮೋದಿ

ಜೋ ಬೈಡನ್‌ ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಹಲವು ಸಂದರ್ಭಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ವರ್ಚುವಲ್‌ ಆಗಿ ಮಾತುಕತೆ ನಡೆಸಿದ್ದಾರೆ. ಏಪ್ರಿಲ್‌ 26ರಂದು ಕೊನೆಯದಾಗಿ ಮೋದಿ–ಬೈಡನ್‌ ದೂರವಾಣಿ ಮಾತುಕತೆ ನಡೆದಿತ್ತು. ಕಮಲಾ ಹ್ಯಾರಿಸ್‌ ಜೊತೆಗೆ ಜೂನ್‌ 3ರಂದು ಪ್ರಧಾನಿ ದೂರವಾಣಿಯಲ್ಲಿ ಮಾತನಾಡಿದ್ದರು.

ಕೊನೆಯ ಬಾರಿ ಪ್ರಧಾನಿ ಮೋದಿ 2019ರ ಸೆಪ್ಟೆಂಬರ್‌ನಲ್ಲಿ ಅಮೆರಿಕಕ್ಕೆ ಭೇಟಿ ನೀಡಿದ್ದರು. ಆಗಿನ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರೊಂದಿಗೆ ಹೌಡಿ–ಮೋದಿ ಬೃಹತ್‌ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT