ನ್ಯೂಯಾರ್ಕ್: ಪೊಲೀಸರ ದೌರ್ಜನ್ಯಕ್ಕೆ ರೊಚೆಸ್ಟರ್‌ನಲ್ಲಿ ಕಪ್ಪುವರ್ಣೀಯ ವ್ಯಕ್ತಿ ಉಸಿರುಗಟ್ಟಿ ಮೃತಪಟ್ಟಿದ್ದಾರೆ.
ಪೊಲೀಸ್ ವಶದಲ್ಲಿದ್ದ ಕಪ್ಪುವರ್ಣೀಯ ಜಾರ್ಜ್ ಫ್ಲಾಯ್ಡ್ ಹತ್ಯೆಯಾಗುವುದಕ್ಕೂ ಎರಡು ತಿಂಗಳು ಮೊದಲು ಈ ಘಟನೆ ನಡೆದಿದೆ. ಆದರೆ, ಡ್ಯಾನಿಯೆಲ್ ಕುಟುಂಬ ಸದಸ್ಯರು ಬುಧವಾರ ಮಾಧ್ಯಮಗೋಷ್ಠಿ ನಡೆಸಿ, ವಿಡಿಯೊ ದೃಶ್ಯಗಳನ್ನು ಬಿಡುಗಡೆ ಮಾಡಿದ ಮೇಲೆ ಪೊಲೀಸ್ ಅಧಿಕಾರಿಗಳ ದೌರ್ಜನ್ಯ ಬಹಿರಂಗಗೊಂಡಿದೆ.
ಪ್ರಕರಣಕ್ಕೆ ಸಂಬಂಧಿಸಿ ರೊಚೆಸ್ಟರ್ ಮೇಯರ್ ಏಳು ಜನ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿದ್ದಾರೆ. ಈ ಘಟನೆಯನ್ನು ಖಂಡಿಸಿ ವ್ಯಾಪಕ ಪ್ರತಿಭಟನೆಯೂ ವ್ಯಕ್ತವಾಗಿದೆ.
ಈ ಘಟನೆ ಮಾರ್ಚ್ 24ರಂದು ನಡೆದಿದೆ. 41 ವರ್ಷದ ಡ್ಯಾನಿಯೆಲ್ ಪ್ರ್ಯೂಡ್ ಮೃತ ವ್ಯಕ್ತಿ. ಪೊಲೀಸ್ ದೌರ್ಜನ್ಯಕ್ಕೆ ಒಳಗಾಗಿ, ಉಸಿರಾಟ ಸಮಸ್ಯೆಯಿಂದ ಬಳಲಿದ ಡ್ಯಾನಿಯೆಲ್‌ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
‘ಏಳು ದಿನಗಳ ಕಾಲ ಸಾವು–ಬದುಕಿನ ನಡುವೆ ಹೋರಾಟವನ್ನೂ ನಡೆಸಿದರು. ಎಲ್ಲ ಪ್ರಯತ್ನಗಳು ಮುಗಿದ ನಂತರ ಜೀವರಕ್ಷಕ ವ್ಯವಸ್ಥೆಯನ್ನು ತೆಗೆದ ಪರಿಣಾಮ, ಡ್ಯಾನಿಯೆಲ್ ಮಾರ್ಚ್ 30ರಂದು ಸಾವನ್ನಪ್ಪಿದರು‘ ಎಂದು ಆತನ ಕುಟುಂಬದ ಸದಸ್ಯರು ಹೇಳಿದ್ದಾರೆ.
ಘಟನೆ ವಿವರ: ರೊಚೆಸ್ಟರ್‌ನಲ್ಲಿದ್ದ ಸಹೋದರ ಜೋ ಪ್ರ್ಯೂಡ್ ಅವರ ಭೇಟಿಗೆ ಚಿಕಾಗೊದಿಂದ ಬಂದಿದ್ದ ಡ್ಯಾನಿಯೆಲ್, ಮಾನಸಿಕ ಸಮತೋಲನ ಕಳೆದುಕೊಂಡ ರೀತಿಯಲ್ಲಿ ವರ್ತಿಸಿ ಮನೆಯಿಂದ ಓಡಿಹೋಗುತ್ತಾರೆ. ಈ ಬಗ್ಗೆ ಸಹೋದರ ಜೋ ತಿಳಿಸಿದ ನಂತರ, ಪೊಲೀಸರು ಡ್ಯಾನಿಯೆಲ್‌ನನ್ನು ಬಂಧಿಸಿ, ಆಸ್ಪತ್ರೆಗೆ ಕರೆದುಕೊಂಡು ಹೋದರು ಎಂದು ಪೊಲೀಸ್ ಮೂಲಗಳು ಹೇಳುತ್ತವೆ.
ಬಂಧನಕ್ಕೂ ಮೊದಲು, ಮೈಮೇಲೆ ಬಟ್ಟೆ ಇರದ ಸ್ಥಿತಿಯಲ್ಲಿದ್ದ ಡ್ಯಾನಿಯೆಲ್ ರಸ್ತೆಯಲ್ಲಿ ಓಡುತ್ತಿದ್ದ. ತನಗೆ ಕೊರೊನಾ ಸೋಂಕು ತಗುಲಿದೆ ಎನ್ನುತ್ತಾ, ಕಾರೊಂದರ ಒಳಗೆ ನುಗ್ಗಲು ಯತ್ನಿಸುತ್ತಿದ್ದ ಎಂದೂ ಪೊಲೀಸರು ಹೇಳಿದ್ದಾರೆ.
ಆದರೆ, ವಿವಸ್ತ್ರನಾಗಿದ್ದ ಡ್ಯಾನಿಯೆಲ್‌ನ ಕೈಗಳು ಕುತ್ತಿಗೆಯನ್ನು ಬಳಸಿದ್ದವು. ಅವುಗಳಿಗೆ ಕೋಳ ಹಾಕಲಾಗಿತ್ತು. ಆತನನ್ನು ರಸ್ತೆ ಬದಿಯ ಕಲ್ಲು ಹಾಸಿನ ಮೇಲೆ ನಿಲ್ಲಿಸಲಾಗಿತ್ತು. ಆಗ ಆತ ಪೊಲೀಸರತ್ತ ಕೂಗಾಡುತ್ತಿದ್ದ. ಆಗ ತಾನೆ ಕೊರೊನಾ ಸೋಂಕು ವ್ಯಾಪಿಸುತ್ತಿದ್ದ ಕಾರಣ, ಆತ ಉಗುಳಬಾರದು ಎಂಬ ಕಾರಣಕ್ಕೆ ಆತನಿಗೆ ಮುಖಗವುಸು ಹಾಕಿದ್ದ ದೃಶ್ಯಗಳು ವಿಡಿಯೊದಲ್ಲಿವೆ.
‘ನನಗೆ ಗನ್ ಕೊಡಿ..’ ಎಂದು ಕೂಗಾಡತೊಡಗುವ ಡ್ಯಾನಿಯೆಲ್‌ನನ್ನು ಮೂವರು ಪೊಲೀಸ್ ಅಧಿಕಾರಿಗಳು ನೆಲದ ಮೇಲೆ ಕೆಡವುತ್ತಾರೆ. ಒಬ್ಬ ಅಧಿಕಾರಿ ಆತನ ಮುಖವನ್ನು ಕಲ್ಲು ಹಾಸಿಗೆ ಒತ್ತಿ ಹಿಡಿದರೆ, ಮತ್ತೊಬ್ಬ ಅಧಿಕಾರಿ ಡ್ಯಾನಿಯೆಲ್‌ನ ಕುತ್ತಿಗೆ ಮೇಲೆ ಮೊಣಕಾಲೂರುತ್ತಾನೆ. ನಂತರ, ಡ್ಯಾನಿಯೆಲ್ ವಾಂತಿ ಮಾಡಿಕೊಳ್ಳುವ ದೃಶ್ಯವೂ ಕಾಣುತ್ತದೆ.
ಇದಾದ ಐದು ನಿಮಿಷಗಳ ನಂತರ, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗುತ್ತದೆ. ‘ಡ್ಯಾನಿಯೆಲ್ ಉಸಿರಾಟಕ್ಕೆ ತೊಂದರೆಯಾದ ಕಾರಣ ಮೃತಪಟ್ಟಿದ್ದಾನೆ. ಇದೊಂದು ಕೊಲೆ’ ಎಂದು ಮನ್ರೊ ಕೌಂಟಿಯ ವೈದ್ಯರು ಘೋಷಿಸುತ್ತಾರೆ.
ತನಿಖೆ: ಘಟನೆ ಕುರಿತಂತೆ ತನಿಖೆ ನಡೆಸಲಾಗುತ್ತದೆ ಎಂದು ರೊಚೆಸ್ಟರ್ ಪೊಲೀಸ್ ಮುಖ್ಯಸ್ಥ ಲಾ ರ‍್ಯಾನ್ ಸಿಂಗಲ್ಟರಿ ಹೇಳಿದ್ದಾರೆ.
‘ನಮ್ಮ ಪೊಲೀಸರೇ ಡ್ಯಾನಿಯೆಲ್‌ನನ್ನು ಕೊಲೆ ಮಾಡಿದ್ದಾರೆ. ಮಾನಸಿಕ ಆರೋಗ್ಯ ವ್ಯವಸ್ಥೆ, ನಮ್ಮ ಸಮಾಜ ಅಷ್ಟೇ ಅಲ್ಲ ನಾನೂ ಸಹ ಆತನ ಸಾವಿಗೆ ಕಾರಣ’ ಎಂದು ರೊಚೆಸ್ಟರ್‌ನ ಮೇಯರ್ ಲವ್ಲಿ ವಾರೆನ್ ಕಣ್ಣೀರು ಹಾಕಿದ್ದಾರೆ.
ಸ್ವತಃ ಕಪ್ಪುವರ್ಣೀಯರೂ ಆಗಿರುವ ವಾರೆನ್, ‘ಈ ರೀತಿ ನಮ್ಮ ಕಪ್ಪುವರ್ಣೀಯರು ಸಾವನ್ನಪ್ಪುವುದು ನಿಲ್ಲಬೇಕು’ ಎಂದೂ ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.