ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಟಿನ್ ‘ಯುದ್ಧಾಪರಾಧಿ’ ಎಂದ ಬೈಡನ್: ರಷ್ಯಾ ವಿರುದ್ಧ ಮತ್ತಷ್ಟು ನಿರ್ಬಂಧಕ್ಕೆ ಕರೆ

Last Updated 5 ಏಪ್ರಿಲ್ 2022, 2:11 IST
ಅಕ್ಷರ ಗಾತ್ರ

ವಾಷಿಂಗ್ಟನ್: ಉಕ್ರೇನ್‌ನಲ್ಲಿ ನಾಗರಿಕರ ನರಮೇಧ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ವಿರುದ್ಧ ಯುದ್ಧಾಪರಾಧ ತನಿಖೆಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಕರೆ ನೀಡಿದ್ದಾರೆ. ರಷ್ಯಾ ವಿರುದ್ಧ ಮತ್ತಷ್ಟು ನಿರ್ಬಂಧಕ್ಕೆ ಅವರು ಒತ್ತಾಯಿಸಿದ್ದಾರೆ.

'ಉಕ್ರೇನ್‌ನ ಬುಕಾದಲ್ಲಿ ಏನಾಗುತ್ತಿದೆ ಎಂಬುದನ್ನು ನೀವು ನೋಡಬಹುದು’ಎಂದಿರುವ ಬೈಡನ್, ಪುಟಿನ್ ಅವರನ್ನು ‘ಯುದ್ದಾಪರಾಧಿ’ಎಂದು ಕರೆದಿದ್ದಾರೆ.

ರಷ್ಯಾ ಪಡೆಗಳು ತಾವು ಆಕ್ರಮಿಸಿದ್ದ ರಾಜಧಾನಿ ಕೀವ್‌ ಸುತ್ತಲಿನ ಪಟ್ಟಣಗಳನ್ನು ತೊರೆಯುವಾಗ ಸಿಕ್ಕ ಸಿಕ್ಕ ನಾಗರಿಕರ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ್ದು, ಒಂದೇ ಕಡೆ ಸುಮಾರು 300 ನಾಗರಿಕರನ್ನು ಸಾಮೂಹಿಕವಾಗಿ ಸಮಾಧಿ ಮಾಡಿರುವುದು ಕಂಡುಬಂದಿದೆ ಎಂದು ಅಧಿಕಾರಿಗಳು ಹೇಳಿದ್ದರು.. ಈ ಎಲ್ಲರ ಕೈಗಳನ್ನು ಹಿಂದಕ್ಕೆ ಕಟ್ಟಿ, ತಲೆಯ ಹಿಂಭಾಗಕ್ಕೆ ಗುಂಡು ಹೊಡೆದು ಹತ್ಯೆ ಮಾಡಿದ್ದಾರೆ ಎಂದು ಬುಕಾ ನಗರದ ಮೇಯರ್‌ ಅನಟೊಲಿ ಫೆಡೊರುಕ್‌ ಹೇಳಿದ್ದರು.

ಕೀವ್ ಸುತ್ತಲಿನ ಪಟ್ಟಣಗಳಲ್ಲಿ ಸುಮಾರು 410 ನಾಗರಿಕರ ಮೃತದೇಹಗಳನ್ನು ಪತ್ತೆ ಮಾಡಲಾಗಿದೆ ಎಂದು ಉಕ್ರೇನ್‌ನ ಪ್ರಾಸಿಕ್ಯೂಟರ್ ಜನರಲ್ ಐರಿನಾ ವೆನೆಡಿಕ್ಟೋವಾ ಸಹ ಹೇಳಿದ್ದಾರೆ. ಅಸೋಸಿಯೇಟೆಡ್ ಪ್ರೆಸ್ ಪತ್ರಕರ್ತರು ರಾಜಧಾನಿಯ ವಾಯುವ್ಯದಲ್ಲಿರುವ ಬುಕಾದ ಸುತ್ತಮುತ್ತಲಿನ ವಿವಿಧ ಸ್ಥಳಗಳಲ್ಲಿ ಕನಿಷ್ಠ 21 ಜನರ ಶವಗಳನ್ನು ನೋಡಿರುವುದಾಗಿ ಹೇಳಿದ್ದಾರೆ. ಇದರ ಬೆನ್ನಲ್ಲೇ ಅಧ್ಯಕ್ಷ ಝೆಲೆನ್‌ಸ್ಕಿ ಕೀವ್‌ಗೆ ತೆರಳಿ ಪರಿಶೀಲನೆ ನಡೆಸಿದ್ದರು.

ಝೆಲೆನ್‌ಸ್ಕಿ ಭೇಟಿ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಅಮೆರಿಕ ಅಧ್ಯಕ್ಷ ಜೋ ಬೈಡನ್, ರಷ್ಯಾ ವಿರುದ್ಧ ಮತ್ತಷ್ಟು ನಿರ್ಬಂಧಕ್ಕೆ ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಕರೆ ನೀಡಿದ್ದಾರೆ.

ಇತ್ತ, ಯುದ್ಧಾಪರಾಧ ಕುರಿತ ದಾಖಲೆ ಸಂಗ್ರಹಣೆಗೆ ಸ್ಥಳೀಯ ಪ್ರಾಸಿಕ್ಯೂಟರ್ ಜನರಲ್‌ಗೆ ನೆರವಾಗಲು ಯುರೋಪಿಯನ್ ಯೂನಿಯನ್ ತನಿಖಾಧಿಕಾರಿಗಳನ್ನು ಉಕ್ರೇನ್‌ಗೆ ಕಳುಹಿಸುವುದಾಗಿ ಯುರೋಪಿಯನ್ ಕಮಿಷನ್ ಅಧ್ಯಕ್ಷ ಉರ್ಸುಲಾ ವಾನ್ ಡೆರ್ ಲೇಯೆನ್ ಸೋಮವಾರ ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT