ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀವೇ ನಿಯಮ ಪಾಲಿಸುತ್ತಿಲ್ಲ: ನಾರಾಯಣಮೂರ್ತಿ ಅಳಿಯನಿಗೆ ವರದಿಗಾರನ ಪ್ರಶ್ನೆ

Last Updated 25 ಮಾರ್ಚ್ 2022, 6:29 IST
ಅಕ್ಷರ ಗಾತ್ರ

ಲಂಡನ್: ಭಾರತ ಮೂಲದ ಬ್ರಿಟನ್ನಿನ ಹಣಕಾಸು ಸಚಿವ ರಿಷಿ ಸುನಕ್ ಅವರು, ಪತ್ನಿ ಅಕ್ಷತಾ ಮೂರ್ತಿ(ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಪುತ್ರಿ) ಷೇರು ಹೊಂದಿದ್ದಾರೆನ್ನಲಾದ ಇನ್ಪೋಸಿಸ್ ಸಂಸ್ಥೆಯು ಈಗಲೂ ರಷ್ಯಾದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಬಗ್ಗೆ ಮಾಧ್ಯಮ ಪ್ರತಿನಿಧಿಯೊಬ್ಬರಿಂದ ಕಠಿಣ ಪ್ರಶ್ನೆಗಳನ್ನು ಎದುರಿಸಿದ್ಧಾರೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.

ಉಕ್ರೇನ್ ಮೇಲೆ ಆಕ್ರಮಣ ನಡೆಸುತ್ತಿರುವ ರಷ್ಯಾ ವಿರುದ್ಧ ಅಮೆರಿಕ ಸೇರಿ ಪಾಶ್ಚಿಮಾತ್ಯ ದೇಶಗಳು ನಿರ್ಬಂಧ ವಿಧಿಸಿವೆ. ಹೀಗಾಗಿ, ಅಮೆರಿಕ ಮತ್ತು ಬ್ರಿಟನ್ನಿನ ಬಹುತೇಕ ಕಂಪನಿಗಳು ಅಲ್ಲಿ(ರಷ್ಯಾ) ಕಾರ್ಯಾಚರಣೆ ಸ್ಥಗಿತಗೊಳಿಸಿವೆ.

ಈ ಮಧ್ಯೆ, ಬ್ರಿಟನ್ನಿನ ಹಣಕಾಸು ಸಚಿವರಾಗಿರುವ ರಿಷಿ ಸುನಕ್ ಅವರು, ತಮ್ಮ ಮನೆಯಲ್ಲೇ ನಿಯಮಗಳ ಪಾಲನೆ ಮಾಡುತ್ತಿಲ್ಲ ಎಂದು ಸ್ಕೈ ನ್ಯೂಸ್ ವರದಿಗಾರರು ಪ್ರಶ್ನಿಸಿದ್ದಾರೆ.

‘ನಿಮ್ಮ ಕುಟುಂಬಕ್ಕೆ ರಷ್ಯಾದೊಡನೆ ವ್ಯಾವಹಾರಿಕ ಸಂಬಂಧ ಇರುವ ಬಗ್ಗೆ ವರದಿಯಾಗಿದೆ. ನಿಮ್ಮ ಪತ್ನಿ ಭಾರತ ಮೂಲದ ಇನ್ಪೋಸಿಸ್ ಕಂಪನಿಯಲ್ಲಿ ಷೇರು ಹೊಂದಿದ್ದಾರೆ. ಇನ್ಪೋಸಿಸ್ ಕಂಪನಿಯು ಮಾಸ್ಕೋದಿಂದ ಕಾರ್ಯಾಚರಿಸುತ್ತಿದೆ. ಅಲ್ಲಿ ಅವರ ವಿತರಣಾ ಕಚೇರಿ ಇದ್ದು, ಮಾಸ್ಕೋದ ಆಲ್ಫಾ ಬ್ಯಾಂಕ್ ಜೊತೆಯೂ ವ್ಯವಹಾರ ಹೊಂದಿದ್ದಾರೆ’ಎಂದು ವರದಿಗಾರರು ಪ್ರಶ್ನೆ ಎತ್ತಿದ್ದಾರೆ.

ಜೊತೆಗೆ,‘ನೀವು ಬೇರೆಯವರಿಗೆ ಸಲಹೆ ನೀಡುತ್ತೀರಿ. ಆದರೆ, ಆ ಸಲಹೆಗಳನ್ನು ಮನೆಯಲ್ಲಿಯೇ ಪಾಲಿಸುವುದಿಲ್ಲ’ಎಂದು ಪ್ರಶ್ನಿಸಿದ್ದಾರೆ.

ಇದಕ್ಕುತ್ತರಿಸಿದ ರಿಷಿ ಸುನಕ್,‘ನಾನು ಒಬ್ಬ ಜನಪ್ರತಿನಿಧಿಯಾಗಿ ಆಯ್ಕೆಯಾಗಿದ್ದೇನೆ, ನನಗೆ ಸಂಬಂಧವಿರುವ ವಿಷಯಗಳ ಬಗ್ಗೆ ಮಾತ್ರ ಸಂದರ್ಶನದಲ್ಲಿ ಉತ್ತರ ನೀಡುತ್ತಿದ್ದೇನೆ. ನನ್ನ ಪತ್ನಿಗೆ ಸಂಬಂಧಿಸಿದ ವಿಷಯಗಳಿಗೆ ಅಲ್ಲ’ಎಂದಿದ್ದಾರೆ.

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಆಡಳಿತದಿಂದ ನಿಮ್ಮ ಕುಟುಂಬವು ಪ್ರಯೋಜನ ಪಡೆಯುತ್ತಿದೆಯೇ ಎಂದು ಕೇಳಿದಾಗ, ‘ಅದು ಸತ್ಯವೆಂದು ನಾನು ಭಾವಿಸುವುದಿಲ್ಲ’ಎಂದು ಅವರು ಹೇಳಿದ್ದಾರೆ.

‘ನಾವು ರಷ್ಯಾ ಮೇಲೆ ಮಹತ್ವದ ನಿರ್ಬಂಧಗಳನ್ನು ಹಾಕಿದ್ದೇವೆ. ಜವಾಬ್ದಾರಿಯುತ ಎಲ್ಲ ಕಂಪನಿಗಳು ಏನು ಮಾಡಬೇಕೊ ಅದನ್ನು ಮಾಡಿವೆ. ಪುಟಿನ್ ಅವರ ಆಕ್ರಮಣಶೀಲತೆಗೆ ಪ್ರತಿಯಾಗಿ ಬಲವಾದ ಸಂದೇಶವನ್ನು ಕಳುಹಿಸಲಾಗಿದೆ’ಎಂದು ಬ್ರಿಟನ್ ಸಚಿವರು ಹೇಳಿದ್ದಾರೆ.

ಇತ್ತ, ರಷ್ಯಾ ಮತ್ತು ಉಕ್ರೇನ್ ನಡುವೆ ‘ಶಾಂತಿಯನ್ನು ಬೆಂಬಲಿಸುತ್ತೇವೆ ಮತ್ತು ಪ್ರತಿಪಾದಿಸುತ್ತೇವೆ’. ಇನ್ಫೋಸಿಸ್ ರಷ್ಯಾದಲ್ಲಿ ಉದ್ಯೋಗಿಗಳ ಸಣ್ಣ ತಂಡವನ್ನು ಹೊಂದಿದೆ ಎಂದು ಇನ್ಫೋಸಿಸ್ ಹೇಳಿಕೆಯಲ್ಲಿ ತಿಳಿಸಿದೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ. ಆ ತಂಡವು ಕೆಲವು ಜಾಗತಿಕ ಗ್ರಾಹಕರಿಗೆ ಸ್ಥಳೀಯವಾಗಿ ಸೇವೆ ನೀಡುತ್ತದೆ. ಸ್ಥಳೀಯ ರಷ್ಯಾದ ಉದ್ಯಮಗಳೊಂದಿಗೆ ಅವರು ಯಾವುದೇ ಸಕ್ರಿಯ ವ್ಯಾಪಾರ ಸಂಬಂಧಗಳನ್ನು ಹೊಂದಿಲ್ಲ ಎಂದು ಪ್ರಕಟಣೆ ತಿಳಿಸಿದೆ.

‘ಸಂಕಟದ ಸಮಯದಲ್ಲಿ ಸಮುದಾಯಕ್ಕೆ ನೆರವು ನೀಡುವುದು ಇನ್ಫೋಸಿಸ್‌ನ ಪ್ರಮುಖ ಆದ್ಯತೆಯಾಗಿದೆ. ಕಂಪನಿಯು ಉಕ್ರೇನ್‌ನಲ್ಲಿನ ಯುದ್ಧದ ಸಂತ್ರಸ್ತರಿಗೆ ಪರಿಹಾರ ಕಾರ್ಯಗಳಿಗಾಗಿ 1 ಮಿಲಿಯನ್ ಡಾಲರ್ ನೆರವು ಒದಗಿಸಲು ಬದ್ಧವಾಗಿದೆ’ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT