ಗುರುವಾರ , ಡಿಸೆಂಬರ್ 1, 2022
20 °C

ರೋಹಿಂಗ್ಯಾಗಳಿಂದ ದೇಶದ ಆರ್ಥಿಕತೆ ಮೇಲೆ ಗಂಭೀರ ಪರಿಣಾಮ: ಬಾಂಗ್ಲಾ ಪ್ರಧಾನಿ ಕಳವಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನ್ಯೂಯಾರ್ಕ್‌: ರೋಹಿಂಗ್ಯಾ ನಿರಾಶ್ರಿತರ ದೀರ್ಘಕಾಲದ ಉಪಸ್ಥಿತಿಯಿಂದಾಗಿ ದೇಶದ ಆರ್ಥಿಕತೆ, ಭದ್ರತೆ, ಸಾಮಾಜಿಕ–ರಾಜಕೀಯ ಸ್ಥಿರತೆ ಮತ್ತು ಪರಿಸರದ ಮೇಲೆ ಗಂಭೀರ ಪರಿಣಾಮಗಳು ಉಂಟಾಗುತ್ತಿವೆ ಎಂದು ಬಾಂಗ್ಲಾದೇಶ ಪ್ರಧಾನಿ ಶೇಖ್‌ ಹಸೀನಾ ಕಳವಳ ವ್ಯಕ್ತಪಡಿಸಿದ್ದಾರೆ.

ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನದಲ್ಲಿ ಮಾತನಾಡಿರುವ ಅವರು, ಈ ವಿಚಾರದಲ್ಲಿ ವಿಶ್ವಸಂಸ್ಥೆಯು ಪರಿಣಾಮಕಾರಿ ಪಾತ್ರ ನಿರ್ವಹಿಸಬೇಕು ಎಂದು ಒತ್ತಾಯಿಸಿದ್ದಾರೆ.

ರೋಹಿಂಗ್ಯಾಗಳ ವಾಪಸಾತಿಗೆ ಸಂಬಂಧಿಸಿದಂತೆ ಮೂಡಿರುವ ಅನಿಶ್ಚಿತತೆಯು ದೇಶದಲ್ಲಿ ವ್ಯಾಪಕ ಹತಾಶೆಗೆ ಕಾರಣವಾಗಿದೆ. ಮಾನವ ಮತ್ತು ಮಾದಕವಸ್ತು ಕಳ್ಳಸಾಗಣೆ ಸೇರಿದಂತೆ ಗಡಿಯಾಚೆಗಿನ ಅಪರಾಧ ಕೃತ್ಯಗಳು ಹೆಚ್ಚಾಗುತ್ತಿವೆ ಎಂದು ತಿಳಿಸಿದ್ದಾರೆ.

ಬಿಕ್ಕಟ್ಟು ಹೀಗೆಯೇ ಮುಂದುವರಿದರೆ, ಪ್ರಾದೇಶಿಕ ಭದ್ರತೆ ಮತ್ತು ಸ್ಥಿರತೆ ಮೇಲೆ ಪರಿಣಾಮ ಉಂಟಾಗಲಿದೆ ಎಂದು ಎಚ್ಚರಿಸಿದ್ದಾರೆ.

ಈ ವಿಚಾರವಾಗಿ ವಿಶ್ವಸಂಸ್ಥೆ ಹಾಗೂ ನೈಪಿಡಾವ್‌ (ಮ್ಯಾನ್ಮಾರ್‌ ರಾಜಧಾನಿ) ಜೊತೆಗಿನ ಮಾತುಕತೆಗಳ ಹೊರತಾಗಿಯೂ ಮ್ಯಾನ್ಮಾರ್‌ನಲ್ಲಿರುವ ತಮ್ಮ ಪೂರ್ವಜರ ನೆಲೆಗಳಿಗೆ ಒಬ್ಬನೇ ಒಬ್ಬ ರೋಹಿಂಗ್ಯಾ ಹಿಂದಿರುಗಲು ಸಾಧ್ಯವಾಗಿಲ್ಲ ಎಂದು ಒತ್ತಿ ಹೇಳಿದ್ದಾರೆ.

'ಸದ್ಯ ದೇಶದಲ್ಲಿ ಉಂಟಾಗಿರುವ ರಾಜಕೀಯ ಪ್ರಕ್ಷುಬ್ಧತೆ ಮತ್ತು ಶಸ್ತ್ರಾಸ್ತ್ರ ಬಿಕ್ಕಟ್ಟು ರೋಹಿಂಗ್ಯಾ ನಿರಾಶ್ರಿತರ ವಾಪಸಾತಿಯನ್ನು ಮತ್ತಷ್ಟು ಕಠಿಣವಾಗಿಸಿದೆ. ವಿಶ್ವಸಂಸ್ಥೆಯು ಈ ವಿಚಾರದಲ್ಲಿ ಪ್ರಮುಖ ಪಾತ್ರವಹಿಸಲಿದೆ ಎಂದು ಭಾವಿಸುತ್ತೇನೆ' ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

ಮ್ಯಾನ್ಮಾರ್‌ನಲ್ಲಿ 2017ರಲ್ಲಿ ನಡೆದ ಸೇನಾ ಕಾರ್ಯಾಚರಣೆಯಿಂದಾಗಿ ಸುಮಾರು 7.5 ಲಕ್ಷ ರೋಹಿಂಗ್ಯಾ ನಿರಾಶ್ರಿತರು ಬಾಂಗ್ಲಾದೇಶಕ್ಕೆ ಪಲಾಯನ ಮಾಡಿದ್ದರು. ಇದನ್ನು ಅಮೆರಿಕವು 'ನರಮೇಧ' ಎಂದು ಖಂಡಿಸಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು