ಗುರುವಾರ , ಜುಲೈ 7, 2022
23 °C

ರಷ್ಯಾ – ಉಕ್ರೇನ್‌ ಬಿಕ್ಕಟ್ಟು: ನ್ಯಾಟೊದ ಮೊದಲ ತುರ್ತು ಶೃಂಗಸಭೆ ಆರಂಭ

ಎಪಿ Updated:

ಅಕ್ಷರ ಗಾತ್ರ : | |

ಬ್ರುಸೆಲ್ಸ್‌: ಉಕ್ರೇನ್‌ ಮೇಲಿನ ರಷ್ಯಾದ ಆಕ್ರಮಣವನ್ನು ನಿಗ್ರಹಿಸಲು ನ್ಯಾಟೊ ತನ್ನ ರಕ್ಷಣಾ ವ್ಯವಸ್ಥೆಯನ್ನು ಬಲಗೊಳಿಸಬೇಕು ಮತ್ತು ಯುರೋಪ್‌ನಲ್ಲಿ ಎದುರಾಗಿರುವ ಹೊಸ ಭದ್ರತಾ ವಾಸ್ತವಕ್ಕೆ ಸ್ಪಂದಿಸಬೇಕು ಎಂದು ನ್ಯಾಟೊ ಮಹಾಕಾರ್ಯದರ್ಶಿ ಜೆನ್ಸ್‌ ಸ್ಟೋಲ್ಟೆನ್‌ಬರ್ಗ್‌ ಕರೆ ನೀಡುವುದರೊಂದಿಗೆ ತುರ್ತು ಶೃಂಗಸಭೆ ಗುರುವಾರ ಇಲ್ಲಿ ಆರಂಭವಾಗಿದೆ.

ಅಮೆರಿಕದ ಅಧ್ಯಕ್ಷ ಜೋ ಬೈಡನ್‌ ಮತ್ತು ನ್ಯಾಟೊದ ಇತರ ದೇಶಗಳ ನಾಯಕರು ಪಾಲ್ಗೊಂಡಿರುವ ಒಟ್ಟು ಮೂರು ಶೃಂಗಸಭೆಗಳ ಪೈಕಿ ಮೊದಲ ಗೋಪ್ಯ ಸಭೆ ಗುರುವಾರ ನಡೆದಿದ್ದು, ಶುಕ್ರವಾರ ಮತ್ತೆರಡು ಸಭೆಗಳು ನಡೆಯಲಿವೆ. ಕೊನೆಯಲ್ಲಿ ಬೈಡನ್‌ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಲಿದ್ದಾರೆ.

‘ಅತ್ಯಂತ ಸಂದಿಗ್ಧ ಸಂದರ್ಭದಲ್ಲಿ ನಾವು ಒಟ್ಟಾಗಿದ್ದೇವೆ. ರಷ್ಯಾದ ಅಪ್ರಚೋದಿತ ಆಕ್ರಮಣವನ್ನು ಖಂಡಿಸುವಲ್ಲಿ ಹಾಗೂ ಉಕ್ರೇನ್‌ನ ಸಾರ್ವಭೌಮತೆ ಮತ್ತು ಏಕತೆಗೆ ಬೆಂಬಲ ಸೂಚಿಸುವಲ್ಲಿ ನಾವೆಲ್ಲ ಒಗ್ಗಟ್ಟಿನಿಂದಿದ್ದೇವೆ’ ಎಂದು ಅವರು ಸ್ಟೋಲ್ಟೆನ್‌ಬರ್ಗ್‌ ಹೇಳಿದರು.

ರಷ್ಯಾದ ನಿರ್ಣಯಕ್ಕೆ ವಿಶ್ವಸಂಸ್ಥೆಯಲ್ಲಿ ಸೋಲು
ವಿಶ್ವಸಂಸ್ಥೆ:
ಉಕ್ರೇನ್‌ನಲ್ಲಿನ ‘ಮಾನವೀಯ ಬಿಕ್ಕಟ್ಟಿಗೆ’ ಸಂಬಂಧಿಸಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಮಂಡಿಸಿದ್ದ ನಿರ್ಣಯಕ್ಕೆ ರಷ್ಯಾ ಬೆಂಬಲ ಪಡೆಯಲು ವಿಫಲವಾಗಿದೆ. ನಿರ್ಣಯದ ‍ಪರ ಅಥವಾ ವಿರುದ್ಧ ಮತ ಚಲಾಯಿಸದೇ ಭಾರತ ಮತ್ತೊಮ್ಮೆ ತನ್ನ ತಟಸ್ಥ ನಿಲುವಿನ ಬದ್ಧತೆ ತೋರಿದೆ. 

ಯುದ್ಧಪೀಡಿತ ಉಕ್ರೇನ್‌ನಲ್ಲಿ ಮಾನವೀಯತೆಯ ಬಿಕ್ಕಟ್ಟು ಉಂಟಾಗಿಲ್ಲ ಎಂದು ರಷ್ಯಾ ನಿರ್ಣಯ ಮಂಡಿಸಿತು. ಚೀನಾ, ರಷ್ಯಾ ಪರ ಮತ ಚಲಾಯಿಸಿದರೆ, ಭಾರತ ಸೇರಿ 12 ರಾಷ್ಟ್ರಗಳು ತಟಸ್ಥವಾಗಿ ಉಳಿದವು.

ಭದ್ರತಾ ಮಂಡಳಿಯಲ್ಲಿ ಈ ನಿರ್ಣಯ ಅಂಗೀಕರಿಸಲು ರಷ್ಯಾ ಪರ 9 ದೇಶಗಳು ಮತ ಚಲಾಯಿಸಬೇಕಿತ್ತು. ಆದರೆ, ರಷ್ಯಾ ಅಗತ್ಯ ಬೆಂಬಲ ಪಡೆಯುವಲ್ಲಿ ವಿಫಲವಾಗಿದೆ. ರಷ್ಯಾ ಮತ್ತು ಚೀನಾ ಮಾತ್ರ ನಿರ್ಣಯದ ಪರವಾಗಿ ಮತ ಚಲಾಯಿಸಿವೆ. ನಿರ್ಣಯದ ವಿರುದ್ಧ ಯಾವ ರಾಷ್ಟ್ರವೂ ಮತ ಚಲಾಯಿಸಿಲ್ಲ.

ಉಕ್ರೇನ್‌ನಲ್ಲಿ ರಷ್ಯಾಕ್ಕೆ ಇನ್ನೂ ಗುರಿ ಸಾಧಿಸಲು ಆಗಿಲ್ಲ. ‘ಉಭಯ ದೇಶಗಳ ನಡುವೆ ಸಂಘರ್ಷ ಶಮನದ ಮಾತುಕತೆ ಕಠಿಣವಾಗಿದೆ’ ಎಂದು ರಷ್ಯಾದ ವಿದೇಶಾಂಗ ಸಚಿವ ಸರ್ಗೈ ಲಾವ್ರೊವ್‌ ಹೇಳಿದ್ದಾರೆ. 

ವ್ಯಾಪಾರ, ಪಾವತಿ ಸಮಸ್ಯೆ ಪರಿಶೀಲನೆ
ಉಕ್ರೇನ್ ಮತ್ತು ರಷ್ಯಾ ಸಂಘರ್ಷ ಉಲ್ಬಣಿಸುತ್ತಿರುವಾಗ, ರಷ್ಯಾದೊಂದಿಗಿನ ವಿವಿಧ ವ್ಯಾಪಾರ, ವ್ಯವಹಾರ ಹಾಗೂ ಹಣ ಪಾವತಿ ವಿಷಯಗಳ ಬಗ್ಗೆ ಕೇಂದ್ರ ಸರ್ಕಾರ ಪರಿಶೀಲನೆ ನಡೆಸುತ್ತಿದೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ರಾಜ್ಯಸಭೆಗೆ ತಿಳಿಸಿದರು.

ರಷ್ಯಾದಿಂದ ಆಮದು ಮಾಡಿಕೊಳ್ಳುತ್ತಿರುವ ಕಚ್ಚಾ ತೈಲದ ಪ್ರಮಾಣವೂ ಬಹಳ ಕಡಿಮೆ ಇದೆ. ರಷ್ಯಾ ಜತೆಗಿನ ವ್ಯವಹಾರದಲ್ಲಿ ಹಲವು ಸಮಸ್ಯೆಗಳು ಉದ್ಭವಿಸುತ್ತಿವೆ. ಇದರಲ್ಲಿ ಹಣ ಪಾವತಿಯೂ ಸೇರಿದೆ. ಇವುಗಳಿಗೆ ಯಾವ ರೀತಿ ಪರಿಹಾರ ಕಂಡುಕೊಳ್ಳಬೇಕೆಂದು ಸರ್ಕಾರ ಪರಿಶೀಲಿಸುತ್ತಿದೆ ಎಂದರು.

ಹಣಕಾಸು ಸಚಿವಾಲಯದ ನೇತೃತ್ವದಲ್ಲಿ ವಿವಿಧ ಸಚಿವಾಲಯಗಳನ್ನು ಒಳಗೊಂಡಿರುವ ತಂಡವು ಸರ್ಕಾರದೊಂದಿಗೆ ಈ ವಿಷಯಗಳ ಪರಿಶೀಲನೆ ನಡೆಸುತ್ತಿದೆ ಎಂದರು.

29ನೇ ದಿನದ ಬೆಳವಣಿಗೆಗಳು

*ರಷ್ಯಾದ ಬ್ಯಾಂಕ್‌ಗಳು, ಪ್ರಮುಖ ಕೈಗಾರಿಕೋದ್ಯಮಗಳ ಮೇಲೆ ಬ್ರಿಟನ್ ಸರ್ಕಾರದಿಂದ ಮತ್ತೊಂದು ಸುತ್ತಿನ ನಿರ್ಬಂಧ ಹೇರಿಕೆ. ಬೆಲಾರೂಸ್‌ನ 6 ಕಂಪನಿಗಳು ಸೇರಿದಂತೆ ರಷ್ಯಾದ 59 ಕಂಪನಿಗಳ ಮೇಲೆ ಬ್ರಿಟನ್ ಸರ್ಕಾರದಿಂದ ನಿರ್ಬಂಧ ಜಾರಿ. 

*ರಷ್ಯಾದಲ್ಲಿರುವ ಕಾರು ಉತ್ಪಾದನೆ ಘಟಕ ಸ್ಥಗಿತಗೊಳಿಸಲು ನಿಸ್ಸಾನ್-ರಿನಾಲ್ಟ್ ಗ್ರೂಪ್ ಸಂಸ್ಥೆಯ ಅವ್ಟೊವ್ಯಾಜ್ ಕಾರು ಸಂಸ್ಥೆ ನಿರ್ಧಾರದ ಬೆನ್ನಲ್ಲೇ, ಈ ಸಂಸ್ಥೆಗೆ ಅಗತ್ಯವಿರುವ ನೆರವು ನೀಡುವುದಾಗಿ ರಷ್ಯಾ ಗುರುವಾರ ಘೋಷಣೆ. 

*ಇಡೀ ಯುರೋಪ್ ಭದ್ರತೆ ನಿಟ್ಟಿನಲ್ಲಿ ಈಗ ಉಕ್ರೇನ್ ಹೋರಾಡುತ್ತಿದೆ. ನಾವು ಕೇವಲ ಉಕ್ರೇನ್ ಜನತೆಗಾಗಿ ಹೋರಾಡುತ್ತಿಲ್ಲ. ಬದಲಿಗೆ ಯುರೋಪ್ ಭದ್ರತೆಗಾಗಿ ಹೋರಾಡುತ್ತಿದ್ದೇವೆ. ಅಲ್ಲದೆ ನಾವು ಯುರೋಪ್ ಒಕ್ಕೂಟದ ಸದಸ್ಯ ರಾಷ್ಟ್ರವಾಗಲು ಅರ್ಹರಾಗಿದ್ದೇವೆ: ಸ್ವೀಡನ್ ಸಂಸದರನ್ನುದ್ದೇಶಿಸಿ ಮಾತನಾಡುವಾಗ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಪ್ರತಿಪಾದನೆ. 

*ನಿರ್ಬಂಧಕ್ಕೆ ಒಳಗಾದ ರಷ್ಯಾದ ಕೋಟ್ಯಧಿಪತಿ ರೋಮನ್ ಅಬ್ರಮೊವಿಶ್ ಅವರು ರಷ್ಯಾ ಮತ್ತು ಉಕ್ರೇನ್ ನಡುವೆ ಶಾಂತಿ ಮಾತುಕತೆಗಾಗಿ ಪ್ರಮುಖ ಪಾತ್ರ ವಹಿಸಿದ್ದರು. ಆದರೆ ಈಗ ಈ ವಿಚಾರವು ಉಭಯ ದೇಶಗಳ ಕೈಯಲ್ಲಿದೆ: ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು