ಉಕ್ರೇನ್ ಸೇನಾ ನೆಲೆಯ ಮೇಲೆ ರಷ್ಯಾದ ವೈಮಾನಿಕ ದಾಳಿ: 51ಕ್ಕೂ ಹೆಚ್ಚು ಮಂದಿ ಸಾವು

ಲುವಿವ್: ಉಕ್ರೇನ್ನ ಪೂರ್ವ ಮತ್ತು ಕೇಂದ್ರ ಭಾಗವನ್ನು ಗುರಿಯಾಗಿಸಿ ದಾಳಿ ನಡೆಸುತ್ತಿದ್ದ ರಷ್ಯಾ ಪಡೆಗಳು ಭಾನುವಾರ ಪಶ್ಚಿಮ ಭಾಗದಿಂದಲೂ ದಾಳಿ ಆರಂಭಿಸಿವೆ. ಪೋಲೆಂಡ್ ಗಡಿ ಹತ್ತಿರದಲ್ಲಿರುವ ಉಕ್ರೇನ್ನ ಸೇನಾ ನೆಲೆ ಮತ್ತು ಜನವಸತಿ ಪ್ರದೇಶಗಳ ಮೇಲೆ ರಷ್ಯಾ ಯುದ್ಧ ವಿಮಾನಗಳು ಬಾಂಬ್ ಮತ್ತು ಕ್ಷಿಪಣಿಗಳ ಸುರಿಮಳೆಗರೆದಿವೆ. ಇದರಿಂದ 51ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ.
ಪೋಲೆಂಡ್ ಗಡಿಗೆ 25 ಕಿ.ಮೀ. ಅಂತರದಲ್ಲಿರುವ ಯವೊರಿವ್ ಸೇನಾ ನೆಲೆ ಮೇಲೆ ರಷ್ಯಾ ವಿಮಾನಗಳು ಸುಮಾರು 30 ರಾಕೆಟ್ಗಳನ್ನು ಉಡಾಯಿಸಿವೆ. ಕನಿಷ್ಠ 35 ಮಂದಿ ಮೃತಪಟ್ಟಿದ್ದು, 134 ಜನರು ಗಾಯಗೊಂಡಿದ್ದಾರೆ. ಇಡೀ ಪ್ರದೇಶದಲ್ಲಿ ದಟ್ಟ ಹೊಗೆ, ಬೆಂಕಿ ಆವರಿಸಿದೆ. ಆಂಬುಲೆನ್ಸ್ಗಳು ಸ್ಥಳಕ್ಕೆ ಧಾವಿಸಿವೆ ಎಂದು ಸ್ಥಳೀಯ ಗವರ್ನರ್ ಮಾಕ್ಸಿಮ್ ನೀಡಿರುವ ಮಾಹಿತಿ ಆಧರಿಸಿ ರಾಯಿಟರ್ಸ್ ಸುದ್ದಿಸಂಸ್ಥೆ ವರದಿ ಮಾಡಿದೆ.
ಇಲ್ಲಿನ ಸೇನಾ ತರಬೇತಿ ಕೇಂದ್ರದಲ್ಲಿ ನ್ಯಾಟೊ ಪಡೆಗಳೊಂದಿಗೆ ಜಂಟಿ ಸಮರಾಭ್ಯಾಸ ಚಟುವಟಿಕೆಗಳನ್ನು ಉಕ್ರೇನ್ ನಡೆಸುತ್ತಿತ್ತು. ಯವೊರಿವ್ನ ಅಂತರರಾಷ್ಟ್ರೀಯ ಶಾಂತಿಪಾಲನ ಮತ್ತು ಭದ್ರತಾ ಕೇಂದ್ರದಲ್ಲಿ ವಿದೇಶಿ ಮಿಲಿಟರಿ ತರಬೇತುದಾರರು ಈ ಹಿಂದೆ ಕಾರ್ಯನಿರ್ವಹಿಸಿದ್ದರು. ವಾಯು ದಾಳಿ ನಡೆದಾಗ ಈ ಕೇಂದ್ರದಲ್ಲಿ ಅವರ ಇರುವಿಕೆಯ ಬಗ್ಗೆ ತಿಳಿದು ಬಂದಿಲ್ಲ.
ಸೇನಾ ಕಾರ್ಯಾಚರಣೆ 18ನೇ ದಿನಕ್ಕೆ ಕಾಲಿಟ್ಟಿರುವಾಗ ಉಕ್ರೇನ್ನ ಪಶ್ಚಿಮ ಭಾಗದಲ್ಲಿ ರಷ್ಯಾ ನಡೆಸಿದ ಅತಿ ದೊಡ್ಡ ದಾಳಿ ಇದು. ಇದನ್ನು ಪೋಲೆಂಡ್ ಖಂಡಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರರು ತಿಳಿಸಿದರು.
ಇದನ್ನೂ ಓದಿ–ರಷ್ಯಾ-ಉಕ್ರೇನ್ ಸಂಘರ್ಷ: ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ
9 ಮಂದಿ ಸಾವು: ದಕ್ಷಿಣದ ಒಡೆಸ್ಸಾ ಬಂದರು ಸಮೀಪದ ಮೈಕೊಲೈವ್ ನಗರದ ಮೇಲೂ ರಷ್ಯಾ ನಡೆಸಿದ ವಾಯು ದಾಳಿಗೆ 9 ಮಂದಿ ಮೃತಪಟ್ಟರು ಎಂದು ಪ್ರಾದೇಶಿಕ ಗವರ್ನರ್ ವಿಟಾಲಿಯ ಕಿಮ್ ತಿಳಿಸಿದರು.
ರಷ್ಯಾ ಪಡೆಗಳು ಕೀವ್ ವಶಕ್ಕೆ ಮುನ್ನುಗ್ಗಿ ಬರುತ್ತಿದ್ದು, ನಗರ ಸಮೀಪಿಸುತ್ತಿವೆ. ಸದ್ಯದಲ್ಲೇ ಇಡೀ ನಗರವನ್ನು ರಷ್ಯಾ ಸೇನೆ ಸುತ್ತುವರಿಯುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.
7 ನಿರಾಶ್ರಿತರು ಸಾವು: ಕೀವ್ ಸಮೀಪದ ಪೆರೆಮೊಹಾ ಹಳ್ಳಿಯ ಬಳಿ ನಿರಾಶ್ರಿತರನ್ನು ಸ್ಥಳಾಂತರಿಸುತ್ತಿದ್ದ ಮಾನವೀಯ ಬೆಂಗಾವಲು ಪಡೆಯ ಮೇಲೆ ರಷ್ಯಾ ಪಡೆಗಳು ಭಾನುವಾರ ನಡೆಸಿದ ಶೆಲ್ ದಾಳಿಗೆ ಒಂದು ಮಗು ಸೇರಿ ಉಕ್ರೇನಿನ ಏಳು ನಾಗರಿಕರು ಮೃತಪಟ್ಟಿದ್ದಾರೆ.
ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುತ್ತಿದ್ದ ನಿರಾಶ್ರಿತರ ಮೇಲೆ ರಷ್ಯಾ ಶೆಲ್ ದಾಳಿ ನಡೆಸುವ ಮೂಲಕ ಅವರು ಹಿಂದಿರುಗುವಂತೆ ಮಾಡಿದೆ. ಈ ಘಟನೆಯಲ್ಲಿ ಹಲವು ಮಂದಿ ಗಾಯಗೊಂಡಿದ್ದಾರೆ ಎಂದು ಉಕ್ರೇನ್ ರಕ್ಷಣಾ ಸಚಿವಾಲಯ ತಿಳಿಸಿದೆ.
ಮಾನವೀಯ ಕಾರಿಡಾರ್ಗಳನ್ನು ಸಂಘರ್ಷಪೀಡಿತ ವಲಯಗಳಾಚೆಗೆ ತೆರೆಯುವುದಾಗಿ ರಷ್ಯಾ ಹೇಳಿದೆ. ಆದರೆ, ಉಕ್ರೇನ್ ಅಧಿಕಾರಿಗಳು, ರಷ್ಯಾ ಪಡೆಗಳು ಮಾನವೀಯ ಕಾರಿಡಾರ್ಗಳಿಗೆ ಅಡ್ಡಿಪಡಿಸುತ್ತಿದ್ದು, ನಾಗರಿಕರ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ–ರಷ್ಯಾ ಬಾಂಬ್ ದಾಳಿಯ ನಡುವೆಯೂ ನಗುತ್ತಿದ್ದೇವೆ: ಉಕ್ರೇನ್ ನಟನ ಮಾರ್ಮಿಕ ಸಂದೇಶ
ಮತ್ತೊಬ್ಬ ಮೇಯರ್ ಅಪಹರಣ: ಶನಿವಾರವಷ್ಟೇ ಮೆಲಿಟೊಪೊಲ್ ನಗರದ ಮೇಯರ್ ಇವಾನ್ ಪೆಡೊರೊವ್ ಅವರನ್ನು ಅಪಹರಿಸಿದ್ದ ರಷ್ಯಾ ಪಡೆಗಳು, ಭಾನುವಾರ ನಿಪ್ರೊರುದ್ನೆ ನಗರದ ಮೇಯರ್ ಯುಗ್ಗಿನ್ ಮತ್ವೀವ್ ಎಂಬುವವರನ್ನು ಝಪೊರಿಝಿಯಾದಿಂದ ಅಪಹರಿಸಿದ್ದಾರೆ ಎಂದು ಉಕ್ರೇನ್ ವಿದೇಶಾಂಗ ವ್ಯವಹಾರಗಳ ಸಚಿವ ಡಿಮಿಟ್ರೊ ಕುಲೆಬಾ ಭಾನುವಾರ ಟ್ವೀಟ್ ಮಾಡಿದ್ದಾರೆ.
‘ಸ್ಥಳೀಯ ನಾಗರಿಕರು ತಿರುಗಿ ಬಿದ್ದಿರುವುದಕ್ಕೆ ರಷ್ಯಾ ಸೈನಿಕರು ಇಂತಹ ಭಯೋತ್ಪಾದನೆಯ ಹಾದಿ ಹಿಡಿದಿದ್ದಾರೆ. ಉಕ್ರೇನ್ ಮತ್ತು ಪ್ರಜಾಪ್ರಭುತ್ವದ ವಿರುದ್ಧ ರಷ್ಯಾ ನಡೆಸುತ್ತಿರುವ ಭಯೋತ್ಪಾದನೆ ನಿಲ್ಲಿಸಲು ಎಲ್ಲ ರಾಷ್ಟ್ರಗಳೂ ಒಗ್ಗೂಡಬೇಕು’ ಎಂದು ಝಪ್ರೊರಿಝಿಯಾ ಪ್ರದೇಶದ ರಾಜ್ಯ ಆಡಳಿತದ ಮುಖ್ಯಸ್ಥ ಒಲೆಕ್ಸಾಂಡರ್ ಸ್ಟಾರುಖ್ ಮನವಿ ಮಾಡಿದ್ದಾರೆ.
ಅಪಹರಣಕ್ಕೊಳಗಾಗಿರುವ ಮೇಯರ್ಗಳನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಿಸಲು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಜರ್ಮನಿ, ಫ್ರಾನ್ಸ್ ಹಾಗೂ ಇಸ್ರೇಲ್ ದೇಶಗಳ ಸಹಾಯ ಯಾಚಿಸಿದ್ದಾರೆ.
ದಿನದ ಬೆಳವಣಿಗೆಗಳು
* ಉಕ್ರೇನಿನ 50 ನಿರಾಶ್ರಿತರನ್ನು ಕರೆದೊಯ್ಯುತ್ತಿದ್ದ ಬಸ್ ಇಟಲಿಯ ಎಮಿಲಿಯಾ-ರೊಮಾಗ್ನ ಪ್ರಾಂತ್ಯದ ಫೊರ್ಲಿಯಲ್ಲಿ ಉರುಳಿಬಿದ್ದು, ಒಬ್ಬರು ಮೃತಪಟ್ಟಿದ್ದಾರೆ. ಈ ಬಸ್ ಅಡ್ರಿಯಾಟಿಕ್ ಬಂದರು ನಗರ ಪೆಸ್ಕರಾಗೆ ತೆರಳುತ್ತಿತ್ತು
* ಉಕ್ರೇನ್ ಮೇಲಿನ ಸೇನಾ ಕಾರ್ಯಾಚರಣೆ ವಿರೋಧಿಸಿ ರಷ್ಯಾ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ 250ಕ್ಕೂ ಹೆಚ್ಚು ನಾಗರಿಕರನ್ನು ರಷ್ಯಾ ಪೊಲೀಸರು ವಶಕ್ಕೆ ಪಡೆದಿದ್ದಾರೆ
* ಉಕ್ರೇನ್ನಲ್ಲಿ ರಷ್ಯಾ ಹೊಸ ‘ಕೈಗೊಂಬೆ-ಗಣರಾಜ್ಯ’ ಸ್ಥಾಪಿಸುವ ಪ್ರಯತ್ನ ನಡೆಸುತ್ತಿದೆ. ಉಕ್ರೇನ್ ಅನ್ನು ಒಡೆಯಲು ಹುನ್ನಾರ ನಡೆಸಿದೆ– ವೊಲೊಡಿಮಿರ್ ಝೆಲೆನ್ಸ್ಕಿ ಆರೋಪ
* ಮಾನವೀಯ ಕಾರಿಡಾರ್ಗಳ ಮೂಲಕ ಇದುವರೆಗೆ 1.25 ಲಕ್ಷ ನಾಗರಿಕರನ್ನು ಸ್ಥಳಾಂತರಿಸಲಾಗಿದೆ– ಝೆಲೆನ್ಸ್ಕಿ
* ಉಕ್ರೇನ್ ನಿರಾಶ್ರಿತ ಕುಟುಂಬಕ್ಕೆ ಮಾಸಿಕ ತಲಾ 350 ಪೌಂಡ್ ಧನ ಸಹಾಯ ನೀಡುವುದಾಗಿ ಬ್ರಿಟನ್ ಭರವಸೆ
* ಪಾಶ್ಚಿಮಾತ್ಯ ರಾಷ್ಟ್ರಗಳ ನಿರ್ಬಂಧಗಳಿಂದ ಅರ್ಥವ್ಯವಸ್ಥೆಗೆ ಆಗಿರುವ ನಷ್ಟವನ್ನು ಸರಿಪಡಿಸಿಕೊಳ್ಳಲು ಚೀನಾದ ನೆರವಿನ ನಿರೀಕ್ಷೆಯಲ್ಲಿದೆ ರಷ್ಯಾ. ಆದರೆ, ರಷ್ಯಾದ ಆರ್ಥಿಕತೆಯ ಪುನಶ್ಚೇತನಕ್ಕೆ ನೆರವು ನೀಡದಂತೆ ಚೀನಾಕ್ಕೆ ಅಮೆರಿಕ ಎಚ್ಚರಿಕೆ ನೀಡಿದೆ
* ರಷ್ಯಾ ಸೈನಿಕರಿಂದ ಮರಿಯುಪೋಲ್ ನಗರವೊಂದರಲ್ಲೇ ಈವರೆಗೆ 2,100 ನಾಗರಿಕರ ಹತ್ಯೆ– ಉಕ್ರೇನ್ ಅಧಿಕಾರಿಗಳ ಹೇಳಿಕೆ
* ಉಕ್ರೇನ್ ಮೇಲಿನ ರಷ್ಯಾ ಆಕ್ರಮಣ ಸಂಬಂಧ ಅಮೆರಿಕದ ಉನ್ನತ ನಿಯೋಗ ಸೋಮವಾರ ಚೀನಾದ ಉನ್ನತ ಅಧಿಕಾರಿಗಳೊಂದಿಗೆ ರೋಮ್ನಲ್ಲಿ ಮಹತ್ವದ ಮಾತುಕತೆ ನಡೆಸುವುದಾಗಿ ಶ್ವೇತಭವನ ಹೇಳಿದೆ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.