ಭಾನುವಾರ, ಜುಲೈ 3, 2022
28 °C
ಜಲಾಂತರ್ಗಾಮಿ ನೌಕೆಯಿಂದ ಕ್ರೂಸ್‌ ಕಲಿಬ್‌ ಕ್ಷಿಪಣಿಗಳ ಸರಣಿ ದಾಳಿ

ರಷ್ಯಾ ದಾಳಿ ಮುಂದುವರಿಕೆ: ಉಕ್ರೇನ್‌ನ ಮತ್ತೊಂದು ಶಸ್ತ್ರಕೋಠಿ ಧ್ವಂಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಾಸ್ಕೊ: ಉಕ್ರೇನಿನ ಮಿಲಿಟರಿ ಪ್ರತಿದಾಳಿ ಶಕ್ತಿಯನ್ನು ಕುಗ್ಗಿಸಲು ನಿಖರ ಗುರಿ ಭೇದಿಸುವ ಕ್ಷಿಪಣಿಗಳ ದಾಳಿ ಮುಂದುವರಿಸಿರುವ ರಷ್ಯಾ, ಉಕ್ರೇನಿನ ವಾಯವ್ಯ ಭಾಗದ ಜೈಟೊಮಿರ್‌ ನಗರದ ಬಳಿ ಉಕ್ರೇನ್‌ ಸೇನೆಯ ಶಸ್ತ್ರಾಸ್ತ್ರ ಮತ್ತು ಮಿಲಿಟರಿ ಉಪಕರಣಗಳ ರಹಸ್ಯ ಸಂಗ್ರಹಾಗಾರವನ್ನು ಧ್ವಂಸಗೊಳಿಸಿದೆ. 

‘ಉಕ್ರೇನ್‌ ಜೈಟೊಮಿರ್‌ ನಗರದ ಬಳಿ ಭಾರೀ ಪ್ರಮಾಣದಲ್ಲಿ ಶಸ್ತ್ರಾಸ್ತ್ರ, ಮದ್ದುಗುಂಡುಗಳನ್ನು ಸಂಗ್ರಹಿಸಿಟ್ಟಿದ್ದ ಶಸ್ತ್ರಗಾರವನ್ನು ನಾಶ ಮಾಡಲಾಗಿದೆ. ಇದು ಶತ್ರುವಿನ ಅತ್ಯಂತ ಶಕ್ತಿಯುತ  ಕೇಂದ್ರವಾಗಿತ್ತು. ಶುಕ್ರವಾರ ಜಲಾಂತರ್ಗಾಮಿ ನೌಕೆಯಿಂದ ಬಹುವಿಧದ ಕಲಿಬ್‌ ಕ್ರೂಸ್‌ ಕ್ಷಿಪಣಿಗಳ ಸರಣಿ ದಾಳಿ ನಡೆಸಲಾಯಿತು. ಕಲಿಬ್‌ ಕ್ಷಿಪಣಿಗಳು ಯಶಸ್ವಿಯಾಗಿ ಗುರಿ ಭೇದಿಸಿವೆ’ ಎಂದು ರಷ್ಯಾದ ರಕ್ಷಣಾ ಸಚಿವಾಲಯ ಹೇಳಿದೆ.

ಜಲಾಂತರ್ಗಾಮಿನೌಕೆಯಿಂದ ಕಲಿಬ್‌ ಕ್ಷಿಪಣಿಗಳನ್ನು ಉಡಾಯಿಸಿ, ಉಕ್ರೇನಿನ ಶಸ್ತ್ರಾಗಾರವನ್ನು ನಾಶಪಡಿಸಿರುವ ವಿಡಿಯೊವನ್ನು ರಷ್ಯಾ ರಕ್ಷಣಾ ಸಚಿವಾಲಯ ಶನಿವಾರ ಟ್ವಿಟರ್‌ ಮತ್ತು ಫೇಸ್‌ಬುಕ್‌ ಜಾಲತಾಣಗಳಲ್ಲಿನ ತನ್ನ ಅಧಿಕೃತ ಖಾತೆಯಲ್ಲಿ ಬಿಡುಗಡೆ ಮಾಡಿದೆ. ಈ ಬಗ್ಗೆ ‘ಅಲ್‌ ಜಝೀರಾ’ ಕೂಡ ವರದಿ ಮಾಡಿದೆ.

‘ಈವರೆಗೆ ಉಕ್ರೇನ್‌ನಲ್ಲಿ 111 ಮಿಲಿಟರಿ ಸೌಲಭ್ಯ ತಾಣಗಳನ್ನು ನಾಶಪಡಿಸಲಾಗಿದೆ. ಒಂಬತ್ತು ಶಸ್ತ್ರ ಸಂಗ್ರಹಾಗಾರ ಮತ್ತು ಎರಡು ಇಂಧನ ಸಂಗ್ರಹಗಾರ, ಶಶಸ್ತ್ರ ಪಡೆಯ 92 ಬಲಿಷ್ಠ ತಾಣ ನಾಶಪಡಿಸಲಾಗಿತ್ತು. ಒಂದೇ ದಿನದಲ್ಲಿ ಮೂರು ಯುದ್ಧ ವಿಮಾನಗಳು, 6 ಮಾನವ ರಹಿತ ಡ್ರೋನ್‌ಗಳು, ಕ್ಷಿಪಣಿಗಳ ತಾಂತ್ರಿಕ ಸಂಕೀರ್ಣ ನಾಶಪಡಿಸಲಾಗಿದೆ’ ಎಂದು ರಷ್ಯಾ ರಕ್ಷಣಾ ಸಚಿವಾಲಯದ ವಕ್ತಾರ ಮೇಜರ್‌ ಜನರಲ್‌ ಐಗೋರ್‌ ಕೊನಶೆಂಕವ್‌ ಶನಿವಾರ ತಿಳಿಸಿದ್ದಾರೆ.

ಸೇನಾ ಕಾರ್ಯಾಚರಣೆ 24ನೇ ದಿನಕ್ಕೆ ಕಾಲಿಟ್ಟ ಸಂದರ್ಭದಲ್ಲಿ ರಷ್ಯಾ ಮೊದಲ ಬಾರಿಗೆ ತನ್ನ ಬತ್ತಳಿಕೆಯ ಬ್ರಹ್ಮಾಸ್ತ್ರ ‘ಕಿಂಜಾಲ್‌’ ಹೈಪರ್‌ ಸಾನಿಕ್‌ ಕ್ಷಿಪಣಿ ಬಳಸಿ, ಪಶ್ಚಿಮ ಉಕ್ರೇನ್‌ನ ಕಾರ್ಪಾಥಿಯನ್ ಪರ್ವತಗಳ ತಪ್ಪಲಿನ ಡಿಲ್ಯಾಟಿನ್‌ ಗ್ರಾಮದಲ್ಲಿದ್ದ ಉಕ್ರೇನ್‌ ಸೇನೆಯ ಬೃಹತ್‌ ಶಶ್ತ್ರಾಸ್ತ್ರ ಮತ್ತು ಕ್ಷಿಪಣಿಗಳ ಸಂಗ್ರಹದ ನೆಲಮಾಳಿಗೆಯ ಗೋದಾಮನ್ನು ಧ್ವಂಸ ಮಾಡಿತ್ತು.‌

ಇತ್ತೀಚೆಗಷ್ಟೇ ಮೈಕೊಲೈವ್‌ನ ಅಜೋವಾ ಕಪ್ಪು ಸಮುದ್ರದ ಬಂದರು ಸಮೀಪದ ಕೋಸ್ಟಿಯಾಂಟಿನಿವ್ಕಾದಲ್ಲಿನ ಉಕ್ರೇನ್‌ ಸೇನೆಗೆ ಇಂಧನ ಪೂರೈಸುವ ಬೃಹತ್‌ ಇಂಧನ ಸಂಗ್ರಹಾಗಾರವನ್ನು ಕಲಿಬ್‌ ಕ್ರೂಸ್‌ ಕ್ಷಿಪಣಿಗಳಿಂದ ರಷ್ಯಾ ಪಡೆಗಳು ಧ್ವಂಸ ಮಾಡಿದ್ದವು.

‘ರಾಜಧಾನಿ ಕೀವ್‌ ನಗರಕ್ಕೆ 146 ಕಿ.ಮೀ  ದೂರದಲ್ಲಿರುವ ಚೆರ್ನಿವ್ ಸೇರಿದಂತೆ ಉಕ್ರೇನಿನ ಪ್ರಮುಖ ನಗರಗಳ ಮೇಲೆ ರಷ್ಯಾ ಪಡೆಗಳ ಶೆಲ್‌ ದಾಳಿ ದಾಳಿ ಮುಂದುವರಿದಿದೆ. ನಾಗರಿಕರ ಪ್ರದೇಶಗಳನ್ನು ಗುರಿಯಾಗಿಸಿ ಮತ್ತಷ್ಟು ಪ್ರಬಲ ಶಶ್ತ್ರಾಸ್ತ್ರಗಳನ್ನು ರಷ್ಯಾ ಬಳಸುವ ಸಾಧ್ಯತೆ ಇದೆ’ ಎಂದು ಬ್ರಿಟನ್‌ ರಕ್ಷಣಾ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

31ನೇ ದಿನದ ಬೆಳವಣಿಗೆಗಳು

* ಶುಕ್ರವಾರ ಒಂದೇ ದಿನ ರಷ್ಯಾದ 3 ಯುದ್ಧ ವಿಮಾನಗಳು, 5 ಕ್ರೂಸ್ ಕ್ಷಿಪಣಿಗಳು, 3 ಮಾನವ ರಹಿತ ಡ್ರೋನ್‌ಗಳು ಮತ್ತು ಒಂದು ಹೆಲಿಕಾಪ್ಟರ್ ನಾಶಪಡಿಸಲಾಗಿದೆ –ಉಕ್ರೇನ್ ಸಶಸ್ತ್ರ ಪಡೆಗಳ ಕಮಾಂಡರ್‌

* ಲುವಿವ್ ನಗರದಲ್ಲಿ ಮೂರು ಬಾರಿ ಭಾರೀ ಸ್ಫೋಟದ ಸದ್ದು ಕೇಳಿಸಿದೆ –ನಗರದ ಗವರ್ನರ್‌ ಹೇಳಿಕೆ

* ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರು ವಾರ್ಷಾದಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರನ್ನು ‘ಕಟುಕ’ ಎಂದು ನಿಂದಿಸಿದ್ದಾರೆ

* ಡಾನ್‌ಬಾಸ್‌ ಪ್ರದೇಶದಲ್ಲಿ ಆಕ್ರಮಣಕ್ಕೆ ತನ್ನ ಸೇನೆಗೆ ಬಲ ತುಂಬಲು ರಷ್ಯಾ ಜಾರ್ಜಿಯಾದಿಂದ ಸೇನಾಪಡೆಗಳನ್ನು ಉಕ್ರೇನ್‌ಗೆ ಕಳುಹಿಸುತ್ತಿರುವ ಸೂಚನೆಗಳು ಕಂಡುಬಂದಿವೆ– ಅಮೆರಿಕದ ಹಿರಿಯ ರಕ್ಷಣಾ ಅಧಿಕಾರಿ ಹೇಳಿಕೆ

* ಮರಿಯುಪೊಲ್‌ನಲ್ಲಿ ಸಿಲುಕಿರುವ ನಾಗರಿಕರನ್ನು ಮಾನವೀಯ ಕಾರಿಡಾರ್‌ಗಳ ಮೂಲಕ ಸ್ಥಳಾಂತರಿಸಲು ಫ್ರಾನ್ಸ್, ಟರ್ಕಿ, ಗ್ರೀಸ್‌ ಜಂಟಿ ಕಾರ್ಯಾಚರಣೆ ನಡೆಸಲಿವೆ– ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್

* ಉಕ್ರೇನ್ ಯುದ್ಧದಲ್ಲಿ ಇಲ್ಲಿಯವರೆಗೆ ರಷ್ಯಾದ 7 ಮಂದಿ ಹಿರಿಯ ಸೇನಾಧಿಕಾರಿಗಳು ಹತರಾಗಿದ್ದಾರೆ.

* ಅಮೆರಿಕ ಅಧ್ಯಕ್ಷ ಜೋ ಬೈಡನ್‌ ವಾರ್ಸಾದಲ್ಲಿ ಉಕ್ರೇನಿನ ವಿದೇಶಾಂಗ ಸಚಿವ ಡಿಮಿಟ್ರಿ ಕುಲೆಬಾ, ರಕ್ಷಣಾ ಸಚಿವ ಒಲೆಕ್ಸಿ ರೆಜ್ನಿಕಾವ್‌ ಅವರೊಂದಿಗೆ ಮಹತ್ವದ ಮಾತುಕತೆ ನಡೆಸಿದರು

* ಅಣ್ವಸ್ತ್ರಗಳ ಬಳಕೆ ಮಾಡುವ ರಷ್ಯಾದ ಬಡಾಯಿ ಅಪಾಯಕಾರಿ ಶಸ್ತ್ರಾಸ್ತ್ರ ಸ್ಪರ್ಧೆಯನ್ನು ಉತ್ತೇಜಿಸುತ್ತಿದೆ. ಒಂದು ನಿರ್ದಿಷ್ಟ ದೇಶವನ್ನಷ್ಟೇ ಅಲ್ಲದೆ ಇಡೀ ಗ್ರಹವನ್ನು ಅಣ್ವಸ್ತ್ರಗಳಿಂದ ನಾಶಪಡಿಸಬಹುದು– ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ, ದೋಹಾದ ರಾಜಕಾರಣಿಗಳು ಮತ್ತು ಉದ್ಯಮಿಗಳನ್ನು ಉದ್ದೇಶಿ ಮಾಡಿದ ವಿಡಿಯೊ ಭಾಷಣದಲ್ಲಿ ಹೇಳಿಕೆ

* ಉಕ್ರೇನ್ ಮೇಲಿನ ರಷ್ಯಾ ಆಕ್ರಮಣದಿಂದ ಉಂಟಾದ ಅಣು ದಾಳಿಯ ಬೆದರಿಕೆ ಇಡೀ ಜಗತ್ತನ್ನು ಆತಂಕಕ್ಕೆ ದೂಡಿದೆ. ಅಣ್ವಸ್ತ್ರ ದಾಳಿಗೆ ತುತ್ತಾದ ಏಕೈಕ ದೇಶ ನಮ್ಮದು– ಆ ‘ದುರಂತ’ ಮತ್ತೆಂದಿಗೂ ಮರುಕಳಿಸಬಾರದು–ಜಪಾನ್‌ ಪ್ರಧಾನಿ ಫುಮಿಯೊ ಕಿಷಿಡ

* ಪುಟಿನ್ ಉಕ್ರೇನ್‌ ಮೇಲೆ ಅನಾದಿಕಾಲದ ‘ಅನಾಗರಿಕ ಯುದ್ಧ’ ನಡೆಸುತ್ತಿದ್ದಾರೆ. ಇದರಲ್ಲಿ ಅವರಿಗೆ ಗೆಲುವು ಸಿಗದು– ನ್ಯಾಟೊ ಉಪ ಪ್ರಧಾನ ಕಾರ್ಯದರ್ಶಿ ಮಿರ್ಸಿಯಾ ಜಿಯೋನಾ ಹೇಳಿಕೆ

* ಮರಿಯುಪೊಲ್‌ನಲ್ಲಿ ಇನ್ನೂ ಒಂದು ಲಕ್ಷಕ್ಕೂ ಹೆಚ್ಚು ನಾಗರಿಕರು ಸಿಲುಕಿದ್ದಾರೆ– ಉಕ್ರೇನ್‌ ಉಪ ಪ್ರಧಾನಿ ಇರೆನಾ ವೆರೆಸ್‌ಚುಕ್‌

* ಉಕ್ರೇನ್‌ನಲ್ಲಿ ರಷ್ಯಾ 34 ಆರೋಗ್ಯ ಕೇಂದ್ರಗಳ ಮೇಲೆ ದಾಳಿ ನಡೆಸಿದೆ
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು