ಕೀವ್: ಇಂಧನ ಮೂಲಸೌಕರ್ಯ ಗುರಿಯಾಗಿಸಿ ರಷ್ಯಾ ಸೇನೆಯು ಗುರುವಾರ ನಸುಕಿನಲ್ಲಿ ಉಕ್ರೇನ್‌ನ ನಗರಗಳಲ್ಲಿ ಭಾರಿ ಕ್ಷಿಪಣಿಗಳು ಮತ್ತು ಡ್ರೋನ್ ದಾಳಿ ನಡೆಸಿದೆ.
ಲುವಿವ್ ನಗರದ ವಸತಿ ಕಟ್ಟಡಗಳಿಗೆ ಕ್ಷಿಪಣಿಗಳು ಅಪ್ಪಳಿಸಿ ನಾಲ್ವರು ನಾಗರಿಕರು ಸೇರಿ ವಿವಿಧೆಡೆ ಒಟ್ಟು ಒಂಬತ್ತು ನಾಗರಿಕರು ಹತರಾಗಿದ್ದಾರೆ. ಹಲವರು ಗಾಯಗೊಂಡಿದ್ದಾರೆ ಎಂದು ಉಕ್ರೇನ್ ಅಧಿಕಾರಿಗಳು ಹೇಳಿದ್ದಾರೆ.
ಉಪ್ಪಿನ ಗಣಿ ನಗರ ಬಖ್ಮಟ್ ಸಂಪೂರ್ಣ ವಶಕ್ಕಾಗಿ ಇಂಧನ ಮೂಲಸೌಕರ್ಯಗಳನ್ನೇ ಪ್ರಮುಖ ಗುರಿಯಾಗಿಸಿ, ರಷ್ಯಾ ಒಂದೇ ದಿನದಲ್ಲಿ 81 ಕ್ಷಿಪಣಿಗಳು ಮತ್ತು 8 ಡ್ರೋನ್‌ಗಳನ್ನು ಉಡಾಯಿಸಿದೆ.
ಮೂರು ವಾರಗಳ ನಂತರ ಇದೇ ಮೊದಲ ಸಲ, ರಾಜಧಾನಿ ಕೀವ್ ನಗರವೂ ಸೇರಿ ದೇಶದಾದ್ಯಂತ ವಾಯು ದಾಳಿಯ ಎಚ್ಚರಿಕೆ ಗಂಟೆಗಳು ಮೊಳಗಿದವು. ದೇಶದ ಅನೇಕ ಕಡೆ ವಾಯು ರಕ್ಷಣಾ ವ್ಯವಸ್ಥೆಗಳನ್ನು ಸಕ್ರಿಯಗೊಳಿಸಲಾಗಿದೆ ಎಂದು ಉಕ್ರೇನ್ ಮಾಧ್ಯಮ ವರದಿಗಳು ಹೇಳಿವೆ.
‘ಹಾರ್ಕಿವ್ ಮೇಲೆ 15ಕ್ಕೂ ಹೆಚ್ಚು ಕ್ಷಿಪಣಿಗಳು ಅಪ್ಪಳಿಸಿವೆ. ಪ್ರಮುಖ ಮೂಲಸೌಕರ್ಯ ಮತ್ತು ವಸತಿ ಕಟ್ಟಡಗಳು ಧ್ವಂಸವಾಗಿವೆ. ಒಡೆಸಾದಲ್ಲೂ ಇದೇ ರೀತಿಯ ದಾಳಿಯಾಗಿದೆ. ಅಪಾರ ಹಾನಿ ಉಂಟಾಗಿದೆ’ ಎಂದು ಈಶಾನ್ಯ ಹಾರ್ಕಿವ್ ಗವರ್ನರ್ ಒಲೆಹ್ ಸಿನೀಹುಬೊವ್ ಮತ್ತು ದಕ್ಷಿಣ ಒಡೆಸಾದ ಗವರ್ನರ್ ಮ್ಯಾಕ್ಸೀಮ್ ಮಾರ್ಶೆಂಕೊ ಟೆಲಿಗ್ರಾಮ್‌ನಲ್ಲಿ ತಿಳಿಸಿದ್ದಾರೆ.
‘ಉತ್ತರ ಚೆರ್ನಿವ್, ಪಶ್ಚಿಮ ಲುವಿವ್, ನೀಪರ್, ಲುಟ್ಸ್ಕ್ ಮತ್ತು ರಿವ್ನೆ ನಗರಗಳ ಮೇಲೆ ಭಾರಿ ಕ್ಷಿಪಣಿಗಳು ಎರಗಿವೆ. ರಷ್ಯಾದ ಸೇನಾ ದಾಳಿಯ ಎರಡನೇ ಅಲೆ ಇದು. ನಾಗರಿಕರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮನವಿ ಮಾಡಲಾಗಿದೆ’ ಎಂದು ಅವರು ಹೇಳಿದ್ದಾರೆ.
ಕೀವ್ ನಗರದ ಮೇಲೆ ಸ್ಫೋಟಕಗಳಿದ್ದ ಡ್ರೋನ್ ಮತ್ತು ಕ್ಷಿಪಣಿಗಳ ದಾಳಿಯಾಗಿದೆ. ಪ್ರಮುಖ ಇಂಧನ ಮೂಲಸೌಕರ್ಯಗಳು ಧ್ವಂಸವಾಗಿವೆ ಎಂದು ಕೀವ್ ಮೇಯರ್ ವಿಟಾಲಿ ಕ್ಲಿಟ್‌ಸ್ಕೊ ಹೇಳಿದ್ದಾರೆ.
ಕಳೆದ ಅಕ್ಟೋಬರ್‌ನಿಂದ ಉಕ್ರೇನ್ ಮೇಲೆ ರಷ್ಯಾ ಭಾರಿ ಕ್ಷಿಪಣಿಗಳ ಮಳೆಗರೆಯುತ್ತಿದೆ. ಆರಂಭದಲ್ಲಿ ಈ ದಾಳಿ ದೇಶದ ಇಂಧನ ಮೂಲಸೌಕರ್ಯ ಗುರಿಯಾಗಿಸಿ ವಾರಕ್ಕೊಮ್ಮೆ ನಡೆಯುತ್ತಿತ್ತು.
ಒಪ್ಪಂದ ವಿಸ್ತರಣೆಗೆ ಉಕ್ರೇನ್ ಒಪ್ಪಿಗೆ: ಕಪ್ಪು ಸಮುದ್ರದ ಬಂದರುಗಳಿಂದ ಆಹಾರ ಧಾನ್ಯ ಮತ್ತು ರಸಗೊಬ್ಬರ ಸಾಗಿಸಲು ಅನುವು ಮಾಡಿಕೊಡುವ ರಷ್ಯಾ ಮತ್ತು ಉಕ್ರೇನ್ ನಡುವಿನ ಒಪ್ಪಂದ ವಿಸ್ತರಣೆಗಾಗಿ ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರು ಕೀವ್‌ಗೆ ಭೇಟಿ ನೀಡಿದ್ದರು. ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರೊಂದಿಗೆ ಗುಟರೆಸ್ ಮಾತುಕತೆ ನಡೆಸಿದರು. ಒಪ್ಪಂದ ವಿಸ್ತರಣೆಗೆ ಉಕ್ರೇನ್ ಅನುಮತಿಸಿದ ಕೆಲವೇ ಗಂಟೆಗಳ ನಂತರ ರಷ್ಯಾ, ಈ ದಾಳಿ ನಡೆಸಿದೆ.
ಅಣು ಸ್ಥಾವರಕ್ಕೆ 6ನೇ ಬಾರಿ ವಿದ್ಯುತ್ ಪೂರೈಕೆ ಸ್ಥಗಿತ
ರಷ್ಯಾ ದಾಳಿಯ ನಂತರ ಝಪೊರಿಝಿಯಾ ಅಣು ವಿದ್ಯುತ್ ಸ್ಥಾವರಕ್ಕೆ ವಿದ್ಯುತ್ ಪೂರೈಕೆ ಮತ್ತೊಮ್ಮೆ ಕಡಿತವಾಗಿದೆ.
ಸ್ಥಾವರದ ರಿಯಾಕ್ಟರ್‌ಗಳನ್ನು ಡೀಸೆಲ್ ಜನರೇಟರ್‌ನಿಂದ ನಿರ್ವಹಿಸಲಾಗುತ್ತಿದೆ. ರಷ್ಯಾ ಪಡೆಗಳು ಅಣು ಸ್ಥಾವರ ಆಕ್ರಮಿಸಿಕೊಂಡ ನಂತರ ಇದುವರೆಗೆ ಆರು ಬಾರಿ ವಿದ್ಯುತ್ ಪೂರೈಕೆ ಸ್ಥಗಿತವಾಗಿದೆ. ದಾಸ್ತಾನು ಇರುವ ಡೀಸೆಲ್‌ನಿಂದ ಸ್ಥಾವರವನ್ನು ಹತ್ತು ದಿನಗಳವರೆಗೆ ಮಾತ್ರ ನಿರ್ವಹಿಸಲು ಸಾಧ್ಯ’ ಎಂದು ಉಕ್ರೇನ್ ಅಣು ಇಂಧನ ನಿರ್ವಾಹಕ ಎನರ್‌ಗೋಟಮ್ ಹೇಳಿದೆ.
‘ದುರಂತಕ್ಕೆ ಕ್ಷಣಗಣನೆ ಶುರುವಾಗಿದೆ. ಸ್ಥಾವರಕ್ಕೆ ಬಾಹ್ಯ ವಿದ್ಯುತ್ ಸರಬರಾಜು ಅಸಾಧ್ಯವಾದರೆ, ಇಡೀ ಜಗತ್ತು ವಿಕಿರಣ ಪರಿಣಾಮಗಳ ದುರಂತ ಎದುರಿಸಬೇಕಾಗುತ್ತದೆ’ ಎಂದು ಅದು ಎಚ್ಚರಿಸಿದೆ.
ಸ್ಥಾವರ ನಿಯಂತ್ರಿಸುತ್ತಿರುವ ರಷ್ಯಾ ಅಧಿಕಾರಿಗಳು, ಎನರ್ಗೋಟಮ್ ಹೇಳಿಕೆಯನ್ನು ತಳ್ಳಿಹಾಕಿದ್ದಾರೆ. ‘ಶಾರ್ಟ್ ಸರ್ಕೀಟ್‌ನಿಂದಾಗಿ ವಿದ್ಯುತ್ ಪೂರೈಕೆಯಲ್ಲಿ ಅಡಚಣೆಯಾಗಿದೆ. ಆದರೆ, ಡೀಸೆಲ್ ಜನರೇಟರ್ ಚಾಲನೆಯಲ್ಲಿದೆ. ಸ್ಥಾವರದಲ್ಲಿ ಡೀಸೆಲ್ ಇಂಧನ ದಾಸ್ತಾನು ಸಾಕಷ್ಟು ಇದೆ. ಸ್ಥಾವರದ ಸುರಕ್ಷತೆ ಮತ್ತು ಭದ್ರತೆಗೆ ಯಾವುದೇ ಅಪಾಯವಿಲ್ಲ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
***
ನಾಗರಿಕರಲ್ಲಿ ಭಯ ಹುಟ್ಟಿಸುವ ಪ್ರಯತ್ನವಾಗಿ ರಷ್ಯಾದ ಆಕ್ರಮಣಕಾರರು, ಮಲಗಿದ್ದ ಉಕ್ರೇನಿಯರ ಮೇಲೆ ದಾಳಿ ಮಾಡಿದ್ದಾರೆ. ಅವರಿಂದ ನಮ್ಮ ಜನರಿಗೆ ಭೀತಿಯನ್ನಷ್ಟೇ ಹುಟ್ಟಿಸಲು ಸಾಧ್ಯ.
–ವೊಲೊಡಿಮಿರ್ ಝೆಲೆನ್‌ಸ್ಕಿ, ಉಕ್ರೇನ್ ಅಧ್ಯಕ್ಷ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.